More

    ಕಾಮಗಾರಿಗಳು ಶೀಘ್ರ ಪೂರ್ಣಗೊಳ್ಳಲಿ

    ಹನೂರು: ಪ್ರಾಧಿಕಾರದ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರಿಂದ ಅನುಮೋದನೆ ಆಗಿರುವ ಕಾಮಗಾರಿ ಜತೆಗೆ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಅಧಿಕಾರಿಗಳಿಗೆ ಸೂಚಿಸಿದರು.

    ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಮಂಗಳವಾರ ಪ್ರಗತಿಯಲ್ಲಿರುವ 108 ಅಡಿ ಎತ್ತರದ ಮಹದೇಶ್ವರರ ಪ್ರತಿಮೆ ಗುಹೆಯ ಒಳಾಂಗಣದ ಕಾಮಗಾರಿ, 398 ವಸತಿ ಗೃಹ ಕೊಠಡಿ ನಿರ್ಮಾಣ ಕಾಮಗಾರಿ ಹಾಗೂ ಇನ್ನಿತರೆ ಕಾಮಗಾರಿ ಸ್ಥಳಕ್ಕೆ ತೆರಳಿ ಪರಿಶೀಲಿಸಿದ ಬಳಿಕ ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿದರು.

    ಮ.ಬೆಟ್ಟಕ್ಕೆ ಜಾತ್ರೆ ಹಾಗೂ ಇನ್ನಿತರೆ ವಿಶೇಷ ಸಂದರ್ಭದಲ್ಲಿ ತಮಿಳುನಾಡು ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಈ ದಿಸೆಯಲ್ಲಿ ಅಗತ್ಯ ಸೌಕರ್ಯವನ್ನು ಒದಗಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಹಾಗಾಗಿ 20 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ 108 ಅಡಿ ಎತ್ತರದ ಮಹದೇಶ್ವರರ ಪ್ರತಿಮೆಯ ಗುಹೆಯ ಒಳಾಂಗಣದಲ್ಲಿ ಬಾಕಿ ಇರುವ ವಿವಿಧ ವಿನ್ಯಾಸದ ಮೂರ್ತಿಗಳ ಕೆತ್ತನೆ ಕೆಲಸಗಳನ್ನು ಶೀಘ್ರ ಪೂರ್ಣಗೊಳಿಸಬೇಕು. ಹಾಗೆಯೇ ಪ್ರತಿಮೆಯ ಸ್ಥಳಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಅಭಿವೃದ್ಧಿ ಪಡಿಸುವುದರ ಮೂಲಕ ಭಕ್ತರ ಪ್ರವೇಶಕ್ಕೆ ಅವಕಾಶ ಕಲ್ಪಿಸಬೇಕು ಎಂದು ಸೂಚಿಸಿದರು.

    ಭಕ್ತರಿಗೆ ಸಮಸ್ಯೆ ಆಗದಿರಲಿ: ಇನ್ನು ಪ್ರಗತಿಯಲ್ಲಿರುವ 398 ವಸತಿ ಗೃಹದ ಕೊಠಡಿಗಳ ನಿರ್ಮಾಣ ಕಾಮಗಾರಿ ವಿಳಂಬ ಗತಿಯಲ್ಲಿ ಸಾಗುತ್ತಿರುವುದು ಗಮನಕ್ಕೆ ಬಂದಿದೆ. ಹಾಗಾಗಿ ಹೆಚ್ಚು ಕೆಲಸಗಾರರನ್ನು ನಿಯೋಜಿಸುವುದರ ಮೂಲಕ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕು. ಯಾವುದೇ ಕಾರಣಕ್ಕೂ ಆಗಮಿಸುವ ಭಕ್ತರಿಗೆ ವಸತಿ ಸಮಸ್ಯೆ ಆಗಬಾರದು. ಇನ್ನು ಸಿಎಂ ಸಿದ್ದರಾಮಯ್ಯ ಅವರಿಂದ ಅನುಮೋದನೆಯಾಗಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಈ ಬಗ್ಗೆ ಅಧಿಕಾರಿಗಳು ಅಗತ್ಯ ಮುತುರ್ವಜಿ ವಹಿಸಬೇಕು ಎಂದು ಸಚಿವರು ಹೇಳಿದರು.

    ಗೋಪುರ ಮರೆಯಾಗಬಾರದು: ಬಳಿಕ ದೇಗುಲದ ರಾಜಗೋಪುರದ ಮುಂಭಾಗದಲ್ಲಿ ಭಕ್ತರಿಗೆ ನೆರಳಿನ ಸೌಕರ್ಯ ಕಲ್ಪಿಸಲು ಅಳವಡಿಸಲಾಗಿದ್ದ ಶಾಮಿಯಾನ ವ್ಯವಸ್ಥೆಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿವರು ಮಾತನಾಡಿ, ಭಕ್ತರಿಗೆ ಶಾಶ್ವತ ನೆರಳಿನ ವ್ಯವಸ್ಥೆ ಕಲ್ಪಿಸಲು ಶಾಮಿಯಾನದ ಬದಲಾಗಿ ಶೆಲ್ಟರ್ ನಿರ್ಮಿಸಬೇಕು. ಆದರೆ ಯಾವುದೇ ಕಾರಣಕ್ಕೂ ಗೋಪುರವು ಮರೆಯಾಗಬಾರದು. ಈ ಬಗ್ಗೆ ಅಗತ್ಯ ಮುನ್ನಚ್ಚರಿಕೆ ಕ್ರಮವನ್ನು ವಹಿಸಬೇಕು. ಇನ್ನು ಭಕ್ತರಿಗೆ ಅನುಕೂಲವಾಗುವಂತೆ ಶೌಚಗೃಹ ಹಾಗೂ ಸ್ನಾನದ ಗೃಹಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಿ ಎಂದು ಸಚಿವರು ಸೂಚಿಸಿದರು.

    ಈ ವೇಳೆ ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪನಾಗ್, ಎಸ್ಪಿ ಪದ್ಮಿನಿ ಸಾಹೂ, ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿ, ಉಪ ಕಾರ್ಯದರ್ಶಿ ಚಂದ್ರಶೇಖರ್, ಪಿಡಬ್ಲುೃಡಿ ಇಂಜಿನಿಯರ್‌ಗಳಾದ ಮಹೇಶ್, ಚಿನ್ನಣ್ಣ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts