More

    ಕೊಪ್ಪಳ ಜಿಲ್ಲೆಯ ರೈಲ್ವೆ ಕಾಮಗಾರಿಗಳಿಗೆ ವೇಗ: ಕೇಂದ್ರ ಬಜೆಟ್‌ನಲ್ಲಿ 408 ಕೋಟಿ ರೂ. ಅನುದಾನ

    ಕೊಪ್ಪಳ: ಕೇಂದ್ರ ಬಜೆಟ್‌ನಲ್ಲಿ ಜಿಲ್ಲೆಯ ರೈಲ್ವೆ ಕಾಮಗಾರಿಗಳಿಗೆ 408 ಕೋಟಿ ರೂ. ಅನುದಾನ ಘೋಷಣೆಯಾಗಿರುವುದು ಕೆಲಸಗಳಿಗೆ ವೇಗ ದೊರೆತಂತಾಗಿದೆ.

    ಹುಬ್ಬಳ್ಳಿಯಿಂದ ಹೊಸಪೇಟೆವರೆಗಿನ ರೈಲು ಮಾರ್ಗವು ಜಿಲ್ಲೆಯಲ್ಲಿ ಹಾದು ಹೋಗಲಿದ್ದು, ಇದಕ್ಕೆ 15ಕ್ಕೂ ಅಧಿಕ ರೈಲು ಗೇಟ್‌ಗಳು ಬರುತ್ತವೆ. ಇವುಗಳಲ್ಲಿ ಕಿನ್ನಾಳ ರಸ್ತೆ, ಭಾಗ್ಯನಗರ ಸೇತುವೆಗಳು ಪೂರ್ಣಗೊಂಡಿದ್ದು ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗಿದೆ. ಕೊಪ್ಪಳ ನಗರದ ಸ್ವಾಮಿ ವಿವೇಕಾನಂದ ಶಾಲೆ ಹಾಗೂ ಕೆಇಬಿ, ಹುಲಿಗಿ-ಮುನಿರಾಬಾದ್ ಸೇತುವೆಗಳ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ನಡೆದಿದ್ದು, ಭೂಸ್ವಾಧೀನ ಸೇರಿ ಇತರ ಕಾಮಗಾರಿಗಳು ನಡೆಯಬೇಕಿದೆ. ಕಿಡದಾಳ ಹಾಗೂ ಬನ್ನಿಕೊಪ್ಪ-ಇಟಗಿ ಸೇತುವೆಗಳ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರೊಂದಿಗೆ ಅಗಳಕೇರಾ ಗೇಟ್‌ನಲ್ಲೂ ಸೇತುವೆ ನಿರ್ಮಿಸುವಂತೆ ಸಾರ್ವಜನಿಕರಿಂದ ಒತ್ತಡವಿದೆ. ಇದರೊಂದಿಗೆ ಮುನಿರಾಬಾದ್-ಮೆಹಬೂಬ್ ನಗರ, ತಳಕಲ್-ವಾಡಿ ರೈಲ್ವೆ ಕಾಮಗಾರಿಗಳು ನಡೆಯುತ್ತಿವೆ. ಕಾರಟಗಿವರೆಗೆ ರೈಲು ಓಡಾಟ ಆರಂಭಿಸಿದೆ.

    ತಳಕಲ್-ವಾಡಿ ಕಾಮಗಾರಿಯಲ್ಲಿ ಯಲಬುರ್ಗಾವರೆಗೆ ಹಳಿ ನಿರ್ಮಿಸಲಾಗಿದೆ. ಫೆ.1ರಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್‌ನಲ್ಲಿ ನೈರುತ್ಯ ರೈಲ್ವೆ ವಿಭಾಗಕ್ಕೂ ಸಾಕಷ್ಟು ಅನುದಾನ ಬಿಡುಗಡೆಗೊಂಡಿದೆ. ಇದರಲ್ಲಿ ಜಿಲ್ಲೆಯ ತಳಕಲ್-ವಾಡಿ ಕಾಮಗಾರಿಗೆ 182 ಕೋಟಿ ರೂ., ಮುನಿರಾಬಾದ್-ಮೆಹಬೂಬ್ ನಗರ ಕಾಮಗಾರಿಗೆ 210 ಕೋಟಿ ರೂ., ಭಾನಾಪೂರ ಮೇಲ್ಸೇತುವೆ ನಿರ್ಮಾಣ ಕೈಗೊಂಡ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ರೈಲ್ವೆ ಇಲಾಖೆಯಿಂದ 1 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಇನ್ನು ಕೊಪ್ಪಳ-ಕುಷ್ಟಗಿ, ಕೊಪ್ಪಳ-ಗಿಣಿಗೇರಿ, ಮುನಿರಾಬಾದ್-ಹುಲಿಗಿ ಸೇತುವೆ ಕಾಮಗಾರಿಗಳಿಗೆ ತಲಾ 5 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿದ್ದು, ಕಾಮಗಾರಿಗಳ ಸಮರ್ಪಕ ಅನುಷ್ಠಾನಕ್ಕೆ ಅನುಕೂಲವಾಗಿದೆ.

    ಜಿಲ್ಲೆಯ ರೈಲ್ವೆ ಕಾಮಗಾರಿಗಳು ವೇಗವಾಗಿ ಅನುಷ್ಠಾನಗೊಳ್ಳುತ್ತಿವೆ. ಪ್ರಸಕ್ತ ಬಜೆಟ್‌ನಲ್ಲೂ ಸೇತುವೆ ಹಾಗೂ ತಳಕಲ್-ವಾಡಿ, ಮುನಿರಾಬಾದ್-ಮೆಹಬೂಬ್ ನಗರ ರೈಲ್ವೆ ಕಾಮಗಾರಿಗಳಿಗೆ ಅನುದಾನ ನೀಡುವ ಮೂಲಕ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಆದ್ಯತೆ ನೀಡಿದೆ.
    | ಸಂಗಣ್ಣ ಕರಡಿ, ಸಂಸದ, ಕೊಪ್ಪಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts