More

    ತ್ವರಿತಗತಿಯಲ್ಲಿ ಮೂಲರಪಟ್ಣ ಸೇತುವೆ ಕಾಮಗಾರಿ

    ಧನಂಜಯ ಗುರುಪುರ

    ಸುಮಾರು ಮೂರು ವರ್ಷಗಳ ಹಿಂದೆ ಮಳೆಗಾಲದಲ್ಲಿ ಮೂಡುಬಿದರೆ-ಗಂಜಿಮಠ-ಎಡಪದವು-ಕುಪ್ಪೆಪದವಿನಿಂದ ಬಿ. ಸಿ ರೋಡ್‌ಗೆ ಸಂಪರ್ಕ ಕಲ್ಪಿಸುವ ಮೂಲರಪಟ್ಣ ಸೇತುವೆ ಕುಸಿದು ಬಿದ್ದು, ಈ ಭಾಗದ ಜನ-ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಇದೀಗ ಇಲ್ಲಿ ಹೊಸ ಸೇತುವೆ ನಿರ್ಮಾಣ ಹಂತದಲ್ಲಿದ್ದು, ಬಹುತೇಕ ಈ ವರ್ಷವೇ ನೂತನ ಸೇತುವೆ ಲೋಕಾರ್ಪಣೆಗೊಳ್ಳುವ ಸಾಧ್ಯತೆ ಇದೆ.

    ಮೂಲರಪಟ್ಣದಲ್ಲಿ ಫಲ್ಗುಣಿ ನದಿಗೆ ಅಡ್ಡಲಾಗಿ ಈಗ ಸಮರೋಪಾದಿಯಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಈವರೆಗೆ ಸುಮಾರು ಶೇ 70ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಕಳೆದ ನಾಲ್ಕೈದು ದಿನಗಳಿಂದ ಪಿಲ್ಲರ್‌ಗಳ ಮೇಲೆ ಗರ್ಡರ್ ಅಳವಡಿಸುವ ಕಾರ್ಯ ಮುಂದುವರಿದಿದೆ. ಇದಾದ ಬಳಿಕ ಸ್ಲ್ಯಾಬ್‌ಗಳನ್ನು ಅಳವಡಿಸಿ ಕಾಂಕ್ರೀಟ್ ಹಾಸಲಾಗುತ್ತದೆ.

    ಕುಸಿದು ಬಿದ್ದ ಹಳೆಯ ಸೇತುವೆ ಜಾಗದಲ್ಲೇ ಹೆಚ್ಚುವರಿ 14.67 ಕೋಟಿ ರೂ. ವೆಚ್ಚದಲ್ಲಿ ಹೊಸ ಸೇತುವೆ ನಿರ್ಮಾಣಗೊಳ್ಳುತ್ತಿದೆ. ಸರ್ಕಾರದಿಂದ ಹಣಕಾಸು ಬಿಡುಗಡೆಗೊಳಿಸುವಲ್ಲಿ ಮಂಗಳೂರು ಉತ್ತರ ಶಾಸಕ ಡಾ.ಭರತ್ ಶೆಟ್ಟಿ ಮತ್ತು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ ಪ್ರಯತ್ನಿಸಿದ್ದರು. 28 ಮೀಟರ್ ಅಂತರದಲ್ಲಿ 7 ಮೀಟರ್ ಎತ್ತರದ 5 ಪಿಲ್ಲರ್, ಒಟ್ಟು 10 ಮೀಟರ್ ಸುತ್ತಳತೆ ಅಗಲದ ಸೇತುವೆಯಲ್ಲಿ 7.5 ಮೀಟರ್ ರಸ್ತೆ, ಒಂದೂವರೆ ಮೀಟರ್ ಅಗಲದ ಕ್ಯಾರಿಯೇಜ್ ನಿರ್ಮಾಣವಾಗಲಿದೆ. ಸೇತುವೆಯು ನದಿ ತಳದಿಂದ 9.20 ಮೀಟರ್ ಎತ್ತರವಿದೆ. ಮೇಲ್ಭಾಗಕ್ಕೆ 30 ಮೀಟರ್ ಉದ್ದ, 70 ಟನ್ ಭಾರದ 24 ಗರ್ಡರ್ ಜೋಡಿಸಲಾಗುತ್ತಿದೆ. ಕಾಮಗಾರಿ ಸ್ಥಳದಲ್ಲೇ ಗರ್ಡರ್ ನಿರ್ಮಿಸಲಾಗಿದೆ. ಕಂಬಗಳ ಮೇಲೆ ಗರ್ಡರ್ ಎತ್ತಿಡಲು ಕೊಚ್ಚಿನ್‌ನಿಂದ ಎರಡು ವಿಶೇಷ ಕ್ರೇನ್ ಬಳಸಲಾಗುತ್ತಿದೆ. ಪಿಡಬ್ಲ್ಯೂಡಿಗೆ ಸೇರಿದ ಸೇತುವೆ ನಿರ್ಮಾಣದ ಗುತ್ತಿಗೆ ಮುಗ್ರೋಡಿ ಕನ್‌ಸ್ಟ್ರಕ್ಷನ್ ಕಂಪನಿಯದ್ದಾಗಿದೆ.

    ಸೇತುವೆ ಕುಸಿದು ಬಿದ್ದ ಬಳಿಕ ಈ ಭಾಗದ ಜನರು ಅತ್ತಿಂದಿತ್ತ ಹತ್ತಿರದಲ್ಲಿರುವ ತೂಗುಸೇತುವೆ ಅವಲಂಬಿಸಿದ್ದರೆ, ಬಸ್ ಸಹಿತ ಇತರೆಲ್ಲ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಬಸ್‌ಗಳು ಮೂಲರಪಟ್ಣಕ್ಕೆ ಹತ್ತಿರದ ಮಾರ್ಗದಂಗಡಿಯಲ್ಲಿ ನಿಲುಗಡೆಯಾಗುತ್ತಿವೆ. ಇಲ್ಲಿಂದ ಮುಂದಕ್ಕೆ ನಡೆದುಕೊಂಡು ಅಥವಾ ರಿಕ್ಷಾಗಳಲ್ಲಿ ಸಾಗಬೇಕಾಗುತ್ತದೆ. ಬಹುತೇಕ ಕೂಲಿ ಮಾಡಿ ಜೀವನ ಸಾಗಿಸುವ ಈ ಭಾಗದ ಮಂದಿಗೆ ಇದು ದುಬಾರಿ ಪ್ರಯಾಣವಾಗುತ್ತಿದೆ.

    ಹೊಸ ಸೇತುವೆ ಈ ವರ್ಷವೇ ಲೋಕಾರ್ಪಣೆಗೊಳ್ಳುವ ನಿಟ್ಟಿನಲ್ಲಿ ಶೀಘ್ರ ಕಾಮಗಾರಿ ನಡೆಯುತ್ತಿದೆ. ಮಳೆಯಿಂದ ಸಮಸ್ಯೆಯಾಗದಿದ್ದರೆ ಜುಲೈಗೆ ಸೇತುವೆ ಕಾಮಗಾರಿ ಪೂರ್ಣಗೊಳ್ಳಲಿದೆ.

    ದಾಮೋದರ್ ಎಂ.ಕೆ.
    ಕಾವೂರು ಮುಗ್ರೋಡಿ ಕನ್‌ಸ್ಟ್ರಕ್ಷನ್ ಸಂಸ್ಥೆ ಇಂಜಿನಿಯರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts