More

    ಮಿಜಾರು ದೇವಳಕ್ಕೆ ಕುತ್ತು ತಂದ ಯೋಜನೆ: ವಿದ್ಯುತ್ ಪ್ರಸರಣ ಮಾರ್ಗ ಬದಲಾವಣೆಗೆ ಆಗ್ರಹ

    ಗುರುಪುರ: ಪಡುಬಿದ್ರಿಯಿಂದ ಕಾಸರಗೋಡಿಗೆ 400 ಕೆವಿ ಸಾಮರ್ಥ್ಯದ ಹೈಟೆನ್ಶನ್ ವಿದ್ಯುತ್ ಪ್ರಸರಣ ಮಾರ್ಗ ಹಾದು ಹೋಗಲಿರುವ ಬಡಗ ಎಡಪದವು ಗ್ರಾಮದ ಮಿಜಾರು ಎಂಬಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀ ಗೋಪಾಲಕೃಷ್ಣ ದೇವಸ್ಥಾನಕ್ಕೆ ಹೈಟೆನ್ಶನ್ ಬಿಸಿ ತಟ್ಟಿದೆ.

    ಹಾಲಿ ಯೋಜನೆಪ್ರಕಾರ ದೇವಸ್ಥಾನ ಮತ್ತು ಹತ್ತಿರದಲ್ಲಿರುವ ಕುಂಟಾರಿನ ಜುಮಾದಿ ದೈವಸ್ಥಾನದ ಮೇಲಿಂದ ಹೈಟೆನ್ಶನ್ ವಿದ್ಯುತ್ ತಂತಿ ಹಾದು ಹೋಗಲಿದೆ. ಇದರಿಂದ ದೇವಸ್ಥಾನ ಮತ್ತು ದೈವಸ್ಥಾನದಲ್ಲಿ ನಡೆಯುವ ಜಾತ್ರಾ ಮಹೋತ್ಸವಕ್ಕೆ ಆತಂಕ ತಪ್ಪಿದ್ದಲ್ಲ.

    ಇದು ಖಾಸಗಿ ದೇವಸ್ಥಾನವಾಗಿದ್ದರೂ, ಬಡಗ ಮತ್ತು ತೆಂಕ ಎಡಪದವು ಗ್ರಾಮದ ಪ್ರಮುಖ ದೇವಸ್ಥಾನವಾಗಿದೆ. ಇಲ್ಲಿನ ಜಾತ್ರೆಗೆ ಸಾವಿರಾರು ಭಕ್ತರು ಸೇರುತ್ತಾರೆ. ವಿದ್ಯುತ್ ತಂತಿಗಳು ದೇವಸ್ಥಾನದ ಮೇಲ್ಭಾಗದಲ್ಲಿ ಹಾದು ಹೋಗುವುದರಿಂದ ಇಲ್ಲಿನ ಜಾತ್ರೆಯ ಸಂದರ್ಭ ನಡೆಯುವ ಅಗ್ನಿ ಕೇಳಿ ಆಚರಣೆ, ದೇವರ ಪೇಟೆ ಸವಾರಿ ಮತ್ತಿತರ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅಡಚಣೆಯಾಗಲಿದೆ.

    ಧಾರ್ಮಿಕ ಸ್ಥಳಗಳು ಇರುವಲ್ಲಿಯೇ ಹೈಟೆನ್ಶನ್ ವಿದ್ಯುತ್ ತಂತಿ ಅಳವಡಿಸುವ ಯೋಜನೆ ರೂಪಿಸಲಾಗಿದೆ. ಇದರಿಂದ ಸ್ಥಳೀಯ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟಾಗಲಿದೆ. ರಾಷ್ಟ್ರೀಯ ಯೋಜನೆಗಳ ಅನುಷ್ಠಾನದ ವಿಚಾರ ಬಂದಾಗ ಧಾರ್ಮಿಕ ಕೇಂದ್ರಗಳನ್ನು ಸ್ಥಳಾಂತರ ಮಾಡಿರುವ ನಿದರ್ಶನಗಳಿವೆ. ಇಲ್ಲಿ ಸ್ಥಳಾಂತರದ ಅಗತ್ಯವಿಲ್ಲದೆ, ವಿದ್ಯುತ್ ಯೋಜನೆಯಿಂದ ದೇವಸ್ಥಾನ ಮತ್ತು ದೈವಸ್ಥಾನದ ಧಾರ್ಮಿಕ ಆಚರಣೆಗಳಿಗೆ ಆತಂಕ ಎದುರಾಗಿದೆ. ಅಧಿಕಾರಿಗಳು ಮನಸ್ಸು ಮಾಡಿದಲ್ಲಿ ಭಕ್ತರ ಆತಂಕ ಬಗೆಹರಿಸಲು ಸಾಧ್ಯವಿದೆ ಎಂದು ಸ್ಥಳೀಯರು ಹೇಳಿದ್ದಾರೆ.

    ಯೋಜನೆ ಕಾರ್ಯಗತ ಹಂತದಲ್ಲಿ ಅಧಿಕಾರಿಗಳು ಜಾಗದ ಮಾಲೀಕರಿಗೆ ಬೆದರಿಕೆಯೊಡ್ಡಿದ್ದು, ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳೀಯರ ಟೆನ್ಶನ್ ಸಮಸ್ಯೆ ಶೀಘ್ರ ಬಗೆಹರಿಯದೆ ಹೋದಲ್ಲಿ ದೊಡ್ಡ ಮಟ್ಟದ ಹೋರಾಟ ನಡೆಯುವ ಸಾಧ್ಯತೆ ಕಂಡು ಬಂದಿದೆ.

    ದೇವಸ್ಥಾನ ಮೇಲ್ಭಾಗದಿಂದ ಹಾದು ಹೋಗಲಿರುವ ವಿದ್ಯುತ್ ತಂತಿಗಳಿಗೆ ಪರ್ಯಾಯ ಮಾರ್ಗಕಲ್ಪಿಸಬೇಕು. ವಿದ್ಯುತ್ ತಂತಿ ಅಳವಡಿಸುವ ಗುತ್ತಿಗೆ ಕಂಪನಿ ಅಧಿಕಾರಿಗಳು ಸಂತ್ರಸ್ತರಿಗೆ ಬೆದರಿಕೆಯೊಡ್ಡುತ್ತಿದ್ದಾರೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ರೈತ ಸಂಘ ತೀವ್ರ ಹೋರಾಟ ನಡೆಸಲಿದೆ.
    -ದಯಾನಂದ ಶೆಟ್ಟಿ ಕುಳವೂರು
    ತಾಲೂಕು ಅಧ್ಯಕ್ಷ, ರಾಜ್ಯ ರೈತ ಸಂಘದ ಹಸಿರುಸೇನೆ ಮಂಗಳೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts