More

    ಪಂಚಯಜ್ಞಗಳಿಂದ ಪರಮಾತ್ಮನ ಅನುಗ್ರಹ ಲಭ್ಯ; ಕಾಶೀ ಜಗದ್ಗುರುಗಳು

    ಬೆಂಗಳೂರು : ವೀರಶೈವರಾದವರು ನಿತ್ಯದಲ್ಲಿ ಪಂಚಯಜ್ಞಗಳಿಂದ ಪರಮಾತ್ಮನ ಅನುಗ್ರಹವನ್ನು ಪಡೆದು ಜೀವನವನ್ನು ಪಾವನಗೊಳಿಸಿಕೊಳ್ಳಬೇಕೆಂದು ಕಾಶೀ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ತಿಳಿಸಿದ್ದಾರೆ.

    ವಿಜಯನಗರದ ಶ್ರೀಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಶ್ರೀ ಜಗದ್ಗುರು ವಿಶ್ವಾರಾಧ್ಯ ಜನಕಲ್ಯಾಣ ಪ್ರತಿಷ್ಠಾನವು ಹಮ್ಮಿಕೊಂಡಿರುವ ಶ್ರೀಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಆಶೀರ್ವಚನ ಹಾಗೂ ಧನುರ್ಮಾಸದ ಇಷ್ಟಲಿಂಗ ಮಹಾಪೂಜೆಯ 3ನೇ ದಿನದ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

    ಶ್ರೀಸಿದ್ಧಾಂತ ಶಿಖಾಮಣಿಯಲ್ಲಿ ಜಗದ್ಗುರು ರೇಣುಕಾಚಾರ್ಯರು ‘ಭಕ್ತ ಮಾರ್ಗ ಕ್ರಿಯಾಚರ್ಯ ಸ್ಥಲ’ದಲ್ಲಿ; ತಪಸ್ಸು, ಕರ್ಮ, ಜಪ, ಧ್ಯಾನ, ಜ್ಞಾನ ಎಂಬ ಪಂಚಯಜ್ಞಗಳ ಬಗ್ಗೆ ಉಪದೇಶ ಮಾಡಿದ್ದು, ದೀರ್ಘಕಾಲ ಮಾಡುವ ಶಿವಪೂಜೆಯ ವೇಳೆ ದೇಹಕ್ಕೆ ಆಗುವ ನೋವನ್ನು ಸಹಿಸುವುದೇ ತಪಸ್ಸು. ಪಂಚಾಕ್ಷರಿ ಮಂತ್ರದ ಜಪ, ಶಿವನ ಧ್ಯಾನ, ಅದರಿಂದ ಜ್ಞಾನ ಸಂಪಾದನೆ, ಆ ಮೂಲಕ ಸತ್ಯಶುದ್ಧ ಕಾಯಕ ಮಾಡಿದರೆ ವೀರಶೈವ ಧರ್ಮೀಯರಾಗಿ ಹುಟ್ಟಿದ್ದು ಸಾರ್ಥಕವಾಗುತ್ತದೆ ಎಂದು ಜಗದ್ಗುರುಗಳು ವಿವರಿಸಿದರು.

    ಸಮಾರಂಭದಲ್ಲಿ ಕಾಶೀ ಜಗದ್ಗುರು ವಿರಚಿತ ‘ವೀರಶೈವ ಅಷ್ಟಾವರಣ ವಿಜ್ಞಾನ’ ಕನ್ನಡಾನುವಾದ ಗ್ರಂಥವನ್ನು ನೊಣವಿನಕೆರೆ ಡಾ. ಕರಿವೃಷಭ ದೇಶೀಕೇಂದ್ರ ಸ್ವಾಮಿಗಳು ಲೋಕಾರ್ಪಣೆ ಮಾಡಿದರು. ಶಿವಗಂಗೆ ಮಠದ ಡಾ.ಮಲಯಶಾಂತಮುನಿ ಶಿವಾಚಾರ್ಯ ಸ್ವಾಮಿಗಳು ಶ್ರೀ ಸಿದ್ಧಾಂತ ಶಿಖಾಮಣಿಯ ಪ್ರಾಸ್ತಾವಿಕ ಪ್ರವಚನ ಮಾಡಿದರು.

    ಸಮಾರಂಭದಲ್ಲಿ ವಿಭೂತಿಪುರ ಮಠದ ಡಾ. ಮಹಾಂತಲಿಂಗ ಶಿವಾಚಾರ್ಯ ಸ್ವಾಮಿಗಳು, ವೀರಶೈಲ ಲಿಂಗಾಯತ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಬಿ.ಎಸ್.ಪರಮಶಿವಯ್ಯ, ವಿದ್ವಾಂಸ ಡಾ.ಸಿ.ಶಿವಕುಮಾರಸ್ವಾಮಿ, ಗ್ರಂಥ ಪ್ರಕಾಶಕ ಜಯದೇವ ಮೈಲಾರಪ್ಪ ಮೆಣಸಿಗೆ, ಶಾಂತ ವಿ.ಗೌಡ, ಗಾಯಿತ್ರಿ, ಡಾ.ಸಿ.ಉಮಾದೇವಿ, ಪ್ರಣವ ಜಯಲಿಂಗಪ್ಪ, ಜಯಂತ್ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದ ಮೊದಲಿಗೆ ವಿಜಯನಗರದ ಸ್ನೇಹ ಬಳಗದವರಿಂದ ಶ್ರೀಸಿದ್ಧಾಂತ ಶಿಖಾಮಣಿ ಪಾರಾಯಣ ನಡೆಯಿತು, ಷಡಕ್ಷರಿ ಶಾಸ್ತ್ರಿ ಮತ್ತು ತಂಡದವರು ವೇದಘೋಷ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts