More

    ವೈದ್ಯಕೀಯ ಕೌಶಲ ಪ್ರಯೋಗಾಲಯ ಉದ್ಘಾಟನೆ ನಾಳೆ

    ಬೆಳಗಾವಿ: ಮನುಷ್ಯನ ಆಕಾರದ ಬೊಂಬೆ (ಮ್ಯಾನಿಕ್ವಿನ್ ತಂತ್ರಜ್ಞಾನ) ಬಳಸಿ ವಿನೂತನ ತಂತ್ರಜ್ಞಾನದ ಮೂಲಕ ವೈದ್ಯಕೀಯ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಬೇತಿ ನೀಡಲು ‘ಕೆಎಲ್‌ಇ ಅಡ್ವಾನ್ಸ್‌ಡ್ ಸಿಮ್ಯುಲೇಷನ್ ಸೆಂಟರ್ ಆ್ಯಂಡ್ ಕ್ಲಿನಿಕಲ್ ಸ್ಕಿಲ್ ಲ್ಯಾಬ್’ ಸ್ಥಾಪಿಸಲಾಗಿದೆ
    ಎಂದು ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಮಾಹಿತಿ ನೀಡಿದರು.

    ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ವೈದ್ಯಕೀಯ ಕೌಶಲ ಪ್ರಯೋಗಾಲಯವನ್ನು ಜ.17ರಂದು ಮಧ್ಯಾಹ್ನ 3ಗಂಟೆಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಉದ್ಘಾಟಿಸಲಿದ್ದಾರೆ. ಅಲ್ಲದೆ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಮುಖ್ಯ ಅತಿಥಿಯಾಗಿ ಆಗಮಿಸುವರು ಎಂದು ತಿಳಿಸಿದರು.

    ವೈದ್ಯಕೀಯ ವಿದ್ಯಾರ್ಥಿಗಳಿಗೆ ತರಬೇತಿ: ನಗರದ ಕೆಎಲ್‌ಇ ಸಂಸ್ಥೆಯ ಹೈಯರ್ ಎಜುಕೇಷನ್ ಆ್ಯಂಡ್ ರಿಸರ್ಚ್ ಅಕಾಡೆಮಿಯು ಜೆಎನ್‌ಎಂಸಿ ಕಾಲೇಜ್‌ನಲ್ಲಿ ಈ ಲ್ಯಾಬ್ ಸ್ಥಾಪಿಸಲಾಗಿದೆ. ಮಾನವನ ರೂಪದ ಮ್ಯಾನಿಕ್ವಿನ್ ತಂತ್ರಜ್ಞಾನದ ಮೂಲಕ (ಬೊಂಬೆಗಳನ್ನು ಉಪಯೋಗಿಸಿ) ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುವುದು. ಇದರಿಂದ ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾಗಿ ಬೋಧನೆ ಮಾಡಬಹುದು. ಮನುಷ್ಯರ ಬದಲಿಗೆ ಈ ಯಂತ್ರ ಆಧರಿತವಾದ ಬೊಂಬೆ ನೀಡಿ ಪ್ರಾಯೋಗಿಕ ಪರೀಕ್ಷೆ ಮತ್ತು ತರಬೇತಿ ಕೊಡಲಾಗುವುದು ಎಂದರು.

    15 ಕೋಟಿ ರೂ. ವೆಚ್ಚ: 15 ಕೋಟಿ ರೂ. ಮೊತ್ತದ ಯೋಜನೆ ಇದಾಗಿದ್ದು, ಮೊದಲ ಹಂತದಲ್ಲಿ 7 ಕೋಟಿ ರೂ. ವೆಚ್ಚದಲ್ಲಿ ಕೇಂದ್ರ ಸಜ್ಜುಗೊಳಿಸಲಾಗಿದೆ. ಶೇ. 50 ಪರಿಕರಗಳನ್ನು ಅಮೆರಿಕದಿಂದ ತರಿಸಿ ಜೋಡಿಸಲಾಗಿದೆ.

    ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಪ್ರಯೋಗಾಲಯ ರೂಪಿಸಿದ ಈ ಭಾಗದ ಪ್ರಥಮ ಆಸ್ಪತ್ರೆ ನಮ್ಮದಾಗಿದೆ. ವಿದ್ಯಾರ್ಥಿಗಳ ಕ್ಲಿನಿಕಲ್ ಕೌಶಲಗಳ ವೃದ್ಧಿಗೆ ಈ ಕೇಂದ್ರ ಸಹಕಾರಿಯಾಗಲಿದೆ ಎಂದರು. 8 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ಕ್ಲಿನಿಕಲ್ ಪರಿಸರ ರೂಪಿಸಲಾಗಿದೆ.

    ರೋಗಿಗಳ ಸುರಕ್ಷತೆ ಉತ್ತೇಜಿಸುವ ಪ್ರಮುಖ ಧ್ಯೇಯದೊಂದಿಗೆ ಹಾಗೂ ಅಪಾಯ ಮುಕ್ತ ಕಲಿಕೆಯ ಮೂಲಕ ವೈದ್ಯಕೀಯ ವೃತ್ತಿಪರ ಪಠ್ಯಕ್ರಮಕ್ಕೆ ಸಾಮರ್ಥ್ಯ ಆಧಾರಿತ ಸಿಮ್ಯುಲೇಷನ್ ಶಿಕ್ಷಣ ಇದಾಗಿದೆ. ಭ್ರೂಣ, ನವಜಾತ ಶಿಶು ಹಾಗೂ ವಯಸ್ಕ ರೋಗಿಗಳ ಆರೈಕೆಗಾಗಿ ಲ್ಯಾಪ್‌ರೊಸ್ಕೋಪಿಕ್ ಶಸ್ತ್ರಚಿಕಿತ್ಸೆ ಮತ್ತು ಇಂಟರ್ವೆನ್ಷನಲ್ ಅಲ್ಟ್ರಾಸೌಂಡ್ ತರಬೇತಿಗೆ ದೇಹದಂತಿರುವ ಸಿಮ್ಯುಲೇಟರ್‌ಗಳನ್ನು ಕೇಂದ್ರ ಹೊಂದಿದೆ ಎಂದರು. ಕೆಎಲ್‌ಇ ಸಂಸ್ಥೆ ನಿರ್ದೇಶಕ ಮತ್ತು ವಿಧಾನ ಪರಿಷತ್ ಆಡಳಿತ ಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಅಕಾಡೆಮಿ ಕುಲಸಚಿವ ಡಾ.ವಿ.ಎ. ಕೋಠಿವಾಲೆ ಇತರರು ಇದ್ದರು.

    ಪ್ರಥಮ ಚಿಕಿತ್ಸೆಗೆ ತರಬೇತಿ: ಪೊಲೀಸ್, ಅಗ್ನಿಶಾಮಕ ದಳ ಸೇರಿ ವಿವಿಧ ಇಲಾಖೆಗಳ ಸಿಬ್ಬಂದಿಗೆ ಮತ್ತು ಸಾರ್ವಜನಿಕರಿಗೆ ಪ್ರಥಮ ಚಿಕಿತ್ಸೆಗೆ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲಿ ತರಬೇತಿ ನೀಡಲೂ ಯೋಜಿಸಲಾಗಿದೆ. ಕೇಂದ್ರದಲ್ಲಿ ತೀವ್ರ ನಿಗಾ ಘಟಕ, ಆಪರೇಷನ್ ಥಿಯೇಟರ್, ಹೊರ ರೋಗಿಗಳ ವಿಭಾಗ ವಿಂಗಡಿಸಲಾಗಿದೆ. ಇತರ ಸ್ನಾತಕೋತ್ತರ ಮತ್ತು ಸೂಪರ್ ಸ್ಪೆಷಾಲಿಟಿ ಕೋರ್ಸ್‌ಗಳಿಗೆ ಸಿಮ್ಯುಲೇಟರ್‌ಗಳೊಂದಿಗೆ ಮುಂದಿನ ದಿನಗಳಲ್ಲಿ ವಿಸ್ತರಣೆಗೆ ಸೌಲಭ್ಯ ಕಲ್ಪಿಸಲಾಗಿದೆ. ವೃತ್ತಿಪರ ಅಧ್ಯಾಪಕರಿದ್ದಾರೆ ಎಂದು ಡಾ. ಕೋರೆ ಮಾಹಿತಿ ನೀಡಿದರು.

    ಅತ್ಯಾಧುನಿಕ ಸಿಮ್ಯುಲೇಟರ್‌ಗಳು (ಮ್ಯಾನಿಕ್ವಿನ್ ತಂತ್ರಜ್ಞಾನ) ಶಿಕ್ಷಕರಂತೆ ಕಾರ್ಯನಿರ್ವಹಿಸಲಿವೆ. ಕ್ಲಿನಿಕಲ್ ಕ್ರಮದಲ್ಲಿ ತಪ್ಪುಗಳಾದರೆ ತಿಳಿಸುತ್ತವೆ. ಕಲಿಕಾರ್ಥಿಗಳನ್ನು ಎಚ್ಚರಿಸುತ್ತವೆ. ಸುರಕ್ಷಿತ ಹಾಗೂ ನಿಯಂತ್ರಿತ ವಾತಾವರಣದಲ್ಲಿ ವಿದ್ಯಾರ್ಥಿಗಳ ಕಲಿಕೆ ಪರಿಣಾಮಕಾರಿಯಾಗಿರಲಿದೆ.
    | ಡಾ.ಪ್ರಭಾಕರ ಕೋರೆ, ಕೆಎಲ್‌ಇ ಕಾರ್ಯಾಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts