More

  ಮುಗುಳು|ಎಳ್ಳು ಬೆಲ್ಲ ತಿನ್ನದೆಯೂ ಒಳ್ಳೆಯ ಮಾತನಾಡಬಹುದು!

  ಗವು ಮನುಜಕುಲಕ್ಕೆ ಆಪ್ಯಾಯಮಾನವಾಗುವುದು ಅದರ ಏಕತಾನತೆಯಿಂದಲ್ಲ; ವೈವಿಧ್ಯದಿಂದ. ಅದೇ ಸೂರ್ಯ, ಅದೇ ಪಥ. ಅದೇ ಮೋಡ. ಆದರೆ ಮೋಡಗಳ ಆಕಾರದ ವೈವಿಧ್ಯ, ವೈಶಿಷ್ಟ್ಯಗಳ ದೈನಂದಿನ ಸೊಬಗು ಹೇಗೆ ಚಿತ್ತಾಕರ್ಷಕವೋ, ಸೂರ್ಯನ ಪಥಬದಲಾವಣೆಯ ಕ್ರಮದ ಸೊಬಗೂ ಅಷ್ಟೇ ಮನೋವಿಕಾಸಕರ. ಸೂರ್ಯನನ್ನೇ ಪ್ರತಿದಿನ ಕಂಡು, ಅವನ ಪಥಕ್ಕೆ ಜೀವನವನ್ನು ರೂಪುಗೊಳಿಸುವ ಮನುಷ್ಯನ ಪಥವೂ ಒಂದೇ ರೀತಿಯದೆಂದು ಕಾಣುವ ವಿವಿಧ ವಿಲಾಸ ವಿಸ್ಮಯಗಳ ವಿಸ್ತಾರ.

  ಮುಗುಳು|ಎಳ್ಳು ಬೆಲ್ಲ ತಿನ್ನದೆಯೂ ಒಳ್ಳೆಯ ಮಾತನಾಡಬಹುದು!ಮಾತು ಮೃತ್ಯು ಎನ್ನುತ್ತಾರೆ. ಮಾತೇ ಮುತ್ತು ಎನ್ನುವವರೂ ಇದ್ದಾರೆ. ಅತ್ತ ಮುತ್ತೂ ಆಗದೆ ಇತ್ತ ಮೃತ್ಯುವೂ ಆಗದೆ ‘ಕರ್ಣರಸಾಯನ’ದಂತಹ ನುಡಿಗಳನ್ನಾಡುವವರೂ ಇದ್ದಾರೆ. ‘ಕುಂಕುಮ ಕೊಟ್ಬಿಡಿ ಪ್ಲೀಸ್… ಸ್ವಲ್ಪ ಕೆಲಸ ಇದೆ’ ಎನ್ನುವವರದು ಒಂದು ಪರಿಯಾದರೆ ‘ನಮ್ಮನೆಗೆ ಯಾವುದೋ ಶನಿಗಳು ವಕ್ರಿಸಿದ್ದಾರೆ, ನಾನು ಬೇಗ ಮನೆಗೆ ಹೋಗ್ಬೇಕು ಕಣ್ರೀ. ಅಲ್ಲಿ ಹೋಗಿ ಇನ್ನು ಸಾಯಬೇಕು ಆ ಭರಣಿ ಬೇಗ ತತ್ತಾ’ ಎನ್ನುವ ಪರಿಯೂ ರೂಢಿಯಲ್ಲಿದೆ. ಇವೆರಡರ ಮಧ್ಯದಲ್ಲಿ ವಿವಿಧ ರೀತಿಯ ನಯ, ಅನುನಯಗಳ ಪರೇಡ್ ಇದ್ದೇ ಇದೆ, ಸಂವಹನದ ಮಾತೆ ಆದ ಮಾತು ತುಟಿಯಿಂದ ಹೊರಟು ತಲೆಶೂಲೆ ಮಾಡವುದೋ, ಹೃದಯದ ಕವಾಟಗಳನ್ನು ತಟ್ಟಿ ಸ್ಪಂದನದ ಅಲೆಗಳನ್ನು ಎಬ್ಬಿಸುವುದೋ ಎನ್ನುವುದು ಆಯಾ ವ್ಯಕ್ತಿತ್ವಗಳ ಸಂಸ್ಕಾರಕ್ಕೆ ಬಿಟ್ಟ ವಿಚಾರ.

  ಸಂಕ್ರಾಂತಿ ಇಡೀ ವರ್ಷದ ‘ಎನರ್ಜೆಸರ್’. ಧನುರ್ವಸದ ಚಳಿಯಲ್ಲಿ ಬಿಲ್ಲಿನಂತೆ ಬೆಂಡಾಗಿ, ಸಂಕ್ರಾಂತಿಗೆ ಒಂದು ವಾರವಿದೆಯೆಂದಾಗ ಅಂಗಡಿಗೆ ತೆರಳಿ ಎಳ್ಳಿನ ಸಾಮಾನುಗಳನ್ನು ಬಿಡಿಬಿಡಿಯಾಗಿಯೋ, ‘ಸಮ್ಮಿಶ್ರ’ವಾಗಿಯೋ ಕೊಂಡು, ಆ ಬಿಲ್ಲಿನ ಭಾರಕ್ಕೂ ಮತ್ತಷ್ಟು ಬಾಗಿದವರಿಗೆ ಹಬ್ಬದ ದಿನವೇ ಸಂಭ್ರಮ ಹಬ್ಬುವ ದಿನ. ಒಂದಾನೊಂದು ಕಾಲದಲ್ಲಿ ನಮ್ಮ ಪ್ರತಿ ಹಬ್ಬವೂ ‘ವೈಯಕ್ತಿಕ ಅಂಚೆಪೇದೆಯ ಕಾರ್ಯ’ದಂತೆ ಭಾಸವಾಗುತ್ತಿತ್ತು. ಹಬ್ಬದ ಸಂಭ್ರಮವನ್ನು ಹಬ್ಬಲು ಜನರು ಮನೆಮನೆಗೆ ತೆರಳಿ ‘ಅರಿಶಿನ ಕುಂಕುಮ’ಕ್ಕೆ ಕರೆದು ಬಂದವರೊಡನೆ ಸುಖದುಃಖಗಳನ್ನು ಹಂಚಿಕೊಳ್ಳುವ ‘ಸೋಷಿಯಲ್ ಗ್ಯಾದರಿಂಗ್’ ಆಗಿ ಹಬ್ಬಗಳು ಪರಿಣಮಿಸುತ್ತಿದ್ದವು. ಕಾಲಕ್ರಮೇಣ ‘ನೂರೆಂಟು ಗಣೇಶ ನೋಡಬೇಕು’ ಎನ್ನುತ್ತ ಮನೆಮನೆಗೆ ತೆರಳಿ, ಗಣಪನಿಗೆ ನಮಿಸಿ, ಯಾರೇನೇ ಕೊಟ್ಟರೂ ತಿಂದು, ಪರಸ್ಪರರ ಮನೋಲ್ಲಾಸ ಅನುಭವಿಸುತ್ತಿದ್ದ ದಿನಗಳಾಗಲಿ, ‘ಬೊಂಬೆ ಕೂಡ್ಸಿದೀರಾ?’ ಎನ್ನುತ್ತ ಮನೆಗೆ ಬಂದು ಕೂಡಿಸಿರುವ ಪರಿಯನ್ನೂ, ಬೊಂಬೆಗಳ ವಿಶೇಷತೆಯನ್ನೂ ವಿಶ್ಲೇಷಿಸಿ ಆನಂದಿಸುವ ದಿನಗಳೂ ಹಿಂದಾದವು. ಪಾಪ! ಈಗಿನ ಮಕ್ಕಳು ಮನೆಮನೆಗೆ ಹೋಗಿ, ಕೊಟ್ಟದ್ದನ್ನು ತಿಂದುಬಿಟ್ಟರೆ ವಾರದಷ್ಟು ಕಾಲವಾದರೂ ಇನ್​ಫೆಕ್ಷನ್​ನಿಂದ ನರಳಿಯಾವು. ಅಂದಿನವರದು ‘ಐರನ್ ಸ್ಟಮಕ್!’

  ಸಂಕ್ರಾಂತಿ ಹಬ್ಬ ನಿನ್ನೆಯಷ್ಟೇ ಮುಗಿಸಿದ್ದೇವೆ. ಒಂದೊಂದು ಊರಿನಲ್ಲಿ ಒಂದೊಂದು ಬಗೆಯಲ್ಲಿ. ಚಿಕ್ಕಮಕ್ಕಳು ಅದರಲ್ಲೂ ಹೆಣ್ಣುಮಕ್ಕಳು ರೇಷ್ಮೆಜರಿ ಲಂಗ ಹಾಕಿಕೊಂಡು ಎರಡು ಜಡೆ ಕಟ್ಟಿ ಬಂಗಾರದ ಆಭರಣ ಧರಿಸಿ ನಗುನಗುತ್ತ ಸಂಭ್ರಮದಿಂದ ಸುತ್ತಮುತ್ತಲಿನ ಮನೆಗಳಿಗೆ ತೆರಳಿ ಎಳ್ಳು ಬೀರುವುದು ಅಥವಾ ಎಳ್ಳುಬೆಲ್ಲ ಕೊಟ್ಟು ನಮಸ್ಕರಿಸುವುದು ಕಣ್ತುಂಬಿಕೊಳ್ಳಬೇಕಾದ ದೃಶ್ಯ. ದೊಡ್ಡವರು ಅವರ ಕೈಯಿಂದ ಎಳ್ಳು ಬೆಲ್ಲವನ್ನು ತೆಗೆದುಕೊಳ್ಳುವುದು, ‘ಎಳ್ಳು ಬೆಲ್ಲ ತಿಂದು ಒಳ್ಳೆ ಒಳ್ಳೆ ಮಾತಾಡೋಣ’ ಎನ್ನುವುದು ಕೇವಲ ಶಿಷ್ಟಾಚಾರವಾಗಿ ಉಳಿಯದೆ ಸಂಕ್ರಮಣದ ಶುಭದಿನದಲ್ಲಿ ಸ್ನೇಹದ ಸಂದೇಶವನ್ನು ವಿನಿಮಯ ಮಾಡಿಕೊಳ್ಳುವ ಸತ್ ಸಂಪ್ರದಾಯವಾಗಿ ನಮ್ಮಲ್ಲಿ ಉಳಿದು ಬಂದಿದೆ. ಸಿಹಿ ವಿನಿಮಯದಷ್ಟೇ ಮುಖ್ಯವಾದುದು ಸಿಹಿ ಮಾತುಗಳ ವಿನಿಮಯವೂ ತಾನೇ?

  ‘ಎಳ್ಳು ಬೆಲ್ಲ ತಿಂದು ಒಳ್ಳೆ ಮಾತನಾಡು’ ಎಂಬುದನ್ನು ಕೇಳಿದ ಒಬ್ಬ ಪತಿ ಹೆಂಡತಿಯೊಡನೆ ಮಾತಾಡುವುದನ್ನೇ ಬಿಟ್ಟುಬಿಟ್ಟನಂತೆ. ಆಡಿದರೆ ಒಳ್ಳೆಯ ಮಾತನ್ನಾಡಬೇಕು. ಅವಳೋ ಎರಡನೆಯ ವಾಕ್ಯಕ್ಕೇ ಕುರುಕ್ಷೇತ್ರದ ಕಹಳೆ. ಸವಿನುಡಿ ‘ಒನ್ ವೇ’ ಆಗಲು ಸಾಧ್ಯವಿಲ್ಲವಲ್ಲ! ಆದರೆ ಎಲ್ಲೆಡೆಯೂ ಈ ಪರಿ ಇರುವುದಿಲ್ಲ. ಮಾತಿನ ಚಕ್ರವನ್ನು ಸುಲಲಿತವಾಗಿ ಜರುಗಿಸುವ ಅನೇಕ ಜನರಿದ್ದಾರೆ. ಅವರನ್ನು ಹುಡುಕಲು ಎಲ್ಲಿಯೂ ಹೋಗಬೇಕಾಗಿಯೂ ಇಲ್ಲ. ‘ಒಂದ್ನಿಮಿಷ ಮಾತನಾಡಬಹುದಾ ಮೇಡಮ್..’ ಎನ್ನುತ್ತ ಮೊಬೈಲ್​ನಲ್ಲಿ ತೇಲಿಬರುವ ಜೇನುಕಂಠಕ್ಕೆ ಮಾರುಹೋಗಿ ‘ಎಸ್ ಪ್ಲೀಸ್’ ಎಂದರಾಯಿತು. ಸಕ್ಕರೆಯೂ ಕಹಿ ಎನ್ನಿಸುವ ರೀತಿಯಲ್ಲಿ ನಮ್ಮ ಜೀವನದಲ್ಲಿ ಎಂದೆಂದೂ ಹೊಂದಲು ಸಾಧ್ಯವಿಲ್ಲದ ಅಥವಾ ಹೊಂದಿದರೆ ಏನೇನೂ ಉಪಯೋಗವಾಗದ ವಸ್ತುಗಳ, ವಿಷಯಗಳ ಸರಮಾಲೆಯನ್ನೇ ಮುಂದಿಟ್ಟು, ಏನಕೇನಪ್ರಕಾರೇಣ ನಮ್ಮ ತಲೆಯ ಸೈಜಿಗೆ ಟೋಪಿ ಸಿದ್ಧಗೊಳಿಸುವ ಅಪ್ರತಿಮ ಸವಿಜೇನಿನಂತಹ ಮಾತಿನ ಒಡತಿಯರಿಗೆ ಬರವಿಲ್ಲ. ಅವರು ಎಳ್ಳೇನು, ಬೆಳ್ಳುಳ್ಳಿಯನ್ನು ತಿಂದರೂ ಅದೇ ಸವಿಮಾತನ್ನೇ ಆಡುತ್ತಾರೆ. ನಮಗೆ ಬೇಕಾದುದು ಆ ಪರಿಯ ಹೊರ ಒಳಿತಲ್ಲ.

  ‘ಹೊರಗಡೆ ಚಳಿ ಇದೆ. ಸ್ವೆಟರ್ ಧರಿಸಿ ಹೋಗು, ಎಚ್ಚರ’ ಎನ್ನುವ ಮಾಮೂಲಿ ನುಡಿಯೂ ಸ್ವೆಟರ್ ಧರಿಸದ ವ್ಯಕ್ತಿಯಲ್ಲೂ ಮನವನ್ನು ಬೆಚ್ಚಗೆ ಮಾಡುವುದು ನಿಶ್ಚಿತ. ಮಾತಿನಲ್ಲಿ ಪ್ರೀತಿ ತುಂಬಿಸಿ ಉಲಿದಾಗ ಅದರೊಳಗಿನ ಆತ್ಮೀಯತೆಗೆ ಕರಗದವರು ಯಾರು? ಬೆಚ್ಚನೆಯ ಸ್ನೇಹದ ಭಾವ ಉಕ್ಕಿಸಲು ವೆಚ್ಚ ಮಾಡಬೇಕಾದ ಅಗತ್ಯವೇನಿಲ್ಲ. ಅಂತರಂಗದ ಕಾಳಜಿಯನ್ನು ಮಾತಿನಲ್ಲಿ ವ್ಯಕ್ತಪಡಿಸಿ ಎದುರಿಟ್ಟರೆ ಸಾಕು ಕೇಳಿಸಿಕೊಂಡ ವ್ಯಕ್ತಿಗೆ ಅದರೊಳಗಿನ ಆದರ, ಕಾಳಜಿ ಅನುಭವಕ್ಕೆ ಬಂದು ತೃಪ್ತಿಯ ಮುಗುಳ್ನಗೆ ತಾನಾಗಿಯೇ ಅರಳಿಬಿಡುತ್ತದೆ.

  ಪೊ›.ಅ.ರಾ.ಮಿತ್ರರ ‘ಮಲಿನ ಸರಸ್ವತಿ’ ಎಂಬ ಪ್ರಬಂಧದಲ್ಲಿನ ವ್ಯಕ್ತಿ ನಮಗೆ ಇನ್ನೊಂದು ಮಾತಿನ ಪರಿಯನ್ನು ಪರಿಚಯಿಸುತ್ತಾನೆ. ಶುದ್ಧ ಒರಟನಾದ ಅವನನ್ನು ಮಗನ ಹುಟ್ಟುಹಬ್ಬದ ದಿನ ಬರಹೇಳುವುದು ಬೇಡ ಎಂದು ಇವರೇನೋ ತೀರ್ವನಿಸಿರುತ್ತಾರೆ. ಆದರೆ ಅದು ಅವನಿಗೆ ತಿಳಿಯಬೇಕಲ್ಲ! ಬರುತ್ತಲೇ ‘ಓಹೋ! ಮಗನ ಹುಟ್ಟುಹಬ್ಬಕ್ಕೆ ತೋಳನಂತೆ ತಿಂದು ಕತ್ತೆಯಂತೆ ಅರಚುವವನನ್ನು ಕರೆಯೋದು ಬೇಡಾಂತ ಸುಮ್ನಿದ್ಯೇನೋ ಭಡವಾ’ ಎನ್ನುವ ಆತ ‘ಕೇಕ್ ಕಟಿಂಗ್ ಸಮಯ’ ತನ್ನ ಹೊಟ್ಟೆಯ ತಾಳದ ಸಮಯವನ್ನೂ ಮೀರಿದುದರಿಂದ ‘ನನ್ಗೊಂದಷ್ಟು ಪಿಂಡ ಹಾಕ್ಬಿಟ್ರೆ ಮೂಲೇಲಿ ನಾಯಿ ತರಹ ಬಿದ್ದಿದ್ದು ಎದ್ಹೋಗ್ತೀನಿ. ಕವಳ ಕರುಣಿಸ್ಬಿಡಯ್ಯಾ ಕಮಂಗಿ’ ಎನ್ನುತ್ತಾನೆ. ಇವರ ಮನೆಯ ಪ್ರತಿಯೊಂದು ಕಷ್ಟಕ್ಕೂ ಸ್ಪಂದಿಸುವ ಆ ಒರಟನದು ಹೃದಯಶ್ರೀಮಂತಿಕೆ, ರಸನದಾರಿದ್ರ್ಯ.

  ಮಾತಿನ ಗೋಪುರದ ವಿನ್ಯಾಸವನ್ನು ಬಹಳ ಚೆನ್ನಾಗಿ ಕಂಡುಕೊಂಡವರು, ಕಟ್ಟಿಕೊಂಡವರು ನಮ್ಮ ರಾಜ್ಯದ ಹಂಗಾಮಿ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿದ್ದ ನಿಟ್ಟೂರು ಶ್ರೀನಿವಾಸರಾಯರು. ಮಾಸ್ಟರ್ ಹಿರಣ್ಣಯ್ಯನವರ ನಾಟಕವೊಂದನ್ನು ಸರ್ಕಾರ ನಿಷೇಧಿಸಲು ತೀರ್ವನಿಸಿದ್ದ ಕಾಲದಲ್ಲಿ ಅವರು ನಾಟಕ ನೋಡಲು ಹೋದರು. ಅಂದಿನ ಮುಖ್ಯಮಂತ್ರಿಗಳು ಆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದಾಗ ನಿಟ್ಟೂರರು, ‘ನಾನು ರಾಜ್ಯಪಾಲನಾಗಿ ಅಲ್ಲಿಗೆ ಹೋಗಿಲ್ಲ. ಸಾಮಾನ್ಯ ನಾಗರಿಕನಾಗಿ ಟಿಕೆಟ್ ಖರೀದಿಸಿಯೇ ಹೋಗಿದ್ದೇನೆ’ ಎನ್ನುತ್ತ ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು. ಅದನ್ನು ವರದಿಗಾರನೊಬ್ಬ ಬರೆಯುವಾಗ, ‘ಮುಖ್ಯಮಂತ್ರಿಗಳು ನಿಟ್ಟೂರರ ಮಾತು ಕೇಳಿ ಸುಮ್ಮನಾದರು’ ಎಂದು ಬರೆಯಲು ಹೊರಟುದುದನ್ನು ಗಮನಿಸಿದ ನಿಟ್ಟೂರರು, ‘ಹಾಗೆ ಬರೆಯಬಾರದು. ಮುಖ್ಯಮಂತ್ರಿಗಳು ಸುಮ್ಮನಾದರು ಎಂದು ಬರೆಯುವುದು ಉದ್ಧಟತನವಾಗುತ್ತದೆ. ಅವರು ಅರ್ಥ ಮಾಡಿಕೊಂಡರು ಎಂದು ಬರೆಯಿರಿ’ ಎಂದರು. ಮಾತಿನ ಪ್ರತಿ ನುಡಿಗೆ ತನ್ನದೇ ಆದ ತೂಕವಿರುತ್ತದೆ ಎನ್ನುವುದನ್ನು ಇಂದು ಎಷ್ಟು ಜನ ಅರ್ಥ ಮಾಡಿಕೊಂಡಾರು?

  ಒಬ್ಬರು ಹೇಳುವ ಮಾತಿನ ಉದ್ದೇಶ ತಟಸ್ಥವಾಗಿದ್ದರೂ ಅದು ಇನ್ನೊಬ್ಬರಿಗೆ ರಿಪೋರ್ಟ್ ಆಗುವಾಗ ಸ್ಪೋಟಕವಾಗುವುದೂ ಉಂಟು. ಅಧಿಕಾರದಲ್ಲಿರುವವರು, ರಾಜಕಾರಣಿಗಳು ಈ ಬವಣೆಯನ್ನು ಅನೇಕ ಬಾರಿ ಅನುಭವಿಸುತ್ತಿರುತ್ತಾರೆ. ‘ಮಾತು ಆಡಿದರೆ ಹೋಯಿತು ಮುತ್ತು ಒಡೆದರೆ ಹೋಯಿತು’ ಎಂಬ ಮಾತಿದೆ. ಯಾವುದೋ ಸಂದರ್ಭಕ್ಕೆ ಏನೋ ಒಂದು ಉದ್ದೇಶದಿಂದ ಬಳಸಿದ ಶಬ್ದಗಳು ತಿರುಚಲ್ಪಟ್ಟು ಹೋಗಿ ಸಂಬಂಧಿಸಿದವರನ್ನು ಕುಟುಕಿದರೆ ಆ ಸಂಬಂಧ ಮುರಿದು ಬೀಳದೆ ಇನ್ನೇನಾಗುತ್ತದೆ? ಸಂಬಂಧಗಳು ಮುರಿಯುವ ಸಂದರ್ಭದಲ್ಲಿ ನೇರ ಮುಖಾಮುಖಿಯಾಗಿ ಮಾತಾಡಿಕೊಳ್ಳುವುದು ಹಿತಕರ.

  ನಾವು ಆಡುವ ಮಾತು ಹೀಗಿರಲಿ ಗೆಳೆಯ

  ಮೃದು ವಚನ ಮೂಲಕ ಗೆಲ್ಲುವುದು ತಿಳಿಯ

  ಮೌನ ಮೊಗ್ಗೆಯನೊಡೆದು ಮಾತಿರಲಿ ಬರಲಿ

  ಮೂರು ದಿನಗಳ ಬಾಳು ಘಮ ಘಮಿಸುತಿರಲಿ

  ‘ಮೃದು ವಚನದ ಕವಿ’ ಎಂದೇ ಪ್ರಸಿದ್ಧರಾಗಿರುವ ಚೆನ್ನವೀರ ಕಣವಿಯವರ ಮಾತುಗಳಿವು. ಮಾತನಾಡುವಾಗ ಎದುರಿಗೆ ಕೇಳಿಸಿ ಕೊಳ್ಳುವವನಿಗೆ ನೋವಾಗದಂತೆ ಸಂತಸವಾಗುವಂತೆ ಮಾತನಾಡುವುದು ಅವರವರ ಸಂಸ್ಕಾರ. ಎಳ್ಳು ತಿಂದರೆ ಮಾತ್ರ ಒಳ್ಳೆಯ ಮಾತನಾಡಬೇಕೆಂಬ ನಿಯಮವೇನೂ ಇಲ್ಲ. ಅದೊಂದು ಸಂಪ್ರದಾಯದ ಮಾತು. ಎಳ್ಳು ತಿನ್ನದೆಯೂ ಸದಾಕಾಲ ಒಳ್ಳೆಯಮಾತನ್ನೇ ಆಡುವವರು ಎಷ್ಟು ಜನ ನಮ್ಮ ನಡುವೆಯೇ ಇಲ್ಲ? ಎದುರಿನವರಿಗೆ ಬೇಸರವಾಗದಂತೆ ಹೇಳುವುದು ಒಂದು ಕಲೆ. ನಮ್ಮೂರಲ್ಲಿ ಒಬ್ಬ ಅಜ್ಜಿ ಇದ್ದರು. ಯಾರದ್ದಾದರೂ ಸೊಸೆ ತುಂಬ ಬಡಕಲಾಗಿದ್ದರೆ ಊರಿನವರು ಬಂದರೆ ‘ಚೆನ್ನಾಗಿಯೇ ಇದ್ದಾಳೆ. ಕಡ್ಡಿಕಡ್ಡಿಯಾಗಿ ತೆಳ್ಳಗೆ ಬೆಳ್ಳಗೆ ಲಕ್ಷಣವಾಗಿದ್ದಾಳೆ’ ಎನ್ನುತ್ತಿದ್ದರು. ಅದೇ ಇನ್ನೊಬ್ಬರ ಮನೆಗೆ ದಪ್ಪ ಸೊಸೆ ಬಂದರೆ, ‘ಮೈ ಕೈ ತುಂಬಿಕೊಂಡು ಉರುಟುರುಟಾಗಿ ಚೆನ್ನಾಗಿ ಕಾಣುತ್ತಾಳೆ’ ಎನ್ನುತ್ತಿದ್ದರು. ಅವರ ಮಾತಿನಲ್ಲಿ ಗೇಲಿಯನ್ನಾಗಲಿ ಚುಚ್ಚುವ ಭರ್ತ್ಸನೆಯನ್ನಾಗಲಿ ಕಂಡವರೇ ಇಲ್ಲ. ಹೆಸರು ‘ಮೂಕಕ್ಕ’ ಎಂದಾದರೂ ಆಕೆಯ ಮಾತು ಸವಿಜೇನಿನಂತೆ ಇರುತ್ತಿತ್ತು. ಎಲ್ಲರಿಗೂ ಪ್ರಿಯವಾದ ಅಜ್ಜಿ ಆಗಿದ್ದರು.

  ಸವಿ ಮಾತಿನ ಹಿರಿಮೆ ಬಲ್ಲವರು ನಮ್ಮ ವಚನಕಾರರು.

  ಏನು ಬಂದಿರಿ ಹದುಳವಿದ್ದಿರೆ ಎಂದೊಡೆ ನಿಮ್ಮ ಮೈಸಿರಿ ಹಾರಿ ಹೋಹುದೆ ?

  ಕುಳ್ಳಿರೆಂದರೆ ನೆಲ ಕುಳಿ ಹೋಹುದೆ?

  ಒಡನೆ ನುಡಿದರೆ ಶಿರಹೊಟ್ಟೆ ಒಡೆವುದೇ?

  ಎಂದು ಬಸವಣ್ಣನವರು ಹೇಳಿದ್ದಾರೆ. ನಮ್ಮ ಜನರ ಮಾತು ಅಹಂಕಾರದಿಂದ ಕೂಡಿದ್ದಾಗಿರಬಾರದು, ಉದ್ಧಟತನಕ್ಕಾಗಿರಬಾರದು. ‘ಮೃದುಭಾಷಿಣಿ’, ‘ಪ್ರಿಯವಾದಿನಿ’ ಎಂಬುದೆಲ್ಲ ನಮ್ಮ ಸುಭಾಷಿತಕಾರರು ಕೊಟ್ಟ ಬಿರುದುಗಳು. ಒಳ್ಳೆಯ ಮಾತುಗಳು ಎಳ್ಳು ತಿಂದಾಗಷ್ಟೇ ಅಲ್ಲ ಎಲ್ಲ ಕಾಲಕ್ಕೂ ನಮ್ಮ ನಾಲಗೆಯಿಂದ ಮುತ್ತುಗಳಂತೆ ಉದುರಬೇಕು. ಮಾತಿನ ಮಲ್ಲರು ಮಾತ್ರ ಆಗದೆ ಮಾತಿನಲ್ಲೇ ಮನೆ ಕಟ್ಟದೆ ಮೃದುಮಾತುಗಳಿಂದ ಸುತ್ತಲಿನವರ ಮುಖದಲ್ಲಿ ಸಂತಸದ ಅಲೆಗಳನ್ನು ಮೂಡಿಸುವ ಸವಿ ಮಾತುಗಳು ನಮ್ಮೆಲ್ಲರನ್ನೂ ಆವರಿಸಿಕೊಂಡಿರಲಿ.

  (ಲೇಖಕರು ಅರ್ಥಶಾಸ್ತ್ರ ಉಪನ್ಯಾಸಕರು, ಖ್ಯಾತ ಹಾಸ್ಯ ಸಾಹಿತಿ)

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts