More

    ಪಥ ಬದಲಿಸುವುದೇ ಮೃತ್ಯುಂಜಯ ಹೊಳೆ?

    ಶ್ರವಣ್‌ಕುಮಾರ್ ನಾಳ ಪುತ್ತೂರು

    ಪಶ್ಚಿಮಘಟ್ಟದ ಬೆಟ್ಟದಿಂದ ಏಕಾಏಕಿ ನೀರಿನ ಹರಿವು ಹೆಚ್ಚಾಗಿ ಕಳೆದ ವರ್ಷ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗಡಿಭಾಗ ಪ್ರವಾಹದಿಂದ ತತ್ತರಿಸಿತ್ತು. ಈ ಬಾರಿ ಪಶ್ಚಿಮಘಟ್ಟದ ಬೆಟ್ಟದಿಂದ ಹರಿಯುವ ಸುನಾಲ, ನೆರಿಯಾ, ಅಣಿಯೂರು ಹೊಳೆಯಿಂದ ಅಪಾಯ ಕಡಿಮೆಯಿದ್ದರೂ, ಮೃತ್ಯುಂಜಯ ಹೊಳೆ ಅಪಾಯಕಾರಿಯಾಗಿ ಪರಿಣಮಿಸುವ ಸಾಧ್ಯತೆ ಹೆಚ್ಚಿದೆ.

    ಕಳೆದ ವರ್ಷ ಪ್ರವಾಹದ ತೀವ್ರತೆಗೆ ಚಾರ್ಮಾಡಿ ಸಮೀಪ ಅರಣ್ಯ ಇಲಾಖೆ ಕಾಡಿನ ಮಧ್ಯೆ ಮೃತ್ಯುಂಜಯ ನದಿಗೆ ಕಟ್ಟಿದ್ದ ಡ್ಯಾಂ ಪೂರ್ಣಪ್ರಮಾಣದಲ್ಲಿ ಒಡೆದಿರುವುದು ಇತ್ತೀಚೆಗಷ್ಟೇ ಬೆಳಕಿಗೆ ಬಂದಿದೆ. ಇದೇ ಡ್ಯಾಂನಿಂದ ತ್ರಿನೇತ್ರ ಪವರ್ ಪ್ರಾಜೆಕ್ಟ್ ಸಂಸ್ಥೆ ವಿದ್ಯುತ್ ಉತ್ಪಾದಿಸಿ ಸರ್ಕಾರಕ್ಕೆ ಪೂರೈಸುತ್ತಿದ್ದು, ಸಂಸ್ಥೆಯ ಘಟಕ ಬಹುತೇಕ ನಾಶಗೊಂಡಿದೆ. ಇಲ್ಲಿಂದ ಮೃತ್ಯುಂಜಯ ಡ್ಯಾಂನ ಮೇಲ್ಭಾಗ 10 ಕಿ.ಮೀ ಹಾಗೂ ಮೃತ್ಯುಂಜಯ ಡ್ಯಾಂನ ಕೆಳಭಾಗ 8ರಿಂದ 10 ಕಿ.ಮೀ ವ್ಯಾಪ್ತಿಯ ನದಿಯಲ್ಲಿ ಪೂರ್ಣಪ್ರಮಾಣದಲ್ಲಿ ಮರಳು ಮಿಶ್ರಿತ ಹೂಳು ತುಂಬಿಕೊಂಡಿದೆ. ಈ ಹೂಳು ನದಿ ನೀರ ಹರಿವಿಗೆ ಅಡ್ಡಿಯಾಗಿ, ನದಿಯ ಪಥ ಬದಲಾವಣೆಗೆ ಕಾರಣವಾಗಿ ಮಳೆಗಾಲದಲ್ಲಿ ಪ್ರವಾಹ ಬಂದರೆ, ಹೊಸಮಠ, ಕುಕ್ಕಾವು, ದಿಡುಪೆ, ಕೆಂಬಾರು, ಮಕ್ಕೆ, ಪೆರ್ಲ ಪ್ರದೇಶ ಮತ್ತೆ ಪ್ರವಾಹದಿಂದ ತತ್ತರಿಸುವ ಸಾಧ್ಯತೆ ಹೆಚ್ಚಿದೆ.

    ಪಥ ಬದಲಾದರೆ ಅಪಾರ ಕೃಷಿ ಹಾನಿ
    ನದಿ ತನ್ನ ಸಹಜ ಹರಿಯುವಿಕೆಗೆ ಧಕ್ಕೆಯಾದಾಗ ಸ್ಥಾನಪಲ್ಲಟಗೊಳ್ಳುತ್ತದೆ. ಇದಕ್ಕೆ ಮೃತ್ಯುಂಜಯ ನದಿಯೂ ಹೊರತಾಗಿಲ್ಲ ಎಂದು ಹಿರಿಯ ಭೂ ವಿಜ್ಞಾನಿ ಹಾಗೂ ಸಂಶೋಧಕ ಪ್ರೊ.ಗಂಗಾಧರ್ ಭಟ್ ವಿಜಯವಾಣಿಗೆ ತಿಳಿಸಿದ್ದಾರೆ. ಪಶ್ಚಿಮಘಟ್ಟದ ಬೆಟ್ಟದಿಂದ ಹರಿಯುವ ಸುನಾಲ, ನೆರಿಯಾ, ಅನಿಯೂರು ಹೊಳೆ ಸದ್ಯಕ್ಕೆ ನದಿನೀರಿನ ಹರಿಯುವಿಕೆಗೆ ಯೋಗ್ಯವಿದೆ. ಆದರೆ ಮೃತ್ಯುಂಜಯ ಹೊಳೆ ಪೂರ್ಣಪ್ರಮಾಣದಲ್ಲಿ ಹೂಳಿನಿಂದ ತುಂಬಿಕೊಂಡಿದ್ದು, ನದಿನೀರಿನ ಹರಿವು ನದಿಯ ದಿಕ್ಕನ್ನೇ ಬದಲಿಸಬಹುದು ಅಥವಾ ನದಿ ಸ್ಥಾನಪಲ್ಲಟವಾಗಬಹುದು. ಈ ಸಂದರ್ಭ ಅಪಾರ ಪ್ರಮಾಣದ ಕೃಷಿ ಭೂಮಿ, ಬೆಟ್ಟದ ಕೆಳಗಿನಭಾಗ ಪ್ರವಾಹದಿಂದ ತತ್ತರಿಸಬಹುದು ಎಂದು ಎಚ್ಚರಿಸಿದ್ದಾರೆ.

    ಮರಳು ಮಿಶ್ರಿತ ಹೂಳಿನಿಂದ ಅಪಾಯ
    ಕಳೆದ ವರ್ಷ ಚಾರ್ಮಾಡಿ ಘಾಟ್ ಅರಣ್ಯ ವ್ಯಾಪ್ತಿ ಸೇರಿದಂತೆ ಪಶ್ಚಿಮಘಟ್ಟದ ಬೆಟ್ಟಗಳಲ್ಲಿ ಜಲಸ್ಫೋಟ ಸಂಭವಿಸಿದ್ದರಿಂದ ದ.ಕ ಹಾಗೂ ಚಿಕ್ಕಮಗಳೂರಿನ ಗಡಿಭಾಗ ಪ್ರವಾಹದಿಂದ ತತ್ತರಿಸಿತ್ತು. ನಂತರದ ದಿನಗಳಲ್ಲಿ ಪ್ರವಾಹಪೀಡಿತ ಪ್ರದೇಶಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಂಡಿದ್ದರೂ, ಮೃತ್ಯುಂಜಯ ನದಿಯುದ್ದಕ್ಕೂ ಪ್ರವಾಹದಿಂದ ತುಂಬಿದ ಹೂಳು ತೆರವುಗೊಳಿಸಲು ಕ್ರಮ ಕೈಗೊಂಡಿಲ್ಲ. 5ರಿಂದ 8ಅಡಿ ಮರಳು ಮಿಶ್ರಿತ ಹೂಳಿದ್ದು, ನದಿ ಬಯಲಿನಂತಾಗಿದೆ. ಇದನ್ನು ತೆರವು ಮಾಡಿಲ್ಲ. ನದಿ ನೀರಿನ ಸರಾಗ ಹರಿಯುವಿಕೆಗೆ ಹೂಳು ಅಡ್ಡಿಯಾಗಿದೆ. ಇದು ಪ್ರವಾಹ ಭೀತಿ ಎದುರಾಗಲು ಕಾರಣ.

    ಕಳೆದ ವರ್ಷದ ಪ್ರವಾಹದಿಂದ ಮೃತ್ಯುಂಜಯ ಹೊಳೆಯ 20 ಕಿ.ಮೀ ವ್ಯಾಪ್ತಿಯಲ್ಲಿ ಯಥೇಚ್ಛ ಪ್ರಮಾಣದ ಹೂಳು ತುಂಬಿಕೊಂಡಿದೆ. ಇದರ ತೆರವು ತುಸು ಕಷ್ಟ. ಈ ಬಾರಿ ಮಳೆಯ ಪ್ರಮಾಣ ಜಾಸ್ತಿಯಾಗಿ, ಮೃತ್ಯುಂಜಯ ನದಿ ನೀರಿನ ಸಹಜ ಹರಿವಿಗೆ ಅಡ್ಡಿಯಾದರೆ ಸ್ಥಾನಪಲ್ಲಟ ಸಾಧ್ಯತೆ ಹೆಚ್ಚಿದೆ.
    ಪ್ರೊ.ಗಂಗಾಧರ್ ಭಟ್
    ಹಿರಿಯ ಸಾಗರ-ಭೂ ವಿಜ್ಞಾನಿ ಹಾಗೂ ಸಂಶೋಧಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts