More

    ಮಹಾನಗರ ಮತದಾರರು 8.11ಲಕ್ಷ

    ಸಂತೋಷ ವೈದ್ಯ ಹುಬ್ಬಳ್ಳಿ
    ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ವಾರು ಮತದಾರರ ಪಟ್ಟಿ ತಯಾರಿಸುವ ಪ್ರಕ್ರಿಯೆಯನ್ನು ಮುಂದುವರಿಸಿಕೊಂಡು ಹೋಗುವಂತೆ ಕರ್ನಾಟಕ ರಾಜ್ಯ ಚುನಾವಣೆ ಆಯೋಗವು ಪಾಲಿಕೆಗೆ ಗ್ರೀನ್ ಸಿಗ್ನಲ್ ನೀಡಿದೆ. 2021 ಜನವರಿ 18ರಂದು ಅಂತಿಮಗೊಳಿಸಲಾದ ವಿಧಾನಸಭೆ ಕ್ಷೇತ್ರಗಳ ಮತದಾರರ ಪಟ್ಟಿ ಪರಿಷ್ಕರಣೆಯ ಪ್ರಕಾರ ಅವಳಿ ನಗರದಲ್ಲಿ 8,11,834 ಜನ ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ.
    ಮತದಾರರ ನೋಂದಣಿ ಪ್ರಕ್ರಿಯೆಯು ನಿರಂತರವಾದದ್ದು ಹಾಗೂ ಪಾಲಿಕೆಯ ಚುನಾವಣೆ ಸನಿಹದಲ್ಲಿ ಜಿಲ್ಲಾಡಳಿತವು ವಿಶೇಷ ಅಭಿಯಾನ ನಡೆಸುವ ಸಾಧ್ಯತೆಗಳಿರುತ್ತವೆ. ಈ ಕಾರಣಕ್ಕೆ ಅವಳಿ ನಗರದ ಮತದಾರರ ಪಟ್ಟಿಯಲ್ಲಿ (ಹೆಚ್ಚುವರಿ) ಬದಲಾವಣೆ ನಿಶ್ಚಿತ. ವಾರ್ಡ್​ಗಳ ಮರು ವಿಂಗಡಣೆ ಬಳಿಕ 67ರಿಂದ 82ಕ್ಕೆ ಏರಿಕೆಯಾಗಿರುವ ವಾರ್ಡ್​ಗಳಿಗೆ ಮತದಾರರನ್ನು ಹಂಚಿಕೆ ಮಾಡಿ ಪಟ್ಟಿ ತಯಾರಿಸುವ ಕೆಲಸದಲ್ಲಿ ಪಾಲಿಕೆಯು ಕಳೆದ ಒಂದು ವಾರದಿಂದ ನಿರತವಾಗಿದೆ. ಈ ಸಂಬಂಧ ಚುನಾವಣೆ ಆಯೋಗವು ಪಾಲಿಕೆಗೆ ಕೆಲ ಸೂಚನೆಗಳನ್ನು ನೀಡಿದೆ.
    ವಿಧಾನಸಭೆ ಕ್ಷೇತ್ರಗಳ ಮತದಾರರ ಡಾಟಾ ಬೇಸ್ ಅಳವಡಿಸಿಕೊಂಡು ಮತದಾರರ ಪಟ್ಟಿ ತಯಾರಿಸಬೇಕು. ವಾರ್ಡ್ ಗಳ ಮತದಾರರ ಪಟ್ಟಿಯನ್ನು ಆಯಾ ವಾರ್ಡಿನ ವ್ಯಾಪ್ತಿಗೆ ಬರುವ ವಿಧಾನಸಭೆ ಕ್ಷೇತ್ರದ ಮತದಾರರ ಪಟ್ಟಿಯೊಂದಿಗೆ ತಾಳೆ ಮಾಡಿ, ಒಟ್ಟು ಮತದಾರರ ಸಂಖ್ಯೆಯು ವಿಧಾನಸಭೆ ಮತದಾರರ ಪಟ್ಟಿಯಲ್ಲಿರುವ ಮತದಾರರ ಸಂಖ್ಯೆಯನ್ನು ಮೀರದಂತೆ ಹಾಗೂ ಕಡಿಮೆಯಾಗದಂತೆ ಎಚ್ಚರ ವಹಿಸಬೇಕು ಎಂದು ಆಯೋಗ ಸೂಚಿಸಿದೆ. ಇದು ಎರಡು ವಾರ್ಡ್ ಗಳ ಗಡಿಯಲ್ಲಿರುವ ಮತದಾರರನ್ನು ವಿಂಗಡಿಸುವಾಗ ಬಹಳ ಮಹತ್ವ ಪಡೆದುಕೊಳ್ಳಲಿದೆ.
    ಯಾವುದೇ ಕಾರಣಕ್ಕೂ ಒಂದು ವಾರ್ಡಿನ ಮತದಾರರು ಇನ್ನೊಂದು ವಾರ್ಡ್​ನ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಬಾರದು. ಯಾವುದೇ ಮತದಾರರ ಹೆಸರು ಒಂದಕ್ಕಿಂತ ಹೆಚ್ಚು ವಾರ್ಡ್​ನ ಮತದಾರರ ಪಟ್ಟಿಯಲ್ಲಿ ಪುನರಾವರ್ತನೆ ಆಗಬಾರದು. ಮತದಾರರ ಪಟ್ಟಿಯಲ್ಲಿ ಕಂಡು ಬರುವ ಲೋಪದೋಷಗಳಿಗೆ ಜಿಲ್ಲಾ ಚುನಾವಣೆ ಅಧಿಕಾರಿಗಳೇ ನೇರ ಹೊಣೆಗಾರರಾಗಿರುತ್ತಾರೆ ಎಂದು ಆಯೋಗ ಎಚ್ಚರಿಸಿದೆ.
    ಎಲೆಕ್ಷನ್ ಗೊಂದಲ: ಕಳೆದ ವಾರ ರಾಜ್ಯ ಸಚಿವ ಸಂಪುಟವು ಏಪ್ರಿಲ್ 26ರಿಂದ ಮುಂದಿನ 6 ತಿಂಗಳುಗಳ ಅವಧಿಗೆ ನಗರ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ, ಉಪ ಚುನಾವಣೆ ಹಾಗೂ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಚುನಾವಣೆಯನ್ನು ಮುಂದೂಡುವ ತೀರ್ಮಾನ ಕೈಗೊಂಡಿದೆ. ಆದರೆ, ಚುನಾವಣೆ ಆಯೋಗವು ಮಂಗಳವಾರ (ಜೂ. 22) ಪಾಲಿಕೆಗೆ ನೀಡಿರುವ ಸ್ಪಷ್ಟನೆಯಲ್ಲಿ ಹೈ ಕೋರ್ಟ್ ವಿಭಾಗೀಯ ಪೀಠ (ಬೆಂಗಳೂರು) 2020ರ ಡಿಸೆಂಬರ್ 17ರಂದು ನೀಡಿದ ತೀರ್ಪನ್ನು ಉಲ್ಲೇಖಿಸಿದೆ. ಹು-ಧಾ ಮಹಾನಗರ ಪಾಲಿಕೆಯ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ದಾಖಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ದಾವೆಯ ಕುರಿತು ಅಂದು ನ್ಯಾಯಾಲಯವು ಕಾಲಮಿತಿಯೊಳಗೆ ಚುನಾವಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು ಹೇಳಿತ್ತು. ಹಾಗಾಗಿ, ಜೂ. 14ರಂದು ನೀಡಿದ್ದ ವೇಳಾಪಟ್ಟಿಯಂತೆ ಮತದಾರರ ಪಟ್ಟಿಯನ್ನು ತಯಾರಿಸಲು ಕ್ರಮ ಕೈಗೊಳ್ಳಬೇಕು ಎಂದು ಆಯೋಗದ ಅಧೀನ ಕಾರ್ಯದರ್ಶಿ, ಧಾರವಾಡ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ. ರಾಜ್ಯ ಸಚಿವ ಸಂಪುಟದ ತೀರ್ವನದ ಬಳಿಕ ಗೊಂದಲಕ್ಕೆ ಸಿಲುಕಿದ್ದ ಜಿಲ್ಲಾಡಳಿತವು ಮತದಾರ ಪಟ್ಟಿ ತಯಾರಿಸುವ ಕೆಲಸ ಮುಂದುವರಿಸಬೇಕೋ ಅಥವಾ ಸ್ಥಗಿತಗೊಳಿಸಬೇಕೋ ಎಂಬುದರ ಕುರಿತು ಸ್ಪಷ್ಟನೆ ನೀಡಬೇಕೆಂದು ಕೋರಿ ಆಯೋಗಕ್ಕೆ ಪತ್ರ ಬರೆದಿತ್ತು. ಅಕ್ಟೋಬರ್​ವರೆಗೆ ಚುನಾವಣೆ ಮುಂದೂಡಲು ಕೋವಿಡ್ ಕಾರಣ ಹೇಳಿದ್ದ ರಾಜ್ಯ ಸರ್ಕಾರ ಇದೀಗ ಲೌಕ್​ಡೌನ್ ನಿಯಮಗಳಲ್ಲಿ ಸಡಿಲಿಕೆ ನೀಡಿರುವುದು ವಿಪರ್ಯಾಸವಾಗಿದೆ. 2019ರ ಮಾರ್ಚ್ 6ರಿಂದ ಹು-ಧಾ ಮಹಾನಗರ ಪಾಲಿಕೆಯಲ್ಲಿ ಜನಪ್ರತಿನಿಧಿಗಳ ಆಡಳಿತ ಇಲ್ಲವಾಗಿದೆ.
    ಮಹಿಳೆಯರು ಹೆಚ್ಚು, 88 ತೃತೀಯ ಲಿಂಗಿಗಳು: 2021ರ ಜನವರಿ 18ರ ಅಂತಿಮ ಮತದಾರರ ಪಟ್ಟಿ ಪ್ರಕಾರ ಪಾಲಿಕೆ ವ್ಯಾಪ್ತಿಯಲ್ಲಿ ಪುರುಷರಿಗಿಂತ ಮಹಿಳಾ ಮತದಾರರೇ ಹೆಚ್ಚಿದ್ದಾರೆ. 4,03,643 ಪುರುಷ ಮತದಾರರಿದ್ದರೆ, 4,08,103 ಮಹಿಳಾ ಮತದಾರರಿದ್ದಾರೆ. 88ಜನ ತೃತೀಯ ಲಿಂಗಿಗಳು ಸೇರಿ ಒಟ್ಟು 8,11,834 ಜನರು ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ.


    ಕಾಲ ಮಿತಿ ಯೊಳಗೆ ಮತದಾರರ ಪಟ್ಟಿ ತಯಾರಿಸುವಂತೆ ಹೈ ಕೋರ್ಟ್ ತೀರ್ಪಿನಲ್ಲಿ ಹೇಳಲಾಗಿದೆ. ಅದರಂತೆ ಪಾಲಿಕೆ ವ್ಯಾಪ್ತಿಯ ವಾರ್ಡ್ ವಾರು ಮತದಾರರ ಪಟ್ಟಿ ತಯಾರಿಸುವ ಪ್ರಕ್ರಿಯೆಯನ್ನು ಮುಂದುವರಿಸಿ ಕೊಂಡು ಹೋಗುವಂತೆ ಕರ್ನಾಟಕ ರಾಜ್ಯ ಚುನಾವಣೆ ಆಯೋಗ ಸೂಚಿಸಿದೆ.
    |ಡಾ. ಸುರೇಶ ಇಟ್ನಾಳ ಪಾಲಿಕೆ ಆಯುಕ್ತರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts