More

    ರಾಜ್ಯ ನಾಯಕರನ್ನು ಸಂಕಷ್ಟಕ್ಕೆ ದೂಡಿದ್ರಾ ಮೋದಿ? ಸ್ವಸಾಮರ್ಥ್ಯದಿಂದ ಗೆಲ್ಲಲು ಪ್ರಯತ್ನಿಸಿ ಎಂದ ಪ್ರಧಾನಿ!

    ನವದೆಹಲಿ: ಇದೀಗ ರಾಜ್ಯದಲ್ಲಿ ಚುನಾವಣಾ ಕಾವು ದಿನದಿಂದ ದಿನಕ್ಕೆ ಏರುತ್ತಿದ್ದು ಪ್ರಧಾನಿ ಮೋದಿ ನೀಡಿದ ಹೇಳಿಕೆ, ರಾಜ್ಯ ನಾಯಕರನ್ನು ಸಂಕಷ್ಟಕ್ಕೆ ದೂಡಿದ ಎಂದೇ ಹೇಳಲಾಗುತ್ತಿದೆ. ಮೋದಿ, ಸ್ವಸಾಮರ್ಥ್ಯದಿಂದ ಚುನಾವಣೆ ಗೆಲ್ಲಲು ಪ್ರಯತ್ನಿಸಿ ಎಂದಿದ್ದು ರಾಜ್ಯ ನಾಯಕರಿಗೆ ಚುನಾವಣೆ ಗೆಲ್ಲಲು ಹೈಕಮಾಂಡ್​ನಿಂದ ಯಾವುದೇ ರೀತಿಯ ಸಹಾಯ ಸಿಗುವುದಿಲ್ಲವೇ ಎಂಬ ಪ್ರಶ್ನೆ ಎದುರಾಗಿದೆ.

    ಮೋದಿ, ಹೈಕಮಾಂಡ್ ಅವಲಂಬನೆ ಕಡಿಮೆ ಮಾಡಲು ಸೂಚಿಸಿದ್ದು ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಮೋದಿ ಖಡಕ್ ಸೂಚನೆ ನೀಡಿದ್ದಾರೆ. ಮೋದಿ ಭಾಷಣದ ಬೆನ್ನಲ್ಲೆ ರಾಜ್ಯ ಬಿಜೆಪಿ ನಾಯಕರಲ್ಲಿ ತಳಮಳ ಶುರುವಾಗಿದ್ದು ರಾಜ್ಯದಲ್ಲಿ ಪಕ್ಷ ಮತ್ತು ಸರ್ಕಾರದ ನಡುವೆ ತಾಳಮೇಳ ಇಲ್ಲದ್ದೇ ದೊಡ್ಡ ಸಮಸ್ಯೆಯಾಗಿದೆ.

    ಮುನಿದು ಕುಳಿತಿರೋ ಹಿರಿಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾದ್ದು ಬಿಜೆಪಿಗೆ ಇನ್ನೊಂದು ಸಮಸ್ಯೆಯಾಗಿದೆ. ಯಡಿಯೂರಪ್ಪ, ಈಶ್ವರಪ್ಪ, ರಮೇಶ್ ಜಾರಕಿಹೊಳಿ ಮತ್ತಿತರು ಮೌನ ತಾಳಿದ್ದು ಇದು ಮಾರಕವಾಗಲಿದೆ ಎನ್ನಲಾಗುತ್ತಿದೆ.

    ಈಗ ಬಿಗಡಾಯಿಸುತ್ತಿರುವ ಮೀಸಲಾತಿ ಕಗ್ಗಂಟು ಕೂಡ ಚುನಾವಣೆಯಲ್ಲಿ ಹೊಡೆತ ಕೊಡಲಿದೆಯಾ ಎಂಬ ಪ್ರಶ್ನೆಯೂ ಎದುರಗಿದ್ದು ಎಲ್ಲಾ ಸಮುದಾಯಗಳನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವುದೇ ಬಿಜೆಪಿಗೆ ಸದ್ಯದ ಸವಾಲಾಗಿದೆ. ಸಾಂಪ್ರದಾಯಿಕ ಲಿಂಗಾಯತ ಮತಗಳೇ ಮುನಿದಿರುವುದು ಬಿಜೆಪಿಗೆ ಆತಂಕ ತಂದಿರಿಸಿದ್ದು ನಿರಾಣಿ-ಯತ್ನಾಳ್ ಹಾದಿ ರಂಪ ಬಿಜೆಪಿಯನ್ನು ಬೀದಿಗೆ ತರುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ.

    ಅಭಿವೃದ್ಧಿ ಕೆಲಸಗಳನ್ನೇ ಹೇಳಿಕೊಂಡು ಚುನಾವಣೆಗೆ ಹೋಗಬೇಕಾದ ಅನಿವಾರ್ಯ ಸೃಷ್ಟಿಯಾಗುತ್ತಿದ್ದು ಚುನಾವಣೆ ಹೊಸ್ತಿಲಲ್ಲಿ ಹೈಕಮಾಂಡ್ ಆಸರೆ ಇಲ್ಲದೆ ರಾಜ್ಯ ಬಿಜೆಪಿ ನಾಯಕರು ಕಷ್ಟ ಅನುಭವಿಸುತ್ತಿದ್ದಾರೆ. ಮೋ-ಷಾ ಅವರನ್ನೇ ನಂಬಿ ಕುಳಿತಿದ್ದವರಿಗೆ ಮೋದಿ ಮಾತಿನಿಂದ ಈಗ ಆತಂಕ ಶುರುವಾಗಿದೆ.

    ಈಗ ರಾಜ್ಯ ನಾಯಕರನ್ನು ಬಡಿದೆಬ್ಬಿಸಲೆಂದೇ ಮೋದಿ ‘ಸ್ವಸಾಮರ್ಥ್ಯದ’ ಮಾತನ್ನಾಡಿದರಾ ಎಂಬ ಅನುಮಾನ ಶುರುವಾಗಿದ್ದು ಪರೋಕ್ಷವಾಗಿ ರಾಜ್ಯ ನಾಯಕರಿಗೆ ಕೂಡಲೇ ಕಾರ್ಯಪ್ರವೃತ್ತರಾಗುವಂತೆ ಮೋದಿ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts