More

    ಸಿರಿಧಾನ್ಯ ಮೇಳಕ್ಕೆ ಉತ್ತಮ ರೆಸ್ಪಾನ್ಸ್; ಗಮನ ಸೆಳೆದ ವಿಶೇಷ ಖಾದ್ಯಗಳು, ನಗೆಹಬ್ಬ

    ಬೆಂಗಳೂರು : ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿರುವ ಸಿರಿಧಾನ್ಯ ಮತ್ತು ಸಾವಯವ ಅಂತರಾಷ್ಟ್ರೀಯ ವಾಣಿಜ್ಯ ಮೇಳವು ನಿರೀಕ್ಷೆಯಂತೆ ಯಶ್ವಸಿಯಾಗಿ ಸಾಗಿದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶುಕ್ರವಾರ ಆರಂಭವಾಗಿರುವ ಮೇಳದಲ್ಲಿ ಮೊದಲನೇ ದಿನವೇ 60 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿದ್ದಾರೆ, ಎರಡನೇ ದಿನ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ. ಕೊನೆಯದಿನ ಭಾನುವಾರ ಇರುವುದರಿಂದ ಜನರ ಸಂಖ್ಯೆ ಇಮ್ಮಡಿಗೊಳ್ಳುವ ನಿರೀಕ್ಷೆ ಇದೆ ಎಂದರು.

    ಮೇಳವು ಕೇವಲ ಮಾರಾಟ ಮತ್ತು ಪ್ರದರ್ಶನಕ್ಕೆ ಸೀಮಿತವಾಗಿರದೆ ಅಂತರಾಷ್ಟ್ರೀಯ ಮಟ್ಟದಲ್ಲಿ ರೈತರಿಗೆ ಸಿರಿಧಾನ್ಯ ಬೆಳೆಯಲು ಉತ್ತೇಜನ ನೀಡಲು ಪೂರಕವಾದ ಕೆಲ ಒಪ್ಪಂದಗಳಿಗೆ ವೇದಿಕೆಯಾಗಿದೆ. ಆಸ್ಟ್ರೇಲಿಯಾ, ಯುರೋಪ್, ಕೀನ್ಯಾ, ಕುವೈತ್, ಯುಎಇ, ದೇಶಗಳ ಮಾರುಕಟ್ಟೆದಾರರು ಮೇಳದಲ್ಲಿ ಭಾಗವಹಿಸಿದ್ದು, 5.10 ಕೋಟಿ ಮೌಲ್ಯದ ಒಟ್ಟು 6 ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ. 7 ಅಂತರಾಷ್ಟ್ರೀಯ, 40 ಹೊರರಾಜ್ಯ ಹಾಗು 50ಕ್ಕೂ ಹೆಚ್ಚು ರಾಜ್ಯದ ಮಾರುಕಟ್ಟೆದಾರರು ಮೇಳದಲ್ಲಿ ಭಾಗವಹಿಸಿದ್ದಾರೆ.

    ಒಟ್ಟು 300 ಮಳಿಗೆಗಳಿದ್ದು, 190 ಮಳಿಗೆಗಳು ಸಾವಯವ ಮತ್ತು ಸಿರಿಧಾನ್ಯ ಸಂಸ್ಥೆಗಳು ರಫ್ತುದಾರರು, ಮಾರಾಟಗಾರರು, ರೈತ ಸಂಘಟನೆಗಳು, ಸಾವಯವ ಪರಿಕರ ಸಂಸ್ಥೆಗಳು, ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳು ಪಾಲ್ಗೊಂಡಿವೆ. ಸಿರಿಧಾನ್ಯ ಬೆಳೆಯುವ ರೈತರಿಗೆ ಈಗಿರುವ ಹೆಕ್ಟೇರ್‌ಗೆ 10 ಸಾವಿರ ರೂಪಾಯಿ ಪ್ರೋತ್ಸಾಹ ಧನವನ್ನು ಹೆಚ್ಚಿಸುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಸಚಿವರು ತಿಳಿಸಿದರು.

    ಸುದ್ದಿಗೋಷ್ಠಿಯಲ್ಲಿ ಕೃಷಿ ಆಯುಕ್ತ ವೈ.ಎಸ್.ಪಾಟೀಲ್, ನಿರ್ದೇಶಕ ಡಾ. ಜಿ.ಟಿ.ಪುತ್ರ, ಜಲಾನಯನ ಅಭಿವೃದ್ಧಿ ಇಲಾಖೆ ನಿರ್ದೇಶಕ ಶ್ರೀನಿವಾಸ್ ಉಪಸ್ಥಿತರಿದ್ದರು.

    ಮೇಳದ ‘ಸಿರಿ’ ಹೆಚ್ಚಿಸಿದ ನಗೆಹಬ್ಬ :ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಮೂರು ದಿನಗಳ ಸಿರಿಧಾನ್ಯ ಮೇಳದ ೨ನೇ ದಿನವಾದ ಶನಿವಾರ ಪ್ರೊ.ಕೃಷ್ಣೇಗೌಡರ ನೇತೃತ್ವದ ತಂಡ ನಡೆಸಿಕೊಟ್ಟ ನಗೆಹಬ್ಬ ಜನರ ಗಮನ ಸೆಳೆಯಿತು. ಸಿರಿಧಾನ್ಯಗಳ ಬಳಕೆ, ಅವುಗಳ ಉತ್ಪಾದನೆಯ ಅವಶ್ಯಕತೆ, ಅದರಿಂದಾಗುವ ಪ್ರಯೋಜನಗಳ ಕುರಿತು ತಮ್ಮ ಹಾಸ್ಯ ಶೈಲಿಯ ಭಾಷಣದ ಮೂಲಕ ಜನರ ಮನಮುಟ್ಟುವಂತೆ ತಿಳಿಸಿದರು.

    ಖ್ಯಾತ ಹಾಸ್ಯ ಭಾಷಣಕಾರರಾದ ರಿಚರ್ಡ್ ಲೂಯಿಸ್, ಮಿಮಿಕ್ರಿ ದಯಾನಂದ, ಮಿಮಿಕ್ರಿ ಗೋಪಿ ಬೇರೆ ಬೇರೆ ವಿಷಯವಸ್ತುನ್ನಿಟ್ಟುಕೊಂಡು ಸಿರಿಧಾನ್ಯದ ಉತ್ತೇಜನಕ್ಕೆ ಪೂರಕವಾಗಿ ಮಾತನಾಡಿದರು.

    ಬಾಯಲ್ಲಿ ನೀರೂರಿಸುವ ಖಾದ್ಯಗಳು : ಸಿರಿಧಾನ್ಯಗಳಿಂದ ಕೇವಲ ಪಾರಂಪರಿಕೆ ಖಾದ್ಯಗಳಷ್ಟೇ ಅಲ್ಲದೆ ಯುವ ಸಮುದಾಯವನ್ನು ಸೆಳೆಯುವ ಆಧುನಿಕ ಆಹಾರ ಪದಾರ್ಥಗಳನ್ನು ತಯಾರಿಸಿದ್ದು ಮೇಳದಲ್ಲಿ ಮಾರಾಟಕ್ಕೆ ಇರಿಸಲಾಗಿದ್ದು, ಆಗಮಿಸಿದ ಜನರಿಗೆ ಬಾಯಲ್ಲಿ ನೀರೂರಿಸಿದವು.

    ನವಣೆ ಮಸಾಲೆ ಬ್ರೆಡ್, ರಾಗಿ ಬ್ರೆಡ್, ಫಿಜ್ಜಾ, ಬರ್ಗರ್, ನೂಡಲ್ಸ್, ಬಿಸ್ಕತ್ ಚಕ್ಕುಲಿ, ಚಿಕ್ಕಿ, ಚಾಕಲೇಟ್, ಜಾಮುನು ಇತ್ಯಾದಿ ಖಾದ್ಯಗಳು ಮೇಳದಲ್ಲಿದ್ದವು. ಕೆಲವು ಮಳಿಗೆ ಮಾಲೀಕರು ಆಗಮಿಸುವ ಎಲ್ಲ ಗ್ರಾಹಕರಿಗೂ ಸ್ಯಾಂಪಲ್ ಟೇಸ್ಟ್ ಮಾಡಲು ನೀಡುತ್ತಿದ್ದುದು ಜನರ ಗುಂಪುಕಟ್ಟಿಕೊಂಡು ಸವಿಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

    “ಮೇಳದಿಂದ ಸಿರಿಧಾನ್ಯದ ಬಗ್ಗೆ ಜನರಿಗೆ ಆಸಕ್ತಿ ಹೆಚ್ಚುತ್ತಿದೆ. ಚಿತ್ರದುರ್ಗದಿಂದ ಬಂದಿದ್ದ ಗ್ರಾಹಕರೋರ್ವರು ಸಿರಿಧಾನ್ಯದ ಮಾಲ್ಟ್ ಬಳಸಲು ಆರಂಭಿಸಿದ ನಂತರ ತಮ್ಮ ತಾಯಿಗೆ ವಿಪರೀತವಾಗಿದ್ದ ಶುಗರ್ ನಿಯಂತ್ರಣಕ್ಕೆ ಬಂದಿದ್ದು, ಹಲವು ಆರೋಗ್ಯ ಸಮಸ್ಯೆಗಳು ನಿವಾರಣೆಯಾಗಿವೆ ಎಂದು ಹೇಳಿಕೊಂಡಿದ್ದಾರೆ. ಜಿಕೆವಿಕೆ ಸಂಸ್ಥೆಯು ಮಿಲೆಟ್ ಮಾಲ್ಟ್ ತಯಾರಿಕೆಗೆ ಸಂಬಂಧಿಸಿದಂತೆ ಮಾರ್ಗದರ್ಶನ ಮತ್ತು ಉತ್ತೇಜನ ನೀಡುತ್ತಿದೆ.”- ರಾಮಾಂಜನೇಯಪ್ಪ, ಮಾರ್ಕೆಟಿಂಗ್ ಹೆಡ್, ಜೀನಿ ಪ್ರಾಡಕ್ಟ್

    “ಕೇವಲ ಬೆಂಗಳೂರನ್ನು ಕೇಂದ್ರೀಕರಿಸಿ ಜಾಹಿರಾತು ನೀಡಿದರೆ ಉಪಯೋಗವಿಲ್ಲ. ಗ್ರಾಹಕರಿಗಿಂತ ಹೆಚ್ಚಾಗಿ ರೈತರನ್ನು ಮೇಳಕ್ಕೆ ಸೆಳೆಯುವ ಪ್ರಯತ್ನ ಮಾಡಿದರೆ ಉತ್ಪಾದನೆ ಹೆಚ್ಚಾಗುತ್ತದೆ. ಸರ್ಕಾರ ಆ ನಿಟ್ಟಿನಲ್ಲಿ ರಾಜ್ಯಾದ್ಯಂತ ಹೆಚ್ಚು ಪ್ರಚಾರ ಮಾಡುವ ಅವಶ್ಯಕತೆ ಇದೆ.” – -ಮಂಜುನಾಥ್, ರಾಗಿ ಪಾಪಡ್ ವ್ಯಾಪಾರಿ, ಸೊರಬ

    “ಮೇಳದಲ್ಲಿ ಮಾರಾಟ ಮಳಿಗೆಗಳಿಗೆ ಹೆಚ್ಚು ಪ್ರಾಧಾನ್ಯತೆ ಕೊಡಲಾಗಿದೆ. ಸಿರಿಧಾನ್ಯಗಳನ್ನು ಉತ್ಪಾದಿಸಲು ಸಹಾಯಕವಾಗುವ ಯಂತ್ರೋಪಕರಣಗಳ ಪ್ರಾತ್ಯಕ್ಷಿಕೆ ಬಗ್ಗೆ ಹೆಚ್ಚು ಬೆಳಕು ಚೆಲ್ಲಿದ್ದರೆ ರೈತರಿಗೆ ಹೆಚ್ಚು ಉಪಯುಕ್ತವಾಗುತ್ತಿತ್ತು.” – – ಮುರುಗೇಶ್, ಆನೇಕಲ್, ಕೃಷಿ ಪಂಡಿತ್ ಪ್ರಶಸ್ತಿ ವಿಜೇತ ರೈತ

    “ಸಿರಿಧಾನ್ಯಗಳ ಬಗ್ಗೆ ಕೇವಲ ಟಿವಿ, ಪೇಪರ್‌ನಲ್ಲಿ ಗಮನಿಸುತ್ತಿದ್ದೆವು. ಆದರೆ ಬೆಂಗಳೂರಿನಲ್ಲಿ ಮೇಳ ನಡೆಯುತ್ತಿರುವುದರಿಂದ ನೇರವಾಗಿ ನೋಡಿ ಖರೀದಿ ಮಾಡಲು ಸಹಾಯಕವಾಗಿದೆ. ಸಿರಿಧಾನ್ಯ ಬಳಕೆ ಆರೋಗ್ಯಕ್ಕೆ ಹೆಚ್ಚು ಉಪಯುಕ್ತವಾಗಿದ್ದು, ಖರೀದಿಗಾಗಿ ಬಂದಿದ್ದೇನೆ” -ಶೋಭ, ಗ್ರಾಹಕಿ, ಬೆಂಗಳೂರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts