More

    ಶಿವಮೊಗ್ಗ ಜಿಲ್ಲೆಯತ್ತ ಸಚಿವರ ನಿರಾಸಕ್ತಿ!?

    ಅರವಿಂದ ಅಕ್ಲಾಪುರ ಶಿವಮೊಗ್ಗ
    ಪ್ರಾಕೃತಿಕ ಸೌಂದರ್ಯದಿಂದ ಎಲ್ಲರನ್ನೂ ತನ್ನತ್ತ ಸೆಳೆಯುವ ಶಿವಮೊಗ್ಗ ಜಿಲ್ಲೆಗೆ ರಾಜ್ಯ ಸರ್ಕಾರದ ಸಚಿವರನ್ನು ಆಕರ್ಷಿಸುವುದು ಸಾಧ್ಯವಾಗಿಲ್ಲ! ರಾಜ್ಯದ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು 8 ತಿಂಗಳು ಕಳೆದರೂ ಇಲ್ಲಿ ಪ್ರಗತಿ ಪರಿಶೀಲನೆ ನಡೆಸಿದವರು ಕೇವಲ 9 ಸಚಿವರು ಮಾತ್ರ!

    34 ಸಚಿವರ ಪೈಕಿ ತಿಂಗಳಿಗೊಬ್ಬರಂತೆ ಜಿಲ್ಲೆಗೆ ಬಂದವರು 9 ಸಚಿವರು ಮಾತ್ರ. ಪ್ರಮುಖ ಖಾತೆಗಳನ್ನು ಹೊಂದಿರುವ ಸಚಿವರೇ ಇಲ್ಲಿಗೆ ಆಗಮಿಸಲು ನಿರಾಸಕ್ತಿ ತೋರುತ್ತಿರುವುದು ವಿಪರ್ಯಾಸ. ಶಿವಮೊಗ್ಗ ಜಿಲ್ಲೆ ರಾಜ್ಯದ ಯಾವುದೋ ಮೂಲೆಯಲ್ಲಂತೂ ಇಲ್ಲ. ಮಧ್ಯ ಕರ್ನಾಟಕದ ಜಿಲ್ಲೆಗಳಲ್ಲಿ ಒಂದಾಗಿರುವ ಇಲ್ಲಿಗೆ ಬರುವುದು ಪ್ರಯಾಣ ಹಾಗೂ ಸಮಯದ ದೃಷ್ಟಿಯಿಂದ ಕಷ್ಟಕರವೂ ಅಲ್ಲ.
    ಈಗಂತೂ ವಿಮಾನ ಸಂಪರ್ಕವೂ ಇದೆ. ಬೆಂಗಳೂರಿನಿಂದ ಹೊರಟರೆ ಸಚಿವರ ಕಾರಿಗೆ ನಾಲ್ಕೂವರೆ ತಾಸಿನ ಪ್ರಯಾಣ. ಇದು ಬಿಜೆಪಿ ಶಕ್ತಿ ಕೇಂದ್ರವೆಂಬ ಕಾರಣಕ್ಕೋ ಅಥವಾ ಜಿಲ್ಲೆ ಸಂಪೂರ್ಣ ಅಭಿವೃದ್ಧಿಯಾಗಿದೆ. ಅಲ್ಲಿ ಯಾವುದೇ ಸಮಸ್ಯೆಗಳಿಲ್ಲ. ಹೀಗಿರುವಾಗ ಅಲ್ಲಿ ಹೋಗಿ ಸಭೆ ನಡೆಸುವುದೇಕೆ ಎಂಬ ಭಾವನೆಯಿಂದಲೋ… ಒಟ್ಟಾರೆ ಸಚಿವರು ಮಾತ್ರ ಇತ್ತ ಬರುತ್ತಿಲ್ಲ.
    ಇದುವರೆಗೆ 9 ಸಚಿವರು ಪ್ರಗತಿ ಪರಿಶೀಲನೆ ನಡೆಸಿದ್ದರೂ ಕೆಲವರು ನೆಪಮಾತ್ರಕ್ಕೆ ಸಭೆ ಮಾಡಿದ್ದಾರೆ. ಆ ಸಭೆಗಳು ಕೇವಲ ಪರಿಶೀಲನೆಗೆ ಸೀಮತವಾದವೇ ಹೊರತು ಪ್ರಗತಿಯೆಡೆಗೆ ಹೆಜ್ಜೆ ಹಾಕುವ ಯಾವ ಸೂಚನೆಗಳೂ ಆ ಸಭೆಯಲ್ಲಿ ಕಾಣಿಸಲಿಲ್ಲ.
    ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಬಿ.ಬಿ.ಕಾವೇರಿ, ಅದಕ್ಕೂ ಮುನ್ನ ಕಾರ್ಯದರ್ಶಿಯಾಗಿದ್ದ ಉಮಾಶಂಕರ್ ಸಭೆ ನಡೆಸಿದ್ದಾರೆ. ಮುಂದಿನ ವಾರದಿಂದ ವಿಧಾನ ಮಂಡಲ ಅಧಿವೇಶನ, ಬಜೆಟ್ ಮಂಡನೆ, ಬಳಿಕ ಇಡೀ ಸರ್ಕಾರವೇ ಲೋಕಸಭಾ ಚುನಾವಣೆ ಮೂಡ್‌ಗೆ ಹೊರಳಲಿದೆ. ಚುನಾವಣೆ ನೀತಿಸಂಹಿತೆ ಜಾರಿಗೆ ಬರುವುದರಿಂದ ಮೇ ಮಧ್ಯ ಭಾಗದವರೆಗೆ ಯಾವುದೇ ಪ್ರಗತಿ ಪರಿಶೀಲನೆ ನಡೆಯುವುದಿಲ್ಲ. ಹಾಗಾಗಿ ಇನ್ನು ಸಚಿವರ ಸಭೆಗಳಿಗೆ ತಾತ್ಕಾಲಿಕ ವಿರಾಮ.
    ಅರಣ್ಯ-ಕಂದಾಯ ಸಮಸ್ಯೆ:ಮುಖ್ಯವಾಗಿ ಜಿಲ್ಲೆಯಲ್ಲಿ ಅರಣ್ಯ ಹಾಗೂ ಕಂದಾಯ ಭೂಮಿ ಸಮಸ್ಯೆಯಿದೆ. ಕಂದಾಯ ಸಚಿವ ಕೃಷ್ಣಭೈರೇಗೌಡ, ಅರಣ್ಯ ಸಚಿವ ಈಶ್ವರ ಖಂಡ್ರೆ ಅವರನ್ನು ಜಿಲ್ಲೆಗೆ ಕರೆಯಿಸಿ ಒಟ್ಟಿಗೆ ಸಭೆ ಮಾಡುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದ್ದರು. ಆದರೆ ಈಶ್ವರ ಖಂಡ್ರೆ ಶಿವಮೊಗ್ಗಕ್ಕೆ ಬರುವ ಮನಸ್ಸು ಮಾಡಲೇ ಇಲ್ಲ. ಬೆಂಗಳೂರಿನಲ್ಲೇ ಕೃಷ್ಣಭೈರೇಗೌಡ ಮತ್ತು ಈಶ್ವರ ಖಂಡ್ರೆ ಸಭೆ ನಡೆಸಿದರು. ಆರು ತಿಂಗಳಲ್ಲಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಯಾವುದೇ ಪ್ರಗತಿಯಾಗಿಲ್ಲ. ಇನ್ನು ಸಣ್ಣ ನೀರಾವರಿ, ತೋಟಗಾರಿಕೆ, ಸಮಾಜಕಲ್ಯಾಣ, ಲೋಕೋಪಯೋಗಿ, ಆಹಾರ ಮತ್ತು ನಾಗರಿಕ ಸರಬರಾಜು, ವಸತಿ ಮುಂತಾದ ಮಹತ್ವದ ಖಾತೆಗಳ ಸಚಿವರು ಶಿವಮೊಗ್ಗದತ್ತ ಬರಲು ಯಾವಾಗ ಮನಸ್ಸು ಮಾಡುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.
    ಗೃಹ-ಆರೋಗ್ಯವೂ ಇಲ್ಲ:ಜಿಲ್ಲೆಯಲ್ಲಿ ಮತ್ತೆ ಕೆಎಫ್‌ಡಿ ಭೀತಿ ಹೆಚ್ಚಾಗಿದೆ. ಪ್ರತಿವರ್ಷ ಜಿಲ್ಲೆಯ ಕೆಲವು ಪಿಎಚ್‌ಸಿ ವ್ಯಾಪ್ತಿಯ ಜನರು ಕೆಎಫ್‌ಡಿ ಆತಂಕಕ್ಕೆ ಒಳಗಾಗುತ್ತಿದ್ದಾರೆ. ಇದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಳ್ಳಬೇಕೆಂಬುದು ಜನರ ಆಗ್ರಹವಾಗಿದೆ. ಆದರೆ ವೈದ್ಯಕೀಯ ಸಚಿವ ದಿನೇಶ್ ಗುಂಡೂರಾವ್ ಇತ್ತ ಮುಖ ಮಾಡಿಲ್ಲ. ಅವರ ಪರವಾಗಿ ಆರೋಗ್ಯ ಇಲಾಖೆ ಆಯುಕ್ತ ರಂದೀಪ್ ಮೂರು ದಿನಗಳ ಹಿಂದಷ್ಟೇ ಸಭೆ ನಡೆಸಿದ್ದಾರೆ. ಹಲವು ವರ್ಷಗಳಿಂದ ಶಿವಮೊಗ್ಗ ಜಿಲ್ಲೆ ಕಾನೂನು ಸುವ್ಯವಸ್ಥೆ ವಿಷಯದಲ್ಲಿ ಸೂಕ್ಷ್ಮವಾಗಿದೆ. ಕಳೆದ ವರ್ಷ ರಾಗಿಗುಡ್ಡದಲ್ಲಿ ಕಲ್ಲು ತೂರಾಟ ಪ್ರಕರಣ ನಡೆದು ಸುಮಾರು ಒಂದು ತಿಂಗಳು ಪರಿಸ್ಥಿತಿ ಅತ್ಯಂತ ಸೂಕ್ಷ್ಮವಾಗಿತ್ತು. ಆದರೂ ಗೃಹ ಸಚಿವ ಡಾ. ಜಿ.ಪರಮೇಶ್ವರ್ ಜಿಲ್ಲೆಗೆ ಬಂದಿಲ್ಲ.
    ತಾಲೂಕು ಉಸ್ತುವಾರಿ ನಿರೀಕ್ಷೆ:ರಾಜ್ಯ ಸರ್ಕಾರ ಪ್ರತಿ ತಾಲೂಕಿಗೂ ಉಸ್ತುವಾರಿ ಅಧಿಕಾರಿಯನ್ನು ನೇಮಕ ಮಾಡಿದ್ದು, ಜಿಲ್ಲೆಯಲ್ಲಿ ಈ ಹಿಂದೆ ಕಾರ್ಯನಿರ್ವಹಿಸಿ ಈಗ ಬೇರೆ ಕಡೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೆಎಎಸ್ ಶ್ರೇಣಿಯ ಬಹುತೇಕ ಅಧಿಕಾರಿಗಳೇ ಉಸ್ತುವಾರಿಗಳಾಗಿದ್ದಾರೆ. ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ ಶಿವಮೊಗ್ಗ ತಾಲೂಕು ಉಸ್ತುವಾರಿಯಾಗಿ ನೇಮಕಗೊಂಡಿದ್ದಾರೆ. ಉಳಿದ ಆರು ತಾಲೂಕುಗಳ ಉಸ್ತುವಾರಿ ಅಧಿಕಾರಿಗಳು ಬೇರೆ ಕಡೆಗಳಿಂದ ಆಗಮಿಸಿ ಇಲ್ಲಿ ಸಭೆ ನಡೆಸಬೇಕು. ಈಗ ತಾಲೂಕಿನ ಮಂದಿ ತಮ್ಮ ಉಸ್ತುವಾರಿ ಅಧಿಕಾರಿ ನಿರೀಕ್ಷೆಯಲ್ಲಿದ್ದಾರೆ.
    ವರದಿ ಕೇಳಿದ ಸಿಎಂ: ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಸಭೆ ನಡೆಸಿರುವ ಸಿಎಂ ಸಿದ್ದರಾಮಯ್ಯ ಕೆಲವು ಸೂಚನೆಗಳನ್ನು ನೀಡಿದ್ದಾರೆ. ಕಾರ್ಯವೈಖರಿ, ನೇಮಕಗೊಂಡ ಬಳಿಕ ಜಿಲ್ಲೆಯಲ್ಲಿ ಆಗಿರುವ ಬದಲಾವಣೆ, ಬರ ನಿರ್ವಹಣೆ ಮುಂತಾದ ಸಂಗತಿಗಳ ಬಗ್ಗೆ ವರದಿ ನೀಡುವಂತೆ ಸೂಚಿಸಿದ್ದಾರೆ. ಚುನಾವಣಾ ನೀತಿಸಂಹಿತೆ ಜಾರಿಗೆ ಬಂದರೆ ಬರ ನಿರ್ವಹಣೆಯ ಹೆಚ್ಚಿನ ಹೊಣೆ ಈ ಉಸ್ತುವಾರಿಗಳದ್ದೇ ಆಗಿರುತ್ತದೆ. ಹೀಗಾಗಿ ಸಿಎಂ ವರದಿ ಕೇಳಿರುವುದು ಸಕಾಲಿಕವಾಗಿದೆ.
    ಪ್ರಗತಿ ಪರಿಶೀಲನೆ ನಡೆಸಿದ ಸಚಿವರು
    ಡಿ.ಸುಧಾಕರ್-ಜೂನ್ 24
    ಚಲುವರಾಯಸ್ವಾಮಿ-ಜುಲೈ 21
    ಕೆ.ಎನ್.ರಾಜಣ್ಣ-ಆಗಸ್ಟ್ 8
    ಕೃಷ್ಣಬೈರೇಗೌಡ-ಸೆಪ್ಟೆಂಬರ್ 6
    ಭೈರತಿ ಸುರೇಶ್-ಅಕ್ಟೋಬರ್ 27
    ಮಧು ಬಂಗಾರಪ್ಪ-ನವೆಂಬರ್ 8
    ಡಾ. ಶರಣಪ್ರಕಾಶ ಪಾಟೀಲ್-ನವೆಂಬರ್ 11
    ಶಿವಾನಂದ ಪಾಟೀಲ್-ನವೆಂಬರ್ 22
    ಕೆ.ಜೆ.ಜಾರ್ಜ್-ಫೆಬ್ರವರಿ 3

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts