More

    ಬದಲಾದ ವಾತಾವರಣಕ್ಕೆ ಜನ ಹೈರಾಣ

    ಹಗಲಿನಲ್ಲಿ ರಣಬಿಸಿಲು, ಮುಂಜಾನೆ-ರಾತ್ರಿ ಚಳಿ | ಕನಿಷ್ಠ 19, ಗರಿಷ್ಠ 37 ಡಿಗ್ರಿ ಸೆಲ್ಸಿಯಸ್

    ಮಂಜುನಾಥ ಅಯ್ಯಸ್ವಾಮಿ

    ಹೊಸಪೇಟೆ : ಒಂದೆಡೆ ಹಗಲು ಹೊತ್ತಿನಲ್ಲಿ ಬಿಸಿಲಿನ ಧಗೆಗೆ ಬೆವರಿಳಿದರೆ,
    ಇತ್ತ ರಾತ್ರಿ-ಮುಂಜಾನೆ ಸಮಯದಲ್ಲಿ ಮೈಕೊರೆಯುವ ಚಳಿಗೆ ಜನರು ಹೈರಾಣಾಗಿದ್ದಾರೆ.

    ಜನವರಿ ಕಳೆಯುತ್ತಿದ್ದಂತೆ ಚಳಿ ಕಡಿಮೆಯಾಗುತ್ತದೆಂಬ ಮಾತು ಸುಳ್ಳಾಗಿದ್ದು, ರಾತ್ರಿ ಮತ್ತು ಮುಂಜಾನೆ ಸಮಯದಲ್ಲಿ ಚಳಿಯು ಜನರನ್ನು ನಡಗಿಸುತ್ತಿದೆ. ಮತ್ತೊಂದೆಡೆ ಬೇಸಿಗೆಗೂ ಮುನ್ನವೇ ಬಿಸಿಲು ಜನರನ್ನು ಸುಸ್ತಾಗುವಂತೆ ಮಾಡುತ್ತಿದೆ.

    ಹೊಸಪೇಟೆ ನಗರ ಸೇರಿದಂತೆ ಕನಿಷ್ಠ 19 ಡಿಗ್ರಿ ಸೆಲ್ಸಿಯಸ್, ಮಧ್ಯಾಹ್ನದ ಹೊತ್ತಿನಲ್ಲಿ ಗರಿಷ್ಠ 37 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗುತ್ತಿದೆ. ಕೆಲದಿನಗಳಿಂದ ಇದೇ ಪ್ರಮಾಣದ ಚಳಿ ಮತ್ತು ಬಿಸಿಲು ಜನರನ್ನು ಬಾಧಿಸುತ್ತಿದೆ. ನವೆಂಬರ್‌ನಿಂದ ಫೆಬ್ರವರಿ ಮಧ್ಯದವರೆಗೆ ಸಾಮಾನ್ಯವಾಗಿ ಚಳಿಯ ವಾತಾವರಣ ಇರುತ್ತಿತ್ತು.

    ಮಾರ್ಚ್, ಏಪ್ರಿಲ್‌ನಲ್ಲಿ ಬಿಸಿಲ ಬೇಗೆ ಹೆಚ್ಚಾಗುತ್ತಿತ್ತು. ಆದರೆ ಈ ವರ್ಷ ಫೆಬ್ರವರಿಯಲ್ಲೇ ಬಿಸಿಲಿನ ತಾಪಮಾನ ಹೆಚ್ಚಿದೆ. ಚಳಿಗೆ ಮುಂಜಾನೆ ಜನರು ಎದ್ದು ಮನೆಯಿಂದ ಹೊರ ಬರಲು ಹಿಂದೇಟು ಹಾಕುತ್ತಿದ್ದರೆ, ಮಧ್ಯಾಹ್ನದ ಸಮಯದಲ್ಲಿ ಬಿಸಿಲಿನ ಪ್ರಖರತೆ ತಾಳಲಾರದೆ ನೆರಳಿಗಾಗಿ ಹುಡುಕುವಂತಾಗಿದೆ. ವಾತಾವರಣ ಬದಲಾವಣೆಯಿಂದ ಜನರ ಆರೋಗ್ಯದಲ್ಲಿ ವ್ಯತ್ಯಾಸಗಳು ಕಂಡುಬರುತ್ತಿದ್ದು, ಆಸ್ಪತ್ರೆಗೆ ಓಡಾಡುವಂತಾಗಿದೆ.

    ತಂಪು ಪಾನೀಯಕ್ಕೆ ಡಿಮಾಂಡ್

    ಬಿಸಿಲಿನ ಪ್ರಮಾಣ ಹೆಚ್ಚಿರುವುದರಿಂದ ಎಳನೀರು, ಕಲ್ಲಂಗಡಿ, ತಂಪು ಪಾನೀಯಗಳಿಗೂ ಬೇಡಿಕೆ ಹೆಚ್ಚಿದೆ. ಅಲ್ಲದೆ ಹಣ್ಣಿನ ಜೂಸ್ ಸೇವಿಸಿ ದಾಹ ತಣಿಸಿಕೊಳ್ಳಲು ಜನ ತಳ್ಳುವ ಬಂಡಿ, ಅಂಗಡಿಗಳಿಗೆ ಮುಗಿಬೀಳುತ್ತಿರುವ ದೃಶ್ಯ ಕಂಡುಬರುತ್ತಿದೆ. ಮಹಿಳೆಯರು ಬಿಸಿಲತಾಪದಿಂದ ಚರ್ಮದ ಕಾಂತಿ ರಕ್ಷಿಸಿಕೊಳ್ಳಲು ಕಣ್ಣು ಹೊರತಾಗಿ ಕಿವಿಸಹಿತ ಮುಖವನ್ನು ವೇಲ್‌ನಿಂದ ಸುತ್ತಿಕೊಂಡು ಓಡಾಡುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

    ಪ್ರವಾಸಿಗರ ಪರದಾಟ

    ಹಂಪಿಗೆ ಆಗಮಿಸಿರುವ ದೇಶ-ವಿದೇಶಿ ಪ್ರವಾಸಿಗರು ಬಿಸಿಲಿನ ಝಳದಿಂದ ತತ್ತರಿಸುತ್ತಿದ್ದು, ಬಿಸಿಲಿನಿಂದ ಪಾರಾಗಲು ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಹಂಪಿಯ ಬಂಡೆಗಳಿಗೆ ಸೂರ್ಯನ ಪ್ರಖರ ಕಿರಣಗಳು ಬಿದ್ದು, ಪ್ರತಿಫಲನಗೊಳ್ಳುತ್ತಿವೆ. ಪ್ರವಾಸಿಗರು ಛತ್ರಿಗಳ ಮೊರೆ ಹೋಗಿ, ಸ್ಮಾರಕಗಳನ್ನು ವೀಕ್ಷಿಸುವಂತಾಗಿದೆ. ಬಹುತೇಕರು ಬೆಳಗಿನ ಹೊತ್ತಲ್ಲಿ ಮಾತ್ರ ಸ್ಮಾರಕಗಳ ವೀಕ್ಷಣೆಗೆ ಆದ್ಯತೆ ನೀಡಿದ್ದಾರೆ.

    ಬಿಸಿಲಿನ ಪ್ರಖರತೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜನರು ಬೆಳಗ್ಗೆ ಮತ್ತು ಸಂಜೆ ಸಮಯದಲ್ಲಿ ಕೆಲಸ ಗಳನ್ನು ಮುಗಿಸಿ ಕೊಳ್ಳುವುದು ಒಳಿತು. ಹೀಗೆ ಮಾಡಿದರೆ ಬಿಸಿಲಿನಿಂದ ತಪ್ಪಿಸಿಕೊಳ್ಳ ಬಹುದು. ರಾಸಾಯನಿಕಯುಕ್ತ ತಂಪು ಪಾನೀಯ ಗಳಿಂದ ದೂರವಿದ್ದು ನೈಸರ್ಗಿಕವಾಗಿ ಸಿಗುವ ಹಣ್ಣುಗಳು, ಎಳನೀರನ್ನು ಸೇವಿಸಬೇಕು. ನೀರನ್ನು ಬಿಸಿ ಮಾಡಿ ಆರಿಸಿ ಕುಡಿಯಬೇಕು.
    ಡಾ.ಶಂಕರ ನಾಯ್ಕ ಡಿಎಚ್‌ಒ, ವಿಜಯನಗರ

    ಬೇಸಿಗೆಯಲ್ಲಿ ಮತ್ತಷ್ಟು ತೀವ್ರ

    ಬದಲಾದ ವಾತಾವರಣಕ್ಕೆ ಜನ ಹೈರಾಣ

    ಬೇಸಿಗೆಯ ಬಿಸಿ ಈಗಾಗಲೇ ಆರಂಭವಾಗಿದ್ದು, ಮಧ್ಯಾಹ್ನದ ವೇಳೆಗೆ ಸೂರ್ಯನ ಪ್ರತಾಪಕ್ಕೆ ಜನ ಹೈರಾಣಾಗುವಂತಾಗಿದೆ. ಬಿಸಿಲ ತಾಪ ಸದ್ಯ ಕನಿಷ್ಠ 19, ಗರಿಷ್ಠ 36 ರಿಂದ 37 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದೆ. ಮುಂದಿನ ಮಾರ್ಚ್, ಏಪ್ರಿಲ್ ವೇಳೆಗೆ ಮತ್ತಷ್ಟು ಏರಿಕೆ ಕಾಣಬಹುದು ಎನ್ನಲಾಗಿದೆ. ಈ ಬಾರಿ ಮಳೆ ಕೊರತೆಯಿಂದ ಜಲಾಶಯ, ನದಿ, ಕೆರೆ, ಕಟ್ಟೆಯಲ್ಲಿ ನೀರಿನ ಪ್ರಮಾಣ ಕ್ಷೀಣಿಸುತ್ತಿದೆ. ಕೃಷಿಭೂಮಿ ನೀರಿಲ್ಲದೆ ಒಣಗುತ್ತಿದೆ. ಬೆಳಗ್ಗೆ 8ರ ವೇಳೆಗೆ ತಾಪಮಾನದಲ್ಲಿ ಏರಿಕೆ ಕಂಡು ಮಧ್ಯಾಹ್ನ 1ರಿಂದ 2 ಗಂಟೆ ವೇಳೆಗೆ ಸುಡು ಬಿಸಿಲು ರಸ್ತೆಯನ್ನೇ ಕಾದ ಕಬ್ಬಿಣದಂತೆ ಮಾಡುತ್ತಿದೆ. ಸಾರ್ವಜನಿಕರು ಕಚೇರಿ, ಮತ್ತಿತರ ದೈನಂದಿನ ಕೆಲಸಕ್ಕೆ ತೆರಳಲು ಯೋಚಿಸುವಂತಾಗಿದೆ. ಕೆಲವರು ಛತ್ರಿ ಇಲ್ಲವೆ ಆಟೋ, ನಾಲ್ಕು ಚಕ್ರದ ವಾಹನ ಅವಲಂಬಿಸುವುದು ಆನಿವಾರ್ಯ ಎಂಬಂತಾಗಿದೆ. ರಣಬಿಸಿಲ ತಾಪಕ್ಕೆ ಫ್ಯಾನ್, ಎಸಿ ಇಲ್ಲದೆ ಮನೆ, ಕಚೇರಿಗಳಲ್ಲಿ ಕುಳಿತು ಕೆಲಸ ಮಾಡುವುದು ಅಸಾಧ್ಯ ಎಂಬಂತಾಗಿದೆ.

    ಹಂಪಿ ವಿಜಯವಿಠಲ ದೇಗುಲದ ರಸ್ತೆಯಲ್ಲಿ ಭಾನುವಾರ ಬೆಳಗ್ಗೆ ಬಿಸಿಲು ಹೆಚ್ಚಿದ್ದರಿಂದ ಪ್ರವಾಸಿಗರು ಕೊಡೆ ಹಿಡಿದು ಹೊರಟಿರುವುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts