More

    ಡಿ.21ರಿಂದ ಮೂಡಬಿದರೆಯಲ್ಲಿ ಸಾಂಸ್ಕೃತಿಕ ಜಾಂಬೂರಿ ಸಮಾವೇಶ

    ಶಿವಮೊಗ್ಗ: ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಸ್ಕೌಟ್ಸ್ ಆ್ಯಂಡ್ ಗೈಡ್ಸ್‌ನಿಂದ ಅಂತಾರಾಷ್ಟ್ರೀಯ ಮಟ್ಟದ ಸಾಂಸ್ಕೃತಿಕ ಜಾಂಬೂರಿ ಸಮಾವೇಶ ಡಿಸೆಂಬರ್ 21ರಿಂದ 27ರವರೆಗೆ ಮೂಡಬಿದರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ನಡೆಯಲಿದೆ ಎಂದು ಸ್ಕೌಟ್ಸ್ ಆ್ಯಂಡ್ ಗೈಡ್ಸ್‌ನ ರಾಜ್ಯ ಮುಖ್ಯ ಆಯುಕ್ತ, ಜಾಂಬೂರಿ ಮುಖ್ಯಸ್ಥ ಪಿ.ಜಿ.ಆರ್.ಸಿಂಧ್ಯ ತಿಳಿಸಿದರು.
    ನಾಲ್ಕು ವರ್ಷಗಳಿಗೊಮ್ಮೆ ಏಳು ದಿನ ನಡೆಸುವ ಸಮಾವೇಶದಲ್ಲಿ ಮಕ್ಕಳಿಗೋಸ್ಕರ ಹಲವಾರು ಕಾರ್ಯಕ್ರಮ, ಚಟುವಟಿಕೆ ಹಮ್ಮಿಕೊಂಡಿದ್ದು ತರಬೇತಿಯನ್ನೂ ನೀಡಲಾಗುವುದು. ಐತಿಹಾಸಿಕ ಸಮಾವೇಶವಾದ ಇದು ಮಕ್ಕಳ ಜ್ಞಾನಾಭಿವೃದ್ಧಿಗೆ ಪೂರಕವಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
    ವಿಶ್ವದಲ್ಲೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಮಟ್ಟದ ಜಾಂಬೂರಿಯನ್ನು ಸಂಘಟಿಸಲಾಗುತ್ತಿದೆ. ದೇಶ-ವಿದೇಶಗಳಿಂದ ಒಟ್ಟು 40 ಸಾವಿರ ಮಕ್ಕಳು, 10 ಸಾವಿರ ಶಿಕ್ಷಕರು ಹಾಗೂ 25 ಸಾವಿರ ಸಾರ್ವಜನಿಕರು ಪಾಲ್ಗೊಳ್ಳುವರು. ಶಿವಮೊಗ್ಗ ಜಿಲ್ಲೆಯಿಂದ ಒಂದು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಭಾಗವಹಿಸಲು ಅವಕಾಶವನ್ನು ರಾಜ್ಯ ಸಂಸ್ಥೆ ಕಲ್ಪಿಸುತ್ತಿದೆ ಎಂದರು.
    ಜಾಂಬೂರಿಯು ಮಕ್ಕಳ ಸರ್ವಾಂಗೀಣ ಬೆಳವಣಿಗೆ, ನಾಯಕತ್ವ ಗುಣ, ವಿವಿಧ ಕೌಶಲ್ಯಗಳು, ಸಮುದಾಯ ಸೇವೆ, ಪ್ರಗತಿಪರ ಶಿಕ್ಷಣ, ನಡತೆ, ಆರೋಗ್ಯ, ಸ್ವಚ್ಛತೆ, ಪರಿಸರದ ಬಗ್ಗೆ ಕಾಳಜಿ, ಶಿಸ್ತುಬ್ಧ ಜೀವನ, ವಿಶ್ವಾಸ ಜೀವನ, ಸ್ವಾವಲಂಬಿ ಜೀವನದ ಮೌಲ್ಯಗಳನ್ನು ಬೆಳೆಸುವಲ್ಲಿ ಸಹಕಾರಿಯಾಗುತ್ತದೆ ಎಂದರು.
    ವಿದ್ಯಾರ್ಥಿಗಳಿಗೆ ವಿವಿಧ ದೇಶ-ವಿದೇಶಕ್ಕೆ ಸಂಬಂಧಿಸಿದ ಕಲಾ ಮೇಳ, ಸಂಸ್ಕೃತಿ ಮೇಳ, ಆಹಾರ ಮೇಳ, ವಿಜ್ಞಾನ ಮೇಳ, ಕೃಷಿ ಮೇಳ, ಪುಸ್ತಕ ಮೇಳ, ಸಂಗೀತ ಮೇಳ, ಶಾಂತಿ ಜಾಥಾ, ಕಡಲ ಚಾರಣ, ಜಲ ಸಾಹಸ ಕ್ರೀಡೆ, ಸಾಹಸಮಯ ಚಟುವಟಿಕೆ, ಹಾಸ್ಯಮಯ ಚಟುವಟಿಕೆ, ಯೋಗ, ಸಿಡಿ ಪ್ರಾಜೆಕ್ಟ್, ಮನೆ ಭೇಟಿ ಸೇರಿ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
    ಡಿಸೆಂಬರ್ 21ರಂದು ಸಮಾವೇಶವವನ್ನು ರಾಜ್ಯಪಾಲ ಥಾವರ್‌ಚಂದ್ ಗೆಹಲೋಟ್ ಉದ್ಘಾಟಿಸಲಿದ್ದು, ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಕೇಂದ್ರ ಮತ್ತು ರಾಜ್ಯ ಸಚಿವರು, ಶಾಸಕರು ಸಮಾವೇಶದಲ್ಲಿ ಪಾಲ್ಗೊಳ್ಳುವರು ಎಂದರು. ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ, ಜಾಂಬೂರಿ ಕಾರ್ಯದರ್ಶಿ ಡಾ. ಎಂ.ಮೋಹನ್ ಆಳ್ವ, ಜಿಲ್ಲಾ ಮುಖ್ಯ ಆಯುಕ್ತ ಎಚ್.ಡಿ.ರಮೇಶ್ ಶಾಸ್ತ್ರಿ, ಸರ್ಜಿ ಫೌಂಡೇಶನ್ ವ್ಯವಸ್ಥಾಪಕ ಟ್ರಸ್ಟಿ ಡಾ. ಧನಂಜಯ ಸರ್ಜಿ, ಮುಖಂಡರಾದ ಎಚ್.ಡಿ.ರಮೇಶ್ ಬಾಬು, ಜಿ.ವಿಜಯಕುಮಾರ್, ಪರಮೇಶ್ವರ್ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts