More

    ಗ್ರಾಮಾಭಿವೃದ್ಧಿಗಾಗಿ ರಾಷ್ಟ್ರೀಯ ಚಿಂತನೆಯ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸಿ, ಶಾಸಕ ಡಾ.ಭರತ್ ಶೆಟ್ಟಿ ವೈ

    ಸುರತ್ಕಲ್: ದೇಶದ ಅಭಿವೃದ್ಧಿಯಲ್ಲಿ ಬೇರುಗಳಂತೆ ಪಸರಿಸಿರುವ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿಗಾಗಿ ರಾಷ್ಟ್ರೀಯ ಚಿಂತನೆಯುಳ್ಳ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ದೇಶವನ್ನು ಇನ್ನಷ್ಟು ಸದೃಢಗೊಳಿಸಬೇಕು ಎಂದು ಮಂಗಳೂರು ನಗರ ಉತ್ತರ ಕ್ಷೇತ್ರ ಶಾಸಕ ಡಾ.ಭರತ್ ಶೆಟ್ಟಿ ವೈ ಹೇಳಿದರು.

    ದೆಹಲಿಯಿಂದ ಗ್ರಾಮದವರೆಗೆ ಸರ್ಕಾರದ ಸೌಲಭ್ಯವನ್ನು ಮನೆಮನೆಗೆ ತಲುಪಿಸಲು ಒಂದೇ ಚಿಂತನೆಯುಳ್ಳ ಅಭ್ಯರ್ಥಿಗಳು ಆರಿಸಿ ಬಂದಾಗ ಯಾವುದೇ ಅಡತಡೆಯಿಲ್ಲದೆ ಗ್ರಾಮವನ್ನು ಮತ್ತಷ್ಟು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲು ಸಾಧ್ಯ. ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಹೆಚ್ಚಿನ ಅನುದಾನ ತಂದು ಕೆಲಸ ಮಾಡಲು ಸಾಧ್ಯವಿದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಕೇಂದ್ರದ ನರೇಂದ್ರ ಮೋದಿ ಸರ್ಕಾರ ಒದಗಿಸಿದ ಅನುದಾನ ಮತ್ತು ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಸಹಕಾರದಲ್ಲಿ ಮಂಗಳೂರು ಉತ್ತರ ಕ್ಷೇತ್ರದಲ್ಲಿ ನಿರಂತರ ಅಭಿವೃದ್ಧಿ ಕೆಲಸಗಳು ನಡೆದಿವೆ. ಶಾಸಕನಾದ ಬಳಿಕ ಶಾಂತಿ ಸುವ್ಯವಸ್ಥೆ ಕಾಪಾಡಿ ಯಾವುದೇ ಅಹಿತಕರ ವಾತಾವರಣ ಸೃಷ್ಟಿಯಾಗದಂತೆ ನೋಡಿಕೊಂಡಿದ್ದೇನೆ. ಮುಂದೆಯೂ ಅಭಿವೃದ್ಧಿ, ಶಾಂತಿಯುತ ವಾತಾವರಣ ಇರುವಂತೆ ನೋಡಿಕೊಳ್ಳಬೇಕಿದೆ. ಇದಕ್ಕೆ ಮತದಾರರ ಆಶೀರ್ವಾದ ಅಗತ್ಯ. ಪ್ರಜ್ಞಾವಂತ ಮತದಾರರು ಇದನ್ನು ಅರಿತಿದ್ದು ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಕೃಷಿಕರಿಗೆ ಸೌಲಭ್ಯ: ಕೃಷಿ ಲಾಭದಾಯಕ ಕ್ಷೇತ್ರವಾದಾಗ ಗ್ರಾಮೀಣ ಪ್ರದೇಶದಿಂದ ನಗರ ಪ್ರದೇಶಗಳಿಗೆ ವಲಸೆ ಬರುವುದು ನಿಲ್ಲುತ್ತದೆ. ನಮ್ಮಲ್ಲಿ ಹಲವರು ಐಟಿ, ಬಿಟಿ ಕ್ಷೇತ್ರ ಬಿಟ್ಟು ಕೃಷಿಯತ್ತ ಮರಳಿದ್ದಾರೆ. ಕೃಷಿಯಿಂದ ಉತ್ತಮ ಆದಾಯವನ್ನೂ ಪಡೆಯುತ್ತಿದ್ದಾರೆ. ಇವರ ಯಶಸ್ಸಿನ ಸೂತ್ರವನ್ನು ನಮ್ಮ ರೈತಾಪಿ ಜನರಿಗೆ ತಲುಪಿಸಬೇಕು. ಅವರಲ್ಲಿ ಹೊಸ ಹುಮ್ಮಸ್ಸು ತುಂಬಬೇಕು ಎಂಬ ನಿಟ್ಟಿನಲ್ಲಿ ಕೃಷಿ ಇಲಾಖೆಯಿಂದ ವಿವಿಧ ಸೌಲಭ್ಯ ರೈತರಿಗೆ ಮುಟ್ಟಿಸಲಾಗುತ್ತಿದೆ ಎಂದರು. ಬಿಜೆಪಿ ಮಂಗಳೂರು ಉತ್ತರ ಮಂಡಲ ಅಧ್ಯಕ್ಷ ತಿಲಕ್‌ರಾಜ್ ಕೃಷ್ಣಾಪುರ, ಪ್ರಧಾನ ಕಾರ್ಯದರ್ಶಿ ರಾಜೇಶ್ ಕೊಠಾರಿ, ಜಿಪಂ ಸದಸ್ಯ ಜನಾರ್ದನ ಗೌಡ, ತಾಪಂ ಸದಸ್ಯರಾದ ನಾಗೇಶ್ ಶೆಟ್ಟಿ, ವಿಶ್ವನಾಥ್ ಶೆಟ್ಟಿ, ತಾಲೂಕು ಟ್ರಿಬ್ಯುನಲ್ ಸದಸ್ಯ ಸಂದೀಪ್ ಸುದ್ದಿಗೋಷ್ಠಿಯಲ್ಲಿದ್ದರು.

    ಕಲ್ಯಾಣ ರಾಜ್ಯದ ಪರಿಕಲ್ಪನೆ: 2021ನೇ ವರ್ಷಕ್ಕೆ ಕಾಲಿಡುವ ಈ ಸಂದರ್ಭ ಮಂಗಳೂರು ಉತ್ತರ ಕ್ಷೇತ್ರದ ಎಲ್ಲ ಪ್ರದೇಶಗಳ, ವರ್ಗಗಳ ಜನರ ಸಮಾನ ಅಭಿವೃದ್ಧಿ ಆಗಬೇಕು ಎಂಬುದು ನನ್ನ ಕನಸು. ನೈಜ ಕಲ್ಯಾಣ ರಾಜ್ಯದ ಪರಿಕಲ್ಪನೆ ನನ್ನದಾಗಿದೆ. ಪಟ್ಟಣದಂತೆ ಇದುವರೆಗೆ ಏಕರೂಪದ ಪ್ರಗತಿ ಕಂಡಿಲ್ಲ ಎನ್ನುವುದು ನಿಜ. ನಾನು 2018ರಲ್ಲಿ ಶಾಸಕನಾಗಿ ಆಯ್ಕೆಯಾದ ಬಳಿಕ ಇತರ ಮುಂದುವರಿದ ಪ್ರದೇಶಗಳ ಜತೆ ನನ್ನ ಕ್ಷೇತ್ರಗಳಲ್ಲೂ ಸಮಾನ ಹೆಜ್ಜೆ ಇಡುವ ಸ್ಥಿತಿ ನಿರ್ಮಾಣ ಮಾಡಿದ್ದೇನೆ. ಇದಕ್ಕಾಗಿ ಮೂಲಸೌಕರ್ಯ, ಕೈಗಾರಿಕೆ, ಉದ್ಯೋಗ, ನೀರಾವರಿ ಮತ್ತು ಕೃಷಿ ಕ್ಷೇತ್ರಕ್ಕೆ ಆದ್ಯತೆ ಸಿಗುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದಿಂದ 500 ಕೋಟಿ ರೂ. ಅಧಿಕ ಅನುದಾನ ತಂದಿದ್ದೇನೆ. ಕೇಂದ್ರದ ಉಜ್ವಲ ಗ್ಯಾಸ್ ವಿತರಣೆ, ಮುದ್ರಾ, ಗ್ರಾಮ ಸಡಕ್ ಸಹಿತ ಹಲವು ಸೌಲಭ್ಯ ದೊರಕಿಸಿಕೊಟ್ಟಿದ್ದೇನೆ ಎಂದು ಡಾ.ಭರತ್ ಶೆಟ್ಟಿ ಹೇಳಿದರು.

    ಸಮಗ್ರ ಅಭಿವೃದ್ಧಿಯ ಧ್ಯೇಯ: ಗ್ರಾಮಾಂತರ ಅಭಿವೃದ್ಧಿಗೆ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಅನುದಾನ ತರುವಲ್ಲಿ ನಾನು ಯಶಸ್ವಿಯಾಗಿದ್ದು ಸಮಗ್ರ ಅಭಿವೃದ್ಧಿ ನನ್ನ ಧ್ಯೇಯ. ಮೂಲಸೌಕರ್ಯದಿಂದ ಹಿಡಿದು ರೈತರ ಹಿತ ಕಾಯುವ ಎಲ್ಲ ಯೋಜನೆಗಳನ್ನೂ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲು ಹಂತಹಂತವಾಗಿ ಯೋಜನೆ ರೂಪಿಸಿದೆ ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ತಿಳಿಸಿದರು. ದಶಕಗಳಿಂದ ಬರಕ್ಕೆ ತುತ್ತಾಗಿರುವ ವಿವಿಧ ಗ್ರಾಮಕ್ಕೆ ಜೀವಜಲ ತರುವ ನಿಟ್ಟಿನಲ್ಲಿ ಜಲಸಿರಿ ಯೋಜನೆ ಅತ್ಯಂತ ಮಹತ್ವದ ಪಾತ್ರ ವಹಿಸಿದೆ. ತುಂಬೆಯಿಂದ ನೇರವಾಗಿ ನೀರು ಪಂಪ್ ಮಾಡಿ 11 ಬೃಹತ್ ಸಂಗ್ರಹ ಟ್ಯಾಂಕ್ ನಿರ್ಮಿಸಿ 24/7 ನೀರು ಪೂರೈಕೆಗೆ ಕ್ರಮ, ಮನೆಮನೆಗೆ ನಳ್ಳಿ ನೀರು ಸಂಪರ್ಕ, ಗ್ರಾಮೀಣ ಭಾಗದ ರಸ್ತೆಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ರೂಪಿಸಲಾಗಿದ್ದು ಹಲವು ಯೋಜನೆಗಳು ಈಗಾಗಲೇ ಅನುಷ್ಠಾನಗೊಂಡಿವೆ ಎಂದು ಹೇಳಿದರು.

    ಹಕ್ಕುಪತ್ರ ವಿತರಣೆ: ನಗರ ಮತ್ತು ಗ್ರಾಮಾಂತರದಲ್ಲಿ 4500ಕ್ಕೂ ಅಧಿಕ ಹಕ್ಕುಪತ್ರ ವಿತರಿಸಿ ಮನೆಯ ಮಾಲೀಕತ್ವ ನೀಡಲಾಗಿದೆ. ಉಳಿದವರ ದಾಖಲೆ ಸರಿಪಡಿಸುವ ಕೆಲಸವಾಗುತ್ತಿದೆ ಎಂದು ಭರತ್ ಶೆಟ್ಟಿ ಹೇಳಿದರು. ಗುರುಪುರದಲ್ಲಿ ಐಟಿ ಹಾಗೂ ಕೈಗಾರಿಕಾ ಪ್ರಾಂಗಣದಲ್ಲಿ ಕಿರು ಉದ್ಯಮಗಳ ಆಹ್ವಾನಿಸಿ ಉದ್ಯೋಗಾವಕಾಶ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ. ವಿವಿಧ ಬೃಹತ್ ಕಂಪನಿಗಳ ಸಾಮಾಜಿಕ ಜವಾಬ್ದಾರಿ ನೆಲೆಯಡಿ ಅನುದಾನ ತಂದು ಶಾಲಾ ಸಭಾಂಗಣ, ಕಟ್ಟಡ, ಅಂಗನವಾಡಿಗಳ ಅಭಿವೃದ್ಧಿ, ಮೂರು ಸರ್ಕಾರಿ ಶಾಲೆ ದತ್ತು ಪಡೆದು ಸಮಗ್ರ ಅಭಿವೃದ್ಧಿ, ಶಾಲೆಯಲ್ಲಿ ಸ್ಮಾರ್ಟ್‌ಕ್ಲಾಸ್, ಇಂಗ್ಲಿಷ್ ಸಹಿತ ಈಗಿನ ಸ್ಪರ್ಧಾತ್ಮಕ ಜಗತ್ತಿಗೆ ತಕ್ಕಂತೆ ಸರ್ಕಾರಿ ಶಾಲೆ ಅಭಿವೃದ್ಧಿ ನನ್ನ ವೈಯುಕ್ತಿಕ ಆಸಕ್ತಿಯಿಂದ ಎಪಿಪಿ ಆ್ಯಪ್ ಮೂಲಕ ಶಿಕ್ಷಣ ಕಲಿಕೆ, ಮಾದರಿ ಅಂಗನವಾಡಿ ನಿರ್ಮಾಣ ಆಗುತ್ತಿದೆ. ಸ್ವಚ್ಛ ಭಾರತ, ಸ್ವಸ್ಥ ಭಾರತ ಯೋಜನೆಯಡಿ ಸಮುದಾಯ ಶೌಚಗೃಹಗಳ ನಿರ್ಮಾಣ ಮಾಡಲಾಗಿದೆ. ಕೃಷಿಗಾಗಿ ಸಣ್ಣ ಚೆಕ್ ಡ್ಯಾಂಗಳು ನಿರ್ಮಾಣವಾಗಿವೆ ಎಂದು ಮಾಹಿತಿ ನೀಡಿದರು.

    ಕರೊನಾ ಹಾವಳಿ ಸಂಕಷ್ಟದ ಸಮಯದಲ್ಲಿ ಸರ್ಕಾರದ ಸವಲತ್ತುಗಳನ್ನು ಗ್ರಾಮಾಂತರ ಪ್ರದೇಶಕ್ಕೆ ತಲುಪಿಸಲು ಶ್ರಮ ವಹಿಸಿದ್ದು, ಸಮಾಜದ ಮುಂಚೂಣಿಯಲ್ಲಿ ದುಡಿಯುತ್ತಿದ್ದ ವಿವಿಧ ವರ್ಗಗಳು ದುಡಿಮೆಯಿಲ್ಲದೆ ಕಂಗಾಲಾದಾಗ ಪಡಿತರ ಸಾಮಗ್ರಿ ಹಂಚಿಕೆ ಮಾಡಿದ್ದೇನೆ. ಉಚಿತ ಊಟದ ವ್ಯವಸ್ಥೆ, ಉಚಿತ ಆಂಬುಲೆನ್ಸ್ ಸೇವೆ ದೊರಕಿಸಿದ್ದೇನೆ. ಕರೊನಾ ನಿಯಂತ್ರಣ ಸಮಿತಿ ಪ್ರಮುಖನಾಗಿ ಶ್ರಮಿಸಿದ್ದೇನೆ.
    – ಡಾ.ಭರತ್ ಶೆಟ್ಟಿ ವೈ, ಶಾಸಕ, ಮಂಗಳೂರು ನಗರ ಉತ್ತರ 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts