More

    ಪೊಲೀಸ್ ಇಲ್ಲದ ಸಮಾಜ ಊಹಿಸಲು ಸಾಧ್ಯವಿಲ್ಲ

    ಚಿಕ್ಕಮಗಳೂರು: ಎಲ್ಲ ಇಲಾಖೆಗಳಿಗಿಂತಲೂ ಪೊಲೀಸ್ ಇಲಾಖೆ ಭಿನ್ನವಾಗಿದೆ. ಪೊಲೀಸರು ಇಲ್ಲದ ಸಮಾಜವನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ನಿವೃತ್ತ ಎಎಸ್ ಪಿ ಯೋಗೇಂದ್ರನಾಥ್ ಅಭಿಪ್ರಾಯಪಟ್ಟರು.

    ನಗರದ ರಾಮನಹಳ್ಳಿಯಲ್ಲಿರುವ ಪೊಲೀಸ್ ಕವಾಯತು ಮೈದಾನದಲ್ಲಿ ಆಯೋಜಿಸಲಾಗಿದ್ದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಮಹಾರಾಜರ ಕಾಲದಲ್ಲಿ ಕೊತ್ವಾಲರನ್ನು ನೇಮಿಸಿಕೊಂಡು ಆಡಳಿತ ನಡೆಸಲಾಗುತ್ತಿತ್ತು. ಆದರೆ ಸಂವಿಧಾನ ಜಾರಿಗೆ ಬಂದ ಮೇಲೆ ಪೊಲೀಸ್ ವ್ಯವಸ್ಥೆ ಜಾರಿಗೆ ಬಂದಿದೆ. ಪೊಲೀಸರು ಒಂದು ಕ್ಷಣ ಕೆಲಸ ಮಾಡದೆ ಸುಮ್ಮನಿದ್ದರೆ ಸಮಾಜದಲ್ಲಿ ಏನೆಲ್ಲಾ ಅನಾಹುತಗಳು ಸಂಭವಿಸುತ್ತವೆ ಎನ್ನುವುದನ್ನು ಊಹಿಸಲು ಸಾಧ್ಯವಿಲ್ಲವಾಗಿದೆ ಎಂದರು.
    ಕಾನೂನು ರಕ್ಷಣೆ ಮಾಡುವುದೇ ಪೊಲೀಸರ ಕೆಲಸ. ಹೀಗಾಗಿ ಪೊಲೀಸರು ಕಾನೂನಿಗೆ ಗೌರವ ನೀಡಿ ಕೆಲಸ ಮಾಡಬೇಕು. ಜೊತೆಗೆ ಹಿರಿಯ ಅಧಿಕಾರಿಗಳ ಆದೇಶವನ್ನು ಚಾಚು ತಪ್ಪದೇ ಪಾಲಿಸಬೇಕು. ಪೊಲೀಸರಿಗೆ ರಜೆ ಎನ್ನುವುದೇ ಇಲ್ಲ ಇರುವುದರಲ್ಲೇ ಕೆಲ ಸಮಯ ಕುಟುಂಬಕ್ಕೆ ಮೀಸಲಿಡಬೇಕು. ಜೊತೆಗೆ ತಮ್ಮ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು ಎಂದು ಸಲಹೆ ನೀಡಿದರು.
    ಜಿಪಂ ಸಿಇಒ ಡಾ. ಗೋಪಾಲಕೃಷ್ಣ ಮಾತನಾಡಿ, ಚುನಾವಣಾ ಕರ್ತವ್ಯದಲ್ಲಿ ಭಾಗಿಯಾಗುವ ಸಾಕಷ್ಟು ಪೊಲೀಸ್ ಸಿಬ್ಬಂದಿಗೆ ಮತದಾನ ಮಾಡಲು ಸಾಧ್ಯವಾಗುವುದಿಲ್ಲ. ಹೀಗೆ ಚುನಾವಣಾ ಕೆಲಸದಲ್ಲಿ ಭಾಗಿಯಾಗುವ ಪೊಲೀಸರು ಎಲೆಕ್ಷನ್ ಡ್ಯೂಟಿ ಸರ್ಟಿಫಿಕೇಟ್ ಅಥವಾ ಪೋಸ್ಟಲ್ ಬ್ಯಾಲೆಟ್ ಬಳಸಿಕೊಂಡು ಮತದಾನ ಮಾಡಬೇಕು. ಮತದಾನ ಪ್ರತಿಯೊಬ್ಬರ ಹಕ್ಕು ಮಾತ್ರವಲ್ಲ ಅದು ಅಮೂಲ್ಯವಾದದ್ದ. ಹೀಗಾಗಿ ಶೇ. 100 ರಷ್ಟು ಮತದಾನಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಹೇಳಿದರು.
    ಎಸ್ ಪಿ ವಿಕ್ರಮ್ ಅಮಟೆ ಮಾತನಾಡಿ, ಪೊಲೀಸ್ ಧ್ವಜ ದಿನಾಚರಣೆ ಅಂಗವಾಗಿ ಮಾರಾಟ ಮಾಡುವ ಧ್ವಜಗಳಿಂದ ಬರುವ ಆದಾಯವನ್ನು ನಿವೃತ್ತ ಪೊಲೀಸರ ಕ್ಷೇಮಾಭಿವೃದ್ಧಿಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಕಳೆದ ವರ್ಷ ಪೊಲೀಸ್ ಧ್ವಜ ಮಾರಾಟದಿಂದ 25 ಲಕ್ಷ ಆದಾಯ ಬಂದಿತ್ತು. ಅದರಲ್ಲಿ ಶೇ. 50ರಷ್ಟು ಹಣವನ್ನು ಕೇಂದ್ರ ನಿಧಿಗೆ ನೀಡಿದ್ದೇವೆ. ಉಳಿದ ಹಣವನ್ನು ಜಿಲ್ಲೆಯ ನಿವೃತ್ತ ಪೊಲೀಸರ ಕಲ್ಯಾಣಕ್ಕೆ ಬಳಕೆ ಮಾಡಿಕೊಳ್ಳಲಾಗಿದೆ. 2023-24 ನೇ ಸಾಲಿನಲ್ಲಿ 84 ಪೊಲೀಸ್ ಸಿಬ್ಬಂದಿಗೆ ವೈದ್ಯಕೀಯ ವೆಚ್ಚಕ್ಕಾಗಿ 2.63 ಲಕ್ಷ ರೂ. ನೀಡಲಾಗಿದೆ. ಇದೇ ಸಾಲಿನಲ್ಲಿ ಮೃತಪಟ್ಟ 24 ಮಂದಿ ನಿವೃತ್ತ ಪೊಲೀಸರ ಅಂತ್ಯಸಂಸ್ಕಾರಕ್ಕೆ 1.60 ರೂ. ನೀಡಲಾಗಿದೆ. ಪ್ರಸ್ತುತ ನಿವೃತ್ತ ಪೊಲೀಸರ ಕಲ್ಯಾಣ ನಿಧಿಯಲ್ಲಿ 26.66 ಲಕ್ಷ ರೂ. ಹಣ ಉಳಿದಿದೆ ಎಂದು ಮಾಹಿತಿ ನೀಡಿದರು.
    ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts