More

    ಹಳ್ಳಿ ಗಿಡಗಳಿಗೆ ರಾಜ ಮರ್ಯಾದೆ, ಮಹತ್ವ ಅರಿಯದೆ ಗ್ರಾಮೀಣ ಭಾಗದಿಂದ ಮರೆಯಾದ ಸಸಿಗಳು

    ಅನ್ಸಾರ್ ಇನೋಳಿ ಉಳ್ಳಾಲ

    ಗ್ರಾಮೀಣ ಭಾಗದಲ್ಲಿ ಎಲ್ಲೆಂದರಲ್ಲಿ ಕಾಣುತ್ತಿದ್ದ ಔಷಧೀಯ ಗಿಡಗಳು ಇಂದು ಅವಸಾನದ ಅಂಚಿನಲ್ಲಿದ್ದರೂ ನರ್ಸರಿಯಲ್ಲಿ ರಾಜ ಗಾಂಭೀರ್ಯ ಪಡೆಯುತ್ತಿವೆ.

    ಗ್ರಾಮೀಣ ಭಾಗದಲ್ಲಿ ರಸ್ತೆಬದಿ, ಹುಲ್ಲಿನ ನಡುವೆ, ಗದ್ದೆ, ತೋಟ, ಕೆರೆ, ಬಾವಿಕಟ್ಟೆ ಹೀಗೆ ಎಲ್ಲೆಂದರಲ್ಲಿ ಬೆಳೆಯುತ್ತಿದ್ದ ಹಲವು ಗಿಡಗಳು ಜನರ ನಿರ್ಲಕ್ಷೃ ಅಥವಾ ಮಹತ್ವ ಗೊತ್ತಿಲ್ಲದೆ ಅನಾದರಕ್ಕೊಳಗಾಯಿತು. ಕೆಲವನ್ನು ನಾಶಪಡಿಸಲಾಯಿತು. ಕ್ರಿಮಿನಾಶಕದಿಂದಲೂ ನಾಶವಾದವು. ಇವೆಲ್ಲದರ ಪರಿಣಾಮ ಗ್ರಾಮೀಣ ಭಾಗದಲ್ಲಿ ಎಲ್ಲೆಂದರಲ್ಲಿ ಸಿಗುತ್ತಿದ್ದ ಔಷಧೀಯ ಗಿಡಗಳು ಮಾಯವಾದವು. ಅಲ್ಲಿ ಮಾಯವಾದದ್ದು ನಗರದಲ್ಲಿರುವ ನರ್ಸರಿಗಳಲ್ಲಿ ಕಂಗೊಳಿಸತೊಡಗಿವೆ. ನರ್ಸರಿಗಳಲ್ಲಿ ಗರಿಷ್ಠ ದರಕ್ಕೆ ಮಾರಾಟಗೊಂಡು ಸಿರಿವಂತರ ಮನೆಯ ವೃಂದಾವನ ಇಲ್ಲವೇ, ಔಷಧ ವನಗಳಿಗೆ ಸೇರುತ್ತಿವೆ.

    ಕಿಡ್ನಿಯಲ್ಲಿ ಕಲ್ಲಾದರೆ ಬಳಸಲ್ಪಡುವ ಬ್ರೌಸಿ ಸ್ಟೋನ್ ಪ್ಲಾಂಟ್ ಹೆಸರಿನ ಗಿಡದ ಎಲೆಗಳನ್ನು ಹಿಂದೆ ಹಳ್ಳಿ ಮಕ್ಕಳು ಪುಸ್ತಕದಲ್ಲಿಡುತ್ತಿದ್ದರು. ಆ ಎಲೆಯಲ್ಲೇ ಹಲವು ಗಿಡಗಳು ಬೆಳೆಯುತ್ತಿದ್ದವು. ಇಂದು ಈ ಗಿಡ ಗ್ರಾಮೀಣ ಭಾಗದಲ್ಲಿ ಬಹಳ ಕಡಿಮೆಯಾಗಿದೆ. ಮಕ್ಕಳಿಗೂ ಇದರ ಮಹತ್ವ ಗೊತ್ತಿಲ್ಲ. ಆದರೆ ಇದೇ ಗಿಡ ನರ್ಸರಿಯಲ್ಲಿ 100-150 ರೂ.ಗೆ ಮಾರಾಟವಾಗುತ್ತಿದೆ.

    ಕೆರೆ, ಮುಳ್ಳನ್ನು ಹೊಂದಿ ಬೇಲಿಗಳಿಗೆ ಬಳಸುತ್ತಿದ್ದ ಊರಿನ ಬುಗರಿ, ಕಾಗದ ಹೂವು, ಸದಾಪುಷ್ಪ, ಒಂದು ರೀತಿಯ ಹೂವು ಹಣ್ಣು ನೀಡುತ್ತಿದ್ದ ನೆಕ್ಕರೆ, ಮೆಲೆಸ್ಟ್ರೋಮಿಯಾ, ಕೋಸ್ಟ್ ಸಲ್ಫೀನ್, ಬಾವಿ, ಕೆರೆ, ತೋಟದಲ್ಲಿ ಬೆಳೆಯುತ್ತಿದ್ದ ಹುಲ್ಲು, ಈಚಲು ಮರದಲ್ಲಿ ಬೆಳೆಯುತ್ತಿದ್ದ ಫೆರ್ನ್, ಗೌರಿ ಹೂವು, ತಾವರೆ, ತೇವು, ಬಸಳೆ, ತುಳಸಿ, ಸಂಬಾರ ಬಳ್ಳಿ ಇತ್ಯಾದಿ ಗಿಡಗಳು ಹಳ್ಳಿಯಲ್ಲಿ ಕರೆಯಲ್ಪಡುತ್ತಿದ್ದ ಮೂಲ ಹೆಸರು ಕಳೆದುಕೊಂಡು ಔಷಧದ ಗಿಡವಾಗಿಯೂ, ಆಲಂಕಾರಿಕ ಗಿಡವಾಗಿಯೂ ನರ್ಸರಿಯಲ್ಲಿ ಸಿಗುತ್ತಿವೆ.

    ಆಧುನಿಕತೆಗೆ ತಕ್ಕಂತೆ ಬದಲಾವಣೆಗಳು ಸಾಮಾನ್ಯ. ಅದೇ ರೀತಿ ಗ್ರಾಮೀಣ ಭಾಗದಲ್ಲಿ ನಿರ್ಲಕ್ಷೃಕ್ಕೊಳಗಾದ ಗಿಡಗಳು ಹೊಸ ರೂಪದಲ್ಲಿ ನರ್ಸರಿಯಲ್ಲಿ ಬೇಡಿಕೆ ಪಡೆದಿದೆ. ಈಗಿನ ಜನರಿಗೆ ಅಭಿರುಚಿಗೆ ತಕ್ಕಂಥ ವ್ಯವಸ್ಥೆಗಳೂ ಆಗುತ್ತಿವೆ. ಇದರಿಂದ ಕೃಷಿ, ತೋಟಗಾರಿಕೆ, ಆಲಂಕಾರಿಕೆ ವಿಷಯದಲ್ಲೂ ಯು ಸಮುದಾಯ ಆಸಕ್ತರಾಗುತ್ತಿರುವುದು ಉತ್ತಮ ಬೆಳವಣಿಗೆ.

    ಸಿರಿಲ್ ರಾಬರ್ಟ್ ಡಿಸೋಜ
    ತೋಟಗಾರಿಕಾ ಇಲಾಖೆ ಸಿಬ್ಬಂದಿ

    ಈಗಲೂ ಗ್ರಾಮೀಣ ಭಾಗದಲ್ಲಿ ವಿಭಿನ್ನ ಬಗೆಯ ಗಿಡಗಳು ಇದ್ದರೂ ಅದರ ಮಹತ್ವ ಗೊತ್ತಾಗುವುದು ನಗರ ಪ್ರದೇಶದ ಜನರಿಂದ. ಇದೇ ರೀತಿ ಮುಂದುವರಿದಲ್ಲಿ ಕೆಲವೇ ವರ್ಷಗಳಲ್ಲಿ ಹಳ್ಳಿಯಲ್ಲಿ ಈಗಿರುವ ಎಲ್ಲ ಗಿಡಗಳೂ ನರ್ಸರಿ ಸೇರಿ ಗ್ರಾಮೀಣ ಜನ ಹಣ ಕೊಟ್ಟು ಖರೀದಿಸಬೇಕಾದ ಪ್ರಮೇಯ ಬರಬಹುದು.

    ಝಕರಿಯಾ ಮಲಾರ್, ಕೃಷಿಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts