More

    ಸ್ನಾನ ಮಾಡಂಗಿಲ್ಲ, ಚಪ್ಪಲಿ ಹಾಕುವಂತಿಲ್ಲ

    ಮೊಳಕಾಲ್ಮೂರು: ಕರೊನಾ ಮಹಾಮಾರಿಯಿಂದ ಪಾರಾಗಲು ತಾಲೂಕಿನ ರಾಯಾಪುರ ಮ್ಯಾಸರಹಟ್ಟಿ ಗ್ರಾಮಸ್ಥರು ಮೂರು ದಿನಗಳ ಕಾಲ ಊರಿಗೆ ದಿಗ್ಬಂಧನ ಹಾಕಿದ್ದಾರೆ.

    ಕೂಡ್ಲಿಗಿ ತಾಲೂಕಿನ ಪೂಜಾರಹಳ್ಳಿಯಿಂದ ಗುರುವಾರ ಬಸವಣ್ಣ ದೇವರನ್ನು ಕರೆತಂದ ಗ್ರಾಮಸ್ಥರು ಗ್ರಾಮದೇವತೆ ಮಹೇಶ್ವರಿ ದೇವಿ ಸಮ್ಮುಖದಲ್ಲಿ ವಿಶೇಷ ಪೂಜೆ ಸಲ್ಲಿಸಿ ಅಂದು ಮಧ್ಯಾಹ್ನ ರಾತ್ರಿಯಿಂದಲೇ ದಿಗ್ಬಂಧನ ವಿಧಿಸಿದ್ದಾರೆ.

    ಗ್ರಾಮದಲ್ಲಿ 150 ಕುಟುಂಬಗಳ 1200ಕ್ಕೂ ಹೆಚ್ಚು ಜನರಿದ್ದಾರೆ. ಮಹಾಮಾರಿಯಿಂದ ಪಾರಾಗಲು ದೇವರ ಮೊರೆ ಹೋಗಿರುವ ಗ್ರಾಮಸ್ಥರು ಪೂರ್ವಿಕರ ಪದ್ಧತಿಯಂತೆ ಗ್ರಾಮದ ಸುತ್ತ ಅನ್ನದಿಂದ ಚರಗ ಚೆಲ್ಲಿ ಮುಳ್ಳಿನ ಬೇಲಿ ಹಾಕಿದ್ದಾರೆ.

    ಮೂರು ದಿನ ಗ್ರಾಮದೊಳಗೆ ಅನ್ಯರಿಗೆ ಪ್ರವೇಶ ಇಲ್ಲ. ಊರಿನವರ‌್ಯಾರು ಕಾಲಿಗೆ ಚಪ್ಪಲಿ ತೊಡುವಂತಿಲ್ಲ. ಮನೆಯಿಂದ ಹೊರಗಡೆ ಕೂತು ಊಟ ಮಾಡುವಂತಿಲ್ಲ. ಸ್ನಾನ ಇಲ್ಲ, ತಲೆ ಬಾಚುವಂತಿಲ್ಲ. ಹೊರಗಡೆಯಿಂದ ದವಸ, ಧಾನ್ಯ ತರುವಂತಿಲ್ಲ. ಬಟ್ಟೆಯಿಂದ ಮನೆಯಲ್ಲಿನ ಕಸ ಗುಡಿಸಬೇಕು. ಒಂದು ವೇಳೆ ತುರ್ತು ಕಾರ್ಯದ ನಿಮಿತ್ತ ಗ್ರಾಮಸ್ಥರೇ ಬೇಲಿ ದಾಟಿದರೆ ಪುನಃ ಊರಿಗೆ ಬರುವಂತಿಲ್ಲ.

    ಇದರಿಂದ ಮನುಷ್ಯ ಮತ್ತು ಜಾನುವಾರುಗಳ ಜೀವಕ್ಕೆ ಕುತ್ತು ತರುವ ರೋಗಗಳು ದೂರಾಗುತ್ತವೆ ಎಂಬ ನಂಬಿಕೆ ಗ್ರಾಮಸ್ಥರದ್ದು. ಭಾನುವಾರ ಬೆಳಗ್ಗೆ ಮೂರು ದಿನಗಳ ಅವಧಿ ಪೂರ್ಣಗೊಂಡ ನಂತರ ವಿಧಿಸಿರುವ ನಿಯಮಗಳನ್ನು ಸಡಿಲಗೊಳಿಸಲಾಗುವುದು.

    ಕರೊನಾ ನಾಶವಾಗುವ ತನಕ ಮುಳ್ಳಿನ ಬೇಲಿ ಮಾತ್ರ ಹಾಗೆ ಇರುತ್ತದೆ. ಇದು ನಮ್ಮ ತಾತ, ಮುತ್ತಾತನ ಕಾಲದಿಂದ ನಡೆದುಕೊಂಡು ಬಂದಿರುವ ನಂಬಿಕೆಯಾಗಿದೆ ಎನ್ನುತ್ತಾರೆ ಗ್ರಾಮಸ್ಥರು.

    ನಾವು ಚಿಕ್ಕಿವರಿದ್ದಾಗ ಗ್ರಾಮದಲ್ಲಿ ಮಾರಕ ರೋಗಗಳು ಕಾಣಿಸಿಕೊಂಡರೆ ಊರಿನ ಸುತ್ತಲು ಮುಳ್ಳಿನ ಬೇಲಿ ಹಾಕುವ ಪದ್ಧತಿ ಇತ್ತು. ಆದ್ದರಿಂದ ಶುಕ್ರವಾರ ಬೆಳಗ್ಗೆ ತುರ್ತು ಕೆಲಸ ಎಂದು ಬೇಲಿ ದಾಟಿ ಹೊರಗೆ ಬಂದಿರುವ ಕಾರಣ ಎರಡು ದಿನ ಹೊಲದಲ್ಲೇ ಹಗಲು ರಾತ್ರಿ ಕಾಲ ಕಳೆಯುತ್ತಿದ್ದೇವೆ. ನಮ್ಮೂರಿಗೆ ಕರೊನಾ ಇತ್ಯಾದಿ ಮಾರಕ ರೋಗಗಳು ನುಸುಳಲು ಆಸ್ಪದ ಕೊಡಲ್ಲ ಎನ್ನುತ್ತಾರೆ ಗ್ರಾಮದ ಓಬನಾಯಕ, ಸಿದ್ದಮಲ್ಲಯ್ಯ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts