

ಹೈದರಾಬಾದ್: ಐಸಿಸಿ ಏಕದಿನ ವಿಶ್ವಕಪ್ 2023 ಪಂದ್ಯಗಳಲ್ಲಿ ಭಾಗವಹಿಸುವ ಸಲುವಾಗಿ ಬಾಬರ್ ಅಝಮ್ ನೇತೃತ್ವದ 15ಮಂದಿ ಆಟಗಾರರ ಪಾಕಿಸ್ತಾನ್ ಕ್ರಿಕೆಟ್ ತಂಡ ಬುಧವಾರ ರಾತ್ರಿ ಹೈದರಾಬಾದ್ ಸೇರಿಕೊಂಡಿತು. 7ವರ್ಷದ ಬಳಿಕ ಭಾರತದ ನೆಲದ ಮೇಲೆ ಪಾಕ್ ತಂಡ ಆಟವಾಡಲು ಪಾದಾರ್ಪಣೆ ಮಾಡಿರುವುದು ವಿಶೇಷ.
ಅ. 5 ರಿಂದ ಆರಂಭವಾಗಲಿರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಬಾಬರ್ ಅಝಮ್ ನಾಯಕತ್ವದ ತಂಡ ಬುಧವಾರ ರಾತ್ರಿ 8 ಗಂಟೆಗೆ ಹೈದರಾಬಾದ್‌ಗೆ ವಿಮಾನದ ಮೂಲಕ ತಲುಪಿತು. ಭಾರತದ ಅಧಿಕಾರಿಗಳು ಮೆನ್ ಇನ್ ಗ್ರೀನ್ ಎಂದೇ ಕರೆಯುವ ಬಾಬರ್ ತಂಡಕ್ಕೆ ಹೂಗುಚ್ಛ ನೀಡಿ, ಕೇಸರಿ ಶಾಲು ಹೊದಿಸಿ ಸ್ವಾಗತಿಸಿದರು.
ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಪಾಕಿಸ್ತಾನವು ಅಕ್ಟೋಬರ್ 6 ರಂದು ಹೈದರಾಬಾದ್‌ನಲ್ಲಿ ನೆದರ್ಲೆಂಡ್ಸ್ ವಿರುದ್ಧ ಆಡುವ ಮೂಲಕ ವಿಶ್ವಕಪ್ ಅಭಿಯಾನವನ್ನು ಪ್ರಾರಂಭಿಸಲಿದೆ. ಬಹುನಿರೀಕ್ಷಿತ ಭಾರತ-ಪಾಕಿಸ್ತಾನ ಕದನ ಅ. 14 ರಂದು ಅಹ್ಮದಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಇದಕ್ಕೂ ಮುನ್ನ ಅ.10 ರಂದು ಶ್ರೀಲಂಕಾ ವಿರುದ್ಧ ಬಾಬರ್ ತಂಡ ಹೈದರಾಬಾದ್‌ನಲ್ಲಿ ಮತ್ತೊಂದು ಪಂದ್ಯವನ್ನು ಆಡಲಿದೆ.