More

    ಸಾಧು, ಭಿಕ್ಷುಕರಿಗೆ ಕರೊನಾ ಕಿರಿಕಿರಿ

    ಮೋರಟಗಿ: ಕರೊನಾದಿಂದ ಎಲ್ಲೆಡೆ ದಿಗ್ಬಂಧನ ಹೇರಲಾಗಿದ್ದು, ಭಿಕ್ಷುಕರು ಹಾಗೂ ಸಾಧುಗಳು ಒಂದೊತ್ತಿನ ಊಟಕ್ಕೂ ಪರದಾಡುವಂತಾಗಿದೆ.
    ಅಲೆಮಾರಿಗಳು, ಭಿಕ್ಷುಕರು, ನಿರ್ಗತಿಕರು ಹಾಗೂ ಸಾಧು-ಸಂತರು ಹೋಟೆಲ್ ಹಾಗೂ ಅಂಗಡಿಗಳಲ್ಲಿ ಭಿಕ್ಷೆ ಬೇಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು. ಆದರೆ, ಕರೊನಾ ಭೀತಿಯಿಂದ ಎಲ್ಲೆಡೆ ನಿಷೇಧಾಜ್ಞೆ ಜಾರಿ ಮಾಡಿದ್ದರಿಂದ ಗ್ರಾಮದಲ್ಲಿ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದು, ಮಠ-ಮಾನ್ಯಗಳು ಹಾಗೂ ಅನಾಥಾಲಯಗಳು ಮುಚ್ಚಿವೆ.
    ಗ್ರಾಮದಲ್ಲಿ ದಿಗ್ಬಂಧನವಿದ್ದರೂ ಸಾಮಾನ್ಯರು ಹೊಟ್ಟೆಪಾಡಿಗಾಗಿ ಕಾಯಿಪಲ್ಲೆ, ಕಿರಾಣಿ ಅಗತ್ಯ ವಸ್ತುಗಳನ್ನು ಖರೀದಿಸಿ ಮನೆಯಲ್ಲೇ ಕುಳಿತು ಹೊಟ್ಟೆ ತುಂಬಿಸಿಕೊಳ್ಳುತ್ತಾರೆ. ಆದರೆ, ಭಿಕ್ಷುಕರ ಗತಿ ಹೇಗಪ್ಪ ಎನ್ನುವಂತಾಗಿದೆ. ಇಂಥ ಕೆಟ್ಟ ಪರಿಸ್ಥಿತಿ ಎದುರಿಸುತ್ತಿರುವ ಭಿಕ್ಷುಕರು ಹೆದ್ದಾರಿ ಪಕ್ಕದ ತಂಗುದಾಣಗಳಲ್ಲಿ ಸಾಯುವ ಸ್ಥಿತಿಯಲ್ಲಿದ್ದಾರೆ. ಅನ್ನ-ನೀರಿಲ್ಲದೇ ಬಳುಲುತ್ತಿರುವ ಈ ಭಿಕ್ಷುಕರ ಸಹಾಯಕ್ಕೆ ಬರುವವರ‌್ಯಾರು? ಗ್ರಾಮದಲ್ಲಿರುವ ಸಾರ್ವಜನಿಕರು ಏನಾದರೂ ಸಹಾಯ ಮಾಡಲು ಹೊರಗಡೆ ಬರಬೇಕೆಂದರೆ ಒಂದೆಡೆ ಕರೊನಾ ಭಯ, ಇನ್ನೊಂದೆಡೆ ಪೊಲೀಸರು ಹೊಡೆಯುತ್ತಾರೆಂಬ ಭಯ. ಇಂಥ ಸ್ಥಿತಿಯಲ್ಲಿ ಸಾರ್ವಜನಿಕರು ಭಿಕ್ಷುಕರ ಸಹಾಯಕ್ಕೆ ಬರಲು ಹೇಗೆ ಸಾಧ್ಯ? ಒಂದೊತ್ತಿನ ಗಂಜಿಗೂ ದಿಕ್ಕಿಲ್ಲದೆ ರಾಷ್ಟ್ರೀಯ ಹೆದ್ದಾರಿ ಪಕ್ಕದ ತಂಗುದಾಣಗಳಲ್ಲಿ ಮಲಗುತ್ತಿರುವ ಸಾಧುಗಳು, ಭಿಕ್ಷುಕರು ಹಾಗೂ ಅಲೆಮಾರಿಗಳಿಗೆ ಇದೊಂದು ಅಗ್ನಿಪರೀಕ್ಷೆಯಾಗಿದೆ.

    ವ್ಯಾಪಾರಸ್ಥರು ಸರ್ವೇಸಾಮಾನ್ಯವಾಗಿ ದುಡ್ಡು ಅಥವಾ ಉಪಾಹಾರ ನೀರು ಅಥವಾ ಒಂದು ಚಹಾನಾದರೂ ಕೊಡುತ್ತಿದ್ದರು. ಆದರೆ, ಸರ್ಕಾರ ನಿಷೇಧಾಜ್ಞೆ ಜಾರಿಗೊಳಿಸಿದ್ದರಿಂದ ಅಂಗಡಿ ಮುಂಗಟ್ಟಗಳು ಸಂಪೂರ್ಣ ಬಂದ್ ಆಗಿವೆ. ಹೀಗಿದ್ದಾಗ ನಾವು ಭಿಕ್ಷುಕರಿಗೆ ಸಹಾಯ ಮಾಡಲು ಹೇಗೆ ಸಾಧ್ಯ. ಸರ್ಕಾರ ಇದರ ಬಗ್ಗೆ ಕೂಡ ಗಮನ ಹರಿಸಬೇಕು.
    ಖಾಜಣ್ಣ ಶಾಬಾದಿ, ಹೋಟೆಲ್ ಉದ್ಯಮಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts