More

    ಕಾಂಗ್ರೆಸ್‌ನಲ್ಲಿ ದಲಿತ ನಾಯಕತ್ವ ದಮನ : ಎಂಎಲ್‌ಸಿ ಚಲವಾದಿ ನಾರಾಯಣಸ್ವಾಮಿ ಆರೋಪ

    ವಿಜಯಪುರ : ಕಾಂಗ್ರೆಸ್‌ನಲ್ಲಿ ದಲಿತ ನಾಯಕರಿಗೆ ನಾಯಕತ್ವ ನೀಡದೆ ಅವರನ್ನು ತುಳಿಯುವ ಕೆಲಸ ಮಾಡಲಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಚಲವಾದಿ ನಾರಾಯಣಸ್ವಾಮಿ ಆರೋಪಿಸಿದರು.


    ದಲಿತ ನಾಯಕರಿಗೆ ಮುಖ್ಯಮಂತ್ರಿಯಾಗುವ ಅವಕಾಶ ಅನೇಕ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಇತ್ತು. ಆದರೆ ಕಾಂಗ್ರೆಸ್ ದಲಿತರನ್ನು ಮುಖ್ಯಮಂತ್ರಿ ಮಾಡಲಿಲ್ಲ, ಬಿ.ಬಸವಲಿಂಗಪ್ಪ ಅವರಿಗೆ ಮುಖ್ಯಮಂತ್ರಿ ಅವಕಾಶ ತಪ್ಪಿಸಿದ್ದು ವೀರಪ್ಪ ಮೊಯ್ಲಿ, ಡಾ.ಜಿ.ಪರಮೇಶ್ವರ ಅವರಿಗೆ ಎರಡು ಬಾರಿ ರಾಜ್ಯದಲ್ಲಿ ಪಕ್ಷ ಕಟ್ಟುವ ಜವಾಬ್ದಾರಿ ನೀಡಿದರೂ ವ್ಯವಸ್ಥಿತ ಕುತಂತ್ರದಿಂದ ಅವರನ್ನು ಸೋಲಿಸಿದ್ದು ಸಿದ್ದರಾಮಯ್ಯ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


    ಪಕ್ಷ ನನ್ನ ಬದ್ಧತೆ, ಶಿಸ್ತು ಗುರುತಿಸಿ ಎಂಎಲ್‌ಸಿ ಮಾಡಿದೆ. ನಾಲ್ಕು ಬಾರಿ ರಾಜ್ಯಾದ್ಯಂತ ಪ್ರವಾಸ ಮಾಡಿದ್ದೇನೆ. ಬಿಜೆಪಿ ಸಂವಿಧಾನ ವಿರೋಧಿ, ಮೀಸಲಾತಿ ತಗೆದು ಹಾಕುತ್ತದೆ ಎನ್ನುವ ಪ್ರತಿಕ್ಷಗಳು ಜನರಲ್ಲಿ ಆತಂಕ ಸೃಷ್ಟಿಸಿವೆ. ಅವುಗಳೆಲ್ಲ ಸುಳ್ಳು. ಪ್ರಧಾನಿ ಮೋದಿ ಅವರು ಅಂಬೇಡ್ಕರ್ ವಿಚಾರ ಧಾರೆಯನ್ನು ಪಾಲಿಸುತ್ತಿದ್ದಾರೆ. ಮೀಸಲಾತಿ ತಗೆಯುವುದಿಲ್ಲ ಎಂದು ಹೇಳಿದ್ದಾರೆ ಎಂದರು.


    ಅಂಬೇಡ್ಕರ್ ಪಾದಸ್ಪರ್ಶ ಮಾಡಿದ ಸ್ಥಳಗಳಾದ ವಿಜಯಪುರ ಸೇರಿದಂತೆ ಏಳು ಜಿಲ್ಲೆಗಳಲ್ಲಿ ರಾಷ್ಟ್ರೀಯ ಸ್ಮಾರಕ ನಿರ್ಮಾಣ ಮಾಡಲು ಸರ್ಕಾರ ತೀರ್ಮಾನ ಕೈಗೊಂಡಿದೆ. ರಾಜ್ಯದಲ್ಲಿ ಕಾಂಗ್ರೆಸ್‌ನಲ್ಲಿ ಇಲ್ಲದ ಸ್ಥಾನಕ್ಕೆ ಗುದ್ದಾಟ ನಡೆದಿದೆ. ಒಂದು ಡಜನ್ ನಾಯಕರು ಮುಖ್ಯಮಂತ್ರಿ ಸ್ಥಾನಕ್ಕಾಗಿ ಕಚ್ಚಾಟ ಮಾಡುತ್ತಿದ್ದಾರೆ. ಕಾಂಗ್ರೆಸ್ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ 60-65 ಸೀಟು ಬರುವುದು ಕಷ್ಟ. ಬಿಜೆಪಿ 140-150 ಸ್ಥಾನ ಗೆಲುವು ಪಡೆಯಲಿದ್ದು, ಸ್ವತಂತ್ರವಾಗಿ ಮತ್ತೆ ಅಧಿಕಾರ ನಡೆಸಲಿದೆ ಎಂದು ತಿಳಿಸಿದರು.


    ಕಾಂಗ್ರೆಸ್ ದಲಿತರನ್ನು ಮತಬ್ಯಾಂಕ್ ಮಾಡಿಕೊಂಡಿದೆ. ಆದರೆ ಪ್ರಸಕ್ತ ದಲಿತ ಸಮುದಾಯದಲ್ಲಿ ಯುವ ಜನರು ಅವಲೋಕನ ಮಾಡುವ ಶಕ್ತಿ ಹೊಂದಿದ್ದರಿಂದ ಬಿಜೆಪಿಯತ್ತ ಬರುತ್ತಿದ್ದಾರೆ. ಕಾಂಗ್ರೆಸ್‌ನಲ್ಲಿ ವಲಸೆ ಹಾಗೂ ಮೂಲ ಕಾಂಗ್ರೆಸ್ಸಿಗರ ನಡುವೆ ಗುದ್ದಾಟ ನಡೆಯುತ್ತಿದೆ. ರಾಜ್ಯದಲ್ಲಿ ಹಿಡಿತ ಸಾಧಿಸಲು ಸಿದ್ದರಾಮೋತ್ಸವ ಮಾಡಲು ಹೊರಟಿದ್ದಾರೆ. ಆದರೆ ಅದು ಅಸಾಧ್ಯ. ರಾಜ್ಯದಲ್ಲಿ ಕಾಂಗ್ರೆಸ್ ನಾಶವಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.


    ಇಡಿ, ಸಿಬಿಐ ನಂತಹ ಸಾಂಸ್ಥಿಕ ಸಂಸ್ಥೆಗಳ ದುರುಪಯೋಗ ಪಡೆಸಿಕೊಳ್ಳಲಾಗುತ್ತಿದೆ ಎನ್ನುವ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ನಾಯಕರು ತಪ್ಪು ಮಾಡಿದರೂ ಸುಮ್ಮನೆ ಇರಬೇಕೇ ? ಯಾರೂ ಪ್ರಶ್ನಾತೀತರಲ್ಲ . ದೇಶದಲ್ಲಿ ಸ್ವಾತಂತ್ರ್ಯ ಬಂದಾಗ ಇದ್ದ ಕಾಂಗ್ರೆಸ್ ಕೇವಲ ಸಂಘಟನೆ ಹೊರತು ಪಕ್ಷ ಅಲ್ಲ. ಆ ಕಾಂಗ್ರೆಸ್ ಈಗಿಲ್ಲ. ಈಗಿರುವುದು ನಕಲಿ ಕಾಂಗ್ರೆಸ್, ಅಸಲಿ ಕಾಂಗ್ರೆಸ್ ಅಲ್ಲ. ಇಂದಿರಾಗಾಂಧಿ ಬಂದ ನಂತರ ‘ಫ್ಯಾಮಿಲಿ ಕಾಂಗ್ರೆಸ್’ ಆಯಿತು. ಕುಟುಂಬದಿಂದ ಕಾಂಗ್ರೆಸ್ ಹೊರಬರಲು ಸಾಧ್ಯ ಇಲ್ಲ ಎಂದರು.


    ಬಿಜೆಪಿಯಲ್ಲಿ ಹೇಳಿ ಮಾಡುವ ಸಂಸ್ಕೃತಿ ಇಲ್ಲ. ರಾಜ್ಯದಲ್ಲಿಯೂ ದಲಿತ ಸಿಎಂ ಆಗಬಹುದು. ಅದರಲ್ಲಿ ಯಾವುದೇ ಅಚ್ಚರಿ ಇಲ್ಲ. ಸಚಿವ ಗೋವಿಂದ ಕಾರಜೋಳ ಹಿರಿಯರಿದ್ದಾರೆ. ಅವರಿಗೆ ಕೊಟ್ಟರೆ ಯಾವುದೇ ಸಮಸ್ಯೆ ಇಲ್ಲ. ರಾಜ್ಯದಲ್ಲಿ ವಿಧಾನಸಭೆ ಚುನಾವಣೆಯಲ್ಲಿ 36 ಸ್ಥಾನಗಳಿಗೆ ಪರಿಶಿಷ್ಟರಿಗೆ ಮೀಸಲು ಇದೆ. ಅದನ್ನೂ ಮೀರಿ ಗೆಲ್ಲುವ ಅವಕಾಶ ಇರುವ ಕಡೆಗಳಲ್ಲಿ ಟಿಕೆಟ್ ನೀಡಲಾಗುತ್ತದೆ ಎಂದರು.


    ಇನ್ನೂ ಬಿ.ಎಸ್.ಯಡಿಯೂರಪ್ಪ ಅವರು ಚುನಾವಣೆಗೆ ನಿಲ್ಲಲ್ಲ ಹೇಳಿಕೆ ನೀಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಚುನಾವಣಗೆಗೆ ಸ್ಪರ್ಧಿಸುವುದಿಲ್ಲ ಎಂದಿದ್ದಾರೆ ಹೊರತು ಪಕ್ಷ ಬಿಡುತ್ತೇನೆ ಎಂದಿಲ್ಲ. ಬಿಜೆಪಿ ಎಂದರೆ ಬಿಎಸ್‌ವೈ ಎಂದರು.


    ರಾಜ್ಯ ಸಾವಯವ ಬೀಜ ಪ್ರಮಾಣನ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ, ಪಾಲಿಕೆ ಮಾಜಿ ಉಪ ಮೇಯರ್ ಗೋಪಾಲ ಘಟಕಾಂಬಳೆ, ಶಿವರುದ್ರ ಬಾಗಲಕೋಟ, ಮಲ್ಲಿಕಾರ್ಜುನ ಜೋಗೂರ, ಶಿವಪುತ್ರಪ್ಪ ನಾಟೀಕಾರ, ವಿಜಯ ಜೋಶಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts