More

    ದೊಡ್ಡ ರಾಗಿ ಸ್ಥಳೀಯವಾಗಿ ಮಾರಿದರೆ ಲಾಭ

    ಹನೂರು: ಬೆಳೆದ ವಿಶೇಷ ತಳಿಯ ದೊಡ್ಡ ರಾಗಿಯನ್ನು ಸ್ಥಳೀಯವಾಗಿ ಮಾರಾಟ ಮಾಡುವುದರಿಂದ ಹೆಚ್ಚಿನ ಆದಾಯ ದೊರೆಯುತ್ತದೆ. ಈ ಮೂಲಕ ಆರ್ಥಿಕವಾಗಿ ಅಭಿವೃದ್ಧಿ ಹೊಂದಬಹುದು ಎಂದು ಕೃಷಿ ವಿಜ್ಞಾನಿ ಡಾ. ಮಂಜುನಾಥ್ ತಿಳಿಸಿದರು.
    ತಾಲೂಕಿನ ಮಲೆಮಹದೇಶ್ವರ ಬೆಟ್ಟ ಸಮೀಪದ ಪಡಸಲನತ್ತ ಗ್ರಾಮದಲ್ಲಿ ಜೆಎಸ್‌ಬಿ ಪ್ರತಿಷ್ಠಾನ ಹಾಗೂ ರೈತ ಸಂಘದ ವತಿಯಿಂದ ಶುಕ್ರವಾರ ರೈತರಿಗಾಗಿ ಆಯೋಜಿಸಿದ್ದ ವಿಶೇಷ ತಳಿಯ ದೊಡ್ಡ ರಾಗಿ ಬೆಳೆಗಾರರ ಸಶಕ್ತೀಕರಣ ಕಾರ್ಯಕ್ರಮದಲ್ಲಿ ಮಾತನಾಡಿದರು.
    ಮಹದೇಶ್ವರಬೆಟ್ಟದ ಭಾಗದಲ್ಲಿನ ಬಹುತೇಕ ರೈತರು ಪಾರಂಪರಿಕ ಪದ್ಧತಿಯಲ್ಲಿ ಮಳೆಯನ್ನೇ ಆಶ್ರಯಿಸಿ ರಾಗಿಯನ್ನು ಅದರಲ್ಲೂ ವಿಶೇಷ ತಳಿಯ ದೊಡ್ಡ ರಾಗಿಯನ್ನು ಹೆಚ್ಚಾಗಿ ಬೆಳೆಯುತ್ತಾರೆ. ಇಲ್ಲಿ ಮಣ್ಣಿನ ಫಲವತ್ತತೆ ಉತ್ಕೃಷ್ಟ ಆಗಿರುವುದರಿಂದ ಬೆಳೆಯು ಫಲಪ್ರದಾಯಕವಾಗಿದೆ. ಆದರೆ ಇಲ್ಲಿನ ರೈತರು ರಾಗಿಯನ್ನು ಕಡಿಮೆ ಬೆಲೆಗೆ ತಮಿಳುನಾಡಿಗೆ ಮಾರಾಟ ಮಾಡುತ್ತಿರುವುದು ನಿಜಕ್ಕೂ ವಿಪರ್ಯಾಸ. ಇದು ಈಗೆಯೇ ಮುಂದುವರಿದರೆ ಕೃಷಿಯಲ್ಲಿ ನಷ್ಟವನ್ನು ಅನುಭವಿಸಬೇಕಾಗುತ್ತದೆ. ಆದ್ದರಿಂದ ಈ ಬಗ್ಗೆ ಪ್ರತಿಯೊಬ್ಬರೂ ಮನದಟ್ಟು ಮಾಡಿಕೊಂಡು ರಾಗಿಯನ್ನು ಸ್ಥಳೀಯವಾಗಿ ಮಾರಾಟ ಮಾಡುವುದು ಉತ್ತಮ ಎಂದು ತಿಳಿಸಿದರು.
    ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ಮಾತನಾಡಿ, ಮ.ಬೆಟ್ಟದ ಭಾಗದಲ್ಲಿ ಬೆಳೆದ ರಾಗಿಯು ಗುಣಮಟ್ಟದಿಂದ ಕೂಡಿರುತ್ತದೆ. ಆದರೆ ಬೆಂಬಲ ಬೆಲೆ ಸಿಗದ ಪರಿಣಾಮ ತಮಿಳುನಾಡಿಗೆ ಮಾರಾಟ ಮಾಡುತ್ತಿದ್ದಾರೆ. ಆದ್ದರಿಂದ ಸರ್ಕಾರ ರಾಗಿಯನ್ನು ಖರೀದಿ ಮಾಡಬೇಕು. ಈ ಬಗ್ಗೆ ಕೃಷಿಗೆ ಇಲಾಖೆ ನೆರವಾಗಬೇಕು ಎಂದು ಹೇಳಿದರು.
    ಬಳಿಕ ದೊಡ್ಡಾಣೆ ಗ್ರಾಮದ ಜಮೀನುಗಳಿಗೆ ತೆರಳಿ ದೊಡ್ಡ ರಾಗಿ ಬೆಳೆಯನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಜೆಎಸ್‌ಬಿ ಪ್ರತಿಷ್ಠಾನದ ಶಶಿಕುಮಾರ್, ರೈತ ಮುಖಂಡರಾದ ಮಹದೇವ, ಚಿಕ್ಕರಾಜು, ಮಾದೇಶ, ಪ್ರಸಾದ್, ಬೊಮ್ಮ, ಮಾದಪ್ಪ, ಮಹದೇವಪ್ರಸಾದ್, ಸ್ವಾಮಿ, ಜೋಸೆಫ್, ಐಸಾಕ್, ಮುರುಗೇಶ್, ಜಗಧೀಶ, ಚಂದ್ರು, ಕುಮಾರ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts