More

    ಅಡಕೆ ಮಿಳ್ಳೆಗೆ ಮಂಗಗಳ ಕಾಟ

    ಸಿದ್ದಾಪುರ: ರೈತರ ಪ್ರಮುಖ ಜೀವನಾಧಾರ ಆರ್ಥಿಕ ಬೆಳೆಯಾದ ಅಡಕೆಗೆ ಮಂಗಗಳ ಕಾಟ ಜೋರಾಗಿದ್ದು, ಬೆಳೆಯುತ್ತಿರುವ ಅಡಕೆ ಮಿಳ್ಳೆಯನ್ನೇ ಚೀಪಿ ಬೀಸಾಡುತ್ತಿರುವುದರಿಂದ ಬೆಳೆ ಉಳಿಸಿಕೊಳ್ಳುವುದಕ್ಕೆ ಬೆಳೆಗಾರರು ಮಾಡುತ್ತಿರುವ ಪ್ರಯತ್ನಗಳೆಲ್ಲ ವಿಫಲವಾಗುತ್ತಿದೆ.

    ವರ್ಷದುದ್ದಕ್ಕೂ ಅಡಕೆ ಬೆಳೆಗಾರರಿಗೆ ಕಾಡುಪ್ರಾಣಿಗಳ ಕಾಟ ತಪ್ಪಿಲ್ಲ. ಒಂದಲ್ಲ ಒಂದು ಪ್ರಾಣಿಗಳು ತೋಟಕ್ಕೆ ದಾಳಿ ನಡೆಸಿ ಅಡಕೆ ಸಸಿ, ಗಿಡಗಳನ್ನು ನಾಶ ಮಾಡುತ್ತಲೇ ಇರುವುದರಿಂದ ಹತಾಶರಾಗಿದ್ದಾರೆ.

    ಅಡಕೆ ಸಸಿಗಳನ್ನು ನಾಟಿ ಮಾಡಿದಾಗಿನಿಂದ ಅವುಗಳ ರಕ್ಷಣೆ ಮಾಡಿಕೊಳ್ಳುವುದು ಕಷ್ಟಕರವಾಗಿದೆ. ಅಡಕೆ ಸಸಿ, ಗಿಡಗಳಿಗೆ, ಹಂದಿ, ಕಾಡುಕೋಣ, ಮುಳ್ಳ ಹಂದಿಗಳು ದಾಳಿ ನಡೆಸಿ ನಾಶಪಡಿಸುತ್ತಿವೆ.

    ಈಗ ಅಡಕೆ ಮಿಳ್ಳೆಗಳು ಬೆಳೆಯುವ ಸಮಯ. ಈ ಸಮಯದಲ್ಲಿಯೇ ಮಂಗಗಳು ಹಿಂಡು ಹಿಂಡಾಗಿ ತೋಟಕ್ಕೆ ನುಗ್ಗಿ ಅಡಕೆ ಮಿಳ್ಳೆಯನ್ನು ಚೀಪಿ ಬೀಸಾಡಲು ಆರಂಭಿಸಿವೆ. ದಿನಕ್ಕೆ ಹತ್ತಾರು ಮರಗಳಿಂದ ಸಾವಿರಾರು ಮಿಳ್ಳೆಗಳನ್ನು ನಾಶಪಡಿಸುತ್ತಿರುವುದರಿಂದ ಅಡಕೆ ಬೆಳೆ ಉಳಿಸಿಕೊಳ್ಳುವುದು ಕಷ್ಟಸಾಧ್ಯವಾಗಿದೆ ಎಂದು ಅಡಕೆ ಬೆಳೆಗಾರರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

    ಮಂಗಗಳನ್ನು ಓಡಿಸುವುದಕ್ಕೆ ಪಟಾಕಿ ಹೊಡೆಯುವುದು, ಕೂಗುವುದು, ವಿವಿಧ ಸ್ವರದಲ್ಲಿ ಬೆದರಿಸುವುದು ಸೇರಿದಂತೆ ಹಲವಾರು ಪ್ರಯತ್ನಗಳನ್ನು ಮಾಡಿದರೂ ಅದು ಕ್ಷಣ ಮಾತ್ರ ಎನ್ನುವಂತಾಗಿದೆ. ಕೆಲವೇ ಕ್ಷಣದಲ್ಲಿ ಅಡಕೆ ಮರದಲ್ಲಿ ಮಂಗಗಳು ಪ್ರತ್ಯಕ್ಷವಾಗಿ ತಮ್ಮ ಕಾರ್ಯಾಚರಣೆಯಲ್ಲಿ ತೊಡಗಿಕೊಳ್ಳುತ್ತಿದೆ ಎಂದು ಬೆಳೆಗಾರರು ಹೇಳುತ್ತಾರೆ.

    ಅಡಕೆ ಮಿಳ್ಳೆ ಹಾನಿಗೆ ಪರಿಹಾರ ಇಲ್ಲ: ಸರ್ಕಾರ ಅಡಕೆ ಸಸಿ ಹಾಗೂ ಗಿಡಗಳು ಕಾಡುಪ್ರಾಣಿಗಳಿಂದ ಹಾನಿಯಾದರೆ ಮಾತ್ರ ಅಲ್ಪ ಸ್ವಲ್ಪ ಪರಿಹಾರ ನೀಡುತ್ತಿದೆಯೇ ಹೊರತು ಪ್ರತಿ ವರ್ಷ ಮಂಗಗಳು ಅಡಕೆ ಮಿಳ್ಳೆಯನ್ನು ಹಾನಿ ಮಾಡುತ್ತಿದ್ದರೂ ಅದಕ್ಕೆ ಯಾವುದೇ ಪರಿಹಾರ ನೀಡುತ್ತಿಲ್ಲ. ಅಡಕೆ ಮಿಳ್ಳೆ ನಾಶಪಡಿಸಿರುವುದಕ್ಕೆ ಪರಿಹಾರ ನೀಡುವಂತೆ ಹಲವು ವರ್ಷಗಳಿಂದ ಬೆಳೆಗಾರರು ಜನಪ್ರತಿನಿಧಿಗಳಿಗೆ ಮನವಿ ಮಾಡಿಕೊಂಡಿದ್ದರೂ ಅಡಕೆ ಬೆಳೆಗಾರರ ಮನವಿಗೆ ಸ್ಪಂದಿಸಿಲ್ಲ ಎಂದು ಬೆಳೆಗಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    ವರ್ಷದುದ್ದಕ್ಕೂ ಅಡಕೆ ಬೆಳೆಗಾರಿರಗೆ ನೆಮ್ಮದಿ ಇಲ್ಲ. ಒಂದಲ್ಲ ಒಂದು ಕಾಟ ತಪ್ಪಿದ್ದಲ್ಲ. ಪ್ರತಿವರ್ಷ ಮಂಗಗಳ ಕಾಟದಿಂದ ಅಡಕೆ ಮಿಳ್ಳೆಗಳು ನಾಶವಾಗುತ್ತಿದ್ದರೂ ಅವುಗಳಿಗೆ ಪರಿಹಾರ ಇಲ್ಲ. ಅಡಕೆಯನ್ನೇ ನಂಬಿರುವ ಬೆಳೆಗಾರರು ಆರ್ಥಿಕ ತೊಂದರೆ ಅನುಭವಿಸುವುದರೊಂದಿಗೆ ಮುಂದಿನ ದಿನದಲ್ಲಿ ಜೀವನ ನಡೆಸುವುದು ಕಷ್ಟಸಾಧ್ಯವಾಗಲಿದೆ. ಜನಪ್ರತಿಧಿಗಳು, ಅಧಿಕಾರಿಗಳು ಅಡಕೆ ಮಿಳ್ಳೆ ಹಾನಿಗೂ ಪರಿಹಾರ ನೀಡುವುದಕ್ಕೆ ಸೂಕ್ತ ಕ್ರಮಕೈಗೊಳ್ಳಬೇಕು.

    ರಾಮಚಂದ್ರ ಗೌಡ, ಕೃಷಿಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts