More

  ವಿದ್ಯಾವರ್ಧಕ ಕನ್ನಡ ಸೇವೆ ರಾಜ್ಯಕ್ಕೆ ಮಾದರಿ

  ಭಾಲ್ಕಿ: ರಾಜ್ಯದ ಗಡಿ ಭಾಗದಲ್ಲಿ ಕನ್ನಡ ಕಟ್ಟಿ ಬೆಳೆಸುವಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದ ಸೇವೆ ಮಾದರಿಯಾಗಿದೆ ಎಂದು ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಮೆಚ್ಚುಗೆ ವ್ಯಕ್ತಪಡಿಸಿದರು.

  ಕರಡ್ಯಾಳ ಚನ್ನಬಸವೇಶ್ವರ ಗುರುಕುಲ ಅನುಭವ ಮಂಟಪ ಸಭಾಂಗಣದಲ್ಲಿ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘ ಹಗೂ ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್ ಸಹಯೋಗದಡಿ ಭಾನುವಾರ ಆಯೋಜಿಸಿದ್ದ ಕರ್ನಾಟಕ-೫೦ ಸಂಭ್ರಮ, ಗಡಿನಾಡಿನಲ್ಲಿ ಕನ್ನಡ ಜಾಗೃತಿ ಮತ್ತು ಸಾಂಸ್ಕೃತಿಕ ಸಂಭ್ರಮ ವಿಚಾರ ಸಂಕಿರಣ, ಕವಿಗೋಷ್ಠಿಯಲ್ಲಿ ಸಾನ್ನಿಧ್ಯ ವಹಿಸಿದ್ದ ಅವರು, ಮರಾಠಿ ಪ್ರಾಬಲ್ಯದ ಧಾರವಾಡ ಭಾಗದಲ್ಲಿ ಕನ್ನಡ ಭಾಷೆ ಕಟ್ಟಿದ ಶ್ರೇಯಸ್ಸು ಕರ್ನಾಟಕ ವಿದ್ಯಾವರ್ಧಕ ಸಂಘಕ್ಕೆ ಸಲ್ಲುತ್ತದೆ ಎಂದರು.

  ಕರ್ನಾಟಕ ವಿದ್ಯಾವರ್ಧಕ ಸಂಘ ಮತ್ತು ಹಿರೇಮಠ ಸಂಸ್ಥಾನಕ್ಕೂ ಅವಿನಾಭಾವ ಸಂಬಂಧ ಇದೆ. ಆ ಭಾಗದಲ್ಲಿ ವಿದ್ಯಾವರ್ಧಕ ಸಂಘ ಕನ್ನಡ ಕಟ್ಟಿದಂತೆ ಈ ಭಾಗದಲ್ಲಿ ಶ್ರೀ ಪಟ್ಟದ್ದೇವರು ಗಡಿ ಪ್ರದೇಶವನ್ನು ಕನ್ನಡ ನೆಲದಲ್ಲಿ ಉಳಿಸಿದ್ದಾರೆ. ಹೀಗಾಗಿ ವಿದ್ಯಾವರ್ಧಕ ಸಂಘ, ಶ್ರೀಮಠದ ಧ್ಯೇಯ ಒಂದೇ ಆಗಿದ್ದು, ಕನ್ನಡದ ಅಸ್ಮಿತೆಗಾಗಿ ನಿರಂತರ ಹೋರಾಟ ಮಾಡಲಾಗುತ್ತಿದೆ ಎಂದು ತಿಳಿಸಿದರು.

  ಬೀದರ್ ಮಾಂಜ್ರಾ ಬ್ಯಾಂಕ್ ಅಧ್ಯಕ್ಷೆ ಶಕುಂತಲಾ ಬೆಲ್ದಾಳೆ ಉದ್ಘಾಟಿಸಿ ಮಾತನಾಡಿ, ಕಲ್ಯಾಣ ಕರ್ನಾಟಕದಲ್ಲಿ ಲಿಂಗೈಕ್ಯ ಶ್ರೀ ಡಾ.ಚನ್ನಬಸವ ಪಟ್ಟದ್ದೇವರ ಪರಿಶ್ರಮದ ಕಾರಣ ಕನ್ನಡದ ಅಸ್ಮಿತೆ ಉಳಿದಿದೆ. ವಿದ್ಯಾವರ್ಧಕ ಸಂಘ ಕೂಡ ಕನ್ನಡಕ್ಕೆ ಕಟಿಬದ್ಧವಾಗಿ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆ ತರಿಸಿದೆ ಎಂದರು.

  ಅಧ್ಯಕ್ಷತೆ ವಹಿಸಿದ್ದ ವಿದ್ಯಾವರ್ಧಕ ಸಂಘದ ಕಾರ್ಯಾಧ್ಯಕ್ಷ ಬಸವಪ್ರಭು ಹೊಸಕೇರಿ ಮಾತನಾಡಿ, ವಿದ್ಯಾರ್ವಧಕ ಸಂಘ, ಭಾಲ್ಕಿ ಹಿರೇಮಠ ಸಂಸ್ಥಾನ ತಮ್ಮದೇ ಆದ ಇತಿಹಾಸ ಹೊಂದುವ ಮೂಲಕ ಕನ್ನಡಕ್ಕಾಗಿ ವಿಶಿಷ್ಟ ಕೊಡುಗೆ ನೀಡಿವೆ ಎಂದು ಹೇಳಿದರು.

  ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ, ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ ಚನ್ನಶೆಟ್ಟಿ, ಬೀದರ್ ಕಸಾಪ ತಾಲೂಕು ಅಧ್ಯಕ್ಷ ಎಂ.ಎಸ್. ಮನೋಹರ, ಧಾರವಾಡ ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಲಿಂಗರಾಜ ಅಂಗಡಿ ಮಾತನಾಡಿದರು.

  ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಪ್ರಾಸ್ತಾವಿಕ ಮಾತನಾಡಿದರು. ಪ್ರಾಚಾರ್ಯ ಬಸವರಾಜ ಮೊಳಕೀರೆ, ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷೆ ಡಾ.ಮಾಲತಿ ಪಟ್ಟಣಶೆಟ್ಟಿ, ಸಹ ಕಾರ್ಯದರ್ಶಿ ಶೇಖರ ಕುಂಬೆ, ಶಿವಾನಂದ ಭಾವಿಕಟ್ಟಿ, ಸಂಜು ಕುಲಕರ್ಣಿ, ಮಹೇಶ ಗೋರನಾಳಕರ ಇತರರಿದ್ದರು. ಆಡಳಿತಾಧಿಕಾರಿ ಮೋಹನ ರಡ್ಡಿ ಸ್ವಾಗತಿಸಿದರು. ವಿಶ್ವೇಶ್ವರಿ ಹಿರೇಮಠ ನಿರೂಪಣೆ ಮಾಡಿದರು.

  ಸುದೀರ್ಘ ೧೩೪ ವರ್ಷ ಇತಿಹಾಸದ ಕರ್ನಾಟಕ ವಿದ್ಯಾವರ್ಧಕ ಸಂಘ ನಿಸ್ವಾರ್ಥವಾಗಿ ಕನ್ನಡದ ಸೇವೆ ಮಾಡುತ್ತ ಬಂದಿದೆ. ಸಂಘದ ಸಂಸ್ಥಾಪಕ ರಾ.ಹ.ದೇಶಪಾಂಡೆ, ಪಾಟೀಲ್ ಪುಟ್ಟಪ್ಪ, ಚಂದ್ರಕಾಂತ ಬೆಲ್ಲದ ಆದಿಯಾಗಿ ಎಲ್ಲರೂ ಕನ್ನಡ ಭಾಷೆ ಜತೆಗೆ ಸಂಘದ ಬೆಳವಣಿಗೆಗೆ ಶ್ರಮಿಸಿದ್ದಾರೆ.
  | ಶ್ರೀ ಗುರುಬಸವ ಪಟ್ಟದ್ದೇವರು ಪೀಠಾಧಿಪತಿ, ಹಿರೇಮಠ ಸಂಸ್ಥಾನ ಭಾಲ್ಕಿ

  ಗಮನ ಸೆಳೆದ ಪ್ರದರ್ಶನ: ಕಾರ್ಯಕ್ರಮದಲ್ಲಿ ಕನ್ನಡಕ್ಕಾಗಿ ವಿಶಿಷ್ಟ ಕೊಡುಗೆ ನೀಡಿದ ಕುವೆಂಪು, ದ.ರಾ. ಬೇಂದ್ರೆ, ಗದಗ ಶ್ರೀಗಳು, ಭಾಲ್ಕಿ ಶ್ರೀ ಮೊದಲಾದ ಸಾಧಕರ ಕುರಿತು ವಿವಿಧ ಪತ್ರಿಕೆಯಲ್ಲಿ ಪ್ರಕಟಗೊಂಡ ಲೇಖನಗಳ ಪ್ರದರ್ಶನ ಗಮನ ಸೆಳೆಯಿತು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts