More

    ಗಬಸಾವಳಗಿ- ಬಿಸನಾಳ ಗ್ರಾಮಸ್ಥರ ಧರಣಿ ಅಂತ್ಯ

    ಮೋರಟಗಿ: ಗಬಸಾವಳಗಿ ಹಾಗೂ ಬಿಸನಾಳ ಗ್ರಾಮಸ್ಥರ ಬೇಡಿಕೆ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಶಾಸಕ ಅಶೋಕ ಮನಗೂಳಿ ಭರವಸೆ ನೀಡಿದರು.

    ಗಬಸಾವಳಗಿ ಹಾಗೂ ಬಿಸನಾಳ ಗ್ರಾಮಗಳನ್ನು ಸಿಂದಗಿ ತಾಲೂಕಿಗೆ ಸೇರಿಸುವಂತೆ ಆಗ್ರಹಿಸಿ ಗಬಸಾವಳಗಿ ಗ್ರಾಮದ ಬಸ್ ನಿಲ್ದಾಣ ಬಳಿ ಅವಳಿ ಗ್ರಾಮಗಳ ಗ್ರಾಮಸ್ಥರು ಮೂರು ದಿನಗಳಿಂದ ಹಮ್ಮಿಕೊಂಡಿದ್ದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಮಂಗಳವಾರ ಸಂಜೆ ಭೇಟಿ ನೀಡಿ ಅವರು ಮಾತನಾಡಿದರು.

    ನಾನು ಬೆಂಗಳೂರಿನಲ್ಲಿ ಇದ್ದಾಗಲೇ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿರುವ ಬಗ್ಗೆ ಪತ್ರಿಕೆಗಳ ಮೂಲಕ ತಿಳಿದು ಇಲ್ಲಿಗೆ ಆಗಮಿಸಿದ್ದೇನೆ. ನಾನು ಯಾವತ್ತೂ ಹೋರಾಟಗಾರರೊಂದಿಗೆ ಇದ್ದೇನೆ. ಸದ್ಯ ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ಯಾವುದೇ ಕಾರ್ಯವನ್ನು ಕೂಡಲೇ ಕೈಗೊಳ್ಳಲು ಸಾಧ್ಯವಾಗುವುದಿಲ್ಲ. ಚುನಾವಣೆ ಮುಗಿಯುತ್ತಿದ್ದಂತೆ ಎರಡೂ ಗ್ರಾಮಗಳ ಮುಖಂಡರೊಂದಿಗೆ ಬೆಂಗಳೂರಿಗೆ ತೆರಳಿ ಸಂಬಂಧಿಸಿದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳನ್ನು ಭೇಟಿ ಮಾಡಿ ಆದ್ಯತೆ ಮೇರೆಗೆ ನಿಮ್ಮ ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.

    ಬೇಡಿಕೆ ಈಡೇರದಿದ್ದರೆ ಮತದಾನ ಬಹಿಷ್ಕರಿಸುವುದಾಗಿ ಗ್ರಾಮಸ್ಥರು ಹೇಳುತ್ತಿದ್ದು, ಅಂಥ ನಿರ್ಧಾರಕ್ಕೆ ಮುಂದಾಗಬಾರದು. ಮತದಾನ ಅಮೂಲ್ಯ ಮತ್ತು ಪ್ರತಿಯೊಬ್ಬರ ಹಕ್ಕಾಗಿದೆ. ಅರ್ಹರೆಲ್ಲ ಮತದಾನ ಮಾಡಬೇಕು ಎಂದು ಶಾಸಕರು ವಿನಂತಿಸಿದರು.

    ಸತ್ಯಾಗ್ರಹ ನಿರತರು ಮಾತನಾಡಿ, ಆಲಮೇಲ ತಾಲೂಕಿಗೆ ಸೇರಿಸಿದ ಎರಡೂ ಗ್ರಾಮಗಳನ್ನು ಸಿಂದಗಿಗೆ ಸೇರಿಸಬೇಕು ಎಂದು ಕೋರಿ ಈಗಾಗಲೇ ತಹಸೀಲ್ದಾರ್ ಹಾಗೂ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ಕೂಡ ನಡೆಸಲಾಗಿದೆ. ನಂತರ 14 ದಿನ ಅನಿರ್ದಿಷ್ಟಾವಧಿ ಧರಣಿ ಕೂಡ ನಡೆಸಲಾಗಿದೆ. ಆಗಲೂ ಅಧಿಕಾರಿಗಳು ಕ್ಯಾರೆ ಎನ್ನದಿದ್ದಾಗ ಪತ್ರಿಕಾಗೋಷ್ಠಿ ನಡೆಸಿ ಮಾ.23 ರಿಂದ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ. ಸದ್ಯ ಶಾಸಕರ ಭರವಸೆ ಮೇರೆಗೆ ಉಪವಾಸ ಕೈಬಿಡಲಾಗುವುದು ಎಂದರು. ಶಾಸಕರು ಎಳೆನೀರು ಕುಡಿಸಿದ ನಂತರ ಉಪವಾಸ ಅಂತ್ಯಗೊಳಿಸಲಾಯಿತು.

    ಜಿಪಂ ಮಾಜಿ ಸದಸ್ಯ ಮಹಾಂತಗೌಡ ಪಾಟೀಲ, ಚಂದ್ರಶೇಖರ ದೇವರೆಡ್ಡಿ, ಪ್ರಭುಗೌಡ ಬಿರಾದಾರ, ಸಾಹೇಬಗೌಡ ಬಿರಾದಾರ, ಬಂಗಾರೆಪ್ಪಗೌಡ ಬಿರಾದಾರ, ಬಾಬಾಗೌಡ ಬಿರಾದಾರ, ಶಾಂತಗೌಡ ಬಿರಾದಾರ, ಗಂಗಪ್ಪಗೌಡ ಬಿರಾದಾರ, ಶಿವಶರಣ ಹೇಳವರ, ಮಲ್ಲಯ್ಯ ಹಿರೇಮಠ, ಬಸನಗೌಡ ಬಿರಾದಾರ, ಬಾಬುರೆಡ್ಡಿ ಬಿರಾದಾರ ಇತರರಿದ್ದರು.

    ಚಪ್ಪಲಿ ಧರಿಸದೆ ಪ್ರತಿಜ್ಞೆ
    ಉಪವಾಸ ಅಂತ್ಯಗೊಳಿಸಿದ ನಂತರ ಹೋರಾಟ ನಿರತ ಮುಖಂಡರಾದ ಬಂಗಾರೆಪ್ಪಗೌಡ ಬಿರಾದಾರ ಹಾಗೂ ಶಾಂತನಗೌಡ ಬಿರಾದಾರ ಬೇಡಿಕೆ ಈಡೇರುವವರೆಗೆ ಚಪ್ಪಲಿ ಧರಿಸದೆ ಬರಿಗಾಲಿನಲ್ಲೇ ಓಡಾಡುವುದಾಗಿ ನಿರ್ಧರಿಸಿದ್ದಾರೆ. ಬೇಸಿಗೆಯಲ್ಲಿ ಈ ನಿರ್ಧಾರ ಕಷ್ಟವಾಗಬಹುದು ಎಂದು ಕೆಲವರು ಸಲಹೆ ನೀಡಿದರೂ ನಮ್ಮ ಗ್ರಾಮಸ್ಥರಿಗೆ ಅನುಕೂಲವಾಗುವುದು ಮುಖ್ಯ. ಬೇಡಿಕೆ ಈಡೇರುವವರೆಗೆ ನಮ್ಮ ನಿರ್ಧಾರ ಬದಲಿಸುವುದಿಲ್ಲ ಎಂದು ಮುಖಂಡರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts