More

    ಅಂಗನವಾಡಿಗಳಿಗೆ ಆಧಾರ ಶಿಲೆ ಪಾಠ

    | ರಮೇಶ್ ಮೈಸೂರು ಬೆಂಗಳೂರು

    ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಬಾಲ್ಯಾವಸ್ಥೆಯ ಮಕ್ಕಳ ಆರೈಕೆ ಹಾಗೂ ಶಿಕ್ಷಣಕ್ಕೆ ಆದ್ಯತೆ ನೀಡಲಾಗಿದೆ. ಅದರಲ್ಲೂ ಮೂರರಿಂದ ಆರು ವರ್ಷದ ಮಕ್ಕಳಿಗೆ ವಿಶೇಷವಾಗಿ ಗಮನಹರಿಸಲಾಗುತ್ತಿದೆ. ಈ ಹಂತದ ಮಕ್ಕಳಿಗೆಂದೇ ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರವು ರಾಷ್ಟ್ರೀಯ ಪಠ್ಯಕ್ರಮ ನಿಗದಿ ಮಾಡಿದೆ. ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಇದನ್ನು ಬಿಡುಗಡೆ ಮಾಡಿದ್ದು, ‘ಆಧಾರಶಿಲೆ’ ಎಂದು ಕರೆಯಲಾಗಿದೆ.

    3-6 ವರ್ಷದ ಮಕ್ಕಳ ಆರೈಕೆ, ಕಲಿಕೆಗಾಗಿ ದೇಶದಲ್ಲಿ ಒಟ್ಟಾರೆ 13.95 ಲಕ್ಷ ಅಂಗನವಾಡಿ ಕೇಂದ್ರಗಳಿದ್ದು, ಅಂದಾಜು 10 ಕೋಟಿ ಮಕ್ಕಳು ಫಲಾನುಭವಿಗಳಾಗಿದ್ದಾರೆ ಎನ್ನುತ್ತದೆ ಕೇಂದ್ರ ಸರ್ಕಾರದ ಮಾಹಿತಿ. ರಾಜ್ಯದಲ್ಲಿರುವ ಅಂಗನವಾಡಿಗಳ ಸಂಖ್ಯೆ ಅಂದಾಜು 65,324.

    48 ವಾರಗಳ ಚಟುವಟಿಕೆಗಳು: ಒಟ್ಟು 348 ಪುಟಗಳ ವಿಸõತ ಕಲಿಕಾ ಚಟುವಟಿಕೆಗಳ ವಿವರಗಳನ್ನು ಒದಗಿಸಲಾಗಿದೆ. 48 ವಾರಗಳ ಚಟುವಟಿಕೆಗಳನ್ನು ನೀಡಲಾಗಿದ್ದು, 5 ಹಂತಗಳಲ್ಲಿ ವಿಂಗಡಿಸಲಾಗಿದೆ. ಮಕ್ಕಳ ಸೇರ್ಪಡೆ ಹಾಗೂ ಆರಂಭದ ಚಟುವಟಿಕೆಗಳಿಗೆ ನಾಲ್ಕು ವಾರ ನಿಗದಿ ಮಾಡಲಾಗಿದೆ. ಇದರಲ್ಲಿ ಪಾಲಕರನ್ನು ಒಳಗೊಂಡ ಚಟುವಟಿಕೆಗಳಿವೆ. ಆಟದ ಮೂಲಕ ಕಲಿಕೆಗೆ ಎರಡು ಹಂತದಲ್ಲಿ ಒಟ್ಟಾರೆ 36 ವಾರದ ಚಟುವಟಿಕೆ ನೀಡಲಾಗಿದೆ. ಕೊನೆಯಲ್ಲಿ ಪುನರ್ಮನನ ಹಾಗೂ ಮರು ಸಂಯೋಜನೆಗೆ ಎರಡು ಹಂತಗಳಲ್ಲಿ ಒಟ್ಟು 8 ವಾರಗಳ ಪಠ್ಯಕ್ರಮ ಒದಗಿಸಲಾಗಿದೆ.

    ಆರು ದಿನಗಳ ಕಲಿಕಾ ಮಾದರಿ: ಭಾನುವಾರ ಹೊರತುಪಡಿಸಿ ಉಳಿದ ದಿನ ಆಟದ ಮೂಲಕ ಕಲಿಸಬೇಕಾದ ಚಟುವಟಿಕೆಗಳ ವಿವರ ನೀಡಲಾಗಿದೆ. ಮಕ್ಕಳಿಗೆ ವೈಯಕ್ತಿಕವಾಗಿ ಹಾಗೂ ಗುಂಪುಗಳಲ್ಲಿ ಕಲಿಸಲಾಗುವ ಆಟಗಳು, ಹೊರಾಂಗಣ ಚಟುವಟಿಕೆಗಳ ವಿವರಗಳನ್ನು ನೀಡಲಾಗಿದೆ. ಮಕ್ಕಳಿಗೆ ವಿವಿಧ ಆಟಿಕೆಗಳನ್ನು ಪೂರೈಸುವುದು, ಹಾಡು ಹೇಳುವುದು, ಕಥೆ ಹೇಳುವುದು, ವಿವಿಧ ವಸ್ತುಗಳನ್ನು ಬಳಸಿ ಅವುಗಳನ್ನು ಪರಿಚಯಿಸುವುದು, ಅಕ್ಷರ, ಅಂಕಿಗಳ ಅರಿವು ಮೂಡಿಸುವುದು. ವಾರದ ಅವಧಿಗೆ ವರ್ಕ್​ಶೀಟ್​ಗಳನ್ನು ಪೂರೈಸಲಾಗಿದೆ. ವರ್ಣಮಯ ಚಿತ್ರಗಳ ಮೂಲಕ ಕಲಿಕಾ ವಿಧಾನ ವಿವರಿಸಲಾಗಿದೆ. ಮಕ್ಕಳು ಮನೆಯಲ್ಲಿ ಕಲಿಯಬಹುದಾದ ಚಟುವಟಿಕೆಗಳನ್ನೂ ವಿವರಿಸಿದ್ದು, ಪಾಲಕರನ್ನು ಒಳಗೊಂಡಂತೆ ಕಲಿಕಾ ಹಂತಗಳನ್ನು ನೀಡಲಾಗಿದೆ.

    ಎಂಟು ಅವಧಿಗಳು: ಅಂಗನವಾಡಿಯಲ್ಲಿ ದಿನದ ಆರಂಭದಿಂದ ಕೊನೆವರೆಗೆ ಒಟ್ಟಾರೆ 200 ನಿಮಿಷಗಳ ಚಟುವಟಿಕೆಗಳನ್ನು ವಿವರಿಸಲಾಗಿದೆ. ಈ ಸಮಯವನ್ನು 20ರಿಂದ 30 ನಿಮಿಷ 8 ಅವಧಿಯನ್ನಾಗಿ ವಿಂಗಡಿಸಲಾಗಿದೆ. ದಿನದ ಕೊನೆಯಲ್ಲಿ ಒಟ್ಟಾರೆ ಚಟುವಟಿಕೆಗಳ ಪುನರ್ಮನನ ಉಲ್ಲೇಖಿಸಲಾಗಿದೆ.

    ಉದ್ದೇಶವೇನು?: ಸಾಮಾನ್ಯವಾಗಿ ಶಾಲಾ ಹಂತಕ್ಕೆ ತಲುಪುವ ಮಕ್ಕಳಲ್ಲಿ ಓದು, ಬರಹದ ಅರಿವು ಅಷ್ಟಾಗಿ ಇರುವುದಿಲ್ಲ. ಆ ಮಕ್ಕಳಲ್ಲಿ ಗಣಿತ ಹಾಗೂ ಭಾಷಾಜ್ಞಾನದ ಕೊರತೆ ಕಂಡುಬರುತ್ತದೆ. ಇದನ್ನು ನಿವಾರಿಸುವುದು ಪಠ್ಯಕ್ರಮದ ಉದ್ದೇಶವಾಗಿದೆ ಎನ್ನುವುದು ಸಮಿತಿ ಸದಸ್ಯರ ಅಭಿಪ್ರಾಯ.

    ಏನೆಲ್ಲ ಕಲಿಯುತ್ತಾರೆ?: ಆಲಿಸುವ ಕೌಶಲ ಹೆಚ್ಚಳ. ಪದಗಳ ಭಂಡಾರ ಬೆಳೆಸುತ್ತದೆ. ಕಲ್ಪನಾ ಶಕ್ತಿ ಉತ್ತೇಜಿಸುತ್ತದೆ. ಸೂಚನೆಗಳನ್ನು ಪಾಲಿಸುವುದು, ಸಾಮಾಜಿಕ ಕೌಶಲ ಕಲಿಸುವುದಲ್ಲದೆ, ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಿ ಶಾಲಾ ಹಂತಕ್ಕೆ ಸಜ್ಜುಗೊಳಿಸುತ್ತದೆ ಎಂಬ ವಿಶ್ವಾಸ ಹೊಂದಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts