More

    ಒಂದೇ ದಿನದಲ್ಲಿ ಹೂಡಿಕೆದಾರರಿಗೆ ರೂ. 3.22 ಲಕ್ಷ ಕೋಟಿ ಲಾಭ; ದಾಖಲೆ ಸೃಷ್ಟಿಸಿದ ಬಿಎಸ್‌ಇ-ಲಿಸ್ಟೆಡ್ ಕಂಪನಿಗಳ ಮಾರುಕಟ್ಟೆ ಬಂಡವಾಳೀಕರಣ

    ನವದೆಹಲಿ: ಗುರುವಾರದ ಆರಂಭಿಕ ವಹಿವಾಟಿನಲ್ಲಿ ಬಿಎಸ್‌ಇ-ಲಿಸ್ಟೆಡ್ ಕಂಪನಿಗಳ ಮಾರುಕಟ್ಟೆ ಬಂಡವಾಳೀಕರಣವು ಸಾರ್ವಕಾಲಿಕ ಗರಿಷ್ಠ ಮಟ್ಟವಾದ 354.41 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಿ ದಾಖಲೆ ಬರೆಯಿತು. ಈ ಮೂಲಕ ಹೂಡಿಕೆದಾರರು ರೂ.3.22 ಲಕ್ಷ ಕೋಟಿಗಳಷ್ಟು ಶ್ರೀಮಂತರಾಗಿದ್ದಾರೆ. ಜಾಗತಿಕ ಷೇರುಗಳ ಬೆಲೆ ಹೆಚ್ಚಳ ಇದಕ್ಕೆ ಕಾರಣವಾಯಿತು.

    ಅಮೆರಿಕದ ಕೇಂದ್ರೀಯ ಬ್ಯಾಂಕ್​ ಆದ ಫೆಡರಲ್ ರಿಸರ್ವ್ ತನ್ನ ಪ್ರಮುಖ ಬಡ್ಡಿ ದರದಲ್ಲಿ ಯಾವುದೇ ಬದಲಾವಣೆ ಮಾಡದೇ ಯಥಾಸ್ಥಿತಿಯಲ್ಲಿ ಉಳಿಸಿಕೊಂಡಿತು. ಅಲ್ಲದೆ, ಮುಂದಿನ ವರ್ಷದಲ್ಲಿ ತನ್ನ ಬಡ್ಡಿದರದಲ್ಲಿ ಕಡಿತವನ್ನು ಮಾಡುವ ನಿರೀಕ್ಷೆಯಿದೆ ಎಂದು ಸೂಚಿಸಿತು. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಜಾಗತಿಕ ಷೇರು ಮಾರುಕಟ್ಟೆಗಳಲ್ಲಿ ಏರಿಕೆ ಕಂಡುಬಂದಿತು.

    ಆರಂಭಿಕ ವಹಿವಾಟಿನಲ್ಲಿ 30-ಷೇರುಗಳ ಬಿಎಸ್‌ಇ ಸೂಚ್ಯಂಕವು 955.4 ಅಂಕಗಳಷ್ಟು ಜಿಗಿದು ಸಾರ್ವಕಾಲಿಕ ಗರಿಷ್ಠ ಮಟ್ಟ 70,540 ತಲುಪಿತು.

    ಆರಂಭಿಕ ವಹಿವಾಟಿನಲ್ಲಿ ಬಿಎಸ್‌ಇ-ಲಿಸ್ಟೆಡ್ ಸಂಸ್ಥೆಗಳ ಮಾರುಕಟ್ಟೆ ಬಂಡವಾಳೀಕರಣ (ಎಂಕ್ಯಾಪ್) ದಾಖಲೆಯ ಗರಿಷ್ಠ 3,54,41,617.18 ಕೋಟಿ ರೂಪಾಯಿ ತಲುಪಿತು. ಅಂದರೆ, ಬಾಂಬೆ ಸ್ಟಾಕ್​ ಎಕ್ಸ್​ಚೇಂಜ್​ನಲ್ಲಿ (ಬಿಎಸ್​ಇ) ಪಟ್ಟಿ ಮಾಡಲಾಗಿರುವ ಎಲ್ಲ ಕಂಪನಿಗಳು ಒಟ್ಟು ಷೇರು ಮೊತ್ತವು 354 ಲಕ್ಷ ಕೋಟಿ ರೂಪಾಯಿಗಳನ್ನು ಮೀರಿತು. ಈ ಮೂಲಕ ಹೂಡಿಕೆದಾರರ ಸಂಪತ್ತು ಬುಧವಾರ ಒಂದೇ ದಿನದಲ್ಲಿ 3,22,385.27 ಕೋಟಿ ರೂಪಾಯಿ (3.22 ಲಕ್ಷ ಕೋಟಿ ರೂ.) ಹೆಚ್ಚಳವಾಯಿತು.

    ಇನ್ಫೋಸಿಸ್, ಎಚ್‌ಸಿಎಲ್ ಟೆಕ್ನಾಲಜೀಸ್, ಬಜಾಜ್ ಫೈನಾನ್ಸ್, ಟೆಕ್ ಮಹೀಂದ್ರಾ, ವಿಪ್ರೋ ಮತ್ತು ಇಂಡಸ್‌ಇಂಡ್ ಬ್ಯಾಂಕ್ ಷೇರುಗಳು ಪ್ರಮುಖವಾಗಿ ಲಾಭ ಗಳಿಸಿದವು. ಪವರ್ ಗ್ರಿಡ್, ಏಷ್ಯನ್ ಪೇಂಟ್ಸ್, ನೆಸ್ಲೆ ಮತ್ತು ಹಿಂದೂಸ್ತಾನ್ ಯೂನಿಲಿವರ್ ಷೇರುಗಳು ಹಿನ್ನಡೆ ಕಂಡವು.

    ಏಷ್ಯಾದ ಮಾರುಕಟ್ಟೆಗಳಲ್ಲಿ, ಸಿಯೋಲ್, ಶಾಂಘೈ ಮತ್ತು ಹಾಂಗ್ ಕಾಂಗ್ ಕೂಡ ಲಾಭದಲ್ಲಿ ವಹಿವಾಟು ನಡೆಸಿದರೆ, ಟೋಕಿಯೊ ಒಂದಿಷ್ಟು ನಷ್ಟ ಅನುಭವಿಸಿತು. ಬುಧವಾರದಂದು ಅಮೆರಿಕದ ಮಾರುಕಟ್ಟೆಗಳು ಗಮನಾರ್ಹ ಏರಿಕೆ ಕಂಡುಬಂದಿತು.

    ಅಮೆರಿಕದ ಫೆಡರಲ್ ರಿಸರ್ವ್ ತನ್ನ ಪ್ರಮುಖ ಬಡ್ಡಿ ದರವನ್ನು ಮೂರನೇ ಬಾರಿಗೆ ಬುಧವಾರದಂದು ಯಾವುದೇ ಬದಲಾವಣೆ ಮಾಡದೆ ಯಥಾಸ್ಥಿತಿಯಲ್ಲಿ ಮುಂದುವರಿಸಿತು.

    ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಬುಧವಾರ 4,710.86 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಖರೀದಿಸಿದರು ವಿನಿಮಯ ಕೇಂದ್ರ ತಿಳಿಸಿದೆ.

    ಲೋಕಸಭೆಯಲ್ಲಿ ಐವರು ಕಾಂಗ್ರೆಸ್​ ಸಂಸದರು; ರಾಜ್ಯಸಭೆಯಲ್ಲಿ ಟಿಎಂಸಿಯ ಡೆರೆಕ್​ ಅಮಾನತು

    ‘ಸಿಂಗ್ ಈಸ್ ಕಿಂಗ್’: ಹೀಗೆ ಶಶಿ ತರೂರ್ ಶ್ಲಾಘಿಸಿದ ಸಂಸದ ಯಾರು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts