More

    ಮೊಳಕಾಲ್ಮೂರು ಹಸಿರೀಕರಣಕ್ಕೆ ಸಿದ್ಧತೆ

    ಕೆ.ಕೆಂಚಪ್ಪ ಮೊಳಕಾಲ್ಮೂರು: ತಾಲೂಕಿನ ಹಸಿರೀಕರಣಕ್ಕೆ ಮುಂದಾಗಿರುವ ಅರಣ್ಯ ಇಲಾಖೆ, ಪ್ರಸಕ್ತ ವರ್ಷ ಮೂರು ಲಕ್ಷಕ್ಕೂ ಅಧಿಕ ಸಸಿಗಳನ್ನು ನೆಡುವ ಯೋಜನೆ ರೂಪಿಸಿದೆ.

    ಸರ್ಕಾರದ ನಿರ್ದೇಶನದಂತೆ ನೆಡುತೋಪು ಯೋಜನೆಯಡಿ ತಾಲೂಕಿನ ಅರಣ್ಯ ಪ್ರದೇಶಗಳಾದ ಬಿ.ಜಿ.ಕೆರೆ ಕಮರ ಕಾವಲು, ಮಲ್ಲೂರಹಳ್ಳಿ, ಓಬೇನಹಳ್ಳಿ ಬಯಲು ಅಡವಿಯ 325 ಹೆಕ್ಟೇರ್ ಪ್ರದೇಶದಲ್ಲಿ ಸಸಿಗಳನ್ನು ನೆಡಲು ಅಗತ್ಯತೆ ಅನುಸಾರ ಉದ್ದಗಲಳತೆಯಲ್ಲಿ ಟ್ರೆಂಚ್ ಹೊಡೆಸಲಾಗಿದೆ.

    ನೆಡುವ ಸಸಿಗಳಾವವು: ಹೊಂಗೆ, ಕಮರ, ಸೀತಾಫಲ, ಆಲ, ಅರಳಿ, ಹುಣಸೆ ಇತ್ಯಾದಿ ಕಾಡು ಜಾತಿಯ 2 ಲಕ್ಷ ಸಸಿಗಳನ್ನು ಜೂನ್ ತಿಂಗಳ ಮಳೆಗಾಲದಲ್ಲಿ ನೆಟ್ಟು ಪೋಷಿಸುವ ಗುರಿ ಹೊಂದಲಾಗಿದೆ. ಅಲ್ಲದೆ ರಸ್ತೆ ಬದಿ ನೆಡುತೋಪು, ನಗರ-ಪಟ್ಟಣದಲ್ಲಿ ವನ ಮಹೋತ್ಸವ, ಮಗುವಿಗೊಂದು ಮರ; ಶಾಲೆಗೊಂದು ವನ, ಹಸಿರು ತೋಟಕ್ಕೆ ಆದ್ಯತೆ ನೀಡಲಾಗುತ್ತದೆ.

    ಕೃಷಿ ಅರಣ್ಯಕ್ಕೂ ಪ್ರೋತ್ಸಾಹ ನೀಡಿದ್ದು, ಬೇವು, ಹುಣಸೆ, ಶ್ರೀಗಂಧ, ನೇರಳೆ, ಕರಿಬೇವು ಇತರ 33800 ಸಸಿಗಳನ್ನು ರೈತರಿಗೆ ಕೊಡಲು ನಿರ್ಧರಿಸಲಾಗಿದೆ. 1 ರೂ. ಹಾಗೂ 3 ರೂ.ಗೆ ಒಂದು ಸಸಿ ನೀಡಲಾಗುತ್ತದೆ.

    ಚೆನ್ನಾಗಿ ಆರೈಕೆ ಮಾಡಿದ ಬೆಳೆಗಾರರಿಗೆ ಮೂರು ವರ್ಷಕ್ಕೆ 100 ರೂ. ಸಹಾಯಧನವನ್ನು ಸರ್ಕಾರದಿಂದ ನೇರ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ.

    ಸಾಮಾಜಿಕ ವಲಯ ಅರಣ್ಯಾಧಿಕಾರಿ ಎಂ.ಪಿ.ನಾಗೇಂದ್ರನಾಯಕ ಹೇಳಿಕೆ: ಮೀನಿನ ಬದು, ಒಕ್ಕಲು ಕಣ ಅಥವಾ ಮನೆ ಸುತ್ತಮುತ್ತ ಸಸಿಗಳನ್ನು ನೆಟ್ಟು ಅರಣ್ಯೀಕರಣಕ್ಕೆ ಸಹಕಾರ ನೀಡಬೇಕಾಗಿದೆ. ಜತೆಗೆ ಬೆಳೆ ಗಿಡಗಳ ಸಂರಕ್ಷಣೆಗೆ ಎಲ್ಲರೂ ಮುಂದಾದರೆ ತಾಲೂಕಿನ ಹಸಿರೀಕರಣ ಸಾಧ್ಯವಾಗುತ್ತದೆ.

    ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ರಾಮಪ್ಪ ಪೂಜಾರ್ ಹೇಳಿಕೆ: ಸೂರಮ್ಮನಹಳ್ಳಿ, ಓಬಯ್ಯನಹಟ್ಟಿ, ತುಮಕೂರ‌್ಲಹಳ್ಳಿ ವ್ಯಾಪ್ತಿಯ ಗೋಮಾಳ, ಕಿರು ಅರಣ್ಯ ಬಯಲು ಪ್ರದೇಶದಲ್ಲಿ ತಲಾ 25 ಹೆಕ್ಟೇರ್‌ನ ನಾಲ್ಕು ಬ್ಲಾಕ್‌ಗಳಲ್ಲಿ ನೆಡುತೋಪು ಮಾಡಿ ವಿವಿಧ ಕಾಡು ಜಾತಿಯ ಸಸಿಗಳನ್ನು ನೆಟ್ಟು ಪೋಷಿಸುವ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts