More

    ಮಾನ್ಸೂನ್‌ನಲ್ಲಿ ಏಡಿ ಹಂಗಾಮಾ!

    ಬೆಳಗಾವಿ: ಕರೊನಾ ಕಾಲದಲ್ಲಿ ಜನರು ಭೀತಿಯಲ್ಲಿದ್ದಾರೆ. ಏನು ತಿನ್ನಬೇಕು, ಏನು ತಿನ್ನಬಾರದು ಎಂಬ ಗೊಂದಲ ಜನರನ್ನು ಬಾಧಿಸುತ್ತಿದೆ. ಅತ್ಯಂತ ಸೂಕ್ಷ್ಮವಾಗಿರುವ ಕರೊನಾ ವೈರಸ್ ಯಾವುದೇ ರೂಪದಲ್ಲಾದರೂ ದೇಹ ಸೇರಬಹುದು ಎಂಬ ಆತಂಕ ಜನರನ್ನು ಕಾಡುತ್ತಿದೆ.

    ಕರೊನಾತಂಕದ ಈ ಸಂದರ್ಭದಲ್ಲಿ ಆಹಾರ ಪದ್ಧತಿ ಹಾಗೂ ರುಚಿಯ ಹುಡುಕಾಟದಲ್ಲಿ ಜನರು ಲಭ್ಯ ಇರುವುದನ್ನೂ ಸಹ ಅನೇಕ ಬಾರಿ ಯೋಚಿಸಿ ತಿನ್ನಲು ಹವಣಿಸುವುದು ಸಹಜ. ಈಗ ಮಳೆಗಾಲವಾದ್ದರಿಂದ ಮಾಂಸಾಹಾರಿಗಳು ಏಡಿ ಸವಿಯಲು ಶುರು ಮಾಡಿದ್ದಾರೆ.

    ಮಳೆಗಾಲ ಆರಂಭವಾದರೆ ಮೀನು ಹಾಗೂ ಏಡಿಗಳ ಲಭ್ಯತೆ ಹೆಚ್ಚಾಗುತ್ತದೆ. ಶೀತಕ್ಕೆ ಏಡಿ ಖಾದ್ಯ ರಾಮಬಾಣ ಎಂಬ ನಂಬಿಕೆ ಮೊದಲಿನಿಂದಲೂ ಈ ಭಾಗದ ಮಾಂಸಾಹಾರಿಗಳಲ್ಲಿ ಇದೆ. ಹಾಗಾಗಿ ಏಡಿಗೆ ಈಗ ಬಲು ಬೇಡಿಕೆ ಬಂದಿದೆ. ಏಡಿಯ ಸೂಪ್ ಸೇವಿಸಿದರೆ ಎರಡೇ ದಿನದಲ್ಲಿ ನೆಗಡಿ ಮಾಯವಾಗುತ್ತದೆ ಎಂಬ ನಂಬಿಕೆ ಇದೆ. ಹಾಗಾಗಿ ಮಳೆಗಾಲದಲ್ಲಿ ಸಾಮಾನ್ಯವಾಗಿ ಶೀತ ಹೆಚ್ಚಾಗುವುದರಿಂದ ಮಾಂಸಾಹಾರಿಗಳು ಏಡಿ ಸೇವನೆಗೆ ಮುಂದಾಗಿದ್ದಾರೆ.

    ಔಷಧೀಯ ಗುಣ: ಏಡಿ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಹೃದಯ, ಸಂಧಿವಾತ, ಸ್ನಾಯು, ಕೀಲು ವ್ಯಾಧಿಗಳಿಗೆ ಏಡಿ ಖಾದ್ಯ ಔಷಧದಂತೆ ಕೆಲಸ ಮಾಡುತ್ತದೆ. ಸಂತಾನ ಪ್ರಾಪ್ತಿಗೂ ನೆರವಾಗುವ ಪೋಷಕಾಂಶಗಳು ಏಡಿಯಲ್ಲಿವೆ ಎಂಬ ನಂಬಿಕೆ ಜನರಲ್ಲಿದೆ. ಇದರಲ್ಲಿ ವಿಟಮಿನ್ ಸಿ ಅಂಶ ಹೆಚ್ಚಿನ ಪ್ರಮಾಣದಲ್ಲಿ ಇದೆ ಎಂಬ ಮಾಹಿತಿಯೂ ಇದೆ. ಹೀಗಾಗಿ ಏಡಿ ಖರೀದಿಸುವವರ ಸಂಖ್ಯೆಯೂ ಹೆಚ್ಚಿದೆ. ಏಡಿ ಖಾದ್ಯ ಸೇವಿಸುವುದರಿಂದ ದೇಹದಲ್ಲಿ ಉಷ್ಣಾಂಶ ಕಾಪಾಡಿಕೊಳ್ಳಬಹುದು. ಹೀಗಾಗಿ ಏಡಿ ಸಾಂಬಾರ, ಸುಕ್ಕಾ ಸೂಪ್ ಮಾಡಿ ಮಾಂಸಾಹಾರಿಗಳು ಸೇವಿಸುತ್ತಾರೆ. ಕೆಲವರು ಏಡಿ ಪ್ರೈ ಮಾಡಿ ತಿನ್ನುತ್ತಾರೆ ಎನ್ನುತ್ತಾರೆ ನಗರದ ನಿವಾಸಿ ವಿಜಯ ಪಾಟೀಲ.

    ನಗರದ ವಿವಿಧೆಡೆ ಮಾರಾಟ: ಹಿಡಕಲ್ ಡ್ಯಾಂ ಹಾಗೂ ಮಲಪ್ರಭಾ ನದಿ ವ್ಯಾಪ್ತಿಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಹಿಡಕಲ್ ಮತ್ತು ಧೂಪದಾಳ ಜಲಾಶಯದ ಹಿನ್ನೀರಿನಲ್ಲಿ ಏಡಿಗಳನ್ನು ಹಿಡಿದು ತರುತ್ತಾರೆ. ಬೆಳಗಾವಿ ನಗರದ ಕಸಾಯಿ ಗಲ್ಲಿ ಸೇರಿ ಹಲವೆಡೆ ಮಾರಾಟ ಮಾಡುತ್ತಾರೆ. ಕ್ಯಾಂಪ್ ಪ್ರದೇಶದ ಮೀನು ಮಾರುಕಟ್ಟೆ ಪಕ್ಕದಲ್ಲೇ ಏಡಿ ವ್ಯಾಪಾರಕ್ಕಾಗಿಯೇ ದೊಡ್ಡ ಮಾರುಕಟ್ಟೆ ನಿರ್ಮಾಣವಾಗಿದೆ. ಅಲ್ಲಿ ಸಾಕಷ್ಟು ಜನ ಸೇರುತ್ತಾರೆ.

    ಕಡಿಮೆಗೊಂಡ ಮೀನು ಆವಕ: ನೆರೆಯ ಗೋವಾ ರಾಜ್ಯ ಹಾಗೂ ಕಾರವಾರ ಜಿಲ್ಲೆಗಳಿಂದ ಆವಕವಾಗುತ್ತಿದ್ದ ತರಹೇವಾರಿ ಮೀನುಗಳಿಗೆ ನಗರದಲ್ಲಿ ಉತ್ತಮ ಬೇಡಿಕೆ ಇದೆ. ಆದರೆ, ಮಳೆಗಾಲ ಆರಂಭವಾಗಿರುವುದರಿಂದ ಅಲ್ಲಿ ಮೀನುಗಾರಿಕೆಗೆ ನಿಷೇಧವಿದೆ. ಅಲ್ಲದೆ, ಬೇಡಿಕೆಗೆ ತಕ್ಕಷ್ಟು ಮೀನು ಲಭಿಸದ ಹಿನ್ನೆಲೆಯಲ್ಲಿ ದರವೂ ಕೊಂಚ ಹೆಚ್ಚಾಗಿದೆ. ಇದರಿಂದ ಸಹಜವಾಗಿ ಗ್ರಾಹಕರು ಏಡಿಗಳ ಖರೀದಿಗೆ ಆಸಕ್ತಿ ವಹಿಸಿದ್ದಾರೆ ಎನ್ನುವುದು ನಗರದ ಏಡಿ ವ್ಯಾಪಾರಸ್ಥ ವಿಠ್ಠಲ ಭಜಂತ್ರಿ ಅವರ ಅಭಿಪ್ರಾಯವಾಗಿದೆ.

    ನಿತ್ಯವೂ ಜೋರು ವ್ಯಾಪಾರ

    ಏಡಿಗಳ ಬಣ್ಣ ಹಾಗೂ ಗಾತ್ರಕ್ಕನುಗುಣವಾಗಿ ಅವುಗಳ ದರ ಇದೆ. ದೊಡ್ಡ ಗಾತ್ರದ ಜೋಡಿ ಏಡಿಗೆ 100 ರಿಂದ 150 ರೂ., ಮಧ್ಯಮ ಗಾತ್ರ ಏಡಿಗಳಿಗೆ 60 ರಿಂದ 90 ರೂ.ಗಳ ವರೆಗೆ ಮಾರಾಟವಾಗುತ್ತಿವೆ. ಬೇಸಿಗೆಯಲ್ಲಿ ಏಡಿ ತರುವವರು ಸಂಜೆವರೆಗೂ ಗ್ರಾಹಕರ ನಿರೀಕ್ಷೆಯಲ್ಲಿರುತ್ತಿದ್ದರು. ಆದರೆ, ಇದೀಗ ಏಡಿ ಖರೀದಿಸುವವರ ಸಂಖ್ಯೆ ಹೆಚ್ಚಾಗಿದ್ದು, ನಿತ್ಯವೂ ಬೆಳಗ್ಗೆ 8ರಿಂದ ಮಧ್ಯಾಹ್ನ 2ರ ವರೆಗೆ ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಾರೆ. ಗ್ರಾಮೀಣ ಪ್ರದೇಶದ ಹಲವು ಯುವಕರು, ವೃದ್ಧರು ಹಾಗೂ ಮಹಿಳೆಯರು ಈ ಕಾಯಕದಲ್ಲಿ ತೊಡಗಿದ್ದು, ಮಧ್ಯಾಹ್ನದ ನಂತರ ಏಡಿ ಹಿಡಿಯಲು ತಮ್ಮೂರಿಗೆ ತೆರಳುವ ಅವಸರದಲ್ಲಿ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡಿ ತೆರಳುತ್ತಾರೆ.

    | ರವಿ ಗೋಸಾವಿ, ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts