More

    ಮೊಂಟೆಪದವಲ್ಲಿ ದಾಖಲಾತಿ ದಾಖಲೆ

    ಅನ್ಸಾರ್ ಇನೋಳಿ ಉಳ್ಳಾಲ
    ಗ್ರಾಮೀಣ ಭಾಗದಲ್ಲಿರುವ ಮೊಂಟೆಪದವು ಸರ್ಕಾರಿ ಶಾಲೆಗೆ ಖಾಸಗಿಯಿಂದಲೂ ವಿದ್ಯಾರ್ಥಿಗಳು ಆಗಮಿಸುತ್ತಿದ್ದು, ದಾಖಲೆ ಸಂಖ್ಯೆಯಲ್ಲಿ ದಾಖಲಾತಿ ಮುಂದುವರಿದಿದೆ.

    ಮೊಂಟೆಪದವು ಸರ್ಕಾರಿ ಶಾಲೆ ಗ್ರಾಮೀಣ ಭಾಗದಲ್ಲಿದ್ದರೂ ಪೂರ್ವ ಪ್ರಾಥಮಿಕದಿಂದ ಪದವಿಪೂರ್ವ ಶಿಕ್ಷಣವರೆಗೆ ವ್ಯವಸ್ಥೆಯಿದೆ. 2015ರಿಂದ ಆಂಗ್ಲಮಾಧ್ಯಮ ಶಿಕ್ಷಣಕ್ಕೆ ಸರ್ಕಾರ ಅವಕಾಶ ನೀಡಿದ್ದು, ಎಲ್‌ಕೆಜಿಯಿಂದ ಆರಂಭಗೊಂಡ ಆಂಗ್ಲ ಶಿಕ್ಷಣವೀಗ ಆರನೇ ತರಗತಿವರೆಗೆ ತಲುಪಿದೆ. 2018-19ರಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಎಂದು ಘೋಷಿಸಲಾಗಿದೆ.
    ಆಂಗ್ಲ ಶಿಕ್ಷಣ ಘೋಷಣೆ ಬಳಿಕ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದ್ದರೂ, ಈ ವರ್ಷ ನಿರೀಕ್ಷೆಗೂ ಮೀರಿ ದಾಖಲಾತಿ ಆಗಿದೆ. ಈ ವರ್ಷ ಎಲ್‌ಕೆಜಿಗೆ 74 ಮತ್ತು ಯುಕೆಜಿ 47 ವಿದ್ಯಾರ್ಥಿಗಳು ದಾಖಲಾಗಿದ್ದರೆ, ಒಂದನೇ ತರಗತಿ ಆಂಗ್ಲಮಾಧ್ಯಮಕ್ಕೆ 148 ಹಾಗೂ ಕನ್ನಡ ಮಾಧ್ಯಮಕ್ಕೆ 12 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಇಷ್ಟೊಂದು ಪ್ರಮಾಣದ ದಾಖಲಾತಿ ಅಭೂತಪೂರ್ವ ಎಂಬುದು ಶಿಕ್ಷಣ ಪ್ರೇಮಿಗಳ ಅಭಿಪ್ರಾಯ. ಅದೂ ಅಲ್ಲದೆ ಈ ವರ್ಷ ಎಲ್‌ಕೆಜಿಯಿಂದ ಏಳನೇ ತರಗತಿಯವರೆಗೆ ಈಗಾಗಲೇ 735 ವಿದ್ಯಾರ್ಥಿಗಳ ದಾಖಲಾತಿ ನಡೆದಿದ್ದು, ಸಂಖ್ಯೆ ಮುಂದುವರಿದಿದೆ. ಗ್ರಾಮದ ಹೊರಗಿನ ಪ್ರತಿಷ್ಠಿತ ಶಾಲೆಗಳಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿಗಳೂ ಇಲ್ಲಿನ ಸರ್ಕಾರಿ ಶಾಲೆಗೆ ದಾಖಲಾಗುತ್ತಿರುವುದು ಶಿಕ್ಷಣದ ಗುಣಮಟ್ಟ, ಖಾಸಗಿ ಶುಲ್ಕ ಭೀತಿ ಮತ್ತು ಕರೊನಾ ಎಫೆಕ್ಟ್‌ಗೆ ಸಾಕ್ಷಿಯಾಗಿದೆ.

    ನೆಟ್‌ವರ್ಕ್ ಲೋ, ನೈಟ್ ಡ್ಯೂಟಿ: ಈ ಶಾಲೆ ಅತ್ಯಂತ ಗ್ರಾಮೀಣ ಭಾಗದಲ್ಲಿ ಇರುವುದರಿಂದ ನೆಟ್‌ವರ್ಕ್ ಸಮಸ್ಯೆಯಾಗಿದೆ. ಪ್ರಸ್ತುತ ಆನ್‌ಲೈನ್‌ನಲ್ಲೇ ಶಿಕ್ಷಣದೊಂದಿಗೆ ಎಲ್ಲ ಕೆಲಸ ಆಗಬೇಕಿರುವುದರಿಂದ ನಿಧಾನಗತಿಯ ನೆಟ್‌ವರ್ಕ್ ಶಿಕ್ಷಕ ವರ್ಗಕ್ಕೆ ತಲೆನೋವಾಗಿದೆ. ಅದರಲ್ಲೂ ಈ ವಿಭಾಗ ನಿರ್ವಹಿಸುವ ಶಿಕ್ಷಕರಂತೂ ಶಾಲೆಯಲ್ಲಿ ಮಾತ್ರವಲ್ಲದೆ ಮನೆಯಲ್ಲೂ ಅಹೋರಾತ್ರಿ ಕರ್ತವ್ಯದಲ್ಲಿ ಇರಬೇಕಾದ ಸಂದಿಗ್ಧತೆಯಲ್ಲಿದ್ದಾರೆ.

    ಶಿಕ್ಷಕರು, ಮೂಲಸೌಕರ್ಯ ಕೊರತೆ: ಸರ್ಕಾರದ ಲೆಕ್ಕಾಚಾರದಂತೆ ಒಂದು ತರಗತಿಗೆ ಓರ್ವ ಶಿಕ್ಷಕರು ಬೇಕು. ಒಂದು ತರಗತಿಯಲ್ಲಿ ಹೆಚ್ಚೆಂದರೂ 35 ವಿದ್ಯಾರ್ಥಿಗಳಿಗೆ ಪಾಠ ಮಾಡಲು ಸಾಧ್ಯ. ಅದರಂತೆ ಈ ಶಾಲೆಗೆ ತರಗತಿಗೆ 22 ಕೊಠಡಿಗಳು, ಶಿಕ್ಷಕರ ಕಚೇರಿಗೊಂದು ಕೊಠಡಿ ಬೇಕು. ಆದರೆ ಈಗಿರುವುದು ಕೇವಲ 16 ಕೊಠಡಿಗಳು. ಅದರಲ್ಲೊಂದು ಶಿಕ್ಷಕರ ಕಚೇರಿ. ಈ ಸಮಸ್ಯೆ ಸರಿದೂಗಿಸಲು ಸಭಾಂಗಣ, ಕಂಪ್ಯೂಟರ್ ಕೊಠಡಿ ಮಾತ್ರವಲ್ಲದೆ ಸ್ಟೇಜಿನಲ್ಲೂ ಮಕ್ಕಳನ್ನು ಕೂರಿಸಿ ಪಾಠ ಮಾಡುವುದು ಅನಿವಾರ್ಯ. ಶಿಕ್ಷಕರ ವಿಚಾರಕ್ಕೆ ಬಂದರೆ 23 ಮಂದಿ ಬೇಕು. ಆದರೆ ಈಗಿರುವುದು ಬರೀ ಎಂಟು ಮಂದಿ. ಅದರಲ್ಲೊಬ್ಬರು ಮುಖ್ಯ ಶಿಕ್ಷಕಿ. ಕ್ಲರ್ಕ್, ಕಂಪ್ಯೂಟರ್, ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆಯೂ ಖಾಲಿಯಿರುವುದರಿಂದ ಅದನ್ನೂ ಇವರೇ ನಿಭಾಯಿಸಬೇಕು.ಗುಣಮಟ್ಟದ ಶಿಕ್ಷಣ ನೀಡುವ ಸವಾಲೂ ಶಿಕ್ಷಕ ವರ್ಗದ ಮೇಲಿದೆ. ಈಗಿನ ಆನ್‌ಲೈನ್ ಶಿಕ್ಷಣದಿಂದ ಕಂಪ್ಯೂಟರ್ ಶಿಕ್ಷಕರ ಅನಿವಾರ್ಯತೆ ಎಲ್ಲಕ್ಕಿಂತಲೂ ಮುಖ್ಯ ಎನಿಸಿದೆ.

    ಕರೊನಾದಿಂದ ವಿವಿಧ ಖಾಸಗಿ ಶಾಲೆಗಳಲ್ಲಿ ಕಲಿಯುತ್ತಿದ್ದ ಮಕ್ಕಳೂ ನಮ್ಮಲ್ಲಿಗೆ ಬರುತ್ತಿದ್ದು, ನಿರೀಕ್ಷೆಗೂ ಮೀರಿದ ದಾಖಲಾತಿ ನಡೆದಿದೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಕೊಠಡಿಗಳ ನಿರ್ಮಾಣಕ್ಕಾಗಿ ಶಾಸಕರು ಸರ್ಕಾರದಿಂದ ಎರಡು ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿದ್ದಾರೆ. ಶಿಕ್ಷಕರು, ಮೂಲ ಸೌಕರ್ಯ ಕೊರತೆ ನೀಗಿಸುವ ಭರವಸೆಯೂ ದೊರೆತಿದ್ದು, ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು.
    ಮುರಳೀಧರ ಶೆಟ್ಟಿ ಮೋರ್ಲ ಕಾರ್ಯಾಧ್ಯಕ್ಷ, ಶಾಲಾಭಿವೃದ್ಧಿ ಸಮಿತಿ

    ಶಾಲೆಯಲ್ಲಿ ಪ್ರತಿದಿನವೂ ದಾಖಲಾತಿ ಪ್ರಕ್ರಿಯೆ ನಡೆಯುತ್ತಲೇ ಇದ್ದು, ಮಕ್ಕಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಆದರೆ ಪೀಠೋಪಕರಣ, ತರಗತಿ ಕೊಠಡಿ, ಶಿಕ್ಷಕರ ಸಹಿತ ಮೂಲ ಸೌಕರ್ಯದ ಕೊರತೆಯಿದೆ. ಅವುಗಳನ್ನು ಒದಗಿಸಿಕೊಟ್ಟರೆ ಮಕ್ಕಳ ಸಂಖ್ಯೆ ಇನ್ನಷ್ಟು ಹೆಚ್ಚಿಸಿ ರಾಜ್ಯದಲ್ಲೇ ಅತ್ಯಧಿಕ ಮಕ್ಕಳೆನ್ನುವ ಮಾದರಿ ಕನ್ನಡ ಶಾಲೆಯನ್ನಾಗಿ ರೂಪಿಸಲು ಸಾಧ್ಯವಾಗಲಿದೆ.
    ಪ್ರಮೀಳಾ ಬಿ.ಸಿ. ಮುಖ್ಯಶಿಕ್ಷಕಿ, ಪ್ರಾಥಮಿಕ ವಿಭಾಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts