More

    ಸರ್ವರ್ ಇಲ್ಲದೇ ಬಡವರ ಗೋಳು ಕೇಳೋರಿಲ್ಲ

    ಶಂಕರ ಈ.ಹೆಬ್ಬಾಳ
    ಮುದ್ದೇಬಿಹಾಳ: ಪಡಿತರ ಆಹಾರ ಧಾನ್ಯ ಪಡೆದುಕೊಳ್ಳಬೇಕಾದರೆ ಸರ್ಕಾರ ಜಾರಿಗೆ ತಂದಿರುವ ಹೊಸ ನಿಯಮದಂತೆ ರೇಷನ್ ಕಾರ್ಡ್ ಅಪಡೇಟ್ ಮಾಡಿಸಿಕೊಳ್ಳಲೇಬೇಕು. ಇಲ್ಲದಿದ್ದರೆ ನಿಮಗೆ ರೇಷನ್ ಹಂಚಿಕೆಯಾಗಿದ್ದರೂ ರೇಷನ್ ದೊರೆಯುವುದಿಲ್ಲ.

    ಬಯೋಮೆಟ್ರಿಕ್‌ನಲ್ಲಿ ನಿಮ್ಮ ಕಾರ್ಡ್ ಸಿಂಧುವಾಗಿಲ್ಲ ಎಂಬ ಉತ್ತರ ಬರುತ್ತದೆ. ಹೀಗಾಗಿ ಪಡಿತರ ಚೀಟಿ ಅಪಡೇಟ್ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದ್ದು, ವಿವಿಧ ಗ್ರಾಮಗಳಿಂದ ಆಗಮಿಸುವ ಸಾರ್ವಜನಿಕರಿಗೆ ಸಕಾಲದಲ್ಲಿ ಕಾರ್ಡ್ ಅಪಡೇಟ್ ಆಗುತ್ತಿಲ್ಲ. ಕಾರಣ ಸರ್ವರ್ ಸಮಸ್ಯೆ ಎಂದು ಸಿಬ್ಬಂದಿ ಹೇಳುತ್ತಿದ್ದಾರೆ.

    ನಿತ್ಯವೂ ಕೂಲಿನಾಲಿ ಮಾಡುವ ಜನರು ಒಂದು ಪಡಿತರ ಚೀಟಿ ಪಡೆದುಕೊಳ್ಳಲು ಮುದ್ದೇಬಿಹಾಳಕ್ಕೆ ಬರಬೇಕಾಗಿದೆ. ನೂರಾರು ರೂ. ಖರ್ಚು ಮಾಡಿ ಕಚೇರಿಗೆ ಬಂದರೂ ಸರ್ವರ್ ಇಲ್ಲದ ಕಾರಣ ವಾಪಸ್ ಹೋಗುವುದು ಅನಿವಾರ್ಯವಾಗುತ್ತದೆ. ಕಳೆದ ಮೂರು ದಿನದಿಂದ ಪಟ್ಟಣದ ಆಹಾರ ಇಲಾಖೆಯಲ್ಲಿ ಸರ್ವರ್ ಇಲ್ಲವೆಂದೇ ಹೇಳಲಾಗುತ್ತಿದ್ದು, ಇದರಿಂದ ಕಚೇರಿಗೆ ಬರುವ ನೂರಾರು ಜನ ವಾಪಸ್ ಹೋಗುತ್ತಿದ್ದಾರೆ.

    ವೃದ್ಧರು, ಮಹಿಳೆಯರು, ಗ್ರಾಮೀಣ ಪ್ರದೇಶದಿಂದ ಬಿರುಬಿಸಿಲಿನಲ್ಲಿ ಬರುವ ಜನರಿಗೆ ತಹಸೀಲ್ದಾರ್ ಕಚೇರಿಯ ಮೇಲ್ಭಾಗದಲ್ಲಿರುವ ಆಹಾರ ಇಲಾಖೆ ಕಚೇರಿಯಲ್ಲಿ ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲವಾಗಿದೆ. ಮೊದಲೇ ಬೇಸಿಗೆ ಸಮಯವಾಗಿದ್ದು, ವೃದ್ಧರಿಗೆ ಕನಿಷ್ಠ ಪಕ್ಷ ಕುಡಿವ ನೀರಿನ ಸೌಕರ್ಯವನ್ನಾದರೂ ಮಾಡಬೇಕು ಎಂದು ಕರ್ನಾಟಕ ನವ ನಿರ್ಮಾಣ ಸೇನೆ ತಾಲೂಕಾಧ್ಯಕ್ಷ ರಾಜುಗೌಡ ತುಂಬಗಿ, ಮುಖಂಡ ಅಪ್ಪುಗೌಡ ಪಾಟೀಲ ಒತ್ತಾಯಿಸುತ್ತಾರೆ.

    ಕರೊನಾ ಜಾಗೃತಿಯಲ್ಲಿ ಅಧಿಕಾರಿಗಳು ಬ್ಯುಸಿ
    ಎಲ್ಲೆಡೆ ಕರೊನಾ ವೈರಸ್ ಹಾವಳಿಯದ್ದೇ ಸದ್ದು ಮಾಡುತ್ತಿರುವ ಸಂದರ್ಭದಲ್ಲಿ ಇನ್ನುಳಿದ ಸೇವೆಗಳನ್ನು ಒದಗಿಸಲು ಅಧಿಕಾರಿಗಳಿಗೆ ಸಮಯಾವಕಾಶ ದೊರೆಯುತ್ತಿಲ್ಲ. ದಿನಕ್ಕೆ ಏನಿಲ್ಲವೆಂದರೂ ಎರಡ್ಮೂರು ಜಿಲ್ಲಾಮಟ್ಟದ ಸಭೆಗಳು, ಕರೊನಾ ವೈರಸ್ ತಾಲೂಕುಗಳಲ್ಲಿರುವ ಪರಿಸ್ಥಿತಿ ಬಗ್ಗೆ ಮಾಹಿತಿ ಕೊಡಬೇಕಿರುವುದರಿಂದ ಅಧಿಕಾರಿಗಳಿಗೆ ನೆರಳಲ್ಲಿ ಕೂತರು ಬೆವರಿಳಿಯುತ್ತಿದೆ. ಏತನ್ಮಧ್ಯೆ ದೈನಂದಿನ ಬಳಕೆಯ ರೇಷನ್ ಕಾರ್ಡ್ ಸಮಸ್ಯೆಯನ್ನು ಪರಿಹರಿಸಲಾಗದೇ ಅಧಿಕಾರಿ ವರ್ಗ ಹೈರಾಣಾಗುವಂತೆ ಕರೊನಾ ವೈರಸ್ ಮಾಡಿದೆ.


    ಸರ್ವರ್ ಇಲ್ಲದಿರುವುದು ನನ್ನ ಗಮನಕ್ಕೆ ಬಂದಿಲ್ಲ. ಸಂಬಂಧಿಸಿದ ಸಿಬ್ಬಂದಿಯನ್ನು ಕರೆದು ವಿಚಾರಿಸುವೆ. ಆಹಾರ ಇಲಾಖೆಯ ಸರ್ವರ್ ಬೆಂಗಳೂರಿನಿಂದ ಜನರೇಟ್ ಆಗುತ್ತಿದ್ದು, ಅಲ್ಲಿಂದಲೇ ಇದು ಸರಿ ಹೋಗಬೇಕು. ಪರಿಶೀಲನೆ ನಡೆಸುತ್ತೇನೆ. ಕುಡಿವ ನೀರಿಗೆ ಸಂಬಂಧಿಸಿದಂತೆ ಜೂನ್‌ನಲ್ಲಿ ಅನುದಾನ ಬಂದ ಬಳಿಕ ವ್ಯವಸ್ಥೆ ಮಾಡಲಾಗುವುದು.
    ಜಿ.ಎಸ್.ಮಳಗಿ, ತಹಸೀಲ್ದಾರ್


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts