More

    ತೆಲಂಗಾಣ ಚುನಾವಣೆ: ಮೊಹಮ್ಮದ್​ ಅಜರುದ್ದೀನ್​ ಸೇರಿ 45 ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್​

    ಹೈದರಾಬಾದ್​: ಮುಂದಿನ ತಿಂಗಳು ನಡೆಯಲಿರುವ ತೆಲಂಗಾಣ ವಿಧಾನಸಭಾ ಚುನಾವಣೆಗೆ 45 ಅಭ್ಯರ್ಥಿಗಳನ್ನು ಒಳಗೊಂಡ ಎರಡನೇ ಪಟ್ಟಿಯನ್ನು ಕಾಂಗ್ರೆಸ್​ ಇಂದು (ಅ.27) ಬಿಡುಗಡೆ ಮಾಡಿದೆ. ಗಮನಾರ್ಹ ಸಂಗತಿ ಏನೆಂದರೆ, ಟೀಮ್​ ಇಂಡಿಯಾದ ಮಾಜಿ ನಾಯಕ ಮೊಹಮ್ಮದ್​ ಅಜರುದ್ದೀನ್​ ಅವರಿಗೆ ಹೈದರಾಬಾದ್​ನ ಜುಬಿಲಿ ಹಿಲ್ಸ್​ ಕ್ಷೇತ್ರದಿಂದ ಟಿಕೆಟ್​ ನೀಡಲಾಗಿದೆ.

    ಪಕ್ಷದ ಮಾಜಿ ಸಂಸದ ಮಧು ಗೌಡ್​ ಯಾಕ್ಸಿ ಅವರಿಗೆ ಲಾಲ್​ ಬಹದೂರ್​ ನಗರ, ಪೊನ್ನಮ್​ ಪ್ರಭಾಕರ್​ಗೆ ಹುಸನಾಬಾದ್, ಕಂಡಿ ಶ್ರೀನಿವಾಸ್​ ರೆಡ್ಡಿಗೆ ಆದಿಲಬಾದ್​, ತುಮ್ಲ ನಾಗೇಶ್ವರ್​ ರಾವ್​ಗೆ ಖಮ್ಮಮ್​ ಮತ್ತು ಕೆ. ರಾಜ್​ ಗೋಪಾಲ್​ ರೆಡ್ಡಿಗೆ ಮುನುಗೋಡ್​ ಕ್ಷೇತ್ರದಿಂದ ಕಾಂಗ್ರೆಸ್​ ಟಿಕೆಟ್​ ನೀಡಿದೆ.

    ಎರಡನೇ ಪಟ್ಟಿಯೊಂದಿಗೆ ಪಕ್ಷವು ಒಟ್ಟು 100 ಅಭ್ಯರ್ಥಿಗಳ ಹೆಸರನ್ನು ತೆಲಂಗಾಣ ಚುನಾವಣೆಗೆ ಘೋಷಣೆ ಮಾಡಿದೆ. ರಾಜ್ಯವು ಒಟ್ಟು 119 ಸ್ಥಾನಗಳನ್ನು ಹೊಂದಿದೆ. ಅ.15ರಂದು ಕಾಂಗ್ರೆಸ್​ 55 ಅಭ್ಯರ್ಥಿಗಳನ್ನು ಒಳಗೊಂಡ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿತು. ಕುತೂಹಲಕಾರಿ ಸಂಗತಿ ಏನೆಂದರೆ, ರಾಜ್ ಗೋಪಾಲ್ ರೆಡ್ಡಿ ಕಾಂಗ್ರೆಸ್‌ಗೆ ಮರಳಿದ್ದಾರೆ. ಬಿಜೆಪಿಗೆ ಸೇರಲು ಪಕ್ಷವನ್ನು ತೊರೆದ ಒಂದು ವರ್ಷದ ನಂತರ ಮತ್ತೆ ಕಾಂಗ್ರೆಸ್​ ಪಕ್ಷ ಸೇರಿಕೊಂಡಿದ್ದಾರೆ.

    ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ನಡೆದ ಪಕ್ಷದ ಕೇಂದ್ರ ಚುನಾವಣಾ ಸಮಿತಿಯ ಮಹತ್ವದ ಸಭೆಯಲ್ಲಿ ಕಾಂಗ್ರೆಸ್ ನಾಯಕತ್ವವು ತೆಲಂಗಾಣ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಚರ್ಚಿಸಿ ಅಂತಿಮಗೊಳಿಸಿದೆ. ಈ ಸಭೆಯಲ್ಲಿ ಪಕ್ಷದೆ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ಸಮಿತಿ ಸದಸ್ಯರು, ತೆಲಂಗಾಣದ ಪ್ರಮುಖ ನಾಯಕರುಗಳು ಉಪಸ್ಥಿತರಿದ್ದರು.

    ಅಂದಹಾಗೆ ನವೆಂಬರ್​ 3ರಂದು ನೋಟಿಫಿಕೆಶನ್​ ಹೊರಡಿಸುವ ಮೂಲಕ ತೆಲಂಗಾಣ ವಿಧಾನಸಭಾ ಚುನಾವಣಾ ಪ್ರಕ್ರಿಯೆ ಆರಂಭವಾಗಲಿದೆ. ನವೆಂಬರ್​ 30ರಂದು ಮತದಾನ ನಡೆಯಲಿದ್ದು, ಡಿಸೆಂಬರ್​ 3ಕ್ಕೆ ಫಲಿತಾಂಶ ಹೊರಬೀಳಲಿದೆ. (ಏಜೆನ್ಸೀಸ್​)

    ಮಧ್ಯಪ್ರದೇಶದಲ್ಲಿ ಕತ್ತೆ ಮೇಲೆ ಬಂದು ನಾಮಪತ್ರ ಸಲ್ಲಿಸಿದ ಅಭ್ಯರ್ಥಿ: ಕಾರಣ ಕೇಳಿದ್ರೆ ಬೆರಗಾಗ್ತೀರಾ!

    ಇನ್​ಫೊಸಿಸ್​ ನಾರಾಯಣಮೂರ್ತಿ ಅವರ ಆ ಮಾತು ‘ವಾರಕ್ಕೆ 70 ಗಂಟೆಗಳ ಕೆಲಸದ ನಡುವೆ’ ಕಳೆದುಹೋಯ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts