ವಿರಾಜಪೇಟೆ: ಭಾರತವು ಬಲಿಷ್ಠ ಯುವಜನರನ್ನು ಹೊಂದಿರುವ ವಿಶ್ವದ ಏಕೈಕ ರಾಷ್ಟ ಎಂದು ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಡಾ.ಮೋಹನ್ ಆಳ್ವ ಹೇಳಿದರು.
ಪಟ್ಟಣದ ಕಾವೇರಿ ಕಾಲೇಜಿನಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕಾಲೇಜಿನ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಆಳ್ವಾಸ್ ಸಾಂಸ್ಕೃತಿಕ ವೈಭವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣ ಕ್ಷೇತ್ರವು ಇಂದು ಹಲವು ಸವಾಲುಗಳನ್ನು ಎದುರಿಸುತ್ತಿದ್ದು, ಅವುಗಳನ್ನು ಮೆಟ್ಟಿ ನಿಲ್ಲಲು ಶಿಕ್ಷಣವನ್ನು ವಿದ್ಯಾರ್ಥಿಗಳು ತಮ್ಮ ಹುಟ್ಟೂರಿನಲ್ಲಿಯೇ ಪಡೆಯಬೇಕು. ಜತೆಗೆ ವೃತ್ತಿಯನ್ನೂ ಕೂಡ ಇಲ್ಲಿಯೇ ಪಡೆಯುವಂತಾಗಬೇಕು. ಈ ಹಿನ್ನೆಲೆಯಲ್ಲಿ ನಮ್ಮ ವಿದ್ಯಾಸಂಸ್ಥೆಯು ಗುಣಾತ್ಮಕ ಶಿಕ್ಷಣವನ್ನು ನೀಡುತ್ತಿವೆ ಎಂದು ತಿಳಿಸಿದರು.
ರಾಷ್ಟದ ಅಭಿವೃದ್ಧಿಯಲ್ಲಿ ಯುವಜನರ ಪಾತ್ರ ಅಪಾರ. ಆದ್ದರಿಂದ ವಿದ್ಯಾರ್ಥಿಗಳು ವಿದೇಶಿ ವ್ಯಾಮೋಹ ಬಿಟ್ಟು ನಮ್ಮ ರಾಷ್ಟ್ರದ ಬಗ್ಗೆ ಒಲವು ಬೆಳೆಸಿಕೊಳ್ಳಬೇಕು. ರಾಷ್ಟ್ರದ ಕಲೆ, ಸಂಸ್ಕೃತಿಯನ್ನು ಪೋಷಿಸಿ ಬೆಳೆಸಬೇಕು ಎಂದು ಸಲಹೆ ನೀಡಿದರು.
ಈ ಕಾಲಕ್ಕೆ ಬೇಕಾದ ವಿದ್ಯಾಭ್ಯಾಸವನ್ನು ಕೊಡುವ ಜವಾಬ್ದಾರಿ ಎಲ್ಲ ವಿದ್ಯಾಸಂಸ್ಥೆಗಳ ಮೇಲಿದೆ. ಕಾವೇರಿ ವಿದ್ಯಾಸಂಸ್ಥೆಗೆ ಮುಂದಿನ ದಿನಗಳಲ್ಲಿ ಎಲ್ಲಾ ರೀತಿಯಲ್ಲಿ ಸಹಕಾರವನ್ನು ನಾವು ಕೊಡುತ್ತೇವೆ ಎಂದು ಹೇಳಿದರು.
ವಿಧಾನಪರಿಷತ್ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ ಮಾತನಾಡಿ, ಕಾವೇರಿ ವಿದ್ಯಾಸಂಸ್ಥೆಯಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಿರುವುದು ಗಮನಾರ್ಹ ಸಂಗತಿಯಾಗಿದೆ. ಕಾವೇರಿ ವಿದ್ಯಾಸಂಸ್ಥೆಗಳು ಮೌಲ್ಯಯುತ ಶಿಕ್ಷಣವನ್ನು ನೀಡುತ್ತಿವೆ. ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಸದಬಳಕೆ ಮಾಡಿಕೊಳ್ಳಬೇಕು ಎಂದರು.
ಕಾವೇರಿ ವಿದ್ಯಾಸಂಸೆ ಕಾರ್ಯದರ್ಶಿ ಕುಲ್ಲಚಂಡ ಬೋಪಣ್ಣ ಮಾತನಾಡಿ, ಆಳ್ವಾಸ್ ವಿದ್ಯಾಸಂಸ್ಥೆ ಮುಖ್ಯಸ್ಥ ಡಾ.ಮೋಹನ್ ಆಳ್ವ ಅವರ ಬದ್ಧತೆ, ಕಾರ್ಯವೈಖರಿ ಮತ್ತು ಸಹಕಾರಕ್ಕೆ ನಮ್ಮ ವಿದ್ಯಾಸಂಸ್ಥೆಯು ಸದಾ ಋಣಿಯಾಗಿದ್ದು, ಮುಂದಿನ ದಿನವೂ ಅವರ ಮಾರ್ಗದರ್ಶನ ನಮಗೆ ಅತ್ಯಗತ್ಯವಾಗಿ ಬೇಕಾಗಿದೆ. ಅಲ್ಲದೆ ಆಳ್ವಾಸ್ ಶಿಕ್ಷಣ ಸಂಸ್ಥೆಯನ್ನು ನಮ್ಮ ಸಂಸ್ಥೆಗೆ ಕರೆಯಿಸಿ ಕಾರ್ಯಕ್ರಮ ನಡೆಸುವುದು ನನ್ನ ಕನಸಾಗಿತ್ತು. ಅದು ಇಂದು ನೆರವೇರಿದೆ ಎಂದರು.
ಕಾವೇರಿ ವಿದ್ಯಾಸಂಸ್ಥೆ ಅಧ್ಯಕ್ಷ ಇಟ್ಟಿರ ಕೆ. ಬಿದ್ದಪ್ಪ ಮಾತನಾಡಿ, ಇದೊಂದು ವಿನೂತನ ಕಾರ್ಯಕ್ರಮವಾಗಿದ್ದು, ಆಳ್ವಾಸ್ ವಿದ್ಯಾಸಂಸ್ಥೆ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ, ಶಿಸ್ತು, ಸಮಯಪ್ರಜ್ಞೆ ಇತರರಿಗೂ ಮಾದರಿಯಾಗಿದೆ. ಈ ಕಾರ್ಯಕ್ರಮವು ದೇಶದ ವಿವಿಧ ಸಂಸ್ಕೃತಿ ಅನಾವರಣಗೊಳ್ಳಲು ವೇದಿಕೆ ಕಲ್ಪಿಸಿಕೊಟ್ಟಂತಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಗಣ್ಯರು ವಿರಾಜಪೇಟೆ ಕಾವೇರಿ ಕಾಲೇಜಿನ ವಾರ್ಷಿಕ ಸಂಚಿಕೆಯನ್ನು ಬಿಡುಗಡೆಗೊಳಿಸಿದರು. ವೇದಿಕೆಯಲ್ಲಿ ಕಾವೇರಿ ಪದವಿ ಕಾಲೇಜು ಪ್ರಾಂಶುಪಾಲ ಡಾ.ಆನಂದ್ ಕಾರ್ಲ, ಪಿ.ಯು ಕಾಲೇಜು ಪ್ರಾಂಶುಪಾಲ ನಾಣಯ್ಯ, ವಿರಾಜಪೇಟೆ ತಾಲೂಕು ಕಸಾಪ ಅಧ್ಯಕ್ಷ ಡಿ.ಪಿ.ರಾಜೇಶ್ ಪದ್ಮನಾಭ, ಪುರಸಭೆ ಸದಸ್ಯರಾದ ದೇಚಮ್ಮ ಕಾಳಪ್ಪ, ಮತೀನ್, ಕಾಲೇಜಿನ ಐಕ್ಯುಎಸಿ ಸಂಚಾಲಕಿ ವೀಣಾ, ರಾಜೇಶ್ ಪದ್ಮನಾಭ ಮತ್ತಿತರರಿದ್ದರು. ಈ ಸಂದರ್ಭದಲ್ಲಿ ಕಾವೇರಿ ವಿದ್ಯಾಸಂಸ್ಥೆ ಪರವಾಗಿ ಡಾ.ಮೋಹನ್ ಆಳ್ವ ಅವರನ್ನು ಸನ್ಮಾನಿಸಲಾಯಿತು.
ಗಮನ ಸೆಳೆದ ಸಾಂಸ್ಕೃತಿಕ ಕಾರ್ಯಕ್ರಮ: ಆಳ್ವಾಸ್ ಸಾಂಸ್ಕೃತಿಕ ಕಲಾ ವೈಭವದ ಪ್ರಯುಕ್ತ ಕಾವೇರಿ ಕಾಲೇಜು, ಗೋಣಿಕೊಪ್ಪಲು, ವಿರಾಜಪೇಟೆ ಕಾವೇರಿ ಕಾಲೇಜು ಮತ್ತು ಮೂಡಬಿದಿರೆ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು. ಗೋಣಿಕೊಪ್ಪಲು ಕಾವೇರಿ ಪದವಿ ಕಾಲೇಜು ವಿದ್ಯಾರ್ಥಿ ಸರಿಗಮಪ ಖ್ಯಾತಿಯ ಅನ್ವಿತ್ ಅವರು ಆರಂಭದಲ್ಲಿ ಭಕ್ತಿ ಗೀತೆಯೊಂದನ್ನು ಹಾಡಿದರು.
ಕೊಡವ ಸಾಂಸ್ಕೃತಿಕ ನೃತ್ಯ, ಭರತನಾಟ್ಯ, ಮಲ್ಲಗಂಬ ಪ್ರದರ್ಶನ, ಯಕ್ಷಗಾನ, ಮಣಿಪುರಿ ನೃತ್ಯ, ಜಾನಪದ ನೃತ್ಯ, ಶ್ರೀಲಂಕಾದ ಸಂಸ್ಕೃತಿ ಪ್ರತಿಬಿಂಬಿಸುವ ನೃತ್ಯ ಹಾಗೂ ಭಾರತದ ವಿವಿಧ ರಾಜ್ಯಗಳ ಕಲೆಯನ್ನು ಪ್ರತಿಬಿಂಬಿಸುವ ನೃತ್ಯ ಪ್ರದರ್ಶನ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮವನ್ನು ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಸೇರಿದ್ದರು.