More

    ಮೆಡಿಕಲ್ ಕಾಲೇಜು ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕರೊನಾ ಸೋಂಕಿತರಿಗೆ ಜಿಲ್ಲೆಯ ಎಲ್ಲ ಮೆಡಿಕಲ್ ಕಾಲೇಜುಗಳ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
    ಸೋಮವಾರ ನಗರದ ಅತ್ತಾವರ ಕೆಎಂಸಿ ಆಸ್ಪತ್ರೆಗೆ ಜಿಲ್ಲಾಡಳಿತ ತಂಡ ಭೇಟಿ ನೀಡಿ ಕೋವಿಡ್ ಚಿಕಿತ್ಸೆಗೆ ಅನುಸರಿಸುತ್ತಿರುವ ವಿಧಾನ ಹಾಗೂ ಸಾಮರ್ಥ್ಯ ಪರಿಶೀಲಿಸಿತು. ಈ ಸಂದರ್ಭದಲ್ಲಿ ಸಚಿವರು ಮಾತನಾಡಿ ,ಬಿಪಿಎಲ್, ಎಪಿಎಲ್ ಕುಟುಂಬಗಳು, ವಲಸೆ ಕಾರ್ಮಿಕರು, ಪಡಿತರ ಚೀಟಿ ಇಲ್ಲದವರಿಗೂ ಜಿಲ್ಲೆಯ ವೈದ್ಯಕೀಯ ಕಾಲೇಜುಗಳ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಸಿಗಲಿದೆ. ಕರೊನಾ ಸೋಂಕಿತರು ಆಸ್ಪತ್ರೆಯಲ್ಲಿ ಆಧಾರ್ ಕಾರ್ಡ್ ತೋರಿಸಿ ಉಚಿತ ಚಿಕಿತ್ಸೆ ಪಡೆಯಬಹುದು ಎಂದು ಸ್ಪಷ್ಟಪಡಿಸಿದರು.
    ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ಕರೊನಾ ಶಂಕಿತರಿಗೆ ಹಾಗೂ ದೃಢಪಟ್ಟವರಿಗೆ ಉಚಿತ ಚಿಕಿತ್ಸೆ ಮುಂದುವರಿಯಲಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕರೊನಾದಿಂದ ಗುಣಮುಖರಾದವರ ಸಂಖ್ಯೆ ಅಧಿಕವಾಗಿದ್ದು, ಪ್ರತಿ ದಿನ ಬಿಡುಗಡೆಯಾಗುವವರ ಸಂಖ್ಯೆಯೂ ಹೆಚ್ಚಿದೆ. ಜನತೆಯ ಆರೋಗ್ಯ ರಕ್ಷಣೆಗೆ ಸರ್ಕಾರ ಕಟಿಬದ್ಧವಾಗಿದ್ದು, ಇದರಲ್ಲಿ ರಾಜಿ ಇಲ್ಲ ಎಂದರು.

    ಸಂಸದ ನಳಿನ್‌ಕುಮಾರ್ ಕಟೀಲ್, ಶಾಸಕ ವೇದವ್ಯಾಸ ಕಾಮತ್, ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಮೊದಲಾದವರು ಇದ್ದರು.
    ಆಯುಷ್ಮಾನ್ ಭಾರತ್ ಮತ್ತು ಇತರ ಯೋಜನೆಗಳ ಅನುಷ್ಠಾನದ ಬಗ್ಗೆಯೂ ವಿವರ ಪಡೆಯಲಾಯಿತು.
    ಕೋವಿಡ್ -19 ರೋಗಿಗಳ ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿ ಅನುಸರಿಸಿದ ವಿವಿಧ ನಿಯಮಾವಳಿಗಳು ಮತ್ತು ಮಾರ್ಗಸೂಚಿಗಳನ್ನು ಆಸ್ಪತ್ರೆಯ ಉಪ ವೈದ್ಯಕೀಯ ಅಧೀಕ್ಷಕ ಡಾ.ದೀಪಕ್ ಮಡಿ ವಿವರಿಸಿದರು. ಕೆಎಂಸಿಯ ಹೆಚ್ಚುವರಿ ಡೀನ್ ಡಾ.ಆಲ್ಫ್ರೆಡ್ ಜೆ.ಆಗಸ್ಟಿನ್, ಕೆಎಂಸಿ ಪ್ರಯೋಗಾಲಯ ಸೇವೆಗಳ ನಿರ್ದೇಶಕಿ ಡಾ. ಶ್ರೀಕಲಾ ಬಾಳಿಗಾ, ಆಡಳಿತ ವಿಭಾಗದ ಎಜಿಎಂ ರವಿರಾಜ್, ಸಾರ್ವಜನಿಕ ಸಂಪರ್ಕ ವಿಭಾಗದ ಮುಖ್ಯಸ್ಥ ರಾಕೇಶ್ ಉಪಸ್ಥಿತರಿದ್ದರು.

    ಅಧಿಕ ಬಿಲ್ ಹಾಕಿದರೆ ಕೇಸ್
    ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರ ನಿಗದಿಪಡಿಸಿದ ಚಿಕಿತ್ಸಾ ದರವನ್ನು ಮೀರಿ ಭಾರಿ ಮೊತ್ತದ ಬಿಲ್ ನೀಡುತ್ತಿರುವ ಬಗ್ಗೆ ವ್ಯಾಪಕ ದೂರುಗಳು ಬರುತ್ತಿದೆ. ಅಂತಹ ಆಸ್ಪತ್ರೆಗಳ ವಿರುದ್ಧ ಕೇಸು ದಾಖಲಿಸುವಂತೆ ಸಂಸದ ನಳಿನ್ ಕುಮಾರ್ ಕಟೀಲ್ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು. ಸರ್ಕಾರ ನಿಗದಿಪಡಿಸಿದ ದರಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು. ರೋಗಿಯ ತುರ್ತು ಸಂದರ್ಭದಲ್ಲಿ ಶಸ್ತ್ರಚಿಕಿತ್ಸೆ ಮಾಡಬೇಕಾದ ಅನಿವಾರ್ಯತೆ ಇದ್ದಲ್ಲಿ, ಕೋವಿಡ್ ವರದಿಗೆ ಕಾಯದೆ, ಶಸ್ತ್ರಚಿಕಿತ್ಸೆ ಮಾಡುವಂತೆ ಸಂಸದರು ಸೂಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts