More

    ಕೋಲಾರ ಸಂಸದ ಮುನಿಸ್ವಾಮಿ ಸೇರಿ 18 ಜನರ ವಿರುದ್ಧ ಎಫ್‌ಐಆರ್ ದಾಖಲು

    ಕೋಲಾರ: ನಗರದಲ್ಲಿ ಜ.4ರಂದು ಪೌರತ್ವ ಪರ ವಿವಿಧ ಸಂಘಟನೆಗಳು ಆಯೋಜಿಸಿದ್ದ ಜನಜಾಗೃತಿ ಸಭೆ ಆರಂಭಕ್ಕೂ ಮುನ್ನ ನಗರದ ಎಸ್‌ಎನ್‌ಆರ್ ಆಸ್ಪತ್ರೆ ವೃತ್ತದಲ್ಲಿ ಗುಂಪೊಂದು ಕ್ಲಾಕ್ ಟವರ್ ಮೂಲಕ ರ‌್ಯಾಲಿ ನಡೆಸಲು ಯತ್ನಿಸಿ, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಸಂಸದ ಎಸ್.ಮುನಿಸ್ವಾಮಿ, ಬಿಜೆಪಿ ನಗರ ಘಟಕ ಅಧ್ಯಕ್ಷ ತಿಮ್ಮರಾಯಪ್ಪ ಸೇರಿ 18 ಜನರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

    ನಗರಠಾಣೆ ಪಿಎಸ್‌ಐ ಅಣ್ಣಯ್ಯ ನೀಡಿದ ಮಾಹಿತಿ ಆಧರಿಸಿ ಪೌರತ್ವ ಪರ ಗುಂಪಿನ 18 ಜನರ ವಿರುದ್ಧ, ಅದೇ ರೀತಿ ಸಿಪಿಐ ಫಾರೂಕ್ ಪಾಷಾ ಅವರ ಮಾಹಿತಿ ಆಧರಿಸಿ ಕ್ಲಾಕ್ ಟವರ್ ಬಳಿ ಜಮಾಯಿಸಿದ್ದ ಗುಂಪಿನ ವಿರುದ್ಧ ಐಪಿಸಿ 1860 ಕಲಂ 143, 148, 341, 290, 291, 511 ಹಾಗೂ 149ರ ಅಡಿ ಪ್ರಕರಣ ದಾಖಲಿಸಿದ್ದಾರೆ.

    ಎಸ್‌ಎನ್‌ಆರ್ ಆಸ್ಪತ್ರೆ ಬಳಿ ಸಂಭವಿಸಿದ ಘಟನೆಯಲ್ಲಿ ಬಿಜೆಪಿ ನಗರ ಘಟಕ ಅಧ್ಯಕ್ಷ ತಿಮ್ಮರಾಯಪ್ಪ ಅವರನ್ನು ಮೊದಲ ಆರೋಪಿಯನ್ನಾಗಿಸಲಾಗಿದ್ದು. ಸಂಸದ ಎಸ್.ಮುನಿಸ್ವಾಮಿಯನ್ನು 12ನೇ ಆರೋಪಿಯಾಗಿ ಪರಿಗಣಿಸಲಾಗಿದೆ.

    ಹಿಂದುಪರ ಸಂಘಟನೆ ಮುಖಂಡರಾದ ರಮೇಶ್ ರಾಜು, ಪ್ರವೀಣ್, ಹರೀಶ್, ನವೀನ್, ಶಿವಣ್ಣ, ರವಿ, ಕೋಮಲೇಶ್. ಸಂತೋಷ್, ರಮೇಶ್ ಯಾದವ್, ಮಂಜು, ಎಸ್.ಮುನಿಸ್ವಾಮಿ, ಆನಂದ್, ರಾಮು, ಬಾಲಾಜಿ, ಚಿಂತಾಮಣಿಯ ಅರುಣ್ ಕುಮಾರ್, ಆಂಜನೇಯರೆಡ್ಡಿ ವಿರುದ್ಧ ಎಫ್‌ಐಆರ್ ದಾಖಲಾಗಿದ್ದರೆ, ಕ್ಲಾಕ್ ಟವರ್ ಬಳಿಯ ಘಟನೆ ಆರೋಪಿಗಳ ಹೆಸರು ಉಲ್ಲೇಖಿಸಿಲ್ಲ.

    ಘಟನೆ ವಿವರ: ಪೌರತ್ವ ಕಾಯ್ದೆ ಬೆಂಬಲಿಸಿ ಬಿಜೆಪಿ ಸೇರಿ ವಿವಿಧ ಸಂಘಟನೆಗಳು ನಗರದಲ್ಲಿ ಬೃಹತ್ ರ‌್ಯಾಲಿ ಹಾಗೂ ಸಭೆ ನಡೆಸಲು ಜಿಲ್ಲಾ ಆಡಳಿತ ಮತ್ತು ಪೊಲೀಸ್ ಇಲಾಖೆ ಅನುಮತಿ ಕೋರಿದ್ದವು. ಆದರೆ ಮುಖಂಡರು ರ‌್ಯಾಲಿ ಮಾರ್ಗದಲ್ಲಿ ಕ್ಲಾಕ್ ಟವರ್ ಹೆಸರು ಪ್ರಸ್ತಾಪಿಸಿದ್ದರಿಂದ ನಿರಾಕರಿಸಿ, ಸಭೆಗೆ ಮಾತ್ರ ಅನುಮತಿ ನೀಡಲಾಗಿತ್ತು.

    ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಜನರಲ್ಲಿ ಬಹುತೇಕರಿಗೆ ರ‌್ಯಾಲಿ ರದ್ದಾಗಿರುವ ಮಾಹಿತಿಯನ್ನು ಆಯೋಜಕರು ತಿಳಿಸಲು ಸಾಧ್ಯವಾಗಿರಲಿಲ್ಲ. ಎಸ್‌ಎನ್‌ಆರ್ ಆಸ್ಪತ್ರೆ ಬಳಿ ದೊಡ್ಡ ಸಂಖ್ಯೆಯಲ್ಲಿದ್ದ ಗುಂಪು ಕ್ಲಾಕ್ ಟವರ್‌ಗೆ ಹೋಗಲೇಬೇಕೆಂದು ಹಠ ಹಿಡಿದು ಬ್ಯಾರಿಕೇಡ್‌ಗಳನ್ನು ತಳ್ಳಿ ಮುನ್ನುಗ್ಗಲು ಮುಂದಾದಾಗ ಪೊಲೀಸರು ಲಘು ಲಾಠಿ ಪ್ರಹಾರದ ಮೂಲಕ ಪರಿಸ್ಥಿತಿ ನಿಯಂತ್ರಿಸಿದ್ದರು.

    ಸಂಸದರ ಆರೋಪ: ಪೌರತ್ವ ಪರ ಆಯೋಜಿಸಿದ್ದ ಜನಜಾಗೃತಿ ಸಭೆಗೆ ಬಂದಿದ್ದ ಜನರನ್ನು ನಿಯಂತ್ರಿಸಲು ನಾನು ಪೊಲೀಸ್‌ನಂತೆ ಕಾರ್ಯನಿರ್ವಹಿಸಿದ್ದೇನೆ, ಕಾಂಗ್ರೆಸ್‌ನವರ ಪಿತೂರಿಯಿಂದ ಪೊಲೀಸರು ನನ್ನ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಸಂಸದ ಎಸ್.ಮುನಿಸ್ವಾಮಿ ಆರೋಪಿಸಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ಮತ್ತು ಹಿಂದುಪರ ಸಂಘಟನೆಗಳ ಕಾರ್ಯಕರ್ತರು ಜ.4ರಂದು ನಡೆದ ಅಹಿತಕರ ಘಟನೆಯಲ್ಲಿ ಭಾಗಿಯಾಗಿಲ್ಲ. ಪೊಲೀಸರು ವೈಫಲ್ಯ ಮುಚ್ಚಿಕೊಳ್ಳಲು ಸುಳ್ಳು ಕೇಸ್ ದಾಖಲಿಸಿದ್ದಾರೆಂದು ಕಿಡಿಕಾರಿದರು.
    ಉದ್ದೇಶಪೂರ್ವಕವಾಗಿ ಪ್ರಕರಣ ದಾಖಲು: ಶಾಂತಿಯುತವಾಗಿ ರ‌್ಯಾಲಿ ನಡೆಸಲು ನಿರ್ಧರಿಸಿದ್ದೆವು. ಆದರೆ ಪೊಲೀಸರು ಕಾಂಗ್ರೆಸ್ಸಿನವರ ಕುಮ್ಮಕ್ಕಿನಿಂದ ರ‌್ಯಾಲಿಗೆ ಅನುಮತಿ ನಿರಾಕರಿಸಿದರು. ನಮ್ಮ ಕೆಲ ಮುಖಂಡರ ಮಾತಿಗೆ ಬೆಲೆ ಕೊಟ್ಟು ರ‌್ಯಾಲಿ ಕೈಬಿಡಲಾಯಿತು.

    ಬ್ಯಾರಿಕೇಡ್ ಬಳಿ ನಿಂತಿದ್ದ ನಮ್ಮ ಕಾರ್ಯಕರ್ತರೊಂದಿಗೆ ಪೊಲೀಸರು ಉದ್ಧಟತನ ತೋರಿದರು. ಅದರಿಂದ ಬೇಸತ್ತ ಕಾರ್ಯಕರ್ತರ ಗುಂಪೊಂದು ಕ್ಲಾಕ್ ಟವರ್‌ಗೆ ಹೋಗಲು ಏಕೆ ಬಿಡುವುದಿಲ್ಲ ಎಂದು ಹೇಳಿದೆಯಷ್ಟೇ, ಸಮಂಜಸವಾದ ಉತ್ತರ ನೀಡುವ ಬದಲು ಕಾರ್ಯಕರ್ತರನ್ನು ತಳ್ಳಿದ್ದರಿಂದ ಗೊಂದಲ ಸೃಷ್ಟಿಯಾಯಿತು. ಈ ಮಧ್ಯೆ ಕೆಲ ಪೊಲೀಸರು ಉದ್ದೇಶಪೂರ್ವವಾಗಿ ಲಾಠಿ ಪ್ರಹಾರ ಮಾಡಿದ್ದರಿಂದ ಪ್ರತಿಭಟನೆ ವ್ಯಕ್ತವಾಯಿತು. ಸಿಎಂ ಹಾಗೂ ಗೃಹಮಂತ್ರಿಗೆ ಘಟನೆಗಳ ವರದಿ ನೀಡುವೆ ಎಂದು ಮುನಿಸ್ವಾಮಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts