More

    ಖ್ಯಾತ ಕೃಷಿ ವಿಜ್ಞಾನಿ, ಭಾರತದ ಹಸಿರು ಕ್ರಾಂತಿಯ ಪಿತಾಮಹ ಎಂ.ಎಸ್​. ಸ್ವಾಮಿನಾಥನ್ ವಿಧಿವಶ

    ನವದೆಹಲಿ: ಭಾರತದ ಹೆಸರಾಂತ ಕೃಷಿ ವಿಜ್ಞಾನಿ ಮತ್ತು ದೇಶದ ಹಸಿರು ಕ್ರಾಂತಿಯ ಹರಿಕಾರ ಎಂ.ಎಸ್​. ಸ್ವಾಮಿನಾಥನ್​ ಅವರು ವಯೋಸಹಜ ಕಾಯಿಲೆಯಿಂದ ಗುರುವಾರ ಕೊನೆಯುಸಿರೆಳೆದಿದ್ದಾರೆ.

    ಸ್ವಾಮಿನಾಥನ್​ ಅವರಿಗೆ 98 ವರ್ಷ ವಯಸ್ಸಾಗಿತ್ತು. ಇಂದು ಬೆಳಗ್ಗೆ ಚೆನ್ನೈನಲ್ಲಿ ನಿಧನರಾದರು. ಪತ್ನಿ ಮಿನಾ ಮತ್ತು ಮೂವರು ಪುತ್ರಿಯರಾದ ಸೌಮ್ಯ, ಮಧುರಾ ಮತ್ತು ನಿತ್ಯಾ ಅವರನ್ನು ಅಗಲಿದ್ದಾರೆ. 1960 ಮತ್ತು 1970ರ ದಶಕಗಳಲ್ಲಿ ಸ್ವಾಮಿನಾಥನ್ ಅವರ ಅದ್ಭುತ ಕೆಲಸವು ಭಾರತೀಯ ಕೃಷಿಯಲ್ಲಿ ಕ್ರಾಂತಿಯನ್ನೇ ಮಾಡಿತು. ಭಾರತವು ವ್ಯಾಪಕವಾದ ಬರಗಾಲದಿಂದ ಹೊರಬರಲು ಮತ್ತು ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆಯನ್ನು ಸಾಧಿಸಲು ಸ್ವಾಮಿನಾಥನ್​ ಅವರ ಅದ್ಭುತ ಕೆಲಸವು ನೆರವಾಯಿತು.

    ಸ್ವಾಮಿನಾಥನ್​ ಅವರ ಸೇವೆಯನ್ನು ಪರಿಗಣಿಸಿ ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮದಲ್ಲಿ ಅವರಿಗೆ “ಆರ್ಥಿಕ ಪರಿಸರ ವಿಜ್ಞಾನದ ಪಿತಾಮಹ” ಎಂದು ಬಿರುದು ನೀಡಲಾಯಿತು. ಸ್ವಾಮಿನಾಥನ್ ಅವರು ತಮ್ಮ ಪ್ರಯತ್ನದಿಂದಾಗಿ ಗೋಧಿ ಮತ್ತು ಅಕ್ಕಿಯ ಹೆಚ್ಚಿನ ಇಳುವರಿಯ ತಳಿಗಳನ್ನು ಅಭಿವೃದ್ಧಿ ಪಡೆಸಿದರು. ಇವು ಭಾರತದಾದ್ಯಂತ ಆಹಾರ ಧಾನ್ಯ ಉತ್ಪಾದನೆಯನ್ನು ಗಣನೀಯವಾಗಿ ಹೆಚ್ಚಿಸಿತು. ರೈತರ ಮೇಲಿನ ರಾಷ್ಟ್ರೀಯ ಆಯೋಗದ ಅಧ್ಯಕ್ಷರಾಗಿ ಡಾ ಸ್ವಾಮಿನಾಥನ್ ರೈತರ ಸಂಕಷ್ಟವನ್ನು ಪರಿಹರಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದ್ದಾರೆ.

    ಇದನ್ನೂ ಓದಿ: ವಿಶ್ವ ವೈದ್ಯಕೀಯ ಇತಿಹಾಸದಲ್ಲೇ ಪ್ರಥಮ ಬಾರಿಗೆ ರೋಬೋಟಿಕ್ ಲಿವರ್ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿ!

    1972 ಮತ್ತು 1979ರ ನಡುವೆ ಡಾ ಸ್ವಾಮಿನಾಥನ್ ಅವರು ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ಮಹಾನಿರ್ದೇಶಕರಾಗಿ ಮತ್ತು ಭಾರತ ಸರ್ಕಾರದ ಕಾರ್ಯದರ್ಶಿಯಾಗಿ, ಕೃಷಿ ಸಂಶೋಧನೆ ಮತ್ತು ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸಿದರು. ಕೃಷಿಗೆ ಡಾ ಸ್ವಾಮಿನಾಥನ್ ಅವರು ನೀಡಿದ ಅದ್ಭುತ ಕೊಡುಗೆಗಳು ಭಾರತದಲ್ಲಿ ಆಹಾರ ಭದ್ರತೆಯನ್ನು ಕ್ರಾಂತಿಗೊಳಿಸಿದವು ಮತ್ತು ಅವರಿಗೆ ಜಾಗತಿಕ ಮನ್ನಣೆಯನ್ನು ತಂದುಕೊಟ್ಟವು.

    ಸ್ವಾಮಿನಾಥನ್​ ಅವರ ಸೇವೆಯಿಂದಾಗಿ 1971ರಲ್ಲಿ ಸಮುದಾಯ ನಾಯಕತ್ವಕ್ಕಾಗಿ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಮತ್ತು 1987ರಲ್ಲಿ ವಿಶ್ವ ಆಹಾರ ಪ್ರಶಸ್ತಿ, 1967ರಲ್ಲಿ ಪದ್ಮಶ್ರೀ, 1972ರಲ್ಲಿ ಪದ್ಮಭೂಷಣ ಮತ್ತು 1989ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ಸೇರಿದಂತೆ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳು ಒಲಿದಿವೆ.

    ಸ್ವಾಮಿನಾಥನ್​ ಅವರ ಅಗಲಿಕೆ ಕೃಷಿ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ. ಅನೇಕ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ. (ಏಜೆನ್ಸೀಸ್​)

    ಬಾಬರ್​ಗೆ ಕೇಸರಿ ಶಾಲು ಹೊದಿಸಿ ಅದ್ಧೂರಿ ಸ್ವಾಗತ : 7ವರ್ಷದ ನಂತರ ಭಾರತಕ್ಕೆ ಪಾಕ್​ ಕ್ರಿಕೆಟ್​ ತಂಡ

    ಮಣಿಪುರ ಹಿಂಸಾಚಾರ: ಇಂಫಾಲದಲ್ಲಿ ಮತ್ತೆ ಹಿಂಸಾತ್ಮಕ ಪ್ರತಿಭಟನೆ, ಡಿಸಿ ಕಚೇರಿ ಧ್ವಂಸ; ಎರಡು ವಾಹನಗಳಿಗೆ ಬೆಂಕಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts