More

    ಕಳಪೆ ಬೀಜ-ಗೊಬ್ಬರ ವಿತರಿಸಿದರೆ ಕ್ರಮ

    ಮೊಳಕಾಲ್ಮೂರು: ಬ್ರಾೃಂಡೆಡ್ ಕಂಪನಿ ಹೆಸರಿನಡಿ ಕಳಪೆ ಬಿತ್ತನೆ ಬೀಜ, ಗೊಬ್ಬರ ಮಾರಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಡಾ.ಸದಾಶಿವ ಕೃಷಿ ಪರಿಕರ ಮಾರಾಟಗಾರರಿಗೆ ಎಚ್ಚರಿಕೆ ನೀಡಿದರು.

    ಪಟ್ಟಣದ ಕೃಷಿ ಇಲಾಖೆ ಸಭಾಂಗಣದಲ್ಲಿ ಶುಕ್ರವಾರ ಕೃಷಿ ಪರಿಕರಗಳ ಮಾರಾಟಗಾರರಿಗೆ ದಾಖಲಾತಿ ನಿರ್ವಹಣೆ ಹಾಗೂ ಸುರಕ್ಷಿತ ಕೀಟನಾಶಕಗಳ ಕುರಿತು ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ರೈತ ದೇಶದ ಬೆನ್ನೆಲುಬು. ಆತನ ಹಿತ ಕಾಯುವ ಕೆಲಸ ಮಾಡಬೇಕು. ಜಿಲ್ಲೆಯ 345 ರಸಗೊಬ್ಬರ ಅಂಗಡಿಗಳ ಮಾಲೀಕರು, ವಿವಿಧ ಕಂಪನಿಗಳಿಂದ ಬರುವ ಕೃಷಿ ಪರಿಕರಗಳ ಗುಣಮಟ್ಟ ಖಾತರಿಪಡಿಸಿಕೊಳ್ಳಬೇಕು. ಅಂಗಡಿ ಮುಂದೆ ಮಾರಾಟ ದರ ಪಟ್ಟಿ ಹಾಕಬೇಕು. ರೈತರು ಖರೀದಿಸುವ ಬೀಜ, ಗೊಬ್ಬರ ಮತ್ತು ಕೀಟನಾಶಕಗಳಿಗೆ ಪಿಒಎಸ್ ಆನ್‌ಲೈನ್ ಎಂಟ್ರಿ ಜತೆಗೆ ರೈತರ ಹೆಸರು, ಸಹಿಯೊಂದಿಗೆ ರಸೀದಿ ನೀಡಬೇಕು. ವಿತರಿಸಿದ ಕಂಪನಿಯ ಬಿತ್ತನೆ ಬೀಜ, ಪರಿಕರ ಕಳಪೆ ಎಂದು ಕಂಡುಬಂದಲ್ಲಿ ಅಂತಹ ಕಂಪನಿಯಿಂದ ನಷ್ಟ ವಸೂಲಿ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.

    ಸಹಾಯಕ ಕೃಷಿ ನಿರ್ದೇಶಕ ಡಾ.ಜೆ.ಅಶೋಕ್ ಮಾತನಾಡಿ, ತಾಲೂಕಿನಲ್ಲಿ 32 ಸಾವಿರ ಹೆಕ್ಟೇರ್ ಮಳೆಯಾಶ್ರಿತ ಭೂಮಿ ಇದೆ. ಈ ಪೈಕಿ 26,500 ಹೆಕ್ಟೇರ್‌ನಲ್ಲಿ ಶೇಂಗಾ ಬಿತ್ತನೆ ಮಾಡುವ ವಾಡಿಕೆ ಇದೆ. ರೈತರು ಒಂದೆರಡು ಮಳೆ ಆದ ಕೂಡಲೇ ಬಿತ್ತನೆಗೆ ಮುಂದಾಗುವ ಮೊದಲು ಕೃಷಿ ಇಲಾಖೆ ಮಾರ್ಗಸೂಚಿ ಅನುಸರಿಸಬೇಕು. ಏಕ ಬೆಳೆ ಬೆಳೆಯುವ ಬದಲು ಶೇಂಗಾ ಇನ್ನಿತರ ಬೆಳೆಯ ಮಧ್ಯೆ ಅಕ್ಕಡಿ ಕಾಳು ಬಿತ್ತನೆ ಮಾಡಿದರೆ ಕೀಟಬಾಧೆ ತಡೆಯಬಹುದು ಎಂದು ಸಲಹೆ ನೀಡಿದರು.

    ಜಾಗೃತ ದಳದ ಸಹಾಯಕ ಕೃಷಿ ನಿರ್ದೇಶಕ ಡಾ.ಕೆ.ಸಿ.ಪ್ರಸನ್ನಕುಮಾರ್, ಸರ್ಕಾರ ಮತ್ತು ಇಲಾಖೆ ಮಾರ್ಗಸೂಚಿ ನಿಬಂಧನೆಗಳ ಕುರಿತು ತರಬೇತಿ ನೀಡಿದರು.

    ಚಳ್ಳಕೆರೆ ಉಪ ನಿರ್ದೇಶಕ ಡಾ.ಪ್ರಭಾಕರ, ಕೃಷಿ ಅಧಿಕಾರಿಗಳಾದ ಹೇಮಂತ್, ರಂಗಸ್ವಾಮಿ, ರಾಜಣ್ಣ, ನಿರಂಜನಮೂರ್ತಿ, ನಾಗರಾಜ್ ಇತರರಿದ್ದರು.

    ಕೃಷಿ ಅಧಿಕಾರಿ ಡಾ.ಅಶೋಕ್ ಹೇಳಿಕೆ: ತಾಲೂಕಿನ ಶೇಂಗಾ ಬೆಳೆಗಾರರಿಗೆ ಸ್ಪಂದಿಸಲು 9,500 ಕ್ವಿಂಟಾಲ್ ಶೇಂಗಾಕ್ಕೆ ಬೇಡಿಕೆ ಸಲ್ಲಿಸಲಾಗಿದೆ. ಈಗಾಗಲೆ 2 ಸಾವಿರ ಕ್ವಿಂಟಾಲ್ ಕಾಯಿ ಬಂದಿದ್ದು, ಮೊಳಕಾಲ್ಮೂರು ಮತ್ತು ರಾಂಪುರ ಗೋದಾಮಿನಲ್ಲಿ ಸಂಗ್ರಹಿಸಲಾಗಿದೆ. ಜೂನ್ ಮೊದಲ ವಾರದಿಂದ ವಿತರಣೆ ಮಾಡಲಾಗುವುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts