More

    ಭಾವಸಾರ ಕ್ಷತ್ರಿಯ ಸಮಾಜ ಏಳ್ಗೆ ಸಾಧಿಸಲಿ; ಸಚಿವ ಶಿವಾನಂದ ಪಾಟೀಲ

    ವಿಜಯಪುರ: ಭಾವಸಾರ ಕ್ಷತ್ರಿಯ ಸಮಾಜ ಮತ್ತಷ್ಟು ಪ್ರಗತಿ ಹೊಂದಲಿ. ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಪ್ರಗತಿ ಸಾಧಿಸಲಿ ಎಂದು ಜವಳಿ ಮತ್ತು ಸಕ್ಕರೆ ಅಭಿವೃದ್ಧಿ ಸಚಿವ ಶಿವಾನಂದ ಪಾಟೀಲ ಆಶಿಸಿದರು.

    ನಗರದ ಬಿಎಲ್ಡಿಇ ಇಂಜಿನಿಯರಿಂಗ್ ಕಾಲೇಜ್ ಎದುರಿನ ಆನಂದ ನಗರದಲ್ಲಿ 2.65 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಭಾವಸಾರ ಕ್ಷತ್ರೀಯ ಸಮಾಜದ ನೂತನ ಸಾಂಸ್ಕೃತಿಕ ಭವನ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.

    ಭಾವಸಾರ ಕ್ಷತ್ರಿಯ ಸಮಾಜ ಉತ್ತರ ಹಾಗೂ ದಕ್ಷಿಣ ಭಾರತದಲ್ಲಿ ವ್ಯಾಪಕವಾಗಿ ನೆಲೆಸಿದ್ದಾರೆ. ಸತ್ಯ, ನಿಷ್ಠುರತೆ, ಶೌರ್ಯಕ್ಕೆ ಹೆಸರಾದ ಈ ಸಮಾಜ ಮತ್ತಷ್ಟು ಪ್ರಗತಿಯಾಗಲು ಇಂಥ ಸಮುದಾಯ ಭವನಗಳ ನಿರ್ಮಾಣದಂತೆ ಅಭಿವೃದ್ಧಿಪರ ಕಾರ್ಯಕ್ರಮಗಳು ಮುಂದುವರಿಯಬೇಕೆಂದರು.
    ಸಮುದಾಯದ ಸವಾಂಗೀಣ ಪ್ರಗತಿಗೆ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

    ಭಾವಸಾರ ಕ್ಷತ್ರಿಯ ಸಮಾಜದ ರಾಷ್ಟ್ರೀಯ ಅಧ್ಯಕ್ಷ ರಾಜು ಜವಳಕರ್ ಮಾತನಾಡಿ, 15 ವರ್ಷದ ಹಿಂದೆ ಮಾಡಿದ ಪ್ರಯತ್ನ ಇಂದು ಫಲಿಸಿದೆ. ಸಮುದಾಯ ಭವನ ನಿರ್ಮಾಣಕ್ಕೆ ಸಾಕಷ್ಟು ಜನರ ಸಹಕಾರ ಇದೆ. ಕ್ಷತ್ರಿಯ ಸಮಾಜ ಟ್ರಸ್ಟ್‌ನಿಂದ ಸಾಕಷ್ಟು ಜನರಿಗೆ ಅನುಕೂಲವಾಗಲಿದೆ. ಮಹಿಳೆಯರು ಹಾಗೂ ವಿದ್ಯಾರ್ಥಿಗಳಿಗೆ ಸಹಾಯವಾಗಲಿದೆ. ಸರ್ವರೂ ಸಮಭಾವದಿಂದ ಈ ಟ್ರಸ್ಟ್ ಮತ್ತು ಸಮುದಾಯ ಭವನವನ್ನು ಸದ್ಭಳಕೆ ಮಾಡಿಕೊಳ್ಳೋಣ ಎಂದರು.

    ದಿವ್ಯ ಸಾನ್ನಿಧ್ಯ ವಹಿಸಿದ್ದ ಭೋಧಲೆ ಮಹಾರಾಜರು ಆಶೀರ್ವಚನ ನೀಡುತ್ತಾ, ಸಮಾಜದಲ್ಲಿನ ‘ಸ’ ಎಂಬ ಅಕ್ಷರವು ಸಂಸ್ಕಾರ, ಸಮನ್ವಯ, ಸಾತ್ವಿಕತೆ, ಸಹನಶೀಲತೆ ಗುಣ ಒಳಗೊಂಡಿದೆ. ಭಾವಸಾರ ಎಂಬ ಶಬ್ದದಲ್ಲಿನ ‘ಭಾವ’ ಎಂದರೆ ಪ್ರೇಮ ‘ಸಾರ’ ಎಂದರೆ ಶ್ರೇಷ್ಠ ಎಂದರ್ಥ. ಹೀಗಾಗಿ ಭಾವಸಾರ ಎಂಬುದು ಶ್ರೇಷ್ಟವಾದ ಪ್ರೇಮ ಭಾವವುಳ್ಳವರು ಎಂದರ್ಥ ಎಂದರು.

    ಬಸವಲಿಂಗ ಸ್ವಾಮೀಜಿ ಆಶೀರ್ವಚನ ನೀಡಿದರು. ರಾಜ್ಯ ಅಧ್ಯಕ್ಷ ಎನ್.ವಿ. ಶ್ರೀನಿವಾಸರಾವ್ ಪಿಸೆ ಮಾತನಾಡಿದರು.

    ಅಧ್ಯಕ್ಷತೆ ವಹಿಸಿದ್ದ ರಾಜೇಶ ದೇವಗಿರಿ ಮಾತನಾಡಿ, ನಮ್ಮ ಸಮಾಜಕ್ಕೆ ಇತರೆ ಸಮಾಜದವರು ಕೂಡ ಸಹಕಾರ ನೀಡಿದ್ದಾರೆ. ನಾವೆಲ್ಲರೂ ಒಂದೇ ಮನಸ್ಸಿನಿಂದ ಕಾರ್ಯ ಮಾಡಿದ್ದರಿಂದಾಗಿ ಭವ್ಯವಾದ ಸಾಂಸ್ಕೃತಿಕ ಭವನ ನಿರ್ಮಾಣವಾಗಿದೆ. ಇದರ ಸೌಲಭ್ಯ ಎಲ್ಲರಿಗೂ ಸಿಗುತ್ತದೆ ಎಂದು ನುಡಿದರು.

    ಮುಖಂಡರಾದ ಕಿಶನ್‌ರಾವ್ ಗಡ್ಡಾಳೆ, ಶ್ರೀನಿವಾಸ್ ಪಿಸೆ, ಸತ್ಯನಾರಾಯಣ ಅಂಬರಕರ, ಪದ್ಮ ಇಸಂಕರ್, ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಸುಜಾತ ಸುಲಾಖೆ, ಭವಾನಿ ಮಾಳವದಕರ, ಮಿಲನ್ ಮಿರಜ್ಕರ್, ವಿಶಾಲ್ ಪುಕಾಳೆ, ವಿನಾಯಕ್ ಕುಂಟೆ, ರಾಜು ಕಟ್ಟಿ ಮತ್ತಿತರರಿದ್ದರು. ದೀಪಕ್ ಶಿಂತರೆ ಹಾಗೂ ರಾಕೇಶ್ ಕಟ್ಟಿಮನಿ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts