More

    ಕರೊನಾ ಸಂಕಷ್ಟದಲ್ಲಿ ತಲೆಎತ್ತಿದೆ ಮೆಡಿಕಲ್​ ಮಾಫಿಯಾ: ಬೆಚ್ಚಿಬೀಳಿಸುವ ವರದಿ ಇದು..!

    ವಿಜಯವಾಡ: ಮಹಾಮಾರಿ ಕರೊನಾ ವೈರಸ್​ ನಡುವೆಯೇ ಆಂಧ್ರ ಪ್ರದೇಶದಲ್ಲಿ ಮೆಡಿಕಲ್​ ಮಾಫಿಯಾ ತಲೆಎತ್ತಿದೆ. ಈ ಬಗ್ಗೆ ಸ್ಥಳೀಯ 10ಟಿವಿ ಮಾಧ್ಯಮದ ತನಿಖಾವರದಿಯು ರಾಜ್ಯದಲ್ಲಿ ಭಾರಿ ಸಂಚಲನ ಮೂಡಿಸಿದೆ.

    ಗಂಭೀರ ಸ್ಥಿತಿಯಲ್ಲಿರುವ ಕರೊನಾ ರೋಗಿಗಳಿಗೆ ಬಳಸುವ ಚುಚ್ಚುಮದ್ದನ್ನು ಡ್ರಗ್ಸ್​ ಮಾಫಿಯಾ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದೆ. ಇಡೀ ದೇಶವು ಕರೊನಾದಿಂದ ದಿಕ್ಕೆಟ್ಟಿರುವ ಸಂದರ್ಭದಲ್ಲಿ ಕರೊನಾದಿಂದ ಬದುಕುಳಿದ ರೋಗಿಗಳನ್ನು ಸಹಜ ಸ್ಥಿತಿಗೆ ತರಲು ತುರ್ತು ಚುಚ್ಚುಮದ್ದಿನ ಬೇಡಿಕೆ ಇದೆ. ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಕುಟುಂಬದ ಸದಸ್ಯರು ಔಷಧ ಖರೀದಿಗೆ ಮುಗಿಬಿದ್ದಿದ್ದಾರೆ.

    ಆದರೆ, ಇಂತಹ ಸಂದಿಗ್ಧ ಸಮಯವನ್ನೇ ಬಂಡವಾಳ ಮಾಡಿಕೊಂಡಿರುವ ಡ್ರಗ್ಸ್​ ಮಾಫಿಯಾ, ಜನರಿಗೆ ಲಕ್ಷ ಲಕ್ಷ ರೂ. ವಸೂಲಿಗೆ ಇಳಿದಿದೆ. ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ತೆನಾಲಿಯಲ್ಲಿ ಇಂತಹ ಪ್ರಕರಣಗಳು ವರದಿಯಾಗಿವೆ.

    ಗಂಭೀರ ಸ್ಥಿತಿಯಲ್ಲಿರುವ ಕೋವಿಡ್ ರೋಗಿಗಳಿಗೆ ನೀಡುವ ಟೊಸಿಲಿಜುಮಾಬ್​ ಚುಚ್ಚುಮದ್ದು, 40 ಸಾವಿರ ರೂಪಾಯಿಗೆ ದೊರೆಯುತ್ತದೆ. ಆದರೆ, ಈ ಔಷಧ 4.5 ಲಕ್ಷ ರೂಪಾಯಿಗೆ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ. ಟೊಸಿಲಿಜುಮಾಬ್ ಮಾತ್ರವಲ್ಲದೆ, ಕ್ಯಾನ್ಸರ್​ಗೆ ನೀಡುವ ಸಿಜುಮಾಬ್​ ಸಹ ಕೋವಿಡ್​ ರೋಗಿಗಳಿಗೆ ನೀಡಲಾಗುತ್ತಿದೆ. ಇದರ ಮೂಲ ಬೆಲೆ 43 ಸಾವಿರ ರೂಪಾಯಿ. ಆದರೆ, ಕಾಳಸಂತೆಯಲ್ಲಿ 3 ಲಕ್ಷ 70 ಸಾವಿರಕ್ಕೆ ಮಾರಾಟವಾಗುತ್ತಿದೆ.

    ಔಷಧವನ್ನು ಕೊಳ್ಳಬೇಕಾದರೆ ಮುಂಗಡವಾಗಿ 10 ಸಾವಿರ ರೂ. ಹಣವನ್ನು ಆನ್​ಲೈನ್​ನಲ್ಲಿ ಪಾವತಿಸಬೇಕು. ಒಂದು ವೇಳೆ ಔಷಧ ಕೊಳ್ಳದಿದ್ದರೆ ಹಣ ಮರಳಿ ಕೊಡುವುದಿಲ್ಲ ಎಂಬ ಷರತ್ತು ಸಹ ಇದೆ. ಔಷಧಿ ಬುಕ್​ ಮಾಡಿದ ಬಳಿಕ ನಿಗದಿ ಮಾಡಿರುವ ಸ್ಥಳಕ್ಕೆ ಆಹ್ವಾನಿಸಿ ಔಷಧಿಯನ್ನು ನೀಡಲಾಗುತ್ತಿದೆ. ಇದರ ಮೂಲ ಕೇಂದ್ರವೇ ಗುಂಟೂರು ಜಿಲ್ಲೆಯ ತೆನಾಲಿ ಆಗಿದೆ. ಇದೀಗ ಈ ಪ್ರಕರಣ ಆಂಧ್ರದಲ್ಲಿ ಸಂಚಲನ ಸೃಷ್ಟಿಸಿದೆ.

    ಅಚ್ಚರಿಯಿಂದರೆ ಟೊಸಿಲಿಜುಮಾಬ್​ ಔಷಧಿ ಹೈದರಾಬಾದ್​ನಲ್ಲೂ ಸಹ ಸಿಗುತ್ತಿಲ್ಲ. ಮಾಫಿಯಾ ಅವುಗಳನ್ನು ಗುಂಟೂರಿಗೆ ತಂದು ಮಾರಾಟ ಮಾಡುತ್ತಿವೆ. ಇದರ ನಡುವೆ ಸಿಜುಮಾಬ್​ ಔಷಧಿ ಬಗ್ಗೆ ಎಚ್ಚರಿಕೆ ನೀಡಿರುವ ತಜ್ಞರು ಅದನ್ನು ತೆಗೆದುಕೊಳ್ಳುವುದರಿಂದ ಅಡ್ಡಪರಿಣಾಮ ಬೀರುತ್ತದೆ. ಹೃದಯಾಘಾತ ಆಗುವ ಸಾಧ್ಯತೆಯು ಇದೆ ಎಂದು ಹೇಳಿದ್ದಾರೆ. ಆದರೂ ಕಾಳಸಂತೆಯಲ್ಲಿ ಔಷಧಿ ಎಗ್ಗಿಲ್ಲದೆ ಮಾರಾಟವಾಗುತ್ತಿದೆ. ಇದಕ್ಕೆಲ್ಲ ಕಾರಣ ಕರೊನಾ ಭಯವಾಗಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts