More

    ಶಿಕ್ಷಕರ ಹುದ್ದೆ ಬಹುಪಾಲು ಖಾಲಿ!

    ಕೊಪ್ಪ: ಮಲೆನಾಡಿನಲ್ಲಿ ಎಲ್ಲರೂ ಸರ್ಕಾರಿ ಶಾಲೆಗಳಲ್ಲೇ ವಿದ್ಯಾಭ್ಯಾಸ ಮಾಡುವ ಕಾಲವೊಂದಿತ್ತು. ಸರ್ಕಾರಿ ಶಾಲೆಗಳೆಂದರೆ ಎಲ್ಲರೂ ಇಷ್ಟಪಡುತ್ತಿದ್ದರು. ಆದರೆ ಇಂತಹ ಶಾಲೆಗಳಿಗೆ ಸರ್ಕಾರ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿಲ್ಲ. ಅದರಲ್ಲೂ ಕಾಯಂ ಶಿಕ್ಷಕರನ್ನೇ ನೇಮಿಸಿದ ಕಾರಣ ಶಾಲೆಗಳನ್ನು ಮುಚ್ಚುವಂತಹ ಸ್ಥಿತಿಗೆ ತಲುಪಿವೆ. ನಿಗದಿತ ಶಿಕ್ಷಕರ ಹುದ್ದೆಗಳಲ್ಲಿ ಶೇ.50ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ!

    ತಾಲೂಕಿನಲ್ಲಿ ಕಿರಿಯ, ಹಿರಿಯ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ಒಟ್ಟು 295 ಶಿಕ್ಷಕರ ಕೊರತೆಯಿದೆ. 450 ಶಿಕ್ಷಕರ ಹುದ್ದೆಗಳಿದ್ದು 201 ಹುದ್ದೆಗಳನ್ನು ಮಾತ್ರ ಭರ್ತಿ ಮಾಡಲಾಗಿದೆ. ಅತಿಥಿ ಶಿಕ್ಷಕರನ್ನು ನೇಮಿಸಿದ್ದರೂ ಕೆಲ ಶಾಲೆಗಳಲ್ಲಿ ಒಬ್ಬರೇ ಶಿಕ್ಷಕರು ಎಲ್ಲ ತರಗತಿಗಳಿಗೆ ಪಾಠ ಮಾಡುವಂತೆ ಆಗಿದೆ. ಇದರಿಂದ ಶಿಕ್ಷಣದ ಗುಣಮಟ್ಟ ಕುಸಿದಿದೆ.
    ಮೇದಕ್ಕಿ, ಹುತ್ತಿನಗದ್ದೆ, ಕೋಟೆತೋಟ, ಬರ್ಕನಘಟ್ಟ ಶಾಲೆಗಳಲ್ಲಿ ಶಿಕ್ಷಕರಿಲ್ಲ. ಇಲ್ಲಿ ಒಬ್ಬ ಅತಿಥಿ ಶಿಕ್ಷಕರನ್ನು ನೇಮಿಸಲಾಗಿದೆ. ತಾಲೂಕಿನ 15 ಶಾಲೆಗಳಲ್ಲಿ ಏಕೋಪಾಧ್ಯಾಯರು ಇದ್ದಾರೆ.
    ತಾಲೂಕಿನಲ್ಲಿ ಕಿರಿಯ, ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಸೇರಿ 110 ಶಾಲೆಗಳಿವೆ. ಇವುಗಳಲ್ಲಿ 4,338 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಖಾಸಗಿ ಶಾಲೆಯಲ್ಲಿ 5044 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಿಗೆ ಬೇಕಾದ 318 ಶಿಕ್ಷಕರ ಪೈಕಿ 112 ಶಿಕ್ಷಕರನ್ನು ಸರ್ಕಾರ ನೇಮಿಸಿದೆ. 206 ಶಿಕ್ಷಕರ ಕೊರತೆಯಿದೆ. ಪ್ರೌಢಶಾಲೆಯಲ್ಲಿ 132 ಶಿಕ್ಷಕರ ಪೈಕಿ 43 ಶಿಕ್ಷಕರಿದ್ದು, 89 ಶಿಕ್ಷಕರ ಕೊರತೆಯಿದೆ.
    ಸ್ಥಳೀಯ ಸಂಘ ಸಂಸ್ಥೆ, ದಾನಿಗಳ ಸಹಕಾರದಿಂದ ಹಲವು ಶಾಲೆಗಳಲ್ಲಿ ಅತಿಥಿ ಶಿಕ್ಷಕರ ನೇಮಕವಾಗಿದೆ. ಕೆಲವು ಶಾಲೆಗಳಲ್ಲಿ ಮಾತ್ರ ಶಿಕ್ಷಕರೊಬ್ಬರೇ ಎಲ್ಲ ತರಗತಿಗಳಿಗೆ ಪಾಠ ಮಾಡುತ್ತಿದ್ದಾರೆ.
    ಕಳೆದ ಎರಡು ವರ್ಷಗಳಲ್ಲಿ ತಾಲೂಕಿನ ನಾಲ್ಕು ಶಾಲೆಗಳಲ್ಲಿ ಮಕ್ಕಳ ಕೊರತೆ ಉಂಟಾಗಿ ಮುಚ್ಚಲಾಗಿದೆ. ಕಗ್ಗ, ಕಂಚೂರು, ಹೊಕ್ಕಳಿಕೆ, ಅಂತರಮಠ ಕಿರಿಯ ಪ್ರಾಥಮಿಕ ಶಾಲೆಗಳು ಬಂದ್ ಆಗಿವೆ.
    ಶಿಕ್ಷಕರ ಕೊರತೆ ಒಂದೆಡೆಯಾದರೆ ಕಟ್ಟಡ ದುರಸ್ತಿ, ಶಾಲೆಗಳ ಜಾಗ ಒತ್ತುವರಿ, ದಾಖಲೆಯಾಗದ ಶಾಲೆಗಳ ಆಸ್ತಿ, ಶೌಚಗೃಹ, ಕೊಠಡಿ ದುರಸ್ತಿ ಮತ್ತಿತರ ಸಮಸ್ಯೆಗಳು ಶಾಲೆಗಳನ್ನು ಕಾಡುತ್ತಿವೆ. ಈ ಸಮಸ್ಯೆಗಳಿಗೆ ಮುಕ್ತಿ ನೀಡುವಲ್ಲಿ ಶಿಕ್ಷಣ ಇಲಾಖೆ ವಿಫಲವಾಗಿದೆ.
    ಒಬ್ಬರೇ ಶಿಕ್ಷಕ: ಹುಲುಕೋಡು, ಹೊನಗಾರು, ಮೇಲುಕೊಪ್ಪ, ಹುರಳಿಹಕ್ಲು, ನರಸೀಪುರ, ಬೇರುಕೊಡಿಗೆ, ಮಲಗಾರು, ಸಿಸಿ ಹಕ್ಲು, ಕವನಹಳ್ಳ, ಬಸರೀಕಟ್ಟೆ, ತುಪ್ಪೂರು, ಸ್ಥೀರೂರು, ಜೋಗಿಸರ, ನುಗ್ಗಿ, ಬ್ರಹ್ಮನಕೋಡು, ಅತ್ತುಕುಳಿ, ಚಿತ್ರವಳ್ಳಿ ಶಾಲೆಗಳಲ್ಲಿ ತಲಾ ಒಬ್ಬ ಶಿಕ್ಷಕರಿದ್ದಾರೆ. ಮಕ್ಕಳ ಸಂಖ್ಯೆಗೆ ತಕ್ಕಂತೆ ಶಿಕ್ಷಕರಿಲ್ಲ. ಕೆಲ ಶಾಲೆಗಳಲ್ಲಿ ಅತಿಥಿ ಶಿಕ್ಷಕರನ್ನು ನೇಮಿಸಲಾಗಿದೆ.
    ಶಾಲೆಗಳಿಗೆ ಸೆಕ್ಷನ್ 4(1) ಕರಿನೆರಳು: ತಾಲೂಕಿನ ಬಹುತೇಕ ಶಾಲೆಗಳಿಗೆ ಸೆಕ್ಷನ್ 4(1) ಕರಿನೆರಳು ಬಿದ್ದಿದೆ. ಮೀಸಲು ಅರಣ್ಯದ ಪ್ರಸ್ತಾಪಿತ ಭಾಗಗಳಲ್ಲಿ ಹೆಚ್ಚಿನ ಶಾಲೆಗಳು ಇವೆ. ಇತ್ತೀಚೆಗೆ ಗ್ರಾಮ ಸಭೆಗಳಲ್ಲಿ, ವಿಶೇಷ ಸಭೆಗಳಲ್ಲಿ ಸೆಕ್ಷನ್ 4(1)ರಿಂದ ಶಾಲೆಗಳನ್ನು ಕೈ ಬಿಡುವಂತೆ ಅರಣ್ಯ ವ್ಯವಸ್ಥಾಪನಾ ಅಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಗಿದೆ. ಹೆಚ್ಚು ಶಾಲೆಗಳ ಆಡಳಿತ ಮಂಡಳಿಗಳು ಈ ನಿಟ್ಟಿನಲ್ಲಿ ಶ್ರಮ ವಹಿಸುತ್ತಿವೆ. ಆದರೆ ಸೆಕ್ಷನ್ 4(1)ರಿಂದ ಉಳಿಸಿಕೊಳ್ಳಲು ಸರಿಯಾದ ದಾಖಲೆಗಳು ಇಲ್ಲದಿರುವುದು ತಲೆನೋವಾಗಿದೆ. ಹಲವು ಶಾಲೆಗಳ ಸರ್ವೇಯಾಗದೆ ಇರುವುದು ಸೆಕ್ಷನ್ 4(1) ವ್ಯಾಪ್ತಿಯ ಮಾಹಿತಿ ಇಲ್ಲ. ಸೆಕ್ಷನ್‌ನಿಂದ ಹೊರಬರಲು ಎಸ್‌ಡಿಎಂಸಿ ಕೂಡ ಅರಣ್ಯ ಇಲಾಖೆ ಅಧಿಕಾರಿಗಳ ಜತೆ ಮಾತುಕತೆ ನಡೆಸಿದೆ.
    ಸರ್ವೇ ಆಗದ ಆಸ್ತಿ: ಕೆಲವು ಶಾಲೆಗಳ ಆಸ್ತಿ ಮಾತ್ರ ಇಲಾಖೆಯ ಹದ್ದುಬಸ್ತಿನಲ್ಲಿದೆ. ಹಲವು ಶಾಲೆಗಳ ಜಾಗ ಒತ್ತುವರಿಯಾಗಿದೆ. ಜತೆಗೆ ಸರ್ವೇ ಇಲಾಖೆ ಅಧಿಕಾರಿಗಳು ಮತ್ತು ಶಿಕ್ಷಕರ ನಡುವೆ ಸಮನ್ವಯದ ಕೊರತೆಯಿಂದ ಹಲವು ಶಾಲೆಗಳ ಸರ್ವೇ ನಡೆದಿಲ್ಲ. ಶಾಲೆಯ ಆಡಳಿತ ಮಂಡಳಿ ಬಳಿ ಶಾಲೆಯ ದಾಖಲೆಗಳೂ ಇಲ್ಲ. ಶಿಕ್ಷಣ ಇಲಾಖೆ, ಆರ್‌ಡಿಪಿಆರ್ ಹಾಗೂ ಸರ್ವೇ ಇಲಾಖೆಗಳು ಒಟ್ಟಾಗಿ ಕಾರ್ಯ ನಿರ್ವಹಿಸಿದರೆ ಶಾಲೆ ಆಸ್ತಿಯನ್ನು ಉಳಿಸಿಕೊಳ್ಳಲು ಸಾಧ್ಯ.
    ಅಕ್ರಮ ಚಟುವಟಿಕೆ: ಹಾಳುಬಿದ್ದ ಶಾಲೆಗಳು ಅಕ್ರಮ ಚಟುವಟಿಕೆಗಳ ಅಡ್ಡೆಯಾಗಿವೆ. ಹಾಳುಬಿದ್ದಿರುವ ಶಾಲೆಗಳನ್ನು ಗ್ರಾಮ ಪಂಚಾಯಿತಿ ಸುಪರ್ದಿಗೆ ಪಡೆದು ಬೇರೆ ಸರ್ಕಾರಿ ಕೆಲಸಕ್ಕೆ, ಸಂಘ ಸಂಸ್ಥೆಗಳ ಚಟುವಟಿಕೆಗಳಿಗೆ ನೀಡಲು ಅವಕಾಶವಿರುತ್ತದೆ. ಗ್ರಾಪಂ ಅಧಿಕಾರಿಗಳು ಹಾಳುಬಿದ್ದ ಶಾಲೆಗಳನ್ನು ಉಪಯೋಗಿಸಲು ಮುಂದಾಗಬೇಕು ಎಂಬುದು ಸ್ಥಳೀಯರ ಒತ್ತಾಯ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts