More

    ಗ್ರಾಪಂ ಕೇಂದ್ರಗಳಲ್ಲಿ ಗ್ರಂಥಾಲಯ ಆರಂಭಕ್ಕೆ ನಿರಾಸಕ್ತಿ !

    ವಿಜಯವಾಣಿ ವಿಶೇಷ ಮುದೇನೂರು

    ಈ ಭಾಗದ ಲಿಂಗದಹಳ್ಳಿ, ತುಮರಿಕೊಪ್ಪ, ಶಿರಗುಂಪಿ ಸೇರಿ ಕೊಪ್ಪಳ ಜಿಲ್ಲೆಯ 23 ಗ್ರಾಮಗಳನ್ನು 2015ರಲ್ಲಿ ಗ್ರಾಪಂಗಳನ್ನಾಗಿ ಘೋಷಿಸುವುದರ ಜತೆಗೆ ಗ್ರಂಥಾಲಯ ಕೇಂದ್ರಗಳನ್ನೂ ಸರ್ಕಾರ ಮಂಜೂರು ಮಾಡಿತ್ತು. ಆದರೆ, ಈವರೆಗೆ ಲೈಬ್ರರಿಗಳು ಆರಂಭವಾಗಿಲ್ಲ. ಹೀಗಾಗಿ ಪಂಚಾಯಿತಿ ವ್ಯಾಪ್ತಿಯ ವಿದ್ಯಾರ್ಥಿಗಳು-ಓದುಗರ ಜ್ಞಾನಾರ್ಜನೆಗೆ ತೊಡಕಾಗಿದೆ.

    ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪಠ್ಯ ಹೊರತುಪಡಿಸಿ ಹಲವಾರು ವಿಷಯ ತಿಳಿದುಕೊಳ್ಳಲು ಗ್ರಂಥಾಲಯಗಳು ಜ್ಞಾನ ಭಂಡಾರಗಳಾಗಿವೆ. ಹೀಗಾಗಿ ಜಿಲ್ಲೆಯಲ್ಲಿ 23 ಗ್ರಾಪಂಗಳ ಜತೆ ಗ್ರಂಥಾಲಯ ಆರಂಭಿಸಲು ಸರ್ಕಾರ ಆದೇಶ ಹೊರಡಿಸಿತ್ತು. ಆ ಪೈಕಿ ಜಿಲ್ಲೆಯ ಕೊಪ್ಪಳ ತಾಲೂಕಿನ ಹಾಲವರ್ತಿ, ಕಲಕೇರಿ, ಬೇವಿನಹಾಳ, ವನ ಬಳ್ಳಾರಿ, ಯಲಬುರ್ಗಾ ತಾಲೂಕಿನ ತುಮ್ಮರಗುದ್ದಿ, ಬೋದೂರು, ಸಂಕನೂರು, ಕುಕನೂರು ತಾಲೂಕಿನ ನೆಲಜೇರಿ, ಕುಷ್ಟಗಿ ತಾಲೂಕಿನ ಹಿರೇನಂದಿಹಾಳ,ಅಂಟರಠಾಣಾ, ಕೇಸೂರು, ಲಿಂಗದಹಳ್ಳಿ, ಗುಮಗೇರಿ, ಬಿಳೇಕಲ್, ತುಮರಿಕೊಪ್ಪ, ಹಾಬಲಕಟ್ಟಿ, ಶಿರಗುಂಪಿ, ಗಂಗಾವತಿ ತಾಲೂಕಿನ ಸಣಾಪುರ, ಜಂಗಮರ ಕಲ್ಗುಡಿ, ಕಾರಟಗಿ ತಾಲೂಕು ಮೈಲಾಪುರ, ಬರಗೂರು ಹಾಗೂ ಕನಕಗಿರಿ ತಾಲೂಕಿನ ಜೀರಾಳ, ಬಸರಿಹಾಳ ಗ್ರಾಮದಲ್ಲಿ ಪಂಚಾಯಿತಿಗಳು ಅಸ್ತಿತ್ವಕ್ಕೆ ಬಂದು ಏಳೆಂಟು ವರ್ಷವಾಗಿವೆ. ಆದರೆ, ಗ್ರಂಥಾಲಯಗಳನ್ನು ಮಾತ್ರ ಆರಂಭಿಸಿಲ್ಲ. ಅಧಿಕಾರಿಗಳ ನಿರ್ಲಕ್ಷೃ ಧೋರಣೆಯೇ ಇದಕ್ಕೆಲ್ಲ ಕಾರಣ ಎಂಬ ಆರೋಪ ಕೇಳಿಬಂದಿದೆ.

    ಪ್ರಸ್ತುತ ದಿನಗಳಲ್ಲಿ ಪುಸ್ತಕ, ಪತ್ರಿಕೆ, ನಿಯತಕಾಲಿಕ, ಪ್ರಚಲಿತ ವಿದ್ಯಾಮಾನ ವಿಷಯ ಪುಸ್ತಕಗಳು ಸೇರಿದಂತೆ ಹಲವು ವಿಷಯಗಳನ್ನು ತಿಳಿದುಕೊಳ್ಳಲು ಗ್ರಂಥಾಲಯಗಳು ಅವಶ್ಯ. ಗ್ರಾಮೀಣ ಪ್ರದೇಶದ ನೂರಾರು ವಿದ್ಯಾರ್ಥಿಗಳು, ಯುವಕರಿಗೆ ತುಂಬ ಅನುಕೂಲವಾಗಲಿದೆ. ಆದರೆ, ಹಲವು ವರ್ಷಗಳಿಂದ 23 ಗ್ರಾಮಗಳಲ್ಲಿ ಗ್ರಂಥಾಲಯ ಶುರುವಾಗದ ಕಾರಣ ಸಮಸ್ಯೆಯಾಗಿದೆ. ಇನ್ನಾದರೂ ಪ್ರತಿ ಗ್ರಾಪಂನಲ್ಲಿ ಸುಸಜ್ಜಿತ ಕಟ್ಟಡದೊಂದಿಗೆ ಗ್ರಂಥಾಲಯ ಆರಂಭಿಸಬೇಕು ಎಂದು ಒತ್ತಾಯಿಸುತ್ತಾರೆ ಓದುಗರು.

    ಲಿಂಗದಹಳ್ಳಿ ಗ್ರಾಪಂ ಕೇಂದ್ರ ಸ್ಥಾನದಲ್ಲಿ ಈವರೆಗೆ ಗ್ರಂಥಾಲಯ ಕೇಂದ್ರ ಆರಂಭವಾಗದ್ದರಿಂದ ಪಂಚಾಯಿತಿ ವ್ಯಾಪ್ತಿ ಹಳ್ಳಿಗಳ ಶಾಲೆ-ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು, ಸಾರ್ವಜನಿಕರಿಗೆ ತೊಂದರೆಯಾಗಿದೆ. ಈ ಭಾಗದ ವಿದ್ಯಾರ್ಥಿಗಳು-ಯುವಜನತೆ ಹಿತದೃಷ್ಟಿಯಿಂದ ತ್ವರಿತವಾಗಿ ಗ್ರಂಥಾಲಯ ಆರಂಭಿಸಬೇಕು.
    | ಯಮನೂರು ಗೊಲ್ಲಾರ್, ಯುವಕ, ಗುಡ್ಡದ ಹನಮಸಾಗರ

    ಕುಕನೂರು ತಾಲೂಕಿನ ನೆಲಜೇರಿ ಗ್ರಾಪಂ ವ್ಯಾಪ್ತಿಯ ವಟಪರ್ವಿ ಗ್ರಾಮದಲ್ಲಿ ಪಂಚಾಯಿತಿಯಿಂದ ತಾತ್ಕಾಲಿಕವಾಗಿ ಗ್ರಂಥಾಲಯ ಕೇಂದ್ರ ತೆರೆಯಲಾಗಿದೆ. ಆದರೆ, ಸೂಕ್ತ ಕಟ್ಟಡವಿಲ್ಲ. ಗ್ರಂಥಾಲಯ ಮೇಲ್ವಿಚಾರಕ ಹುದ್ದೆ ಖಾಲಿ ಇದೆ. ಪುಸ್ತಕ, ವಿದ್ಯುತ್, ಶೌಚಗೃಹ , ಸಾಮಗ್ರಿ, ದಿನ-ಮಾಸಿಕ ಪತ್ರಿಕೆ ಸೇರಿ ಮೂಲಸೌಲಭ್ಯ ಕೊರತೆ ಇವೆ. ಗ್ರಾಪಂ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ.
    | ಮಹೇಶ ಕೊಳಜಿ, ಓದುಗ, ವಟಪರ್ವಿ

    ಕೊಪ್ಪಳ ಜಿಲ್ಲೆಯಲ್ಲಿ 23 ಗ್ರಾಪಂ ಕೇಂದ್ರ ಸ್ಥಾನದಲ್ಲಿ ಗ್ರಂಥಾಲಯ ತೆರೆಯಲು ಸರ್ಕಾರ ಆದೇಶಿಸಿದೆ. ಅಲ್ಲದೆ ಪಂಚಾಯತ್ ರಾಜ್ ಇಲಾಖೆಗೆ ಹಸ್ತಾಂತರಿಸಿದೆ. ನೇಮಕಾತಿ ನಿಯಮ ಬದಲಾವಣೆಯಿಂದ ಗ್ರಾಪಂ ಪಿಡಿಒಗಳು ಗ್ರಂಥಾಲಯ ಮೇಲ್ವಿಚಾರಕರನ್ನು ನೇಮಿಸಲಿದ್ದಾರೆ. ಪ್ರತಿ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಂಥಾಲಯ ಆರಂಭಕ್ಕೆ ಪಿಡಿಒಗಳು, ಅಧಿಕಾರಿಗಳು ಮುತುವರ್ಜಿ ವಹಿಸಲಿದ್ದಾರೆ.
    | ಯಮನೂರಪ್ಪ, ಜಿಲ್ಲಾ ಗ್ರಂಥಪಾಲಕರು, ಕೊಪ್ಪಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts