More

    ಮಹಿಳೆಯ ಬಗೆಗಿನ ಮನಸ್ಥಿತಿ ಬದಲಾಗಿದೆ..; ವಿಜಯವಾಣಿ ಸೆಲೆಬ್ರಿಟಿ ಕಾರ್ನರ್​ನಲ್ಲಿ ಪ್ರಿಯಾಂಕಾ ಉಪೇಂದ್ರ

    ಮಹಿಳೆಯ ಬಗೆಗಿನ ಮನಸ್ಥಿತಿ ಬದಲಾಗಿದೆ..; ವಿಜಯವಾಣಿ ಸೆಲೆಬ್ರಿಟಿ ಕಾರ್ನರ್​ನಲ್ಲಿ ಪ್ರಿಯಾಂಕಾ ಉಪೇಂದ್ರ

    ಸಿನಿಮಾ ರಂಗದಲ್ಲಿ ಪ್ರತಿಭೆ ಎಷ್ಟು ಮುಖ್ಯವೋ, ತಾಳ್ಮೆ ಮತ್ತು ಕಠಿಣ ಶ್ರಮ ಸಹ ಅಷ್ಟೇ ಮುಖ್ಯ. ಈ ಮೂರೂ ಒಟ್ಟಿಗೆ ಸೇರಿದಲ್ಲಿ ಮಾತ್ರ ಗುರಿ ತಲುಪುತ್ತೇವೆ. ಮಹಿಳೆಯರು ಮಾತ್ರವಲ್ಲ ಪುರುಷರನ್ನೂ ಗಮನದಲ್ಲಿಟ್ಟುಕೊಂಡು ಈ ಮಾತು ಹೇಳುತ್ತಿದ್ದೇನೆ. ಚಲನಚಿತ್ರ ಕ್ಷೇತ್ರ ಮಾತ್ರವಲ್ಲ ಎಲ್ಲ ರಂಗಕ್ಕೂ ಈ ಮಾತು ಅನ್ವಯ.

    ಮುಂಚೆಲ್ಲ ಚಿತ್ರರಂಗದಲ್ಲಿ ನಾಯಕಿಯರನ್ನು ನಾಯಕನ ಗೆಳತಿ ಅಥವಾ ಹೆಂಡತಿ ಪಾತ್ರಗಳಿಗೆ ಮಾತ್ರ ಸೀಮಿತ ಮಾಡಲಾಗುತ್ತಿತ್ತು. ಕಮರ್ಷಿಯಲ್ ಸಿನಿಮಾಗಳಲ್ಲಿ ಅವರಿಗೆ ಹೆಚ್ಚು ಪ್ರಾಮುಖ್ಯತೆ ಇರಲಿಲ್ಲ. ಅವರು ಸುಂದರವಾಗಿ ಕಾಣಿಸಬೇಕು ಎಂಬುದೊಂದೇ ಉದ್ದೇಶವಾಗಿತ್ತು. ನಾನು ಸಹ ಇಂತಹ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದೇನೆ. ಇನ್ನು, ಒಬ್ಬ ನಟಿ ಮದುವೆಯಾದರೆ, ಮತ್ತೆ ಪಾತ್ರಗಳು ಸಿಗುತ್ತಿರಲಿಲ್ಲ; ಸಿಕ್ಕರೂ ಹೆಚ್ಚಾಗಿ ಪೋಷಕ ಪಾತ್ರಗಳೇ. ಆದರೆ, ಈಗ ಸಾಕಷ್ಟು ಬದಲಾವಣೆಗಳಾಗಿದ್ದು, ಕಂಟೆಂಟ್ ಸಿನಿಮಾಗಳು ಹೆಚ್ಚುಹೆಚ್ಚು ಬರುತ್ತಿವೆ ಮತ್ತು ಇಂತಹ ಸಿನಿಮಾಗಳಲ್ಲಿ ನಾಯಕ ಅಥವಾ ನಾಯಕಿ ಎನ್ನುವುದಕ್ಕಿಂತ ಪಾತ್ರಗಳು ಪ್ರಾಮುಖ್ಯ ಪಡೆಯುತ್ತಿವೆ.

    ಈಗ ಕಮರ್ಷಿಯಲ್ ಸಿನಿಮಾಗಳಲ್ಲಿ ಮಹಿಳಾ ಪ್ರಧಾನ ಚಿತ್ರಗಳು ಸಹ ಹೆಚ್ಚಾಗಿವೆ. ಇಂಥವನ್ನು ಪಾತ್ರ ಪ್ರಧಾನ ಚಿತ್ರಗಳು ಎಂದರೆ ತಪ್ಪಿಲ್ಲ. ಈ ತರಹದ ಸಿನಿಮಾಗಳಲ್ಲಿ ಪುರುಷ ಅಥವಾ ಮಹಿಳೆ ಯಾರು ಬೇಕಾದರೂ ಹೀರೋ ಆಗಬಹುದು. ಮುಂಚೆಲ್ಲ ಪುರುಷರಿಗೆ ಹೆಚ್ಚು ಪ್ರಾಮುಖ್ಯತೆ ಸಿಗುತ್ತಿತ್ತು. ಅಂಥ ಮನಸ್ಥಿತಿ ಸಮಾಜದಲ್ಲೇ ಆಳವಾಗಿ ಬೇರೂರಿದೆ. ಕಾಮಿಕ್ ಬುಕ್ಸ್ ಉದಾಹರಣೆಯನ್ನೇ ತೆಗೆದುಕೊಂಡರೆ, ಜಾಸ್ತಿ ಪುರುಷರೇ ಇದ್ದರು. ಸೂಪರ್ ಮ್ಯಾನ್, ಸ್ಪೈಡರ್ ಮ್ಯಾನ್, ಬ್ಯಾಟ್​ವ್ಯಾನ್, ಫ್ಯಾಂಟಮ್ ಶಕ್ತಿಮಾನ್ ಎಲ್ಲರೂ ಪುರುಷರೇ. ಡಿಟೆಕ್ಟಿವ್​ಗಳಲ್ಲೂ ಶೆರ್ಲಾಕ್ ಹೋಮ್್ಸ ಹೆಸರು ಮೊದಲು ಬರುತ್ತದೆ. ತೆರೆಯ ಮೇಲೂ ಪುರುಷ ಪ್ರಧಾನ ಚಿತ್ರಗಳೇ ಹೆಚ್ಚಿದ್ದವು. ಈಗ ಅದು ಕಡಿಮೆಯಾಗಿದೆ. ಸಮಾಜದಲ್ಲೂ ಸಾಕಷ್ಟು ಬದಲಾವಣೆಗಳಾಗಿವೆ. ಮನೆ ನೋಡಿಕೊಳ್ಳುವ ಮತ್ತು ದುಡಿಯುವ ಜವಾಬ್ದಾರಿ ಬರೀ ಪುರುಷನದ್ದೇ ಯಾಕಾಗಿರಬೇಕು? ಮಹಿಳೆಯರೂ ಜವಾಬ್ದಾರಿ ತೆಗೆದುಕೊಳ್ಳಬಹುದಲ್ಲ… ಸ್ವಲ್ಪ ತಡವಾದರೂ ಮಹಿಳೆಯರಿಗೆ ಹಕ್ಕುಗಳು ಸಿಗುತ್ತಿವೆ. ಸಿನಿಮಾಗಳಲ್ಲೂ ವಿಲನ್ ಸಹಿತ ಬೇರೆ ತರಹದ ಪಾತ್ರಗಳು ಸಿಗುತ್ತಿವೆ.

    ಯಾವುದೇ ವೃತ್ತಿಯಲ್ಲೂ ಹೆರಿಗೆ ರಜೆ ಸಹಜವಾಗಿಯೇ ಇರುತ್ತದೆ. ರಜೆ ಮುಗಿಸಿ ಕೆಲಸಕ್ಕೆ ವಾಪಸಾಗುತ್ತಾರೆ. ಆದರೆ, ಸಿನಿಮಾದಲ್ಲಿ ಮಾತ್ರ ಬೇರೆ ತರಹ ಇತ್ತು. ತಾಯ್ತನ ಬಿಡಿ, ಒಬ್ಬ ನಟಿ ಮದುವೆಯಾದರೆ ಸಾಕು, ಆಕೆಗೆ ಅವಕಾಶಗಳು ಸಿಗುತ್ತಿರಲಿಲ್ಲ. ಮದುವೆ ನಂತರ ಸಿನಿಮಾಗಳಲ್ಲಿ ನಟಿಸುವುದಿಲ್ಲ, ಸ್ವಲ್ಪ ಗ್ಯಾಪ್ ತೆಗೆದುಕೊಳ್ಳುತ್ತೀನಿ ಎಂದು ಆ ನಟಿ ನಿರ್ಧಾರ ಮಾಡುವುದು ಬೇರೆ. ಕೆಲವರಿಗೆ ಎರಡನ್ನೂ ಮ್ಯಾನೇಜ್ ಮಾಡುವುದು ಕಷ್ಟವಾಗುತ್ತದೆ. ಹಾಗಾಗಿ, ಅದು ಅವರವರ ತೀರ್ವನ. ಆದರೆ, ಮದುವೆ ಕಾರಣಕ್ಕೆ ಆಕೆಯನ್ನು ದೂರ ಇಡುವುದು ತಪು್ಪ. ನಾನು ಚಿತ್ರಗಳಲ್ಲಿ ನಟನೆ ಶುರು ಮಾಡಿದಾಗ, ಮದುವೆಯಾದವರಿಗೆ ಅವಕಾಶ ಕಡಿಮೆ ಇತ್ತು. ಒಂದು ಸಣ್ಣ ಗ್ಯಾಪ್​ನ ನಂತರ ವಾಪಸ್ಸಾದರೂ, ಯಾರ ಜತೆಗೆ ನಟಿಸುತ್ತಾರೆ, ಯಾವ ತರಹ ಪಾತ್ರ ಮಾಡುತ್ತಾರೆ, ಫ್ಯಾನ್ಸ್ ಏನಂದುಕೊಳ್ಳುತ್ತಾರೆ … ಎಂಬಂತಹ ಪ್ರಶ್ನೆಗಳು ಕೇಳಿ ಬರುತ್ತಿದ್ದವು. ಸಮಾಜ-ಕುಟುಂಬದ ಒತ್ತಡ ಆಕೆಯ ಮೇಲೆ ಇರುತ್ತಿತ್ತು. ಅದರಲ್ಲೂ ದಕ್ಷಿಣ ಭಾರತದ ಚಿತ್ರರಂಗಗಳಲ್ಲಿ ಇದು ಜಾಸ್ತಿ ಇತ್ತು. ಹಾಗಾಗಿ, ಬಹಳಷ್ಟು ನಟಿಯರು ಮದುವೆಯ ನಂತರ ಪೋಷಕ ಪಾತ್ರಗಳತ್ತ ಶಿಫ್ಟ್ ಆಗುತ್ತಿದ್ದರು. ಇದು ಸೇಫ್ ಎಂಬ ನಂಬಿಕೆ. ಗ್ಲಾಮರಸ್ ಆಗಿ ಕಾಣಿಸಿಕೊಳ್ಳಬೇಕು ಎಂದಿಲ್ಲ. ಅಥವಾ ಧಾರಾವಾಹಿಗಳತ್ತ ಮುಖ ಮಾಡುತ್ತಿದ್ದರು. ಆದರೆ, ಈಗ ಅಂಥ ಸನ್ನಿವೇಶ ಇಲ್ಲ. ನಾನು ಮದುವೆ ನಂತರ ನಾಲ್ಕೈದು ವರ್ಷಗಳ ಕಾಲ ಬ್ರೇಕ್ ತೆಗೆದುಕೊಂಡೆ. ಮತ್ತೆ ನಾಯಕಿಯಾಗಿ ನಟಿಸಬೇಕು ಎಂಬ ಯೋಚನೆ ಇರಲಿಲ್ಲ. ಒಳ್ಳೆಯ ಅವಕಾಶಗಳು ಬಂದವು. ಮೊದಲು ‘ಶ್ರೀಮತಿ’ ಮತ್ತು ‘ಕ್ರೇಜಿ ಸ್ಟಾರ್’ ಚಿತ್ರಗಳಲ್ಲಿ ನಟಿಸಿದೆ. ‘ಮಮ್ಮಿ’ ನಂತರ ಕ್ರಮೇಣ ಬೇರೆ ತರಹದ ಪಾತ್ರಗಳು ಸಿಗುತ್ತಾ ಹೋದವು. ಆ ಚಿತ್ರಗಳು ಯಶಸ್ವಿಯಾಗಿದ್ದಷ್ಟೇ ಅಲ್ಲ, ಆ ಜಾನರ್ ಸಹ ಜನಪ್ರಿಯವಾಯಿತು. ಮಹಿಳಾ ಪ್ರಧಾನ ಚಿತ್ರಗಳಿಗೆ ಮಾರುಕಟ್ಟೆ ಇದೆ ಮತ್ತು ಆ ತರಹದ ಚಿತ್ರಗಳನ್ನು ಜನ ನೋಡುತ್ತಾರೆ ಎಂಬ ನಂಬಿಕೆ ನಿರ್ವಪಕರಿಗೆ ಬಂತು. ಅದು ನನಗೆ ಟರ್ನಿಂಗ್ ಪಾಯಿಂಟ್ ಆಯಿತು. ಆ ನಂತರ ‘ಸೆಕೆಂಡ್ ಹಾಫ್’, ‘ದೇವಕಿ’ ಮುಂತಾದ ಚಿತ್ರಗಳಲ್ಲಿ ನಟಿಸಿದೆ. ಹಾಗಂತ, ಹೀರೋಗಳ ಜತೆಗೆ ನಟಿಸುವುದು ತಪು್ಪ ಎಂದು ಹೇಳುತ್ತಿಲ್ಲ. ಆದರೆ, ಕಮರ್ಷಿಯಲ್ ಚಿತ್ರಗಳಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುವುದಿದೆಯಲ್ಲ, ಅದು ಮುಖ್ಯ ಮತ್ತು ಆ ತರಹದ ಪಾತ್ರಗಳು ನನಗೆ ಸದ್ಯಕ್ಕೆ ಸಿಗುತ್ತಿವೆ ಎಂಬುದು ಖುಷಿ ವಿಷಯ.

    ಮದುವೆಯಾದ ಮೇಲೆ ನಟಿಸಬಾರದು ಎಂಬುದು ಒಂದು ಮನಸ್ಥಿತಿ ಅಷ್ಟೇ. ಉದಾ- ಸುಚಿತ್ರಾ ಸೇನ್ ಚಿತ್ರರಂಗಕ್ಕೆ ಬಂದಾಗ ಅವರಿಗೆ ಮದುವೆಯಾಗಿ, ಮೂನ್​ವುೂನ್ ಸೇನ್ ಜನನವಾಗಿತ್ತು. ನಂತರದ ವರ್ಷಗಳಲ್ಲಿ ಅವರು ಬಂಗಾಲಿ ಚಿತ್ರರಂಗದ ಟಾಪ್ ನಟಿಯಾಗಿ ಹೊರಹೊಮ್ಮಿದರು. ಇನ್ನೂ ಅನೇಕರು ಮದುವೆಯಾದ ಮೇಲೂ ನಟನೆ ಮುಂದುವರಿಸಿದ್ದಾರೆ. ಇಷ್ಟಕ್ಕೂ ಹೀರೋಗಳು ಮದುವೆಯಾಗಿ ಸಣ್ಣ ಬಿಡುವಿನ ನಂತರ ವಾಪಸ್ಸಾದರೆ, ಕಂಬ್ಯಾಕ್ ಅಂತ ಯಾರೂ ಹೇಳುವುದಿಲ್ಲ. ಹಾಗಿರುವಾಗ, ನಾಯಕಿಯರಿಗೆ ಮಾತ್ರ ಈ ಕಂಬ್ಯಾಕ್ ಎನ್ನುವ ಪದ ಯಾಕೆ? ಮಹಿಳೆಯರಿಗೆ ಮದುವೆ ಮತ್ತು ತಾಯಿಯಾದ ಮೇಲೆ, ದೇಹದಲ್ಲಿ ಒಂದಿಷ್ಟು ಬದಲಾವಣೆಗಳು ಆಗುತ್ತವೆ. ಹಾಗಾಗಿ ತಕ್ಷಣ ಅವರು ಅಭಿನಯಿಸುವುದು ಸಾಧ್ಯವಾಗುವುದಿಲ್ಲ. ಒಂದು ಸಣ್ಣ ಬಿಡುವು ಬೇಕಾಗುತ್ತದೆ. ವೃತ್ತಿಪರವಾಗಿ ಯೋಚಿಸಿದರೆ, ಈ ಕಂಬ್ಯಾಕ್ ಎನ್ನುವ ಪದವೇ ವಿಚಿತ್ರ. ಈ ಮನಸ್ಥಿತಿ ಬದಲಾದರೆ ಎಲ್ಲವೂ ಸರಿಯಾಗುತ್ತದೆ.

    ಇನ್ನು, ಚಿತ್ರರಂಗದಲ್ಲಿ ನಟಿಯರಿಗೆ ಅನ್ಯಾಯವಾಗುತ್ತದೆ, ದೌರ್ಜನ್ಯಗಳಾಗುತ್ತವೆ ಎಂಬ ಮಾತುಗಳು ಕೇಳಿ ಬರುತ್ತಿರುತ್ತವೆ. ಇಲ್ಲಿ ಯಾರೂ ಯಾರನ್ನೂ ಫೋರ್ಸ್ ಮಾಡುವುದಕ್ಕೆ ಸಾಧ್ಯವಿಲ್ಲ. ನಾವು ಮೊದಲಿಗೆ ನಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು. ಒಂದು ಕಾಸ್ಟೂಮ್ ಇಷ್ಟವಾಗದಿದ್ದರೆ ಅಥವಾ ಚಿತ್ರೀಕರಣದ ಸಂದರ್ಭದಲ್ಲಿ ಯಾವುದೋ ವಿಷಯ ಸರಿ ಹೋಗದಿದ್ದರೆ ತಕ್ಷಣ ಹೇಳಿಬಿಡಬೇಕು. ಅದನ್ನು ಬಿಟ್ಟು ಬೇರೆ ದಾರಿಯಲ್ಲಿ ಹೋದರೆ ಸಮಸ್ಯೆ. ಇಲ್ಲಿ ಪ್ರತಿಭೆ ಎಷ್ಟು ಮುಖ್ಯವೋ, ತಾಳ್ಮೆ ಮತ್ತು ಕಠಿಣ ಶ್ರಮ ಸಹ ಅಷ್ಟೇ ಮುಖ್ಯ.

    ಈ ಮೂರೂ ಒಟ್ಟಿಗೆ ಸೇರಿದಲ್ಲಿ ಮಾತ್ರ ಗುರಿ ತಲುಪುತ್ತೇವೆ. ಪುರುಷರನ್ನೂ ಗಮನದಲ್ಲಿಟ್ಟುಕೊಂಡು ಈ ಮಾತು ಹೇಳುತ್ತಿದ್ದೇನೆ. ಎಲ್ಲ ರಂಗಕ್ಕೂ ಈ ಮಾತು ಅನ್ವಯ. ಕರೊನಾದಿಂದಾಗಿ ಎರಡು ವರ್ಷದಿಂದ ಎಲ್ಲರೂ ಸಮಸ್ಯೆಗಳನ್ನು ಎದುರಿಸಿದ್ದಾರೆ. ಎಲ್ಲವೂ ತಡವಾಗಿದೆ. ಸಮಯ ಹಾಳಾಯಿತು ಎಂಬ ಬೇಸರ ಬೇಡ. ಅದನ್ನು ಸರಿಯಾಗಿ ಬಳಸಿಕೊಳ್ಳುವುದನ್ನು ಕಲಿಯಬೇಕು; ನಮ್ಮನ್ನು ಇನ್ನಷ್ಟು ಉತ್ತಮಗೊಳಿಸಿಕೊಳ್ಳಲು ಪ್ರಯತ್ನಿಸಬೇಕು. ಆಗ ಬಹು ದೂರ ಸಾಗಬಹುದು.

    (ಲೇಖಕಿ ಖ್ಯಾತ ನಟಿ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts