More

    11 ದಿನ ಕಳೆದರೂ ಮುಂಗಾರು ದುರ್ಬಲ: ರಾಜ್ಯದಲ್ಲಿ ಶೇ.19 ಮಳೆ ಕುಂಠಿತ..

    ಬೆಂಗಳೂರು: ರಾಜ್ಯದಲ್ಲಿ ನೈಋತ್ಯ ಮುಂಗಾರು ಪ್ರವೇಶಿಸಿ 11 ದಿನ ಕಳೆದರೂ ಮಾರುತಗಳು ಚುರುಕುಗೊಳ್ಳುವ ಲಕ್ಷಣ ಗೋಚರಿಸುತ್ತಿಲ್ಲ. ಮಾರುತಗಳು ದುರ್ಬಲಗೊಂಡಿರುವ ಹಿನ್ನೆಲೆಯಲ್ಲಿ ಮೋಡಗಳು ಇದ್ದರೂ ಅಲ್ಲಲ್ಲಿ ಸಾಧಾರಣ ಮಳೆಯಾಗುತ್ತಿದೆ ಹೊರತು ಜೋರಾಗಿ ಸುರಿಯುತ್ತಿಲ್ಲ. ಮಾರುತಗಳು ಪ್ರಬಲಗೊಳ್ಳುವ ಸಂಬಂಧ ಹವಾಗುಣವೂ ಸೃಷ್ಟಿಯಾಗುತ್ತಿಲ್ಲ. ಅಸಾನಿ ಚಂಡಮಾರುತ ಸೃಷ್ಟಿಯಾದ ಪರಿಣಾಮ ತೇವಾಂಶಭರಿತ ಮೋಡಗಳು ಸೆಳೆದುಕೊಂಡಿರುವ ಹಿನ್ನೆಲೆಯಲ್ಲಿ ಮಾರುತಗಳ ಶಕ್ತಿ ಕಳೆದುಕೊಂಡಿವೆ.

    ಜೂನ್‌ನಲ್ಲಿ ರಾಜ್ಯಾದ್ಯಂತ ವಾಡಿಕೆಯಂತೆ ಒಟ್ಟಾರೆ 199 ಮಿಮೀ ಮಳೆಯಾಗಬೇಕು. ಆದರೆ, ಈ ಬಾರಿ ವಾಡಿಕೆಗಿಂತ ಕಡಿಮೆ ಮಳೆ ಬೀಳಲಿದೆ ಎಂದು ಈಗಾಗಲೇ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕರ್ನಾಟಕದಲ್ಲಿ ಕೃಷಿ ಚಟುವಟಿಕೆಗಳು ಬಿರುಸು ಪಡೆದಿವೆ. ಹಾಸನ, ಮೈಸೂರು ಭಾಗಗಳಲ್ಲಿ ಆರಂಭದಲ್ಲಿ ಮಳೆಯಾದ ಹಿನ್ನೆಲೆಯಲ್ಲಿ ಜೋಳ ಬಿತ್ತನೆ ಕಾರ್ಯ ಚುರುಕು ಪಡೆದಿದೆ. ಈಗ ಮಳೆ ಕುಂಠಿತವಾದ ಹಿನ್ನೆಲೆಯಲ್ಲಿ ರೈತರು ಆತಂಕಗೊಂಡಿದ್ದಾರೆ.

    ಶೇ.46 ಕೊರತೆ: ಜೂ 1ರಿಂದ ಜೂ 8ರವರೆಗೆ ದೇಶಾದ್ಯಂತ ಶೇ.42 ಮಳೆ ಕುಂಠಿತವಾಗಿದೆ. ಪೂರ್ವ ಮತ್ತು ಈಶಾನ್ಯ ಭಾರತದಲ್ಲಿ ವಾಡಿಕೆಯಂತೆ 65 ಮಿಮೀ ಮಳೆಯಾಗಬೇಕಿತ್ತು. ಆದರೆ, 64.4 ಮಿಮೀ ಮಳೆಯಾಗಿದ್ದು, ಶೇ.7 ಕೊರೆತಯಾಗಿದೆ. ಉತ್ತರ ಭಾರತದಲ್ಲಿ 11 ಮಿಮೀ ಮಳೆ ಬದಲಾಗಿ ಕೇವಲ 0.6 ಮಿಮೀ ಮಳೆಯಾಗಿದ್ದು, ಶೇ. 94 ಕುಂಠಿತವಾಗಿದೆ. ಮಧ್ಯ ಭಾರತದಲ್ಲಿ ಶೇ.88, ದಕ್ಷಿಣ ಭಾರತದಲ್ಲಿ ಶೇ.26 ಮಳೆ ಕೊರತೆ ಕಾಡಿದೆ. ಅದೇರೀತಿ, ಜೂ 1ರಿಂದ ಜೂ 10ರವರೆಗೆ ರಾಜ್ಯದಲ್ಲಿ ಶೇ.19 ಮಳೆ ಕುಂಠಿತವಾಗಿದ್ದು, 13 ಜಿಲ್ಲೆಗಳಲ್ಲಿ ಮಳೆ ಅಭಾವ ಉಂಟಾಗಿದೆ. ಕರಾವಳಿ, ಮಲೆನಾಡ ಹಾಗೂ ದಕ್ಷಿಣ ಕರ್ನಾಟಕದಲ್ಲಿ ಮಳೆ ಕ್ಷೀಣಿಸಿದೆ.

    ಜುಲೈನಲ್ಲಿ ಮುಂಗಾರು ಪ್ರಬಲ: ಜೂನ್‌ನಲ್ಲಿ ಮಳೆ ಕೊರತೆ ಉಂಟಾದರೆ ಜುಲೈನಲ್ಲಿ ವಾಡಿಕೆ, ಆಗಸ್ಟ್‌ನಲ್ಲಿ ವಾಡಿಕೆಗಿಂತ ಹೆಚ್ಚು ಮತ್ತು ಸೆಪ್ಟೆಂಬರ್‌ನಲ್ಲಿ ವಾಡಿಕೆಯಷ್ಟೇ ಮಳೆ ಬೀಳಲಿದೆ. ರಾಜ್ಯದಲ್ಲಿ ಮುಂದಿನ 3-4 ದಿನ ಸಾಧಾರಣ ಮಳೆ ಬೀಳಲಿದೆ. ಕರಾವಳಿ, ಮಲೆನಾಡು, ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನಲ್ಲಿ ಚದುರಿದಂತೆ ಮಳೆಯಾಗಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.

    ಹೆರಿಗೆ ಆದ 3 ವರ್ಷಗಳ ಬಳಿಕ ತಾಯಿಯ ಮಡಿಲನ್ನು ಸೇರಿದ ಮಗು; ಆಸ್ಪತ್ರೆ ಸಿಬ್ಬಂದಿಯ ಎಡವಟ್ಟು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts