More

    ವ್ಯಾಲೆಟ್​ ಡೌನ್‌ಲೋಡ್ ಸೋಗಲ್ಲಿ ಧೋಖಾ; ಮೊಬೈಲ್​ಫೋನ್​ ಕದ್ದು, ಬ್ಯಾಂಕ್ ಖಾತೆಗೆ ಕನ್ನ

    ಬೆಂಗಳೂರು: ಮೊಬೈಲ್​​ ವ್ಯಾಲೆಟ್​ ನೋಂದಣಿ ಮತ್ತು ಸ್ವೈಪಿಂಗ್ ಮಿಷನ್ ಉಚಿತವಾಗಿ ಕೊಡುವ ನೆಪದಲ್ಲಿ ಬಂದ ನಯವಂಚಕ, ಒಂದೇ ತಾಸಿನಲ್ಲಿ ಅಕ್ಕಪಕ್ಕದ ಅಂಗಡಿಯಲ್ಲಿ ಮಾಲೀಕರ ಮೊಬೈಲ್​ಫೋನ್​ ಕಳವು ಮಾಡಿದ್ದಾನೆ. ವ್ಯಾಲೆಟ್​ ಬಳಸಿ ಬ್ಯಾಂಕ್ ಖಾತೆಯಿಂದ 64 ಸಾವಿರ ರೂ. ಎಗರಿಸಿದ್ದಾನೆ.

    ಮೈಸೂರು ರಸ್ತೆ ಬಿಡದಿ ಸಮೀಪದ ಟೊಯೊಟಾ ಕ್ರಾಸ್‌ನಲ್ಲಿ ಫೆ.19ರಂದು ಬೈಕ್ ಶೋರೂಮ್‌ನಲ್ಲಿ 47,070 ರೂ. ಮತ್ತು ಮೊಬೈಲ್ ಹಾಗೂ ಹಾರ್ಡ್‌ವೇರ್ ಅಂಗಡಿಯಲ್ಲಿ 17,500 ರೂ. ಮತ್ತು 55 ಸಾವಿರ ರೂ. ಮೌಲ್ಯದ ಮೊಬೈಲ್ ಫೋನ್​ ಕಳವು ಮಾಡಿದ್ದಾನೆ. ಈ ಕುರಿತು ಅಂಗಡಿ ಮಾಲೀಕರು ಬಿಡದಿ ಠಾಣೆಗೆ ದೂರು ನೀಡಿದ್ದಾರೆ. ಕೇಸ್ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

    ಫೆ.18ರಂದು ಬೈಕ್ ಶೋ ರೂಮ್‌ಗೆ ಬಂದ ಅಪರಿಚಿತ, ಮೊಬೈಲ್ ವ್ಯಾಲೆಟ್​ ‘ಭಾರತ್ ಪೇ’ ಕಂಪನಿಯಿಂದ ಬಂದಿದ್ದೇನೆ. ಭಾರತ್ ಪೇ ಡೌನ್‌ಲೋಡ್ ಮಾಡಿಕೊಂಡು ನೋಂದಣಿಯಾದರೆ ಉಚಿತವಾಗಿ ಸ್ವೈಪಿಂಗ್ ಮಿಷನ್ ಕೊಡಲಾಗುತ್ತದೆ. ಜತೆಗೆ ಖಾತೆಯಲ್ಲಿ ಹಣ ಇಟ್ಟರೇ ಶೇ.12 ಬಡ್ಡಿ ಬರಲಿದೆ ಎಂದು ಪುಸಲಾಯಿಸಿದ್ದಾನೆ. ಬೈಕ್ ಶೋ ರೂಮ್ ಮಾಲೀಕ, ಈಗಾಗಲೇ ಗೂಗಲ್ ಪೇ, ಫೋನ್ ಪೇ ಬಳಸುತ್ತಿದ್ದು, ಸದ್ಯ ಯಾವುದೂ ಬೇಡವೆಂದು ಮುಂದೆ ಸಾಗಿಸಲು ಪ್ರಯತ್ನಿಸಿದ್ದಾರೆ. ಆದರೂ ಬಿಡದ ವಂಚಕನ ಮಾತು ನಂಬಿ ಅಂಗಡಿ ಮಾಲೀಕ ನೋಂದಣಿಗೆ ಸಹಕರಿಸಿದ್ದಾರೆ. ಮೊಬೈಲ್‌ಫೋನ್​ನಲ್ಲಿ ಆ್ಯಪ್ ಡೌನ್‌ಲೋಡ್ ಮಾಡಿದ್ದಾನೆ. ನಾಳೆ ಬಂದು ಪೂರ್ಣ ಮಾಡುವುದಾಗಿ ಹೇಳಿ ಹೋಗಿದ್ದಾನೆ. ಇದೇ ರೀತಿ ಹಾರ್ಡ್‌ವೇರ್ ಅಂಗಡಿ ಮಾಲೀಕನಿಗೂ ಒಪ್ಪಿಸಿದ್ದಾನೆ.

    ಇದನ್ನೂ ಓದಿ: ನಾಲಿಗೆ ಚಪಲದಿಂದಾಗಿ ಜೈಲು ಸೇರಿದ ಭೂಪರು; ಬಂಧಿತರಿಂದ ಬಂದೂಕು-ಬೈಕ್ ವಶ

    ಫೆ.19ರ ಮಧ್ಯಾಹ್ನ 12.30ಕ್ಕೆ ಹೋಂಡಾ ಆ್ಯಕ್ಟಿವಾದಲ್ಲಿ ಬಂದ ಆರೋಪಿ, ಮೊದಲು ಹಾರ್ಡ್‌ವೇರ್ ಅಂಗಡಿಗೆ ಹೋಗಿ ಆ್ಯಪ್ ನೋಂದಣಿ ಮಾಡುವ ನೆಪದಲ್ಲಿ ಮಾಲೀಕನ ಮೊಬೈಲ್​ಫೋನ್​ ಪಡೆದಿದ್ದಾನೆ. ಮಾಲೀಕನ ಪೋಟೋ ತೆಗೆದ ಮೇಲೆ ಅಂಗಡಿ ಬೋರ್ಡ್ ಪೋಟೋ ಬೇಕೆಂದು ಹೊರಗೆ ಹೋಗಿ ಅಲ್ಲಿಂದ ಸ್ಕೂಟರ್ ಏರಿ ಪರಾರಿಯಾಗಿದ್ದಾನೆ. ಮಾಲೀಕ ಎಚ್ಚೆತ್ತುಕೊಳ್ಳುವಷ್ಟರಲ್ಲಿ ನಾಪತ್ತೆಯಾಗಿದ್ದ.

    ಸ್ವಲ್ಪ ಹೊತ್ತಿಗೆ ಬೈಕ್ ಶೋ ರೂಮ್‌ಗೆ ಬಂದ ಆರೋಪಿ, ಅದೇ ರೀತಿ ಆ್ಯಪ್ ನೋಂದಣಿ ನೆಪದಲ್ಲಿ ಮಾಲೀಕನ ಮೊಬೈಲ್ ಫೋನ್​ ಪಡೆದಿದ್ದಾನೆ. ಫೋಟೋ ತೆಗೆದು ಅಪ್‌ಲೋಡ್ ಮಾಡಿ ಅಂಗಡಿ ಬೋರ್ಡ್ ಛಾಯಾ ಚಿತ್ರ ಬೇಕೆಂದು ಹೇಳಿದ್ದಾನೆ. ಅಷ್ಟರಲ್ಲಿ ಕಸ್ಟಮರ್ ಬಂದ ಎಂಬ ಕಾರಣಕ್ಕೆ ಮಾಲೀಕ ಸ್ವಲ್ಪ ಬಿಸಿ ಆಗಿದ್ದರು. ಆಗ ಆರೋಪಿ, ನಾನೇ ಫೋಟೋ ತೆಗೆಯುತ್ತೇನೆ ಎಂದು ಹೇಳಿ ಮೊಬೈಲ್ ಫೋನ್​ ಪಡೆದು ಪರಾರಿಯಾಗಿದ್ದಾನೆ. ದಿಕ್ಕು ತೋಚದೆ ಅಂಗಡಿ ಮಾಲೀಕರು ಬಿಡದಿ ಠಾಣೆಗೆ ದೂರು ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಇದನ್ನೂ ಓದಿ: ಶಿವಮೊಗ್ಗದಲ್ಲಿ ಇನ್ನೆರಡು ದಿನ ನಿಷೇಧಾಜ್ಞೆ, ಶಾಲಾ-ಕಾಲೇಜು ರಜೆ ಮುಂದುವರಿಕೆ..

    ಮೊಬೈಲ್ ಫೋನ್​ ಕದ್ದ ಮೇಲೆ ಬ್ಯಾಂಕ್ ಖಾತೆಗೆ ಕನ್ನ: ಮೊಬೈಲ್ ಫೋನ್​ ಕದ್ದ ಮೇಲೆ ಅದನ್ನೇ ಬಳಸಿಕೊಂಡು ಕೆಲವೇ ನಿಮಿಷದಲ್ಲಿ ವ್ಯಾಲೆಟ್ ಬಳಸಿ ಬ್ಯಾಂಕ್ ಖಾತೆಗೆ ಆರೋಪಿ ಕನ್ನ ಹಾಕಿದ್ದಾನೆ. ಬೈಕ್ ಶೋ ರೂಮ್ ಮಾಲೀಕನ ಖಾತೆಯಿಂದ 47,027 ರೂ. ಮತ್ತು ಹಾರ್ಡ್‌ವೇರ್ ಅಂಗಡಿ ಮಾಲೀಕನ ಖಾತೆಯಿಂದ 17,500 ರೂ. ಬೇರೊಂದು ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದಾನೆ. ಭಾರತ್ ಪೇ ವ್ಯಾಲೇಟ್ ಆ್ಯಕ್ಟಿವ್​ ಮಾಡಿದ ಮೇಲೆ ಅದರ ಮೂಲಕವೇ ತನ್ನ ಖಾತೆಗೆ ಹಣ ವರ್ಗಾವಣೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

    ಕೂಗಳತೆ ದೂರದ ಅಂಗಡಿಗಳು: ಬೈಕ್ ಶೋ ರೂಮ್ ಮತ್ತು ಹಾರ್ಡ್‌ವೇರ್ ಅಂಗಡಿಗಳು ಕೂಗಳತೆ ದೂರದಲ್ಲಿವೆ. ಹಾರ್ಡ್‌ವೇರ್ ಅಂಗಡಿ ಮಾಲೀಕನ ಮೊಬೈಲ್ ಫೋನ್​ ಕದ್ದು, ಕೆಲವೇ ನಿಮಿಷದಲ್ಲಿ ಹಣ ವರ್ಗಾವಣೆ ಮಾಡಿಕೊಡಿದ್ದಾನೆ. ಸ್ವಲ್ಪ ಹೊತ್ತಿಗೆ ಪಕ್ಕದಲ್ಲೇ ಇದ್ದ ಬೈಕ್ ಶೋ ರೂಮ್‌ಗೆ ಹೋಗಿ ಮೊಬೈಲ್ ಫೋನ್ ಕದ್ದು, ಹಣ ದೋಚಿದ್ದಾನೆ. ಮೊದಲೇ ಎಲ್ಲವನ್ನು ನಿಗಾ ವಹಿಸಿ ಆರೋಪಿ ವಂಚನೆ ಮಾಡಿದ್ದಾನೆ.

    ಮದ್ವೆಯಾದ ಹತ್ತೇ ತಿಂಗಳಲ್ಲಿ ದುರಂತ; ಪತ್ನಿಯ ಶವ ನೋಡಿ ಪತಿಯೂ ಆತ್ಮಹತ್ಯೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts