More

    ಆದಾಯದ ರಹದಾರಿ ಮಿಶ್ರಬೇಸಾಯ

    ಆದಾಯದ ರಹದಾರಿ ಮಿಶ್ರಬೇಸಾಯ

    ಸಂತೋಷ ಮುರಡಿ ಮುಂಡರಗಿ
    ತಾಲೂಕಿನ ರೈತ ರಾಘವೇಂದ್ರ ಕುರಿಯವರ ಮಿಶ್ರ ಕೃಷಿ ಬೇಸಾಯ ಪದ್ಧತಿ ಮೂಲಕ ಉತ್ತಮ ಆದಾಯ ಗಳಿಸಿ, ರೈತರಿಗೆ ಮಾದರಿಯಾಗಿದ್ದಾರೆ.
    ತಾಲೂಕಿನ ಬರದೂರ ಸಮೀಪ ರೈತ ರಾಘವೇಂದ್ರ 12 ಎಕರೆ ನೀರಾವರಿ ಜಮೀನು ಹೊಂದಿದ್ದು, ಇದರಲ್ಲಿ 9 ಎಕರೆ ಕಬ್ಬು, 2.5 ಎಕರೆ ತೋಟಗಾರಿಕೆ ಹಾಗೂ ಅರಣ್ಯ ಕೃಷಿ ಮಾಡಿದ್ದಾರೆ. ಅರ್ಧಎಕರೆಯಲ್ಲಿ ಹಸುಗಳಿಗೆ ಮೇವು ಬೆಳೆದಿದ್ದು, ತೋಟದ ಮನೆ ನಿರ್ವಿುಸಿಕೊಂಡಿದ್ದಾರೆ.
    ಬೀಜ, ರಸಗೊಬ್ಬರ, ಕೂಲಿ ಸೇರಿ ಪ್ರತಿ ಎಕರೆ ಕಬ್ಬು ಬೆಳೆಯಲು 30 ಸಾವಿರ ರೂ. ಖರ್ಚು ಮಾಡಿ 9 ಎಕರೆಯಲ್ಲಿ ಕಬ್ಬು ಬೆಳೆದಿದ್ದು, ಈಗಾಗಲೇ ಮೊದಲ ಬೆಳೆ ಕಟಾವು ಮಾಡಿಸಿದ್ದು, 467 ಟನ್ ಕಬ್ಬು ಇಳುವರಿ ಬಂದಿದೆ. ಕಬ್ಬು ಮಾರಾಟದಿಂದ ಉತ್ತಮ ಆದಾಯ ಪಡೆದಿದ್ದಾರೆ. ಕಬ್ಬು ಬೆಳೆಯನ್ನು ಎರಡನೇ ಕಟಾವಿಗೆ ಸಂಪೂರ್ಣ ತೆಗೆದು ಗೋವಿನಜೋಳ, ಸೂರ್ಯಕಾಂತಿ, ಹತ್ತಿ ಬೆಳೆಯುತ್ತಾರೆ. ಫಸಲು ತೆಗೆದ ಮೇಲೆ ಮತ್ತೆ ಕಬ್ಬು ಬೆಳೆಯುತ್ತಾರೆ. ಇದರಿಂದ ಭೂಮಿಯ ಫಲವತ್ತತೆ ಹೆಚ್ಚಾಗುತ್ತದೆ ಎನ್ನುತ್ತಾರೆ ರೈತ ರಾಘವೇಂದ್ರ. ಇವರು 8 ಎಕರೆ ಖುಷ್ಕಿ ಜಮೀನಿನು ಸಹ ಹೊಂದಿದ್ದು ಜೋಳ, ಗೋಧಿ, ಕುಸುಬಿ ಬೆಳೆಯುತ್ತಾರೆ. ಖುಷ್ಕಿ ಭೂಮಿಯಿಂದ ವಾರ್ಷಿಕ ಕನಿಷ್ಠ 50 ಸಾವಿರ ರೂ.ಲಾಭ ಪಡೆಯುತ್ತಿದ್ದಾರೆ.
    ಕೃಷಿ ಇಲಾಖೆಯ ಸಹಾಯಧನದಿಂದ ಮೇವು ಕತ್ತರಿಸುವ ಯಂತ್ರ, ನುಚ್ಚಿನ ಗಿರಣೆ, ರೂಟರ್ ವೆಟರ್, ಎಚ್.ಡಿ. ಸ್ಪ್ರೇಯರ್​ಯುಂತ್ರ, ಸೂರ್ಯಕಾಂತಿ, ಗೋವಿನಜೋಳ ಒಕ್ಕುವ ಯಂತ್ರವನ್ನು ಪಡೆದುಕೊಂಡಿದ್ದಾರೆ. ಜಮೀನಿನಲ್ಲಿ 4 ಹಸುಗಳಿದ್ದು, ಅವು ದಿನಕ್ಕೆ 20 ಲೀಟರ್ ಹಾಲು ನೀಡುತ್ತಿವೆ. ಮನೆಗೆ 2 ಲೀಟರ್ ಉಳಿಸಿ, ಉಳಿದ ಹಾಲನ್ನು ಪ್ರತಿ ಲೀಟರ್ ಹಾಲಿಗೆ 27 ರೂಪಾಯಿಯಂತೆ ಬರದೂರ ಹಾಲಿನ ಸೊಸೈಟಿಗೆ ನೀಡುತ್ತಾರೆ.
    ತೋಟದಲ್ಲಿ ಒಂದು ಬೋರ್​ವೆಲ್ ಇದ್ದು, 2 ಕಿ.ಮೀ. ಅಂತರದಲ್ಲಿ ಹಿರೇಹಳ್ಳದ ಚೆಕ್​ಡ್ಯಾಂನಿಂದ ಪೈಪ್​ಲೈನ್ ಹಾಕಿ ತೋಟಕ್ಕೆ ನೀರು ತಂದು ತೋಟದ ಬಾವಿಗೆ ನೀರು ಸಂಗ್ರಹಿಸುತ್ತಾರೆ. ಅದಕ್ಕೆ ಹಸುಗಳಿಂದ ಬರುವ ಸೆಗಣಿ, ಮೂತ್ರ ಬಿಡುತ್ತಾರೆ. ಬಾವಿಯಿಂದ ಪಂಪ್​ಸೆಟ್ ಮೂಲಕ ನೀರೆತ್ತಿ ಬೆಳೆಗಳಿಗೆ ನೀರುಣಿಸುತ್ತಾರೆ. ಅರಣ್ಯ ಕೃಷಿಗಳಿಗೆ ಹನಿ ನೀರಾವರಿ ವ್ಯವಸ್ಥೆ ಮಾಡಿದ್ದಾರೆ.
    ಪರಿಸರಕ್ಕೆ ಆದ್ಯತೆ: ಪರಿಸರಕ್ಕೆ ಆದ್ಯತೆ ನೀಡುವುದರ ಜತೆಗೆ ಉತ್ತಮ ಆದಾಯ ತೆಗೆಯಬೇಕೆಂದು 3 ವರ್ಷಗಳ ಹಿಂದೆ 2.5 ಎಕರೆ ಜಮೀನಿನಲ್ಲಿ 800 ಹೆಬ್ಬೇವು, 60 ಹುಣಸಿ, 40 ತೇಗ, 20 ಕಾಡುಬದಾಮಿ, 30 ಹೊಂಗೆ ಮರ, 8 ಸಿಲ್ವರ್, 50 ಬೇವಿನ ಮರ ಬೆಳೆದಿದ್ದಾರೆ. ತೋಟಗಾರಿಕೆ ಬೆಳೆಗಳಾದ 30 ಪೇರಲ, 120 ಸೀತಾಫಲ, 50 ವರ್ಷದ 60 ತೆಂಗಿನ ಗಿಡಗಳಿವೆ. ಸೀತಾಫಲ, ಪೇರಲ ಫಲ ನೀಡುತ್ತಿದ್ದು, ಮನೆಗೆ, ಕೂಲಿಕಾರರಿಗೆ ಸ್ನೇಹಿತರಿಗೆ ನೀಡುತ್ತಾರೆ. ಇನ್ನು 60 ತೆಂಗು ಗಿಡಗಳಿಂದ ವರ್ಷಕ್ಕೆ 600ರಿಂದ 700 ತೆಂಗಿನಕಾಯಿಯನ್ನು ಪ್ರತಿಯೊಂದಕ್ಕೆ 15 ರೂ.ಯಂತೆ ಮಾರಾಟ ಮಾಡುತ್ತಿದ್ದು, ತೆಂಗಿನ ಕಾಯಿಯಿಂದ 1 ಲಕ್ಷ ರೂಪಾಯಿ ವರೆಗೆ ಆದಾಯ ಪಡೆಯುತ್ತಿದ್ದಾರೆ. ಬೇಸಿಗೆಯಲ್ಲಿ 3-4 ತಿಂಗಳು ವಾರಕ್ಕೆ 200 ಎಳನೀರಿನ ಕಾಯಿಯನ್ನು ಪ್ರತಿಯೊಂದಕ್ಕೆ 12ರೂ.ಯಂತೆ ಮಾರಾಟ ಮಾಡುತ್ತಿದ್ದಾರೆ. ಅರಣ್ಯ ಕೃಷಿಯಿಂದ ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದಾರೆ.
    ರೈತ ರಾಘವೇಂದ್ರ ಅವರ ಸಾಧನೆ ಗುರುತಿಸಿರುವ ಕೃಷಿ ಇಲಾಖೆಯು ತಾಲೂಕು ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ನೀಡಿ ಗೌರವಿಸಿದೆ.

    ತಂದೆಯಿಂದ ಕೃಷಿ ಕಾಯಕ ಕಲಿತಿದ್ದೇನೆ. ಸಾಮಾಜಿಕ ಕೆಲಸಗಳ ಜತೆಗೆ ಕೃಷಿ ಕಾಯಕವನ್ನು ಮಾಡುತ್ತಿದ್ದೇನೆ. ಮಿಶ್ರ ಬೇಸಾಯದೊಂದಿಗೆ ಅರಣ್ಯ ಕೃಷಿಗೆ ಆದ್ಯತೆ ನೀಡಲಾಗಿದೆ. ಕೃಷಿಯಲ್ಲಿ ಹೆಚ್ಚಿನ ಸಾಧನೆ ಮಾಡುವ ಗುರಿ ಹೊಂದಿದ್ದೇವೆ. ಕೃಷಿ ಕಾಯಕದಿಂದ ಬರುವ ಆದಾಯ ಬದುಕಿಗೆ ಆಸರೆಯಾಗಿದೆ.
    | ರಾಘವೇಂದ್ರ ಕುರಿಯವರ ರೈತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts