More

    ಬಹುಕೋಟಿ ಏತ ನೀರಾವರಿ ಯೋಜನೆ

    ರಾಜೇಂದ್ರ ಶಿಂಗನಮನೆ ಶಿರಸಿ
    ಬನವಾಸಿ ಭಾಗದ 31 ಬೃಹತ್ ಕೆರೆಗಳನ್ನು ತುಂಬಿಸಲು ಅನುಷ್ಠಾನಗೊಳಿಸಲಾದ ಬಹುಕೋಟಿ ವೆಚ್ಚದ ಏತ ನೀರಾವರಿ ಕಾಮಗಾರಿ ಪೂರ್ಣಗೊಂಡಿದೆ. ಆದರೆ, ಕಾರ್ಯಾರಂಭಕ್ಕೆ ವಿದ್ಯುತ್ ಸಂಪರ್ಕ ತೊಡಕಾಗಿದೆ.
    ತಾಲೂಕಿನ ಪೂರ್ವಭಾಗದ ಪ್ರದೇಶದಲ್ಲಿ ಬೇಸಿಗೆ ವೇಳೆ ನೀರಿನ ಬವಣೆ ಎದುರಾಗುತ್ತದೆ. ಜತೆಗೆ ಅಂತರ್ಜಲವೂ ತಗ್ಗುತ್ತದೆ. ಅರೆಬಯಲುಸೀಮೆ ಪ್ರದೇಶವಾಗಿರುವ ಇಲ್ಲಿನ ಪ್ರದೇಶಗಳು ಹೆಚ್ಚಿನ ಸಮಯ ಬರಪೀಡಿತವಾಗಿರುತ್ತವೆ. ವರದಾ ಜೀವನದಿಯಾಗಿದ್ದರೂ ಆ ನೀರಿನ ಸದ್ಭಳಕೆ ಸಮರ್ಪಕವಾಗಿ ಆಗುತ್ತಿರಲಿಲ್ಲ. ಕಳೆದ ಕೆಲವು ವರ್ಷಗಳಲ್ಲಿ ಎರಡ್ಮೂರು ಬಾಂದಾರ ಸೇತುವೆ ನಿರ್ವಣಗೊಂಡ ಪರಿಣಾಮ ಬೇಸಿಗೆಯಲ್ಲಿ ವರದೆಯ ನೀರನ್ನು ನಿಲ್ಲಿಸಿ ನದಿಗುಂಟದ ಜನರಿಗೆ, ಕೃಷಿಭೂಮಿಗೆ ನೀರುಣಿಸುವುದಕ್ಕೆ ಅನುಕೂಲವಾಗಿದೆ. ಆದರೆ, ಒಳಹಳ್ಳಿಗಳ ಪ್ರದೇಶದಲ್ಲಿ ಇದು ಪ್ರಯೋಜನವಾಗಿಲ್ಲ. ಹೀಗಾಗಿ ಇಂತಹ ಪ್ರದೇಶಗಳ ಕೃಷಿ ಭೂಮಿಗೆ ಅನುಕೂಲ ಕಲ್ಪಿಸಲು, ಮಳೆಗಾಲದಲ್ಲಿ ವರದಾ ನದಿಯಿಂದ ಸಮುದ್ರಕ್ಕೆ ಹರಿದು ಹೋಗುತ್ತಿದ್ದ ನೀರನ್ನು ಕೆರೆಗಳಿಗೆ ತುಂಬಿಸಲು 2018ರಲ್ಲಿ 65 ಕೋಟಿ ವೆಚ್ಚದ ಏತನೀರಾವರಿ ಯೋಜನೆ ಜಾರಿಗೊಳಿಸಲಾಯಿತು. ಅದರ ಕಾಮಗಾರಿ ಕುಂಟುತ್ತಾ ಸಾಗಿ ಇದೀಗ ಪೂರ್ಣ ಪ್ರಮಾಣದಲ್ಲಿ ಮುಕ್ತಾಯಗೊಂಡಿದೆ. ಆದರೆ, ಕೆರೆಗಳಿಗೆ ನೀರು ಹರಿಸಲು ಇನ್ನೂ ಸಾಧ್ಯವಾಗಿಲ್ಲ. ಯೋಜನೆಯಡಿ ನೀರೆತ್ತುವ ಪಂಪ್​ಗಳಿಗೆ ವಿದ್ಯುತ್ ಸಂಪರ್ಕ ನೀಡದಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ.
    ಗ್ರಿಡ್ ಸ್ಥಾಪನೆ ನಂತರ ವಿದ್ಯುತ್ ಸಂಪರ್ಕ: ಬನವಾಸಿ ಭಾಗದಲ್ಲಿ ವಿದ್ಯುತ್ ವೋಲ್ಟೇಜ್ ಸಮಸ್ಯೆ ನಿವಾರಿಸಲು ರಾಜ್ಯ ಸರ್ಕಾರ ಪ್ರಸಕ್ತ ವರ್ಷ ನೂತನ ಗ್ರಿಡ್ ಸ್ಥಾಪಿಸಲು ಹಸಿರು ನಿಶಾನೆ ತೋರಿಸಿದೆ. ಇನ್ನಷ್ಟೇ ಈ ಕುರಿತ ಕಾಮಗಾರಿ ನಡೆಯಬೇಕಿದೆ. ಕಾಮಗಾರಿ ಪೂರ್ಣಗೊಂಡ ನಂತರ ಗ್ರಿಡ್​ನಿಂದಲೇ ಯೋಜನೆಯ ಜಾಕ್​ವೆಲ್ ಹಾಗೂ ಉಪಕೇಂದ್ರಕ್ಕೆ ವಿದ್ಯುತ್ ಸಂಪರ್ಕ ನೀಡಬೇಕಿದೆ. ಬಳಿಕ ಏತ ನೀರಾವರಿ ಯೋಜನೆ ಕಾರ್ಯಾನುಷ್ಠಾನಗೊಳ್ಳಲಿದೆ.
    ಇನ್ನಷ್ಟು ವಿಳಂಬ ಸಾಧ್ಯತೆ: ಈ ಭಾಗದ ನಾಗರಿಕರು ದಶಕಗಳಿಂದ ಹೋರಾಟ ನಡೆಸಿದ್ದರ ಕಾರಣ ಮತ್ತು ಸಚಿವ ಶಿವರಾಮ ಹೆಬ್ಬಾರ ಮುತುವರ್ಜಿಯಿಂದ ಈ ವರ್ಷ ಗ್ರಿಡ್ ಸ್ಥಾಪನೆಗೆ ಹಸಿರು ನಿಶಾನೆ ದೊರೆತಿದೆ. ಆದರೆ, ಕಾಮಗಾರಿ ಪೂರ್ಣಗೊಳ್ಳಲು ವರ್ಷ ಕಳೆಯುವ ಸಾಧ್ಯತೆಯಿದೆ. ಹೀಗಾಗಿ ಏತ ನೀರಾವರಿ ಯೋಜನೆ ಫಲ ಜನರಿಗೆ ತಲುಪಲು ಇನ್ನಷ್ಟು ವಿಳಂಬವಾಗಲಿದೆ.
    ಯೋಜನೆಯ ಉದ್ದೇಶ: ಸಾಮಾನ್ಯವಾಗಿ ಬನವಾಸಿ ಭಾಗದಲ್ಲಿ ವರದಾ ನದಿ ಆರೇಳು ಕಿ.ಮೀ.ವರೆಗೆ ಹರಿದು ಹೋಗಿದೆ. ಮಳೆಗಾಲ ಉತ್ತಮವಾದರೆ ವರದೆಯ ಒಡಲು ತುಂಬಿ ಪ್ರವಾಹ ಉಂಟಾಗುತ್ತದೆ. ಮಳೆಗಾಲದಲ್ಲಿ ವರದೆಯಲ್ಲಿ ಅಂದಾಜು 41 ಟಿಎಂಸಿ ನೀರು ವ್ಯರ್ಥವಾಗಿ ಹರಿದು ಸಮುದ್ರ ಸೇರುತ್ತದೆ. ಹೀಗೆ ಹರಿದು ಹೋಗುವ ನೀರನ್ನು ಪಂಪ್​ಗಳ ಮೂಲಕ ಎತ್ತಿ ಪೈಪ್​ಗಳ ಮೂಲಕ ಕೆರೆಗಳಿಗೆ ಹರಿಸುವುದು, ಆ ಮೂಲಕ ಕೃಷಿ ಭೂಮಿಗೆ ನೀರುಣಿಸಲು, ಕೆರೆಗಳು ಬೇಸಿಗೆಯಲ್ಲಿ ಜೀವಜಲ ಸಮೃದ್ಧಿಯಾಗಿರಲು ಪೂರಕವಾಗಿಸುವುದು ಈ ಯೋಜನೆ ಉದ್ದೇಶವಾಗಿದೆ.
    ಪೂರ್ಣಗೊಂಡ ಕಾಮಗಾರಿ: ನೀರಾವರಿ ಯೋಜನೆಯಡಿ 22 ಕಿ.ಮೀ. ದೂರದವರೆಗೆ ಮುಖ್ಯ ಪೈಪ್​ಲೈನ್ ಅಳವಡಿಸಿದ್ದು, ಸಬ್​ನ 20 ಕಿ.ಮೀ.ನಷ್ಟು ಸೇರಿ 42 ಕಿ.ಮೀ ದೂರದವರೆಗೆ ವರದಾ ನದಿ ನೀರಿ ಹರಿದು ಹೋಗಲು ಪೈಪ್​ಗಳನ್ನು ಜೋಡಿಸಲಾಗಿದೆ. 550 ಎಂಎಂ ಸಾಮರ್ಥ್ಯದ ಪೈಪ್​ಗಳನ್ನು ಹಾಕಲಾಗಿದೆ. ತುತ್ತತುದಿಯಲ್ಲಿ 120 ಎಂಎಂ ಪೈಪ್​ಗಳನ್ನು ಜೋಡಿಸಲಾಗಿದೆ. ನದಿಯಿಂದ 120 ಅಡಿ ಎತ್ತರದಲ್ಲಿ ಪೈಪ್​ಗಳನ್ನು ಜೋಡಿಸಲಾಗಿದೆ. ಯೋಜನೆಗೆ ಸಂಬಂಧಿಸಿ ನದಿಗೆ ಅಡ್ಡಲಾಗಿ ಚಿಕ್ಕ ಬಾಂದಾರ, ಜಾಕ್​ವೆಲ್, ಉಪಕೇಂದ್ರ ಸಿದ್ಧಗೊಂಡಿದೆ. ಈ ಯೋಜನೆ ಅನುಷ್ಠಾನದೊಂದಿಗೆ ಬನವಾಸಿ, ಗುಡ್ನಾಪುರ, ಅಂಡಗಿ ಹಾಗೂ ಬದನಗೋಡ ಗ್ರಾಪಂ ವ್ಯಾಪ್ತಿಯ ಅಂದಾಜು 10 ಸಾವಿರ ಎಕರೆ ಕೃಷಿ ಭೂಮಿಗೆ ಇದರಿಂದ ಅನುಕೂಲವಾಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts