More

    ರೈಲು ನಿಲ್ದಾಣದಲ್ಲೇ ತಪಾಸಣೆ

    ವಿಜಯವಾಣಿ ಸುದ್ದಿಜಾಲ ಗದಗ

    ಮೇ 2ರಂದು ಬೆಳಗ್ಗೆ ಮುಂಬೈನಿಂದ ಗದಗ ನಗರಕ್ಕೆ ರೈಲಿನಲ್ಲಿ ಆಗಮಿಸುವ ಜನರ ಆರೋಗ್ಯ ತಪಾಸಣೆ ನಡೆಸಲು ರೈಲು ನಿಲ್ದಾಣದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎದು ಸಚಿವ ಸಿ.ಸಿ. ಪಾಟೀಲ ಹೇಳಿದರು.

    ಗದಗ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಲಾಕ್​ಡೌನ್ ಸಡಿಲಿಕೆ ಮಾಡಿ ಅಂತಾರಾಜ್ಯ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿರುವುದರಿಂದ, ರೈಲಿನ ಮೂಲಕ ಮುಂಬೈನಿಂದ ಗದಗ ನಗರಕ್ಕೆ ಹಲವಾರು ಪ್ರಯಾಣಿಕರು ಆಗಮಿಸಲಿದ್ದಾರೆ. ಮುಂಬೈನಲ್ಲಿ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚಿದ್ದು, ಅಲ್ಲಿಂದ ಬರುವವರಿಗೆ ಸೋಂಕು ದೃಢಪಟ್ಟಿರುವುದು ರಾಜ್ಯದಲ್ಲಿ ಸಾಮಾನ್ಯವಾಗಿದೆ. ಹೀಗಾಗಿ, ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ಸನ್ನದ್ಧವಾಗಿದೆ ಎಂದರು.

    ಹೊರರಾಜ್ಯಗಳಿಂದ ಆಗಮಿಸುವ ಜಿಲ್ಲೆಯ ಜನರನ್ನು ರೈಲು, ಬಸ್ ನಿಲ್ದಾಣಗಳಲ್ಲೇ ಪರೀಕ್ಷಿಸಲು ಈಗಾಗಲೇ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಹಾರಾಷ್ಟ್ರದಿಂದ ಬರುವ ಎಲ್ಲರನ್ನೂ 7 ದಿನ ಸಾಂಸ್ಥಿಕ ಕ್ವಾರಂಟೈನ್​ದಲ್ಲಿ ಇಡಲು 30 ಕೋವಿಡ್-19 ಕಾಳಜಿ ಕೇಂದ್ರಗಳು ಹಾಗೂ 1325 ಬೆಡ್​ಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.

    ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಇದೀಗ ಆರ್​ಟಿಪಿಸಿಆರ್ ಯಂತ್ರ ಕಾರ್ಯನಿರ್ವಹಣೆ ಆರಂಭಿಸಿದ್ದು, ಪ್ರತಿ ದಿನ 100 ಮಾದರಿಗಳನ್ನು ಪರೀಕ್ಷಿಸಲು ಸಾಧ್ಯವಾಗಿದೆ ಎಂದರು.

    ಜಿಲ್ಲೆಯ 35 ಕೋವಿಡ್- 19 ಸೋಂಕು ಪ್ರಕರಣಗಳ ಪೈಕಿ ಒಬ್ಬರು ಮೃತಪಟ್ಟಿದ್ದು, 14 ಸೋಂಕಿತರು ಗುಣಹೊಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ 20 ಸಕ್ರಿಯ ಪ್ರಕರಣಗಳು ಜಿಲ್ಲೆಯಲ್ಲಿವೆ. ಜಿಲ್ಲೆಯ 3 ಕೋವಿಡ್ ಪ್ರತಿಬಂಧಿತ ವಲಯಗಳ ಪೈಕಿ ರಂಗನವಾಡಿ ಹಾಗೂ ರೋಣದ ಕೃಷ್ಣಾಪೂರ ಸಾಮಾನ್ಯ ವಲಯಗಳಾಗಿದ್ದು, ಗಂಜಿ ಬಸವೇಶ್ವರ ವೃತ್ತದ ಪ್ರದೇಶ ಕಂಟೇನ್ಮೆಂಟ್ ವಲಯವಾಗಿ ಮುಂದುವರಿದಿದೆ ಎಂದು ಸಚಿವರು ವಿವರಿಸಿದರು.

    ಪರೀಕ್ಷೆಗೆ ಅಗತ್ಯ ಸಿದ್ಧತೆ: ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳ ಆರೋಗ್ಯ ರಕ್ಷಣೆ ಮುಖ್ಯವಾಗಿದೆ. ವಿದ್ಯಾರ್ಥಿಗಳು ಮುಖಕ್ಕೆ ಮಾಸ್ಕ್ ಧರಿಸಿ, ದೈಹಿಕ ಅಂತರ ಕಾಪಾಡಿಕೊಂಡು ನಿಶ್ಚಿಂತೆಯಿಂದ ಪರೀಕ್ಷೆ ಬರೆಯಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಸಚಿವ ಸಿ.ಸಿ. ಪಾಟೀಲ ಹೇಳಿದರು. ಅಗತ್ಯ ಔಷಧಗಳು, ವೈದ್ಯಕೀಯ ಸಿಬ್ಬಂದಿ ತಕ್ಷಣಕ್ಕೆ ಲಭ್ಯವಾಗುವಂತೆ ಕ್ರಮ ಜರುಗಿಸಲು ಆರೋಗ್ಯ ಇಲಾಖೆಗೆ ಸೂಚಿಸಲಾಗಿದೆ. ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಬರಲು ಅನುಕೂಲ ಇರುವ ಪಾಲಕರು ಸ್ವಂತ ವಾಹನ ಉಪಯೋಗಿಸುವಂತೆ ಮನವಿ ಮಾಡಿಕೊಳ್ಳಲಾಗಿದೆ. ಉಳಿದಂತೆ ವಾಯವ್ಯ ಸಾರಿಗೆಯಿಂದ ಬಸ್ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

    ಬೀಜ, ಗೊಬ್ಬರಕ್ಕೆ ಕೊರತೆಯಿಲ್ಲ: ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದು ಮುಂಗಾರು ಕೃಷಿಗೆ ಉತ್ತಮ ವಾತಾವರಣವಿದೆ. ಜಿಲ್ಲೆಯ ರೈತರಿಗೆ ಉತ್ತಮ ಬೀಜ ಹಾಗೂ ರಸಗೊಬ್ಬರ ಪೂರೈಕೆ ಹಾಗೂ ಅವಶ್ಯಕತೆಗೆ ಅನುಗುಣವಾಗಿ ಹೆಚ್ಚುವರಿ ಮಾರಾಟ ಕೇಂದ್ರ ಆರಂಭಿಸಲು ಜಂಟಿ ಕೃಷಿ ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ ಎಂದು ಸಚಿವ ಸಿ.ಸಿ.ಪಾಟೀಲ ಹೇಳಿದರು. ಸದ್ಯ 7,494 ಕ್ವಿಂಟಾಲ್ ಬಿತ್ತನೆ ಬೀಜ ಹಾಗೂ 14457 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಇದ್ದು, ರೈತರಿಗೆ ಬೀಜ, ಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಲಾಗುವುದು. ಜಿಲ್ಲೆಯಲ್ಲಿ 2.80 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರು ಬಿತ್ತನೆ ಗುರಿ ಇದೆ ಎಂದು ಅವರು ವಿವರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts