More

    ರೈತನೇ ಜಗತ್ತಿನ ಸರ್ವಶ್ರೇಷ್ಠ ಸಾಂಸ್ಕೃತಿಕ ಹರಿಕಾರ

    ಮುದ್ದೇಬಿಹಾಳ: ಸತ್ಯ ಶುದ್ಧ ಕಾಯಕ ಮತ್ತು ದಾಸೋಹ ಪರಂಪರೆಗೆ ಆದರ್ಶ ಪ್ರಾಯರಾದ ರೈತರೇ ಜಗತ್ತಿನ ಸರ್ವಶ್ರೇಷ್ಠ ಸಾಂಸ್ಕೃತಿಕ ಹರಿಕಾರ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಶಶಿಕಾಂತ ಶಿವಪುರೆ ಹೇಳಿದರು.
    ತಾಲೂಕಿನ ಬಸರಕೋಡ ಗ್ರಾಮದ ಪರಪ್ಪ ಮಾಸ್ತರ ಸಾವಯವ ಕೃಷಿ ವಿದ್ಯಾಪೀಠದ ಆವರಣದಲ್ಲಿ ಕೃಷಿ, ತೋಟಗಾರಿಕೆ, ದಾಸೋಹಿ ಸಮಗ್ರ ಕೃಷಿಕರ ಆತ್ಮ ಗುಂಪು ಹಾಗೂ ಎಂ.ಎಂ. ಕೋರಿ ರೈತ ಕೌಶಲ ಅಭಿವೃದ್ಧಿ ಕೇಂದ್ರಗಳ ಆಶ್ರಯದಲ್ಲಿ ಆಯೋಜಿಸಲಾಗಿದ್ದ ರೈತ ದಿನಾಚರಣೆ ಹಾಗೂ ರೈತಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

    ಮಳೆ, ಚಳಿ, ಬಿಸಿಲುಗಳನ್ನೆಲ್ಲಾ ಸಹಿಸಿಕೊಂಡು ಬೆವರು ಹರಿಸಿ ನೆಲವ ತಣಿಸಿ ನಮಗೆ ಕೆಸರಿನಿಂದ ಅಮೃತ ಕಲಶವನೆತ್ತಿ ಕೊಡುತ್ತಿರುವ ರೈತ ನಮಗೆಲ್ಲರಿಗೂ ಹೀರೋ ಆಗಬೇಕು. ಈ ದಿನ ಇಡೀ ದೇಶ ಅವರ ಸೇವೆಯನ್ನು ನೆನೆದು ಅವರಿಗೆ ಕೃತಜ್ಞತೆ ಸಲ್ಲಿಸಿ ಅವರ ಆತ್ಮಗೌರವ ಎತ್ತಿ ಹಿಡಿಯುವ ಕೆಲಸ ಮಾಡಿದಾಗ ದೇಶ ನೆಮ್ಮದಿಯಿಂದ ಬದುಕಲು ಸಾಧ್ಯ ಎಂದರು.

    ರೈತಶ್ರೀ ಪ್ರಶಸ್ತಿ ಪ್ರದಾನ ಮಾಡಿದ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೇವಣೆಪ್ಪ ಮನಗೂಳಿ ಮಾತನಾಡಿ, ಇಂದು ನಾವೆಲ್ಲರೂ ಹೊಟ್ಟೆ ತುಂಬುವಷ್ಟು ಊಟ ಮಾಡಿ ಹಸಿವೆ ಇಲ್ಲದೆ ನಿಶ್ಚಿತೆಯಿಂದ ನಿದ್ದೆ ಮಾಡುತ್ತಿದ್ದರೆ ಇದರ ಹಿಂದೆ ಎಲೆ ಮರೆ ಕಾಯಿಯಂತೆ ರೈತರಿದ್ದಾರೆ. ಕೃಷಿ ಕನಿಷ್ಠವೆಂಬ ಭಾವ ಹೆಚ್ಚುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಸರ್ವ ಶ್ರೇಷ್ಠ ಕಾಯಕವಾಗಿರುವ ಕೃಷಿಯ ಹಿರಿಮೆ ಗರಿಮೆಗಳನ್ನು ಎತ್ತಿ ಹಿಡಿಯುವ ಕೆಲಸ ಎಲ್ಲ ಕಡೆ ಆಗಬೇಕು ಎಂದರು. ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಸುಭಾಷ ಟಾಕಳಿ, ಅಧ್ಯಕ್ಷತೆ ವಹಿಸಿದ್ದ ರೈತ ಪ್ರಮುಖ ಅರವಿಂದ ಕೊಪ್ಪ ಮಾತನಾಡಿದರು.

    ಒಣ ಬೇಸಾಯದಲ್ಲಿ ತರಕಾರಿ ಬೆಳೆದು ಯಶಸ್ವಿ ಬದುಕು ಕಟ್ಟಿಕೊಂಡ ಬಿದರಕುಂದಿಯ ರೈತ ಸಂಗಣ್ಣ ಕೊಂತಿಕಲ್, ಚಿಕ್ಕ ಹಿಡುವಳಿಯಲ್ಲಿ ಸಮಗ್ರ ಕೃಷಿಯ ಮೂಲಕ ಯಶಸ್ವಿಯಾದ ಸರೂರಿನ ರೈತ ಮಹಿಳೆ ಶಾಂತವ್ವ ಸಿ. ಹೊಸಗೌಡ್ರ, ಕೃಷಿಯಲ್ಲಿ ಸುಸ್ಥಿರ ಬದುಕು ಕಟ್ಟಿಕೊಳ್ಳಲು ಸಾಧ್ಯವೆಂದು ನಿರೂಪಿಸಿದ ಅಗಸಬಾಳದ ರೈತ ಬಸನಗೌಡ ಪಾಟೀಲ ಮತ್ತು ಕೃಷಿಯಲ್ಲಿ ಹೊಸ ಪ್ರಯೋಗಗಳ ಮೂಲಕ ಸಾಧನೆ ಮಾಡಿದ ಢವಳಗಿಯ ರೈತ ರಾಯಪ್ಪ ಬಿ. ಸಜ್ಜನ ಇವರಿಗೆ ಪ್ರಸಕ್ತ ಸಾಲಿನ ‘ರೈತಶ್ರೀ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

    ಬಸರಕೋಡ ಪಿಡಿಒ ಎಸ್.ಕೆ. ಹಡಪದ, ಕಾರ್ಯದರ್ಶಿ ಸಂಗಮೇಶ ಕೂಡಗಿ, ಆತ್ಮ ಯೋಜನೆಯ ತಾಲೂಕು ತಾಂತ್ರಿಕ ವ್ಯವಸ್ಥಾಪಕ ಶಶಿಧರ ಹಾಲ್ಯಾಳ, ರಾಚಪ್ಪ ಕೋಣವರ ಇದ್ದರು. ಪ್ರಕಾಶ ರಾಠೋಡ ಸ್ವಾಗತಿಸಿದರು. ರಶ್ಮಿ ಕೊಪ್ಪ ಪ್ರಾಸ್ತಾವಿಕ ಮಾತನಾಡಿದರು. ಪವಾಡೆಪ್ಪ ವಡ್ಡರ ನಿರೂಪಿಸಿದರು. ರವಿ ಚಲವಾದಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts