More

    ಮಹಾರಾಷ್ಟ್ರದಲ್ಲಿ ತೀವ್ರ ಸ್ವರೂಪ ಪಡೆದ ಮರಾಠ ಮೀಸಲು ಕಿಚ್ಚು: ಬೆಂಗ್ಳೂರು-ಮುಂಬೈ ಹೆದ್ದಾರಿ ತಡೆ, ರೈಲು ಸಂಚಾರ ಸ್ಥಗಿತ

    ನವದೆಹಲಿ: ಹಿಂದುಳಿದ ವರ್ಗಗಳ (ಒಬಿಸಿ) ಅಡಿಯಲ್ಲಿ ಶಿಕ್ಷಣ ಮತ್ತು ಸರ್ಕಾರಿ ಕೆಲಸದಲ್ಲಿ ಮರಾಠ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿ, ಮಹಾರಾಷ್ಟ್ರದ ವಿವಿಧ ಭಾಗಗಳಲ್ಲಿ ಮರಾಠ ಸಮುದಾಯದ ಸದಸ್ಯರು ಹಮ್ಮಿಕೊಂಡಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ.

    ಮಂಗಳವಾರ ಮಧ್ಯಾಹ್ನ ಪ್ರತಿಭಟನಾಕಾರರ ಗುಂಪೊಂದು ಮುಂಬೈ-ಬೆಂಗಳೂರು ಹೆದ್ದಾರಿಯನ್ನು ಸುಮಾರು 2 ಗಂಟೆಗಳ ಕಾಲ ತಡೆಹಿಡಿದರು. ಇದರ ಪರಿಣಾಮ ಭಾರೀ ಟ್ರಾಫಿಕ್​ ಜಾಮ್​ ಉಂಟಾಗಿ, ಪ್ರಯಾಣಿಕರು ಪರದಾಡುವಂತಾಯಿತು. ಸಾಕಷ್ಟು ಮನವಿ ಮಾಡಿದರೂ ಪ್ರತಿಭಟನೆಯನ್ನು ಹಿಂಪಡೆಯಲು ಒಪ್ಪದಿದ್ದಕ್ಕೆ ರಸ್ತೆಯ ಎರಡು ಕಡೆಗಳಲ್ಲಿ ಭಾರೀ ಟ್ರಾಫಿಕ್​ ಜಾಮ್​ ಉಂಟಾಯಿತು.

    ಮತ್ತೊಂದು ಸಂಘಟನೆಯಾದ ಮರಾಠ ಕ್ರಾಂತಿ ಮೋರ್ಚಾ ಕಾರ್ಯಕರ್ತರು ಸೊಲ್ಲಾಪುರದಲ್ಲಿ ರೈಲು ಹಳಿಗಳನ್ನು ಬ್ಲಾಕ್​ ಮಾಡಿದರು. ಧರಣಿಗೆ ಸಂಬಂಧಿಸಿದ ದೃಶ್ಯಗಳಲ್ಲಿ ಪ್ರತಿಭಟನಾಕಾರರು ರೈಲ್ವೆ ಹಳಿಗಳ ಮೇಲೆ ಟೈರ್‌ಗಳನ್ನು ಸುಟ್ಟು, ಕೇಸರಿ ಧ್ವಜಗಳನ್ನು ಹಿಡಿದು, ಮರಾಠ ಸಮುದಾಯಕ್ಕೆ ಮೀಸಲಾತಿಯನ್ನು ಒತ್ತಾಯಿಸಿದರು. ಈ ವೇಳೆ ರೈಲ್ವೆ ಅಧಿಕಾರಿಗಳು ಮತ್ತು ಸೊಲ್ಲಾಪುರ ನಗರ ಪೊಲೀಸ್​ ಅಧಿಕಾರಿಗಳು ಇಬ್ಬರು ಪ್ರತಿಭಟನಾಕಾರರನ್ನು ಬಂಧಿಸಿದರು. ಬಂಧಿತರನ್ನು ರಾಮ್​ ಜಾಧವ್​ ಮತ್ತು ನಿಶಾಂತ್​ ಸಾಳ್ವೆ ಎಂದು ಗುರುತಿಸಲಾಗಿದೆ. ಪ್ರತಿಭಟನೆ ಮುಂದುವರಿದರೂ ಅಧಿಕಾರಿಗಳು ಪ್ರತಿಭಟನಾಕಾರರನ್ನು ರೈಲು ಹಳಿಯಿಂದ ಕೆಳಗಿಳಿಸುವಲ್ಲಿ ಯಶಸ್ವಿಯಾದರು.

    ಇದೇ ಸಂದರ್ಭದಲ್ಲಿ ಮಹಾರಾಷ್ಟ್ರದ ಜಲ್ನಾ ಜಿಲ್ಲೆಯಲ್ಲಿ ಒಂದು ಗುಂಪು, ಪಂಚಾಯಿತಿ ಸಮಿತಿ ಕಚೇರಿಗೆ ಬೆಂಕಿ ಇಟ್ಟು ಆಕ್ರೋಶ ಹೊರಹಾಕಿದರು. ಸೋಮವಾರ ರಾತ್ರಿ ಘನಸವಾಂಗಿಯ ಪಂಚಾಯಿತಿ ಸಮಿತಿ ಕಚೇರಿ ಮುಂದೆ ಏಕ್​ ಮರಾಠ ಲಕ್​ ಮರಾಠ ಘೋಷಣೆಯನ್ನು ಪ್ರತಿಭಟನಾಕಾರರು ಕೂಗಿದರು ಮತ್ತು ಕಚೇರಿಗೆ ಬೆಂಕಿಯಿಟ್ಟು ಆಸ್ತಿಪಾಸ್ತಿಗೆ ಹಾನಿಯನ್ನುಂಟು ಮಾಡಿದರು. ಕಚೇರಿಯ ಎರಡು ಕೊಠಡಿಗಳಲ್ಲಿನ ಕೆಲವು ಪ್ರಮುಖ ದಾಖಲೆಗಳು ಮತ್ತು ಪೀಠೋಪಕರಣಗಳಿಗೆ ಹಾನಿಯಾಗಿದೆ ಎಂದು ಘನಸವಾಂಗಿ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಜಲ್ನಾ ಜಿಲ್ಲೆಯಲ್ಲಿ ನಡೆದ ಮತ್ತೊಂದು ಘಟನೆಯಲ್ಲಿ, ಸೋಮವಾರ ಮಧ್ಯಾಹ್ನ ಬದ್ನಾಪುರ್ ತಾಲೂಕಿನ ಶೆಲ್ಗಾಂವ್ ಗ್ರಾಮದ ರೈಲ್ವೆ ಗೇಟ್‌ನಲ್ಲಿ ಮರಾಠ ಸಮುದಾಯದ ಕೆಲವು ಯುವಕರು ರೈಲುಗಳನ್ನು ತಡೆಯಲು ಪ್ರಯತ್ನಿಸಿದರು. ಪ್ರತಿಭಟನಾಕಾರರು ರೈಲು ಹಳಿಗಳ ಮೇಲೆ ಕುಳಿತು ರೈಲು ಸಂಚಾರಕ್ಕೆ ಅಡ್ಡಿಪಡಿಸಿದರು.

    ಮರಾಠ ಮೀಸಲಾತಿ ಕಾರ್ಯಕರ್ತ ಮನೋಜ್ ಜಾರಂಗೆ ಅವರು ಅಕ್ಟೋಬರ್ 25 ರಿಂದ ಜಲ್ನಾ ಜಿಲ್ಲೆಯ ಅಂತರವಾಲಿ ಸಾರತಿ ಗ್ರಾಮದಲ್ಲಿ ಮೀಸಲಾತಿ ಬೇಡಿಕೆಯನ್ನು ಬೆಂಬಲಿಸಿ ಅನಿರ್ದಿಷ್ಟಾವಧಿ ಉಪವಾಸವನ್ನು ಮುಂದುವರೆಸಿದ್ದಾರೆ. ಮರಾಠ ಸಮುದಾಯವು “ಅಪೂರ್ಣ ಮೀಸಲಾತಿ” ಯನ್ನು ಒಪ್ಪಿಕೊಳ್ಳುವುದಿಲ್ಲ ಮತ್ತು ಮಹಾರಾಷ್ಟ್ರ ಸರ್ಕಾರವು ಈ ವಿಷಯದ ಬಗ್ಗೆ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನವನ್ನು ಕರೆಯಬೇಕು ಎಂದು ಮನೋಜ್ ಜಾರಂಗೆ ಇಂದು (ಅ.31) ಹೇಳಿದರು.

    ರಾಜ್ಯಾದ್ಯಂತ ಎದ್ದಿರುವ ಗದ್ದಲದ ನಡುವೆ, ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಮಂಗಳವಾರ ಸಂಸತ್ತಿನ ವಿಶೇಷ ಅಧಿವೇಶನವನ್ನು ಕರೆಯುವ ಮೂಲಕ ಮರಾಠ ಮೀಸಲಾತಿ ಸಮಸ್ಯೆಯನ್ನು ಪರಿಹರಿಸಬೇಕೆಂದು ಕೇಂದ್ರವನ್ನು ಒತ್ತಾಯಿಸಿದ್ದಾರೆ.

    ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನಾವೀಸ್​ ಮಾತನಾಡಿ, ಮರಾಠ ಮೀಸಲಾತಿ ಸಮಸ್ಯೆಯನ್ನು ಪರಿಹರಿಸಲು ರಾಜ್ಯ ಸರ್ಕಾರ ಸಕಾರಾತ್ಮಕವಾಗಿ ಕೆಲಸ ಮಾಡುತ್ತಿದೆ ಎಂದಿದ್ದಾರೆ. ಕೆಲವರು ಈ ಪ್ರತಿಭಟನೆಯ ಲಾಭ ಪಡೆದು ಹಿಂಸಾಚಾರ ಎಸಗುತ್ತಿದ್ದಾರೆ. ಗುಂಪಿನಲ್ಲಿ ಕೆಲವರು ಸಾರ್ವಜನಿಕ ಪ್ರತಿನಿಧಿಗಳ ಮನೆಗಳು, ಹೋಟೆಲ್‌ಗಳು, ವಾಹನಗಳು ಮತ್ತು ಸರ್ಕಾರಿ ಸಂಸ್ಥೆಗಳನ್ನು ಸುಟ್ಟುಹಾಕಲಾಗಿದೆ. ಸದ್ಯ ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದೆ ಮತ್ತು ಪೀಡಿತ ಪ್ರದೇಶಗಳಲ್ಲಿ ಭದ್ರೆತೆ ಸಜ್ಜುಗೊಳಿಸಲಾಗಿದೆ ಎಂದು ಹೇಳಿದರು. (ಏಜೆನ್ಸೀಸ್​)

    ಯಾದಗಿರಿಯಲ್ಲೊಬ್ಬ ಪ್ರಾಣಿ ಪ್ರಿಯ: ಮಂಗಗಳಿಗೆ ಮಕ್ಕಳ ಪ್ರೀತಿ ತೋರುತ್ತಿರುವ ಉಮೇಶ ಮುದ್ನಾಳ್!

    ಎಷ್ಟು ಗಂಟೆ ಕೆಲಸ ಎಂಬುದೇ ಮುಖ್ಯವಲ್ಲ, ಈಗ ವಾರಕ್ಕೆ 5 ಕೆಲಸದ ದಿನ ಎಂಬುದೂ ಇಲ್ಲ: ಮೂರ್ತಿ ಹೇಳಿಕೆಗೆ ಗೋಯೆಂಕಾ ಪ್ರತಿಕ್ರಿಯೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts