More

    ಜೀವನಾಧಾರಕ್ಕೆ ಮಠಗಳೇ ಮೂಲ

    ಮುದ್ದೇಬಿಹಾಳ: ನಾವಿಂದು ನಮ್ಮ ಮನೆ ಗುರುಗಳನ್ನು ಮರೆತಿದ್ದೇವೆ. ಮನೆ ಕಳೆದುಕೊಳ್ಳಬಹುದು, ಮಠಗಳನ್ನು ಕಳೆದುಕೊಳ್ಳಬಾರದು. ಮಠಗಳು ಜೀವನಾಧಾರಕ್ಕೆ ಮೂಲವಾಗಿವೆ. ನಮ್ಮ ಜೀವನದಲ್ಲಿ ಎಲ್ಲವೂ ಇದೆ. ಆದರೆ ಆರೋಗ್ಯ ಮಾತ್ರ ಇಲ್ಲ. ಮುದ್ದಿ, ನಿದ್ದಿ, ಲದ್ದಿ ಇವು ಶುದ್ಧವಾಗಿದ್ದರೆ ಅದೇ ಉತ್ತಮ ಆರೋಗ್ಯ ಎಂದು ಕೆ. ಸೂಗೂರು ರುದ್ರಮುನೀಶ್ವರ ಮಠದ ಪ್ರವಚನ ಭಾಸ್ಕರ ರುದ್ರಮುನಿ ಶಿವಾಚಾರ್ಯರು ಹೇಳಿದರು.

    ತಾಲೂಕಿನ ಕುಂಟೋಜಿ ಗ್ರಾಮದಲ್ಲಿ ಮಾ. 5, 6, 7ರಂದು ನಡೆಯಲಿರುವ ಸಂಸ್ಥಾನ ಹಿರೇಮಠದ ಚನ್ನವೀರ ದೇವರ ಗುರುಪಟ್ಟಾಧಿಕಾರ ಮಹೋತ್ಸವ ಹಿನ್ನೆಲೆಯಲ್ಲಿ ಅಲ್ಲಿನ ಬಸವೇಶ್ವರ ದೇವಸ್ಥಾನ ಆವರಣದಲ್ಲಿ 21 ದಿನಗಳ ಕಾಲ ನಡೆಯಲಿರುವ ಮಹಾ ದಾಸೋಹಿ ಕಲಬುರ್ಗಿಯ ಶರಣಬಸವೇಶ್ವರರ ಪುರಾಣ ಪ್ರವಚನಕ್ಕೆ ಸೋಮವಾರ ರಾತ್ರಿ ಚಾಲನೆ ನೀಡಿ ಅವರು ಮಾತನಾಡಿದರು.

    ಕಲಬುರ್ಗಿ ಶರಣಬಸವೇಶ್ವರರ ಪುರಾಣದಲ್ಲಿ ಸಂಸಾರಸ್ಥರಿಗೆ ನಡೆಯುವ ಮದುವೆಯಂತೆ ಸ್ವಾಮೀಜಿಯವರಿಗೆ ನಡೆಯುವ ಮದುವೆಯನ್ನೇ ಪಟ್ಟಾಧಿಕಾರ ಎನ್ನುತ್ತಾರೆ. ಈ ಪಟ್ಟಾಧಿಕಾರ ಮಹೋತ್ಸವ ಅದ್ಭುತವಾಗಿ, ಶಾಶ್ವತವಾಗಿ ನೆನಪಿನಲ್ಲಿಯುಳಿಯುವಂಥದ್ದಾಗಬೇಕು. ವಿಕಾರಗೊಂಡಿರುವ ಮನುಷ್ಯನ ಮನಸ್ಸುಗಳನ್ನು ಒಂದುಗೂಡಿಸುವುದು ಪಟ್ಟಾಧಿಕಾರದಿಂದ ಆಗಲಿದೆ ಎಂದರು.

    ಮಸೂತಿ ಹಿರೇಮಠದ ಪ್ರಭುಕುಮಾರ ಶಿವಾಚಾರ್ಯರು ಮಾತನಾಡಿ, ಪ್ರಪಂಚ ನಡೆದದ್ದು ಗಣಿತಶಾಸ್ತ್ರದ ಮೇಲೆ. ಇದಕ್ಕೆ ಸೊನ್ನೆ ಮುಖ್ಯವಾದದ್ದಾಗಿದೆ. ಈ ಸೊನ್ನೆ ಕೊಟ್ಟದ್ದು ಜಿಲ್ಲೆಯ ಭಾಸ್ಕರಾಚಾರ್ಯರು ಅನ್ನೋದು ನಮ್ಮೆಲ್ಲರ ಹೆಮ್ಮೆ. ಹಿರಿಯರು, ಗುರುಗಳು, ಮಠಮಾನ್ಯಗಳ ಪೀಠಾಧಿಪತಿಗಳ ಮಾತು ಕೇಳಿ, ಪಾಲಿಸಿದರೆ ಅಂಥವರ ಬದುಕು ಬಂಗಾರವಾಗುತ್ತದೆ. ಪಟ್ಟಾಧಿಕಾರ ಮಾಡಿಕೊಳ್ಳಲು ಅಣಿಯಾಗಿರುವ ಚನ್ನವೀರ ದೇವರು ಜಾತಿ, ಮತ, ಪಂಥ ಎಣಿಸದೆ ಎಲ್ಲರನ್ನೂ ಸಮನಾಗಿ ಕಾಣುವಂಥವರು. ಅವರ ಪಟ್ಟಾಭಿಷೇಕ ಅದ್ದೂರಿಯಾಗಿರಲಿ ಎಂದರು.

    ಬಸವನಬಾಗೇವಾಡಿ ಒಡೆಯರ ಹಿರೇಮಠದ ಶಿವಪ್ರಕಾಶ ಶಿವಾಚಾರ್ಯರು ಪುರಾಣ ಪ್ರವಚನ ನೀಡಿದರು.

    ಚನ್ನವೀರ ದೇವರು ನೇತೃತ್ವ ವಹಿಸಿದ್ದರು. ಕಮತಗಿ ಹೊಳೆ ಹುಚ್ಚೇಶ್ವರ ಮಠದ ಹೊಳೆ ಹುಚ್ಚೇಶ್ವರ ಸ್ವಾಮೀಜಿ, ಗುಳೇದಗುಡ್ಡ ಅಮರೇಶ್ವರ ಮಠದ ನೀಲಕಂಠ ಶಿವಾಚಾರ್ಯರು, ಗುಂಡಕನಾಳ ಬೃಹನ್ಮಠದ ಗುರುಲಿಂಗ ಶಿವಾಚಾರ್ಯರು, ಬಾದಾಮಿ ನವಗ್ರಹ ಹಿರೇಮಠದ ಶಿವಪೂಜೆ ಶಿವಾಚಾರ್ಯರು, ಹುಣಶ್ಯಾಳದ ಆನಂದ ದೇವರು, ಗುರುಪಟ್ಟಾಧಿಕಾರ ಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷರಾದ ಪ್ರಭುಗೌಡ ದೇಸಾಯಿ, ಸಂಗನಗೌಡ ಪಾಟೀಲ, ಖಜಾಂಚಿಗಳಾದ ಶರಣು ಸಜ್ಜನ, ಸತೀಶ ಓಸ್ವಾಲ್, ಬಸವೇಶ್ವರ ದೇವಸ್ಥಾನ ಕಮಿಟಿ ಅಧ್ಯಕ್ಷ ಗುರುಲಿಂಗಪ್ಪ ಸುಳ್ಳೊಳ್ಳಿ, ಸಮಿತಿಯ ಪದಾಧಿಕಾರಿಗಳಾದ ಪಾವಡೆಪ್ಪ ತಾಂಬ್ರಳ್ಳಿ, ಸಂಗಪ್ಪ ಸಜ್ಜನ, ಮಲ್ಲಪ್ಪ ಯರಝರಿ, ಶಿವಲಿಂಗಪ್ಪ ಗಸ್ತಿಗಾರ, ಗ್ರಾಪಂ ಅಧ್ಯಕ್ಷ ಜಗದೀಶ ಲಮಾಣಿ, ಪಿಡಿಒ ಆನಂದ ಹಿರೇಮಠ ಮತ್ತಿತರರರಿದ್ದರು.

    ಪಂಪಾಪತಿ ಗವಾಯಿಗಳು, ಹಣಮಂತಕುಮಾರ ಪ್ರಾರ್ಥಿಸಿದರು. ಮಾಜಿ ಸೈನಿಕ ನಾಗಲಿಂಗಯ್ಯ ಮಠ ಸ್ವಾಗತಿಸಿದರು. ಯರನಾಳದ ಶಿವಪ್ರಸಾದ ದೇವರು ನಿರ್ವಹಿಸಿದರು. ಸಮಾರಂಭಕ್ಕೂ ಮುನ್ನ ಕಲಬುರ್ಗಿ ಶರಣಬಸವೇಶ್ವರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಪಣೆ ನಡೆಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts